Advertisement

ದುರಸ್ತಿಯಾಗಿ 15 ದಿನದಲ್ಲೇ ಮತ್ತೆ ಬ್ಲಾಕ್‌

10:33 AM Sep 19, 2017 | Team Udayavani |

ಮಹಾನಗರ:  ಪಡೀಲು ರೈಲ್ವೇ ಮೇಲ್ಸೇತುವೆ ಬಳಿ ಹೆದ್ದಾರಿ ಮೂಲಕ ಎರಡು ವಾರಗಳ ಕಾಲ ಆರಾಮವಾಗಿ ಪ್ರಯಾಣಿಸಿದ್ದವರಿಗೆ ಮತ್ತೆ ಟ್ರಾಫಿಕ್‌ ಜಾಮ್‌ ಕಿರಿಕಿರಿ ಎದುರಾಗಿದೆ. ಎರಡು ವಾರಗಳ ಹಿಂದೆ ಸಂಸದ ನಳಿನ್‌ಕುಮಾರ್‌ ಕಟೀಲು ಭೇಟಿ ನೀಡಿದ ಬಳಿಕ ತಾತ್ಕಾಲಿಕ ದುರಸ್ತಿ ಕಂಡಿದ್ದ ಹೆದ್ದಾರಿ ಮತ್ತೆ ಹೊಂಡ ಗುಂಡಿಗಳಿಂದ ತುಂಬಿ ತನ್ನ “ಸಹಜ ಸ್ಥಿತಿ’ಗೆ ತಲುಪಿದೆ. 

Advertisement

ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ರೈಲ್ವೇ ಮೇಲ್ಸೇತುವೆಯನ್ನು ಶೀಘ್ರ ಸಂಚಾರಕ್ಕೆ ಮುಕ್ತಗೊಳಿಸಬೇಕು. ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಹೆದ್ದಾರಿಯನ್ನು ದುರಸ್ತಿಪಡಿಸಬೇಕು ಎಂದು ಆ. 29ರಂದು ಸ್ಥಳಕ್ಕೆ ಭೇಟಿ ನೀಡಿದ ಸಂಸದರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಸಂಸದರ ಸೂಚನೆಯ ಅವಧಿ 15 ದಿನ ದಾಟುತ್ತಿದ್ದಂತೆ ಮುಕ್ತಾಯಗೊಂಡಿದೆ.

ಮಳೆ ಬಂದು ಹೀಗಾಯಿತು!
ಕರಾವಳಿ ಭಾಗದಲ್ಲಿ ನಾಲ್ಕೈದು ದಿನಗಳಿಂದ ಸುರಿದ ಧಾರಾಕಾರ ಮಳೆಯ ಪರಿಣಾಮ ಪಡೀಲು ರೈಲ್ವೇ ಬ್ರಿಡ್ಜ್ನ ಬಳಿ ಹೆದ್ದಾರಿಯಲ್ಲಿ ಹೊಂಡ-ಗುಂಡಿಗಳು ಕಾಣಿಸಿಕೊಂಡಿವೆ. ಗುಂಡಿಗಳಿಗೆ ಹಾಕಿದ್ದ ಜಲ್ಲಿಕಲ್ಲು ಮಳೆಯ ರಭಸಕ್ಕೆ ಕಿತ್ತುಹೋದ ಪರಿಣಾಮ ಮತ್ತೆ ವಾಹನಗಳಿಗೆ ಸಮಸ್ಯೆ ಎದುರಾಗಿದೆ.

ಸೆ. 16ರ ಸಂಜೆಯಿಂದ ವಾಹನಗಳು ಮತ್ತೆ ಸರತಿ ಸಾಲಿನಲ್ಲಿ ನಿಲ್ಲಲು ಆರಂಭಿ ಸಿದೆ. ರವಿವಾರವೂ ಟ್ರಾಫಿಕ್‌ ಜಾಮ್‌ ಕಂಡುಬಂದಿದ್ದು, ಸೋಮವಾರ ಬೆಳ ಗ್ಗೆಯೂ ವಾಹನಗಳ ಸಾಲು ದೊಡ್ಡ ದಾಗಿತ್ತು. ರಸ್ತೆಯ  ಗುಂಡಿಗಳನ್ನು ನೋಡಿದರೆ  ಪ್ರತಿ ದಿನವೂ ವಾಹನಗಳು  ಕಾಯ ಬೇಕಾದ ಲಕ್ಷಣಗಳಿವೆ. ಇಲ್ಲಿ ಚರಂಡಿ ಸಹಿತ ಎಲ್ಲವೂ ಅಸ್ತವ್ಯಸ್ತವಾಗಿದ್ದು, ಮಳೆಗಾಲ ಮುಗಿಯದೆ ಹೆದ್ದಾರಿ ಸಮಸ್ಯೆ ಪರಿಹಾರವಾಗದು  ಎಂಬ ಮಾತು ಕೇಳಿ ಬರುತ್ತಿದೆ.

ಅ. 10ರ ಬಳಿಕ ತೆರವು?
ಪಡೀಲಿನಲ್ಲಿ ಹೊಸದಾಗಿ ನಿರ್ಮಾಣ ಗೊಂಡಿರುವ ರೈಲ್ವೇ ಮೇಲ್ಸೆತುವೆಯು ಸಂಚಾರಕ್ಕೆ ಮುಕ್ತಗೊಂಡರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಅಭಿಪ್ರಾಯ ಗಳು ಕೇಳಿಬರುತ್ತಿದೆ. ಅಂದರೆ ಹೊಸ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸುಸಜ್ಜಿತವಾಗಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. 

Advertisement

ಈ ಕುರಿತು ಅಧಿಕಾರಿಗಳೊಂದಿಗೆ “ಉದಯವಾಣಿ’ ಮಾತನಾಡಿದಾಗ, ಹೊಸ ಮೇಲ್ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸೆ. 12ರಂದು ಬಾಕಿ ಉಳಿದಿರುವ ಕಾಂಕ್ರೀಟ್‌ ಸ್ಲ್ಯಾಬ್  ಹಾಕಲಾಗಿದೆ. ಅದಕ್ಕೆ 21 ದಿನಗಳ ಕ್ಯೂರಿಂಗ್‌ ಬೇಕಾದ ಕಾರಣ ಅ. 10ರ ಬಳಿಕ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಿದ್ದೇವೆ ಎಂದು ತಿಳಿಸಿದ್ದಾರೆ. 

ಹಳೆ ಸೇತುವೆಯ ಕಾಮಗಾರಿ
ಹೊಸ ಸೇತುವೆಯು ಸಂಚಾರಕ್ಕೆ ಲಭ್ಯವಾದ ಬಳಿಕ ಹಳೆ ಸೇತುವೆಯನ್ನು ಬಂದ್‌ ಮಾಡಿ ಅದರ ಕಾಮಗಾರಿಯನ್ನು ರೈಲ್ವೇ ಇಲಾಖೆ ಕೈಗೆತ್ತಿಕೊಳ್ಳಲಿದೆ. ಈ ವೇಳೆ ಸೇತುವೆ ಹಾಗೂ ರಸ್ತೆಯನ್ನು ಎತ್ತರಿಸಲಾಗುವುದು.  ಆಮೇಲೆ ನೀರು ನಿಲ್ಲುವ ಪ್ರಸಂಗ ಇರುವುದಿಲ್ಲ. ಈ ಕಾಮಗಾರಿಯನ್ನು ರೈಲ್ವೇ ಇಲಾಖೆ ಹಾಗೂ ಎನ್‌ಎಚ್‌ಎಐ ಜಂಟಿಯಾಗಿ ನಿರ್ವಹಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೀಘ್ರ ಸಂಚಾರಕ್ಕೆ ಮುಕ್ತ 
ಪನ್ಲೆ ಲ್ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕಾಂಕ್ರೀಟ್‌ನ ಕ್ಯೂರಿಂಗ್‌ ಮುಗಿದು ಅ. 10ರ ಬಳಿಕ ಸಂಚಾರಕ್ಕೆ ಮುಕ್ತ ಗೊಳ್ಳಲಿದೆ. ಬ್ರಿಡ್ಜ್ನ ಪೈಂಟಿಂಗ್‌ ಸಹಿತ ಇತರ ಸಣ್ಣಪುಟ್ಟ ಕೆಲಸಗಳು ಬಾಕಿ ಇವೆ. ಹೊಸ ಸೇತುವೆ ಮುಕ್ತಗೊಂಡ ಬಳಿಕ ಹಳೆ ಸೇತುವೆಯ ಕಾಮಗಾರಿ ನಡೆಯಲಿದೆ. ಈ ಸಂದರ್ಭ ದಲ್ಲಿ ರಸ್ತೆಯನ್ನೂ ಏರಿಸಲಾಗುವುದು. ಎಸ್‌.ಝಡ್‌. ಸ್ಯಾಮ್ಸನ್‌ ವಿಜಯ್‌ಕುಮಾರ್‌
ಯೋಜನ ನಿರ್ದೇಶಕರು, ಭಾರತೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 

ಅಣ್ಣಾ ಪಡೀಲ್‌ ಬನ್ನಗ  ಪನ್ಲೆ 
ಸೋಮವಾರ ಧರ್ಮಸ್ಥಳದಿಂದಮಂಗಳೂರಿಗೆ ಬರುತ್ತಿರುವ ಬಸ್ಸಿನಲ್ಲಿ ಕಣ್ಣೂರು ತಲುಪುತ್ತಿದ್ದಂತೆ ಪ್ರಯಾಣಿಕರೊಬ್ಬರು ಬಸ್‌ ನಿರ್ವಾಹಕರ ಬಳಿ “ಅಣ್ಣಾ ಪಡೀಲ್‌ ಬನ್ನಗ ಪನ್ಲೆ  , ಎಂಕ್‌ ಗೊತ್ತಾಪುಜಿ’ (ಪಡೀಲ್‌ ಬರುವಾಗ ತಿಳಿಸಿ, ನನಗೆ
ಗೊತ್ತಾಗುವುದಿಲ್ಲ) ಎಂದರು. ಆಗ ನಿರ್ವಾಹಕರು, “ಇತ್ತೆ ರೋಡ್‌ದ ಗುಂಡಿಲೆಗ್‌ ಬೂದ್‌ì ಲಕ್ಕುನಗ ಪಡೀಲ್‌ ಬತ್ತ್ಂಡ್‌ಂದ್‌ ಗೊತ್ತಾಪುಂಡ್‌, ಬೊಕ್ಕದ ಸ್ಟಾಪುಡ್‌ ಜಪ್ಪುಲೆ (ಈಗ ರಸ್ತೆಯ ಹೊಂಡಕ್ಕೆ ಬಿದ್ದು ಏಳುವಾಗ ಗೊತ್ತಾಗುತ್ತದೆ ಪಡೀಲ್‌ ಬಂತೆಂದು, ಮುಂದಿನ ಸ್ಟಾಪ್‌ನಲ್ಲಿ ಇಳಿಯಿರಿ) ಎಂದು ಹೆದ್ದಾರಿಯ ಸ್ಥಿತಿಯನ್ನು ಹಾಸ್ಯಾಸ್ಪದವಾಗಿ ತಿಳಿಸಿದರು.

ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next