Advertisement

ಕಾಲನೊಂದಿಗೊಂದು ಹಿಂಪಯಣ ವರ್ಣಮುಡಿ

08:00 PM Oct 10, 2019 | mahesh |

ಗುತ್ತು ಮನೆತನಗಳ ಮಹತ್ವವನ್ನು ಸಾರುವ ಕಲಾಶಿಬಿರದಲ್ಲಿ ಅಭಿವ್ಯಕ್ತಗೊಂಡ ಕಲಾಕೃತಿಗಳ ಪ್ರದರ್ಶನ “ವರ್ಣಮುಡಿ’ ನೋಡುಗನನ್ನು ಹಳೆತಲೆಮಾರಿನ ಕಾಷ್ಟ ವೈಭವ, ಮನೆಗಳ ರಚನೆ, ಅಲ್ಲಿಯ ಬೆಳಕಿನ ವ್ಯವಸ್ಥೆಯ ಬಗೆಗೊಂದು ದರ್ಶನ ಮಾಡಿಸುತ್ತದೆ.

Advertisement

ಹಳೆಯ ರಚನೆಗಳು ಕಾಲ ಸರಿದಂತೆ ಅಪ್ರಸ್ತುತ ಎನಿಸುತ್ತವೆ. ಆದರೆ ಅವುಗಳು ಮತ್ತೂಂದಷ್ಟು ಕಾಲ ನಿರ್ಲಕ್ಷ್ಯದ ನಡುವೆಯೂ ಬಾಳುವೆ ಮಾಡಿದರೆ ಪುರಾತನ ವಸ್ತುಗಳಾಗಿ ಆ ಕಾಲದ ಸಂಸ್ಕೃತಿ, ಸಾಮಾಜಿಕ ಜೀವನ ವ್ಯವಸ್ಥೆಯ ಬಗ್ಗೆ ಕನ್ನಡಿ ಹಿಡಿಯುತ್ತವೆ. ಸಂಕೇತಗಳು ಚಲನಶೀಲ ಇತಿಹಾಸವನ್ನು ಹೇಳುತ್ತವೆ ಎಂಬ ಮಾತನ್ನು ಹಿನ್ನೆಲೆಯಟ್ಟುಕೊಂಡು ನೋಡಿದರೆ ಮಂಗಳೂರಿನ ಪ್ರಸಾದ್‌ ಆರ್ಟ್‌ ಗ್ಯಾಲರಿಯಲ್ಲಿ ಕರಾವಳಿ ಚಿತ್ರಕಲಾ ಚಾವಡಿಯು ಪತ್ತುಮುಡಿ ಮನೆತನದ ಸಹಯೋಗದೊಂದಿಗೆ ಆಯೋಜಿಸಿದ ಪತ್ತುಮುಡಿ ಮನೆಯಲ್ಲಿ ಗುತ್ತು ಮನೆತನಗಳ ಮಹತ್ವವನ್ನು ಸಾರುವ ಕಲಾಶಿಬಿರದಲ್ಲಿ ಅಭಿವ್ಯಕ್ತಗೊಂಡ ಕಲಾಕೃತಿಗಳ ಪ್ರದರ್ಶನ “ವರ್ಣಮುಡಿ’ ನೋಡುಗನನ್ನು ಹಳೆತಲೆಮಾರಿನ ಕಾಷ್ಟ ವೈಭವ, ಮನೆಗಳ ರಚನೆ, ಅಲ್ಲಿಯ ಬೆಳಕಿನ ವ್ಯವಸ್ಥೆಯ ಬಗೆಗೊಂದು ದರ್ಶನ ಮಾಡಿಸುತ್ತದೆ.

ಹಿಂದೆ ದೊಡ್ಡ ಮನೆಗಳು ವಿಶಾಲವಾದ ಭೂಪ್ರಕೃತಿ ವೈಭವದ ಹಿನ್ನೆಲೆಯಲ್ಲಿ ನಿರ್ಮಾಣಗೊಳ್ಳುತ್ತಿದ್ದವು. ಆಗಿನದೆಲ್ಲ ಅಡಿಗಳ ಲೆಕ್ಕಾಚಾರವಲ್ಲ, ಬದಲು ಕೋಲುಗಳ ಆಯ ಪ್ರಮಾಣ. ಅಲ್ಲಿ ಮನೆಯಂಗಳದಲ್ಲಿರುವ ತುಳಸೀಕಟ್ಟೆಗೂ ಒಂದು ಆಯ ಪ್ರಮಾಣದ ಲೆಕ್ಕಾಚಾರವಿದೆ. ಇಂತಹ ದಿಕ್ಕಿನಲ್ಲಿ ನಿರ್ದಿಷ್ಟ ವ್ಯವಸ್ಥೆಗಳು ಇರಬೇಕು ಎಂಬ ಜನಸಾಮಾನ್ಯ ವಾಸ್ತುವಿದೆ. ಕಿಟಕಿಗಳು ಇಂದಿನಷ್ಟು ದೊಡ್ಡವು ಇಲ್ಲದಿರುವ ಆ ಕಾಲದಲ್ಲಿ ಕಳ್ಳ ಕಾಕರಿಂದ ರಕ್ಷಣೆ ಪಡೆಯುವ ರೀತಿಯಲ್ಲಿ ಮನೆಗಳ ನಿರ್ಮಾಣ ಮಾಡುವಾಗ ಬೆಳಕಿನ ವ್ಯವಸ್ಥೆಗೂ ತಕ್ಕ ಪ್ರಮಾಣದ ಪ್ರಾಧಾನ್ಯ ದಕ್ಕುತ್ತಿತ್ತು.ದಾಸ್ತಾನುಗಾರ ಎಂದರೆ ಅದು ಕತ್ತಲೆಯ ಕೋಣೆ. ಇವಿಷ್ಟನ್ನು ಮನದೊಳಗಿಟ್ಟು ಈ ವರ್ಣಮುಡಿಗೆ ಪ್ರವೇಶ ಮಾಡಿದರೆ ಅಲ್ಲಿ ವಾಸ್ತುವೈವಿಧ್ಯ, ಕಾಷ್ಟಶಿಲ್ಪ, ಧಾರಣಾ ಸಾಮರ್ಥಯದ ನೋಟಗಳು ದಕ್ಕುತ್ತವೆ.

ಉಪ್ಪರಿಗೆ ಮನೆಯನ್ನು ಆಧರಿಸಲು ಬಲಿಷ್ಟ ಕಂಭಗಳು ಬೇಕು. ಆ ಕಂಭದಲ್ಲಿ ಕರಕುಶಲ ಕಲೆ ಅರಳಿಸಿದರೆ ಅದಕ್ಕೆ ಪ್ರಧಾನ ಜವಾಬ್ದಾರಿಯ ಜೊತೆ ಇನ್ನೊಂದು ಉಪಯುಕ್ತತೆ ಆರೋಪಿಸಿದಂತೆ. ಇಲ್ಲಿ ಕಲಾವಿದರ ಕುಂಚದಲ್ಲಿ ಮೂಡಿರುವ ಚಿತ್ರಗಳು ಇಂತಹ ಸೂಕ್ಷ್ಮಗಳನ್ನು ಅಡಕಗೊಳಿಸಿಕೊಂಡಿವೆ.

ದೇವರ ಕೊಠಡಿ ಎದುರು ಅರ್ಚಕರಿದ್ದಾರೆ. ಅವರೆದುರು ತಾಳೆಗರಿಗಳ ಕಂತೆ ಇದೆ. ಹಿಂದೆ ತಾಳೆಗರಿಗಳಿಗೆ ಪೂಜೆ ಸಲ್ಲುತ್ತಿತ್ತು. ಆಧುನಿಕ ವಿದ್ವಾಂಸರು ಇವುಗಳನ್ನು ಸಂರಕ್ಷಿಸಿಡಬೇಕು ಎನ್ನುತ್ತಾರೆ. ಈ ಸುತ್ತುಪಯಣದಲ್ಲಿ ಬದಲಾದ ದೃಷ್ಟಿಕೋನವನ್ನು ನಾವು ಗಮನಿಸಬಹುದು.

Advertisement

ಮನೆಯೆದುರಿನ ತುಳಸಿ ಕಟ್ಟೆ. ಮನೆಯ ಜಂತಿಗೆ/ತೊಲೆಗೆ ತೂಗು ಹಾಕಿದ ಕುಂಬಳ ಮತ್ತಿತರ ಮಳೆಗಾಲಕ್ಕಾಗಿರುವ ತರಕಾರಿಗಳ ದಾಸ್ತಾನು ಅಂದು ಸಾರಿಗೆ ವ್ಯವಸ್ಥೆ ಇಂದಿನಷ್ಟು ಮುಂದುವರೆಯದೆ ಇದ್ದ ಕಾಲದಲ್ಲಿ ತರಕಾರಿಗಳನ್ನು ಬೆಳೆದು ಕಾಪಿಡುವ ಅಭ್ಯಾಸವನ್ನು ನೆನಪಿಸುವಂತೆಯೆ, ಇಂದಿನ ತರಕಾರಿಗಳೇಕೆ ಒಂದು ವಾರ ಕೂಡಾ ಉಳಿಯಲಾರವು ಎಂಬ ಅಂಶವನ್ನು ಚಿಂತಿಸುವಂತೆ ಮಾಡುತ್ತವೆ.

ಹೆಬ್ಟಾಗಿಲಿಗೆ ಬಂದು ನಿಂತ ದನ ಕರುಗಳು- ಜಾನುವಾರುಗಳು ಮನೆಯ ಅವಿಭಾಜ್ಯ ಅಂಗವಾಗಿರುವುದನ್ನು , ಮನೆಯ ಸುತ್ತಲಿನ ಪರಿಸರ ಹಸಿರಾಗಿರುವುದನ್ನು, ಮನೆಯಂಗಳದಲ್ಲಿ ಮಳೆಗಾಲದಲ್ಲಿ ನೀರಿನಲ್ಲಿ ಜಾರಿ ಬೀಳದಂತೆ ಮಾಡಲು ಅಡಿಕೆ ದಬ್ಬೆಗಳನ್ನು ಹಾಕಿ ನಿರ್ಮಾಣ ಮಾಡಿದ ಕಾಲು ಹಾದಿ ಆ ಕಾಲದಲ್ಲಿ ಸಿಮೆಂಟ್‌ ರೇಶನಿಂಗ್‌ ವ್ಯವಸ್ಥೆ ಇತ್ತೆಂಬುದನ್ನು ಜ್ಞಾಪಿಸಲು ಸಹಾಯ ಮಾಡುತ್ತದೆ. ಈ ಚಿತ್ರಕಲಾ ಪದರ್ಶನ ಕಾಲನೊಂದಿಗೆ ಒಂದು ಮಾನಸಿಕ ಹಿಂಪಯಣದಂತಿದೆ.

ಡಾ| ನಾಗವೇಣಿ ಎನ್‌. ಮಂಚಿ

Advertisement

Udayavani is now on Telegram. Click here to join our channel and stay updated with the latest news.

Next