ಕೆಲವು ಶೀರ್ಷಿಕೆಗಳು ಆರಂಭದಲ್ಲಿ ತುಂಬಾ ಚೆನ್ನಾಗಿ ಕಾಣುತ್ತವೆ. ಅದಕ್ಕೆ ಸರಿಯಾಗಿ “ಸಾರ್ ಟೈಟಲ್ ಸೌಂಡಿಂಗ್ ಚೆನ್ನಾಗಿದೆ’ ಎಂದು ಚಿತ್ರತಂಡದವರಿಗೆ ಯಾರಾದರೂ ಮೆಚ್ಚುಗೆ ಸೂಚಿಸಿದರಂತೂ ಮುಗಿದೇ ಹೋಯಿತು. ಆ ಟೈಟಲ್ ಫಿಕ್ಸ್ ಆದಂತೆ. ಆದರೆ, ಚಿತ್ರೀಕರಣ ಮಾಡುತ್ತಾ ಹೋದಂತೆ ಯಾಕೋ ಈ ಶೀರ್ಷಿಕೆ ಕಥೆಗೆ ಹೊಂದುತ್ತಿಲ್ಲ, ಸೌಂಡಿಂಗ್ ಕೂಡಾ ಬೇರೆ ತರಹ ಇದೆ ಅನ್ನಿಸಿ, ಅದೆಷ್ಟೋ ಶೀರ್ಷಿಕೆಗಳು ಬದಲಾಗುತ್ತವೆ.
ಕೆಲವು ಕಥೆಗಾಗಿ ಬದಲಾದರೆ, ಇನ್ನು ಕೆಲವು ಟೈಟಲ್ ಸಿಗದೇ ಬದಲಾಗಬೇಕಾಗುತ್ತದೆ. ಈಗ ಹೊಸಬರ ಸಿನಿಮಾವೊಂದು ಟೈಟಲ್ ಬದಲಿಸಿಕೊಂಡಿದೆ. ಅದೇ “ತಿರ್ಬೋಕಿಗಳು’. “ತಿರ್ಬೋಕಿಗಳು’ ಎಂಬ ಹೆಸರಿನಡಿ ಸಿನಿಮಾವೊಂದು ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಮುಕ್ತಾಯವಾಗುವ ವೇಳೆ ಚಿತ್ರದ ಟೈಟಲ್ ಕೂಡಾ ಬದಲಾಗಿದೆ.
ಚಿತ್ರತಂಡ ಈಗ “ರಾಜ ರಾಣಿ ರೋರರ್ ರಾಕೆಟ್’ ಎಂದಿಟ್ಟಿದೆ. ಈ ಮೂಲಕ “ತಿರ್ಬೋಕಿಗಳು’ ಟೈಟಲ್‌ಗೆ ಗುಡ್‌ಬೈ ಹೇಳಿದೆ. ಅಷ್ಟಕ್ಕೂ ಟೈಟಲ್ ಬದಲಿಸಲು ಕಾರಣವೇನೆಂಬ ಬಗ್ಗೆ ಮಾಹಿತಿಯಿಲ್ಲ. ಆದರೆ, “ತಿರ್ಬೋಕಿಗಳು’ ಟೈಟಲ್‌ಗಿಂತ “ರಾಜ ರಾಣಿ ರೋರರ್ ರಾಕೆಟ್’ ಚೆನ್ನಾಗಿರುವುದಂತೂ ಸತ್ಯ. ನಾಗರಾಜ್ ಪಿ ಅಜ್ಜಂಪುರ ಶೆಟ್ಟರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ಆಡಿಯೋ ಬಿಡುಗಡೆ ಇದೇ ತಿಂಗಳು ನಡೆಯಲಿದೆ.
ಕೆಂಪೇಗೌಡ ಮಾಗಡಿ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಭೂಷಣ್ ಅಭಿನಯಿಸಿದ್ದಾರೆ. ಭೂಷಣ್ ಕನ್ನಡ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಖ್ಯಾತ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಸುರೇಂದ್ರನಾಥ್ ಅವರ ಸಂಗೀತ, ಜ್ಞಾನೇಶ್ ಸಂಕಲನ ಹಾಗೂ ಭೂಷಣ್ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ. ತಾರಾಬಳಗದಲ್ಲಿ ಭೂಷಣ್, ಸಂತೋಷ್, ರಣಧೀರ್, ಮನೋಜ್‌ಕುಮಾರ್, ಮಾನ್ಯ, ಎಂ.ಡಿ.ಕೌಶಿಕ್, ಮೂಗೂರು ಸುಂದರಂ ಮುಂತಾದವರಿದ್ದಾರೆ. ಬೆಂಗಳೂರು, ಮಾಗಡಿ, ಗುಬ್ಬಿ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.