ಭಾರತೀಯ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿ (ಎಂಪಿಸಿ) ರೆಪೊ ದರದಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ನಿರ್ಧರಿಸುವ ಮೂಲಕ ಅತ್ಯಂತ ಜಾಣ್ಮೆಯ ಮತ್ತು ದೂರದೃಷ್ಟಿಯ ಹೆಜ್ಜೆ ಇರಿಸಿದೆ. ಶುಕ್ರವಾರ ನಡೆದ ಎಂಪಿಸಿಯ ದ್ವೆ„ಮಾಸಿಕ ಸಭೆಯಲ್ಲಿ ಸತತ ಐದನೇ ಬಾರಿಗೆ ರೆಪೊ ದರವನ್ನು ಶೇ. 6.5ರಲ್ಲೇ ಸ್ಥಿರವಾಗಿಡಲು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ರೆಪೊ ದರವು ಇತರ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರವಾಗಿದ್ದು ಇದರಲ್ಲಿ ಯಾವುದೇ ಬದಲಾವಣೆ ಮಾಡ ದಿರುವ ನಿರ್ಧಾರದಿಂದ ಇತರ ಬ್ಯಾಂಕ್‌ಗಳು ಗ್ರಾಹಕರಿಗೆ ನೀಡುವ ವಿವಿಧ ಸಾಲಗಳ ಮೇಲಿನ ಬಡ್ಡಿದರಗಳು ಕೂಡ ಯಥಾಸ್ಥಿತಿಯಲ್ಲಿ ಉಳಿಯಲಿವೆ.
ಕಳೆದ ಕೆಲವು ತಿಂಗಳುಗಳಿಂದೀಚೆಗೆ ರೆಪೊ ದರದಲ್ಲಿ ಕೊಂಚ ಇಳಿಕೆಯ ನಿರೀಕ್ಷೆಯನ್ನು ಮಾಡುತ್ತ ಬರಲಾಗಿದ್ದರೂ ಆರ್‌ಬಿಐ ಮಾತ್ರ ಬಿಗು ನಿಲುವನ್ನೇ ತಳೆಯುತ್ತ ಬಂದಿದೆ. ಈ ಬಾರಿಯೂ ರೆಪೊ ದರ ಇಳಿಕೆ ಕುರಿತಂತೆ ಎಂಪಿಸಿ ಸಭೆಯ ಮೇಲೆ ಸಾಲಗಾರರು ಭಾರೀ ನಿರೀಕ್ಷೆಯನ್ನು ಇರಿಸಿದ್ದರು. ದೇಶದ ಒಟ್ಟಾರೆ ಆರ್ಥಿಕತೆ, ಜಿಡಿಪಿ, ಜಿಎಸ್‌ಟಿ ಸಂಗ್ರಹ, ನಿಯಂತ್ರಣದಲ್ಲಿರುವ ಹಣದುಬ್ಬರ, ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ ಯಾಗಿರುವುದು, ಕೈಗಾರಿಕೆ, ಆಟೋಮೊಬೈಲ್ ಸಹಿತ ಬಹುತೇಕ ಕ್ಷೇತ್ರಗಳು ಆಶಾದಾಯಕ ಸ್ಥಿತಿಯಲ್ಲಿರುವುದರಿಂದ ಆರ್‌ಬಿಐ ಈ ಬಾರಿ ರೆಪೊ ದರ ಇಳಿಕೆ ಮಾಡಲು ಮುಂದಾದೀತು ಎಂಬ ಆಶಾವಾದ ಸಾಲಗಾರರದ್ದಾಗಿತ್ತು. ಆದರೆ ಆರ್‌ಬಿಐ ಮಾತ್ರ ಇನ್ನೂ ಕಾದುನೋಡುವ ತಂತ್ರಕ್ಕೆ ಶರಣಾಗಿರುವುದು ಸಾಲಗಾರರಿಗೆ ಕೊಂಚಮಟ್ಟಿನ ನಿರಾಸೆಯನ್ನುಂಟು ಮಾಡಿರುವುದು ಸಹಜ.
ಆದರೆ ರೆಪೊ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ತನ್ನ ನಿರ್ಧಾರವನ್ನು ಆರ್‌ಬಿಐ ಬಲವಾಗಿ ಸಮರ್ಥಿಸಿಕೊಂಡಿದೆ. ಇದೊಂದು ದೂರದೃಷ್ಟಿಯಿಂದ ಕೂಡಿದ ನಿರ್ಧಾರವಾಗಿದ್ದು ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಅವಸರದ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ ಎಂಬುದು ಎಂಪಿಸಿಯ ದೃಢ ನಿಲುವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರ ಹಿನ್ನಡೆಯಲ್ಲಿದೆ. ಮುಂಗಾರು ಮತ್ತು ಹಿಂಗಾರು ಬೆಳೆಗಳ ಇಳುವರಿಯ ಕುರಿತಾಗಿನ ಅನಿಶ್ಚಿತತೆ ಮುಂದು ವರಿದಿರುವುದರಿಂದ ಆಹಾರ ಧಾನ್ಯಗಳು, ಎಣ್ಣೆಕಾಳುಗಳ ಸಹಿತ ಬಹುತೇಕ ಕೃಷಿ ಬೆಳೆಗಳ ಬೆಲೆ ಇನ್ನೂ ಏರುಗತಿಯಲ್ಲಿಯೇ ಇದೆ. ಅಲ್ಲದೆ ಇವುಗಳ ಪೂರೈಕೆಯೂ ಅಸಮರ್ಪಕವಾಗಿದೆ. ಇನ್ನೂ ಕನಿಷ್ಠ 3-4 ತಿಂಗಳು ಇದೇ ರೀತಿ ಇರುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಇದು ಹಣದುಬ್ಬರದ ಮೇಲೆ ಪರಿಣಾಮ ಬೀರಲಿರುವುದು ನಿಶ್ಚಿತ. ಇನ್ನು ಜಾಗತಿಕವಾಗಿ ರಷ್ಯಾ-ಉಕ್ರೇನ್ ಹಾಗೂ ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವಣ ಯುದ್ಧ ಮುಂದುವರಿದಿರುವುದರಿಂದ ಜಾಗತಿಕ ಮಾರುಕಟ್ಟೆ ಮತ್ತು ಪೂರೈಕೆ ಜಾಲ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕವಾಗಿ ಹಿಂಜರಿತದಿಂದ ಹೊರಬರಲು ಒದ್ದಾಡುತ್ತಿವೆ. ಅಂತಾರಾಷ್ಟ್ರೀಯ ಕಚ್ಚಾತೈಲ ಮಾರುಕಟ್ಟೆಯಲ್ಲೂ ಅನಿಶ್ಚಿತತೆಯ ವಾತಾವರಣ ಇದೆ. ಇವೆಲ್ಲವನ್ನೂ ಗಮನದಲ್ಲಿರಿಸಿಯೇ ಆರ್‌ಬಿಐ ರೆಪೊ ದರವನ್ನು ಇನ್ನೂ ಎರಡು ತಿಂಗಳ ಮಟ್ಟಿಗೆ ಯಥಾಸ್ಥಿತಿಯಲ್ಲಿರಿಸುವ ತೀರ್ಮಾನಕ್ಕೆ ಬಂದಿದೆ.
ಭಾರತ, ವಿಶ್ವದಲ್ಲಿಯೇ ಆರ್ಥಿಕವಾಗಿ ಸದೃಢ ರಾಷ್ಟ್ರವಾಗಿ ಮುನ್ನಡೆಯುತ್ತಿರುವ ಈ ಸಂದರ್ಭದಲ್ಲಿ ಯಾವುದೇ ಒಂದು ಪ್ರತಿಗಾಮಿ ನಿರ್ಧಾರ ಕೈಗೊಂಡರೂ ಅದು ಆರ್ಥಿಕತೆಗೆ ನೇರ ಹೊಡೆತ ನೀಡುವ ಸಾಧ್ಯತೆ ಇರುವುದರಿಂದ ಆರ್‌ಬಿಐ ದೇಶದ ಹಿತವನ್ನು ಗಮನದಲ್ಲಿರಿಸಿ ದೂರಗಾಮಿ ದೃಷ್ಟಿಕೋನದ ನಿರ್ಧಾರ ತಳೆದಿರುವುದು ಸ್ವಾಗತಾರ್ಹ.