Advertisement

ಕಾಯ್ದೆ ರದ್ದು: ಸರಕಾರದ ವಿರುದ್ಧ ಮುಗಿಬಿದ್ದ BJP

11:29 PM Jun 16, 2023 | Team Udayavani |

ಮತಾಂತರ ನಿಷೇಧ ಹಾಗೂ ಎಪಿಸಿಎಂಸಿ ಕಾಯ್ದೆ ರದ್ದು, ಪಠ್ಯಪುಸ್ತಕ ಮರು ಪರಿಷ್ಕರಣೆ ಸಹಿತ ಸರಕಾರ ಕೈಗೊಂಡ ಹಲವು ತೀರ್ಮಾನಗಳ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಅಕ್ಕಿ ಪೂರೈಕೆ ಹಾಗೂ ವಿದ್ಯುತ್‌ ದರ ಏರಿಕೆ ವಿಚಾರದಲ್ಲೂ ಬಿಜೆಪಿ ವಿರುದ್ಧ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಕಾಂಗ್ರೆಸ್‌ ಯತ್ನಿಸುತ್ತಿದೆ. ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದು ಮತ್ತೆ ಹಳೆ ವ್ಯವಸ್ಥೆ ಜಾರಿಗೆ ಸರಕಾರ ಮುಂದಾಗಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

Advertisement

ಬೆಂಗಳೂರು: ನಮ್ಮ ಆಡಳಿತಾವಧಿಯಲ್ಲಿ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಗೊಳಿಸುವ ಮೂಲಕ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಮಿನಿ ಪಾಕಿಸ್ಥಾನ ನಿರ್ಮಾಣಕ್ಕೆ ಮುಂದಾಗಿದೆ. ಟಿಪ್ಪು ಯುಗಕ್ಕೆ ಶಂಕು ಸ್ಥಾಪನೆ ಮಾಡಲು ಹೊರಟಿದೆ ಎಂದು ಮಾಜಿ ಸಚಿವ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಸಂಪುಟ ಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ರದ್ದು ಮಾಡಲು ತೀರ್ಮಾನ ತೆಗೆದುಕೊಂಡಿರುವ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ ಅವರು, ಸರಕಾರದ ಈ ನಿರ್ಣಯವನ್ನು ಕರ್ನಾಟಕದ ಯಾವುದೇ ಸ್ವಾಮೀಜಿ ಸ್ವಾಗತಿಸಿಲ್ಲ. ಬಲವಂತದ ಮತಾಂತರ ತಡೆಗೆ ನಾವು ಜಾರಿಗೆ ತಂದ ಕಾಯ್ದೆಗೆ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ ಮತಾಂತರ ಮಾಫಿಯಾದ ಒತ್ತಡಕ್ಕೆ ಮಣಿದು ಸರಕಾರ ಈ ಕ್ರಮ ತೆಗೆದುಕೊಂಡಿದೆ ಎಂದು ಕಿಡಿಕಾರಿದರು.

ಮತಾಂತರ ನಿಷೇಧ ಕಾಯ್ದೆಯನ್ನು ಕಿತ್ತು ಹಾಕಿದರೆ ರಾಜ್ಯಾದ್ಯಂತ ಬಿಜೆಪಿ ಹೋರಾಟ ನಡೆಸಲಿದೆ. ಎಪಿಎಂಸಿ ಕಾಯ್ದೆಗೂ ಯಾರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಪಠ್ಯಪುಸ್ತಕ ವಿಚಾರದಲ್ಲೂ ಸರಕಾರ ಇದೇ ರೀತಿ ನಡೆದುಕೊಂಡಿದೆ. ಸಾರ್ವಕರ್‌, ಹೆಡಗೇವಾರ್‌ ಸಹಿತ ಅನೇಕ ಮಹನೀಯರ ಪಠ್ಯವನ್ನು ತೆಗೆದು ಹಾಕಲಾಗಿದೆ. ಜನಾಭಿಪ್ರಾಯಕ್ಕೆ ವಿರುದ್ಧವಾಗಿ ನಿಲುವು ತೆಗೆದುಕೊಂಡಿದೆ. ಉಚಿತ ವಿದ್ಯುತ್‌ ವಿಚಾರದಲ್ಲಿ ಕೊಟ್ಟಂತೆಯೂ ಆಗಬೇಕು, ಕೊಡದಂತೆಯೂ ಆಗಬೇಕು ಎಂಬಂತೆ ಕಾಂಗ್ರೆಸ್‌ ವರ್ತಿಸುತ್ತಿದೆ. ಬೆಲೆ ಏರಿಕೆಗೆ ಬಿಜೆಪಿ ಸರಕಾರ ಕಾರಣ ಎಂದು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗುತ್ತಿದೆ. ಸರಕಾರದ ಈ ಎಲ್ಲ ನಿರ್ಧಾರಗಳ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರ ಜತೆಗೆ ಸಭೆ ನಡೆಸಿ ಜೂ.19ರ ಬಳಿಕ ಹೋರಾಟದ ಸ್ವರೂಪವನ್ನು ನಿರ್ಧರಿಸುವುದಾಗಿ ಹೇಳಿದರು.

ಮರು ಮತಾಂತರಕ್ಕೆ ಮುಂದಾಗಬೇಕಿದೆ: ಸಿ.ಟಿ.ರವಿ
ಚಿಕ್ಕಮಗಳೂರು: ಕಾಂಗ್ರೆಸ್‌ ಸರಕಾರ ಮತಾಂತರ ನಿಷೇಧ ಕಾಯ್ದೆ ಹಿಂದಕ್ಕೆ ಪಡೆದರೆ ದೇಶ ಮತ್ತು ಹಿಂದೂ ಧರ್ಮ ಉಳಿಸಿಕೊಳ್ಳಲು ಎಲ್ಲ ಸಮುದಾಯಗಳ ಮಠಾಧಿಧೀಶರು ಮಹಾ ಪಂಚಾಯತ್‌ ಕರೆಯಬೇಕು. ಸಾಮ, ದಾನ, ಭೇದ, ದಂಡ ಬಳಸಿ ಮರು ಮತಾಂತರಕ್ಕೆ ಮುಂದಾಗುವ ಅನಿವಾರ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮನ್ನು ನಾವು ಉಳಿಸಿಕೊಳ್ಳಲು ಸ್ವರಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು. ಬೇರೆ ಬೇರೆ ಕಾರಣಕ್ಕೆ ಹಿಂದೂ ಧರ್ಮದಿಂದ ಹೊರ ಹೋದವರನ್ನು ಮರಳಿ ಕರೆ ತರಬೇಕಾಗಿದೆ. ಬಲವಂತದ ಮತಾಂತರದ ಬಗ್ಗೆ ಕಾಂಗ್ರೆಸ್‌ ನಿಲುವೇನು? ಆಸೆ, ಆಮಿಷ, ಬಲಾತ್ಕಾರ, ಮೋಸದ ಮತಾಂತರಕ್ಕೆ ನಿಷೇಧ ಇದೆ. ಕಾಂಗ್ರೆಸ್‌ ಬಲವಂತದ ಮತಾಂತರ ಪರವಾಗಿ ದೆಯೇ? ಭಗತ್‌ ಸಿಂಗ್‌, ರಾಜಗುರು, ಸುಖದೇವ್‌ ಹಾಗೂ ಹೆಡಗೇವಾರ್‌ ಅವರ ಕುರಿತ ಪಾಠಗಳನ್ನು ಕೈ ಬಿಟ್ಟಿರುವುದು ಕಾಂಗ್ರೆಸ್‌ಗೆ ದೇಶಭಕ್ತಿ ಎಂದರೆ ಅಸಹನೆ ಎಂಬುದಕ್ಕೆ ಸಾಕ್ಷಿ ಎಂದು ಹೇಳಿದರು.

Advertisement

ನುಡಿದಂತೆ ನಡೆಯಲಾಗದಿದ್ದರೆ ಕ್ಷಮೆ ಕೇಳಿ: ವಿಜಯೇಂದ್ರ
ಬೆಂಗಳೂರು: ಚುನಾವಣೆಗೆ ಮುನ್ನ ಕೊಟ್ಟ ಭರವಸೆಯಂತೆ ನಡೆದುಕೊಳ್ಳಲು ಸಾಧ್ಯವಾಗದಿದ್ದರೆ ಜನತೆ ಮುಂದೆ ಕ್ಷಮೆ ಕೇಳಿ. ಇಲ್ಲವಾದರೆ ಸಚಿವ ಚಲುವರಾಯಸ್ವಾಮಿ ಹೇಳಿಕೆಯಂತೆ ಗ್ಯಾರಂಟಿಗಳು ಚುನಾವಣೆ ಗಿಮಿಕ್‌ ಎಂದು ಒಪ್ಪಿಕೊಳ್ಳಿ ಎಂದು ಶಾಸಕ ಬಿ.ವೈ. ವಿಜಯೇಂದ್ರ ಸರಕಾರವನ್ನು ಆಗ್ರಹಿಸಿ ದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪೂರ್ಣ ಬಹುಮತ ಬಂದಿದೆ ಎಂದು ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತೇವೆಂಬ ಕಾಂಗ್ರೆಸಿಗರ ಧೋರಣೆ ತಪ್ಪು. ರಾಜ್ಯದ ಜನ ಇದನ್ನು ಗಮನಿಸು ತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಲಭ್ಯವಿರುವ ಅಕ್ಕಿ ಬಿಟ್ಟು, ನೆರೆ ರಾಜ್ಯಕ್ಕೆ ಹೋಗಿ ಖರೀದಿಸುತ್ತೇವೆ ಎಂದು ಸರಕಾರ ಘೋಷಿಸಿದೆ. ಇದು ದುಡ್ಡು ಹೊಡೆಯುವ ಕೆಲಸವಷ್ಟೇ. ನಮ್ಮ ರೈತರಿಂದಲೇ ಖರೀದಿಸಿದರೆ ಅವರಿಗೆ ಅನುಕೂಲ ಆಗಲಿದೆ. ಹೊರ ರಾಜ್ಯಕ್ಕೆ ಹೋಗುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದರು. ನೀವು ಕೊಟ್ಟ ಭರವಸೆಯನ್ನು ಈಡೇರಿಸದಿದ್ದರೆ ವಿಪಕ್ಷವಾಗಿ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದರು.

ಸಿದ್ದರಾಮಯ್ಯರಿಂದ ಹಿಂದೂ ವಿರೋಧಿ ನೀತಿ: ನಾಗೇಶ್‌
ತುಮಕೂರು: ಮುಖ್ಯಮಂತ್ರಿಗಳು ಪಠ್ಯಗಳನ್ನು ನೋಡದೆ ಕೇವಲ ಒಂದು ಸಮುದಾಯದ ವೋಟ್‌ ಬ್ಯಾಂಕ್‌ಗಾಗಿ ಆರೆಸ್ಸೆಸ್‌ ಪಾಠವನ್ನು ತೆಗೆದು ಹಾಕುವುದಾಗಿ ಹೇಳಿದ್ದಾರೆ. ಇದು ಒಬ್ಬ ಅನುಭವಿ ಮುಖ್ಯಮಂತ್ರಿಗಳು ನಡೆದುಕೊಳ್ಳುವ ರೀತಿಯಲ್ಲ. ಇದು ಹಿಂದೂ ವಿರೋಧಿ ನೀತಿಯಾಗಿದೆ ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿಪಟೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ಯಾವ ಪಠ್ಯವನ್ನು ತೆಗೆದು ಹಾಕಿದ್ದೆವೋ ಈಗ ಅದನ್ನೇ ಸೇರಿಸಿ ಅವಾಂತರ ಸೃಷ್ಟಿಸುತ್ತಿದ್ಧಾರೆ. ಪಠ್ಯದಲ್ಲಿ ನಾವು ಸೇರಿಸಿರುವ ಹೆಡಗೇವಾರ್‌ ಭಾಷಣದ ತುಣುಕನ್ನು ತೆಗೆಯಲು ಹೊರಟಿದ್ದಾರೆ. ಇದನ್ನೆಲ್ಲ ಮಾಡುತ್ತಿರುವುದು ಒಂದು ಸಮುದಾಯದ ಓಲೈಕೆ ಮತ್ತು ವೋಟಿಗಾಗಿ ಮಾತ್ರ. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ಸರಕಾರ ಆರೆಸ್ಸೆಸ್‌ಗೆ ಕೊಟ್ಟಿರುವ ಜಮೀನನ್ನು ವಾಪಸ್‌ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಆರೆಸ್ಸೆಸ್‌ಗೆ ಜಮೀನನ್ನೇ ಕೊಟ್ಟಿಲ್ಲ. ಆದರೂ ಈಗ ವಾಪಸ್‌ ತೆಗೆದುಕೊಳ್ಳುವ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next