Advertisement

“ಬಳಸು -ಎಸೆ’ಎಂಬ ಬದುಕಿನ ಶೈಲಿ: ರಿಪೇರಿಗಿಂತ ರಿಪ್ಲೇಸ್ಮೆಂಟ್‌ ಜಾಸ್ತಿ!

09:47 AM Feb 17, 2020 | mahesh |

ಅಣ್ಣನ ಪುಸ್ತಕಗಳನ್ನು ತಮ್ಮ ಬಳಸುವುದು, ಖಾಲಿ ಇರುವ ಪೇಜುಗಳನ್ನು ಹೊರತೆಗೆದು ಇನ್ನೊಂದು ನೋಟ್‌ಬುಕ್‌ ಮಾಡಿಕೊಂಡು ಬಳಸುವುದು, ಅಣ್ಣನ ಶೂ, ಸ್ಕೂಲ್‌ಬ್ಯಾಗನ್ನು ತಮ್ಮ ಬಳಸುವುದು, ಅಕ್ಕನ ಬಟ್ಟೆ -ಬುಕ್ಕುಗಳನ್ನು ತಂಗಿ ಬಳಸಿಕೊಳ್ಳುವುದು ತೀರಾ ಸಾಮಾನ್ಯವಾಗಿತ್ತು.

Advertisement

ಹೊಸ ವರ್ಷ ಬಂದ ತಕ್ಷಣ  ನಾವು ಮಾಡುವ ಮೊದಲ ಕೆಲಸ ಹಳೆಯ ಕ್ಯಾಲೆಂಡರ್‌ ಮೇಲೆ ಬರೆದಿಟ್ಟ ಮಾಹಿತಿಗಳನ್ನು ನೋಟ್‌ ಮಾಡಿಕೊಂಡು ಕ್ಯಾಲೆಂಡರ್‌ಗಳನ್ನು ಗೋಡೆಯಿಂದ ತೆಗೆದು ರದ್ದಿ ಪೇಪರ್‌ ಸಂಗಡ ಸೇರಿಸುವುದು ಅಥವಾ ಕಸದ ಬುಟ್ಟಿಗೆ ಎಸೆ ಯುವುದು. ಈ ಪ್ರಕ್ರಿಯೆ ಬಹುತೇಕ ಪ್ರತಿ ಮನೆಯಲ್ಲೂ ನಡೆಯುತ್ತದೆ. ಆದರೆ, ಇಲ್ಲೊಬ್ಬ ಹಿರಿಯ ನಾಗರಿಕರು ಹಳೆಯ ಕ್ಯಾಲೆಂಡರ್‌ಗಳನ್ನೆಲ್ಲ ಒಟ್ಟುಗೂಡಿಸಿ ನೋಟ್‌ಬುಕ್‌ ಸೈಜ್‌ನಲ್ಲಿ ಓರಣವಾಗಿ ಕತ್ತರಿಸಿ ಅದರ ಖಾಲಿ ಇರುವ ಭಾಗ ಮೇಲೆ ಕಾಣುವಂತೆ ಜೋಡಿಸಿ ಇಡುತ್ತಾರೆ. ಹಾಗೆಯೇ ಮುಂಜಾನೆ ದಿನಪತ್ರಿಕೆಗಳ ಸಂಗಡ ಬರುವ ಜಾಹೀರಾತು ಶೀಟ್‌ಗಳು, ಕರಪತ್ರಗಳನ್ನು ಕೂಡಾ ಒಂದೂ ಬಿಡದೇ ಸಂಗ್ರಹಿಸಿ ಓರಣವಾಗಿ ಜೋಡಿಸಿ ಇಡುತ್ತಾರೆ. ಕುತೂಹಲದಿಂದ ಈ ಬಗೆಗೆ ಅವರನ್ನು ಕೇಳಿದಾಗ ಬಂದ ಉತ್ತರ, “”ಇವುಗಳನ್ನು ಗಣಿತ ಪ್ರಾಕ್ಟೀಸ್‌ ಮಾಡಲು ಮತ್ತು ಸ್ಕೂಲ್‌ ಕಾಲೇಜುಗಳ rough work ಮಾಡಲು ನನ್ನ ಮೊಮ್ಮಕ್ಕಳಿಗೆ ಕೊಡುತ್ತೇನೆ.”

ದಶಕಗಳ ಹಿಂದೆ ಪ್ರತಿಯೊಬ್ಬರ ಮನೆಯಲ್ಲೂ ಈ ಗುಣವನ್ನು ಕಾಣಬಹುದಿತ್ತು. ಅಣ್ಣನ ಪುಸ್ತಕಗಳನ್ನು ತಮ್ಮ ಬಳಸುವುದು, ನೋಟ್‌ಬುಕ್‌ನಲ್ಲಿ ಖಾಲಿ ಇರುವ ಪೇಜುಗಳನ್ನು ಹೊರತೆಗೆದು ಇನ್ನೊಂದು ನೋಟ್‌ಬುಕ್‌ ಮಾಡಿಕೊಂಡು ಬಳಸುವುದು, ಅಣ್ಣನ ಶೂ, ಸ್ಕೂಲ್‌ ಬ್ಯಾಗನ್ನು ತಮ್ಮ ಬಳಸುವುದು, ಅಕ್ಕನ ಬಟ್ಟೆಗಳನ್ನು, ಬುಕ್ಕುಗಳನ್ನು ತಂಗಿ ಬಳಸಿಕೊಳ್ಳುವುದು ತೀರಾ ಸಾಮಾನ್ಯವಾಗಿತ್ತು.

ಪಠ್ಯ-ಪುಸ್ತಕಗಳು ಬದಲಾಗದಿದ್ದರೆ (ಆ ಕಾಲದಲ್ಲಿ ಪಠ್ಯ ಪುಸ್ತಕಗಳು ಮೂರು-ನಾಲ್ಕು ವರ್ಷಕ್ಕೆ ಬದಲಾಗುತ್ತಿದ್ದವು) ಮನೆಯ ಎಲ್ಲಾ ಮಕ್ಕಳ ವಿದ್ಯಾಭ್ಯಾಸ ಒಂದೇ ಸೆಟ್‌ ಪುಸ್ತಕದಲ್ಲಿ ಬಹುತೇಕ ಮುಗಿದು ಹೋಗುತ್ತಿತ್ತು. ಬಾಟಲ್‌ನಲ್ಲಿ ಇರುವ ಇಂಕ್‌ ಕೊನೆಯ ಡ್ರಾಪ್‌ವರೆಗೂ ಬಳಕೆಯಾಗುತ್ತಿತ್ತು. ರಬ್ಬರ-ಪೆನ್ಸಿಲ್‌ಗ‌ಳನ್ನು ಬೆರಳಲ್ಲಿ ಹಿಡಿಯಲು ಸಾಧ್ಯವಾಗುವವರೆಗೆ ಉಪಯೋಗಿಸುತ್ತಿದ್ದರು. ಪುಸ್ತಕ-ನೋಟ್‌ ಬುಕ್‌ಗಳ ಬೈಂಡಿಂಗ್‌ಗೆ ಮನೆಗೆ ಬರುವ ದಿನಪತ್ರಿಕೆಗಳನ್ನು ಬಳಸುತ್ತಿದ್ದರು. ಶಿಕ್ಷಕರು ಚಾಕ್‌ಪೀಸ್‌ನ್ನು ಕೊನೆಯ ತುದಿಯವರೆಗೆ ಹಿಡಿದು ಕಪ್ಪು ಹಲಗೆಯ ಮೇಲೆ ಬರೆಯುತ್ತಿದ್ದರು.

ಇಂದು ಅಣ್ಣನ ಪಠ್ಯ ಪುಸ್ತಕಗಳನ್ನು ತಮ್ಮ ಬಳಸುವುದಿಲ್ಲ. ಪಠ್ಯ ಪುಸ್ತಕಗಳೂ ಬಹುತೇಕ ಪ್ರತಿ ವರ್ಷ ಬದಲಾಗುತ್ತವೆ. ಅಣ್ಣಂದಿರ ಯುನಿಫಾರ್ಮಗಳನ್ನು, ಸ್ಕೂಲ್‌ ಬ್ಯಾಗ್‌, ಬಟ್ಟೆಗಳನ್ನು ಮತ್ತು ಶೂಗಳನ್ನು ತಮ್ಮಂದಿರು ತೊಡುವುದಿಲ್ಲ. ಪ್ರತಿಯೊಂದು ಹೊಚ್ಚ ಹೊಸದು ಆಗಲೇಬೇಕು. ಪೆನ್‌-ಪೆನ್ಸಿಲ್‌-ರಬ್ಬರ್‌ ಮತ್ತು ಬಣ್ಣದ ಪೆಟ್ಟಿಗೆಗಳು ಗರಿಷ್ಟ ಉಪಯೋಗ ಕಾಣದೇ ಕಸದ ಬುಟ್ಟಿ ಸೇರುವ ಪ್ರಮೇಯವೇ ಹೆಚ್ಚು. ಕ್ಲಾಸ್‌ ರೂಂನಲ್ಲಿ ಶಿಕ್ಷಕರ ಕೈಯಿಂದ ಚಾಕ್‌ಪೀಸ್‌ಗಳು ಉದುರಿ ಬಿದ್ದು ಮಾರನೇ ದಿನ ಪೊರಕೆಗೆ ಆಹಾರವಾಗುವುದನ್ನು ನೋಡಿದಾಗ ಚುರ್‌ ಎನ್ನುತ್ತದೆ. ಪುಸ್ತಕಗಳ ಕವ ರಿಂಗ್‌ಗೆ ಈಗ ಪ್ರತ್ಯೇಕ ಕಾಗದ ಸಿಗುತ್ತಿದ್ದು, ಅದನ್ನೇ ಬಳಸಬೇಕಂತೆ. ಕೆಲವು ಶಾಲೆಗಳಲ್ಲಿ ಬೈಂಡಿಂಗ್‌ಗೆ ವೃತ್ತಪತ್ರಿಕೆಗಳನ್ನು ಬಳಸಬಾರದಂತೆ!

Advertisement

ಬಳಸು- ಬಿಸಾಕು: ಮನೆಯಲ್ಲಿ ಹಿರಿಯರು ಒಂದೇ ರೇಜರ್‌ ಸೆಟ್‌ನ್ನು ವರ್ಷಗಟ್ಟಲೇ ಉಪಯೋಗಿಸುವುದನ್ನು ನೋಡ ಬಹುದು. ಉಪಯೋಗಿಸುವ ಬ್ಲೇಡ್‌ ಮೊಂಡಾಗುವವರೆಗೂ ಅದನ್ನು ಉಪಯೋಗಿಸುತ್ತಾರೆ. ಅದರೆ, ಇಂದಿನ ಪೀಳಿಗೆ use and throw ಟ್ರೆಂಡ್‌ಗೆ ಶರಣಾಗುತ್ತಾರೆ. ಮನೆಯಿಂದ ಹೊರಡುವಾಗ ನೀರಿನ ಬಾಟಲ್‌ ಒಯ್ಯವುದು ಅವರಿಗೆ ತುಂಬಾ ಭಾರವಾಗುತ್ತದೆ. ಮಾರ್ಗ ಮಧ್ಯದಲ್ಲಿ 10-20ರೂ. ತೆತ್ತು ಕುಡಿಯುವ ನೀರಿನ ಬಾಟಲ್‌ ಖರೀದಿಸುವುದು ಇಂದಿನ ಫ್ಯಾಷನ್‌. ಹಾಗೆಯೇ ಒಂದೇ ಒಂದು ಖಾಲಿ ಬಾಟಲ್‌ ಮನೆಗೆ ಮರಳದಿರುವುದು ಅಷ್ಟೇ ಸಾಮಾನ್ಯ. ಈ ಖಾಲಿ ಬಾಟಲ್‌ಗ‌ಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಈ ಖಾಲಿ ಬಾಟಲ್‌ಗ‌ಳು ಮಾಡುವ ಪರಿಸರ ಮಾಲಿನ್ಯ, ಅವುಗಳ ಮೌಲ್ಯದ ಬಗೆಗೆ ಮತ್ತು ಅವುಗಳ ಮರುಬಳಕೆಗೆ ಯಾರೂ ತಲೆಕೆಡಿಸಿಕೊಳ್ಳಲ್ಲ!

ಈಗ ರಿಪೇರಿ ನೇಪಥ್ಯಕ್ಕೆ ಸರಿದಿದೆ
ಹಿಂದಿನ ದಿನಗಳಲ್ಲಿ ಯಾವುದಾದರೂ ವಸ್ತು ಹಾಳಾದರೆ, ಅದನ್ನು ಬ್ಯಾಗ್‌ನಲ್ಲಿ ತುಂಬಿಸಿಕೊಂಡು, ರಿಪೇರಿ ಮಾಡುವವನನ್ನು ಊರೆಲ್ಲಾ ತಿರುಗಿ ಹುಡುಕಿ ದುರಸ್ತಿ ಮಾಡಿಸಿಕೊಂಡು ಬರುತ್ತಿದ್ದರು. ಇಂದು ಅಷ್ಟು ವ್ಯವಧಾನ ಯಾರಿಗೂ ಇರುವುದಿಲ್ಲ. ಅಷ್ಟಾಗಿ ಕಷ್ಟಪಟ್ಟು ಹುಡುಕಿಕೊಂಡು ಹೋದರೂ, ರಿಪೇರಿಗಿಂತ ಹೊಸದನ್ನು ತೆಗೆದುಕೊಳ್ಳುವುದೇ ವಾಸಿ, ನಮ್ಮ ಬಳಿಯೇ ಇದೆ, ತೆಗೆ ದು ಕೊಂಡು ಬಿಡಿ ಎಂದು ಅವ ರಿಂದ ಉಚಿತ ಸಲಹೆಯನ್ನು ಕೇಳಿಕೊಂಡು ಬರಬೇಕಾಗುತ್ತದೆ. ಬಹುತೇಕ ಸಂದರ್ಭದಲ್ಲಿ ರಿಪೇರಿ ಸಾಧ್ಯವಿದ್ದರೂ ರಿಪೇರಿ ಮಾಡುವುದಿಲ್ಲ. ಇದರಲ್ಲಿ ವಸ್ತುಗಳ ಉತ್ಪಾದಕರ ಮತ್ತು ಅವುಗಳ ಮಾರ್ಕೆಟಿಂಗ್‌ ಮ್ಯಾನೇಜರ್‌ಗಳ ಗೌಪ್ಯ ಅಜೆಂಡಾವನ್ನು ಯಾರೂ ಗುರು ತಿಸುವುದಿಲ್ಲ. ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ರಿಪೇರಿ ಪರಿಕಲ್ಪನೆಯೇ ಇರುವುದಿಲ್ಲ. ಹಳೆಯದಾದ ಕಾರುಗಳನ್ನು ರಿಪೇರಿ ಮಾಡಿಸದೇ dumping yardಗೆ ನೂಕುವುದು ತೀರಾ ಸಾಮಾನ್ಯ. ಈ ಟ್ರೆಂಡ್‌ ಈಗ ನಮ್ಮ ದೇಶದಲ್ಲೂ ಆಳವಾಗಿ ಬೇರುಬಿಡುತ್ತಿದೆ.. ರಿಪೇರಿಗಿಂತ ರಿಪ್ಲೇಸ್‌ಮೆಂಟ್‌ ಅಗ್ಗ ಎನ್ನುವ ಮನೋಭಾವನೆ ಬೆಳೆಯುತ್ತಿದೆ.

ಹಳೆಯದನ್ನು ಬಿಸಾಕಿ, ಹೊಸದನ್ನು ಖರೀದಿಸುವದು ಆರ್ಥಿಕ ಚೈತನ್ಯದ ಕುರುಹು ಅಲ್ಲ. ಇದು ಉತ್ಪಾ ದ ಕರು ಮತ್ತು ಮಾರು ಕಟ್ಟೆ ನಿರ್ದೇ ಶಿತ “ಮಾರ್ಕೆಟಿಂಗ್‌’ ತಂತ್ರ. ಈ ಅಗೋಚರ ತಂತ್ರಕ್ಕೆ ಯುವ ಜನತೆ ಬಲಿಯಾಗಿದ್ದಾರೆ. ಈ ಹೊಸ ಟ್ರೆಂಡ್‌ ಉಳ್ಳವರಿಗೆ ನಡೆದು ಹೋಗುತ್ತದೆ. ಅದರೆ, ಬಡ-ಮತ್ತು ಮದ್ಯಮ ವರ್ಗದವರಿಗೆ ಬಿಸಿತುಪ್ಪವಾಗುತ್ತದೆ. ಅರ್ಥ ಶಾಸ್ತ್ರದಲ್ಲಿ ಹೇಳುವ demonstration effect ಮಧ್ಯಮ ವರ್ಗದವರ ಬಾಳಿನಲ್ಲಿ ಅರ್ಥಿಕ ಕ್ಷೊಭೆಯನ್ನು ಉಂಟು ಮಾಡುತ್ತವೆ. ಎಲ್ಲಿಂದಲೋ ಧುತ್ತೆಂಧು ಎರಗಿದ ವ್ಯಾಲೆಂಟೈನ್‌ ಡೇಗಳು, ಬರ್ತಡೇ ಅಚರಣೆ, ಐಷಾರಾಮಿ ಹೋಟೆಲ್ಲುಗಳಲ್ಲಿ ಪಾರ್ಟಿಗಳಿಗೆ ಪೂರಕವಾಗಿ, “ಬಳಸಿ-ಬಿಸಾಕು, ರಿಪೇರಿ ಬಿಟ್ಟು ರಿಪ್ಲೇಸ್‌ ಮಾಡು’ ಅರ್ಥಿಕತೆ ಸಾಮಾಜಿಕ ಜೀವನದಲ್ಲಿ ಅಲೆ ಎಬ್ಬಿಸುತ್ತಿದೆ.

ಪುಸ್ತಕಗಳ ಕವರಿಂಗ್‌ಗೆ ಪ್ರತ್ಯೇಕ ಕಾಗದ ಸಿಗುತ್ತಿದ್ದು, ಅದನ್ನೇ ಬಳಸಬೇಕಂತೆ. ಕೆಲವು ಶಾಲೆಗಳಲ್ಲಿ ಬೈಂಡಿಂಗ್‌ಗೆ ಸುದ್ದಿ ಪತ್ರಿಕೆ ಬಳಸಬಾರದಂತೆ!

ಹಿಂದಿನ ದಿನಗಳಲ್ಲಿ ಯಾವುದಾದರೂ ವಸ್ತು ಹಾಳಾದರೆ, ರಿಪೇರಿ ಮಾಡುವವನನ್ನು ಊರೆಲ್ಲಾ ತಿರುಗಿ ಹುಡುಕಿ ದುರಸ್ತಿ ಮಾಡಿಸುತ್ತಿದ್ದರು.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next