Advertisement

ಬಂಟ್ವಾಳ ತಾಲೂಕಿನ 63 ಅಂಗನವಾಡಿಗಳಿಗೆ ದುರಸ್ತಿ ಭಾಗ್ಯ

08:47 PM Sep 27, 2020 | Suhan S |

ಬಂಟ್ವಾಳ, ಸೆ. 26: ಅತೀ ಹೆಚ್ಚಿನ ಅಂಗನವಾಡಿ ಕೇಂದ್ರಗಳನ್ನು ಹೊಂದಿರುವ ಬಂಟ್ವಾಳ ತಾಲೂಕಿನಲ್ಲಿ ಈ ವರ್ಷ ಒಟ್ಟು  63 ಅಂಗನವಾಡಿಗಳಿಗೆ ದುರಸ್ತಿ ಭಾಗ್ಯ ಸಿಗಲಿದ್ದು, ಈಗಾಗಲೇ ಅನುಮೋದನೆ ನೀಡಲಾಗಿದೆ. ಈ ಬಾರಿ ಅನುದಾನದ ಹೊಂದಾಣಿಕೆಯ ಕೊರತೆಯಿಂದ ಹೊಸ ಕಟ್ಟಡ ನಿರ್ಮಾಣ ಕಷ್ಟವಾಗಿದ್ದು, ದುರಸ್ತಿಯ ಕಾರ್ಯಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಿದೆ.

Advertisement

ಬಂಟ್ವಾಳ ತಾಲೂಕಿನ ಅಂಗನವಾಡಿಗಳ ಮೇಲ್ವಿ ಚಾರಣೆಯನ್ನು ನೋಡಿಕೊಳ್ಳುವ ಶಿಶು ಅಭಿವೃದ್ಧಿ ಯೋಜನೆಯನ್ನು ಎರಡು ವಿಭಾಗಗಳನ್ನಾಗಿ ಮಾಡಲಾಗಿದ್ದು, ಬಂಟ್ವಾಳ ಯೋಜನೆಯಲ್ಲಿ 341ರ ಪೈಕಿ 33 ಹಾಗೂ ವಿಟ್ಲ ಯೋಜನೆಯ 229ರ ಪೈಕಿ 30 ಅಂಗನವಾಡಿಗಳು ಈ ಬಾರಿ ದುರಸ್ತಿ ಯಾಗಲಿವೆ.

ಕಾಮಗಾರಿಯ ವೇಳೆ ಕಟ್ಟಡ ದುರಸ್ತಿ, ಸುಣ್ಣ-ಬಣ್ಣ, ಟೈಲ್ಸ್‌ ಅಳವಡಿಕೆ, ಕಿಟಿಕಿ ಬಾಗಿಲು ದುರಸ್ತಿ, ಮೇಲ್ಛಾವಣಿ ದುರಸ್ತಿ, ಅಡುಗೆ ಕೋಣೆ, ಶೌಚಾಲಯ ದುರಸ್ತಿ, ಜಗಲಿ ವಿಸ್ತರಣೆ, ನೆಲ ರಿಪೇರಿ, ಆವರಣ ಗೋಡೆ ಮೊದಲಾದ ಕಾಮಗಾರಿಗಳು ನಡೆಯುತ್ತವೆ. ದುರಸ್ತಿ ಕಾರ್ಯದ ವೆಚ್ಚದ ಆಧಾರದಲ್ಲಿ 50 ಸಾವಿರ ರೂ., 75 ಸಾವಿರ ರೂ., 35 ಸಾವಿರ ರೂ.ಗಳ ಅನುದಾನ ಮೀಸಲಿಡಲಾಗಿದೆ.

ಯಾವ್ಯಾವುದಕ್ಕೆ ದುರಸ್ತಿ ಭಾಗ್ಯ? :  ಬಂಟ್ವಾಳ ಯೋಜನೆ ವ್ಯಾಪ್ತಿಯ ಗಾಡಿಪಲ್ಕೆ, ಹೂಹಾಕುವಕಲ್ಲು, ಮಿತ್ತಕೋಡಿ ಸೈಟ್‌, ಕಲ್ಲಡ್ಕ ಶಾಲೆ, ಮಲಾರ್‌ಪದವು, ಪಿಲಿಮೊಗರು, ಶಿವನಗರ, ಪಾಂಡವರಕಲ್ಲು, ದಾಸಕೋಡಿ, ಕಶೆಕೋಡಿ, ಸಿದ್ಧಕಟ್ಟೆ ಚರ್ಚ್‌, ನರಿಕೊಂಬು ವೀರಮಾರುತಿ, ರಾಯಿ ಹೊರಂಗಳ, ದೇವಸ್ಯಮೂಡೂರು, ಮಂಜಲ್ಪಾದೆ, ಬಸ್ತಿಕೋಡಿ, ಬುಡೋಳಿ, ಪಾಂಡೀಲು, ಕರಿಯಂಗಳ, ಪುದು ಮಾಳ್ಳ, ಕೆಳಗಿನ ತುಂಬೆ, ಕೃಷ್ಣಾಪುರ, ಬಾಳ್ತಿಲ ಶಾಲೆ, ನರಿಂಗಾನ ಜಲ್ಲಿ, ಮುದಂಗಾರುಕಟ್ಟೆ, ಬೈಲಗುತ್ತು, ಸಂಪತ್ತುಮೈದಾನ, ಕೊಳಲಬಾಕಿಮಾರು, ನಲ್ಕೆಮಾರು, ಕಾರಾಜೆ, ಪದಂಜಿಮಾರು, ಕೋಮಿನಡ್ಕ, ಕೊಪ್ಪರದೊಟ್ಟು ಅಂಗನವಾಡಿಗಳು ದುರಸ್ತಿಯಾಗಲಿವೆ.

ವಿಟ್ಲ ಯೋಜನಾ ವ್ಯಾಪ್ತಿಯಲ್ಲಿ ಪೆರಿಯಲ್ತಡ್ಕ, ಕೋಡಂದೂರು, ಅಜೇರು, ಕಡೆಂಗೋಡ್ಲು, ತಾರಿದಳ, ಬೈರಿಕಟ್ಟೆ, ಕೊರತಿಕಟ್ಟೆ, ಮಲ್ಲಡ್ಕ, ಸೂರ್ಯ, ಕುಂಡಡ್ಕಪಾದೆ, ಒಡಿಯೂರು, ಬೇಡುಗುಡ್ಡೆ, ಕುಕ್ಕಾಜೆ, ಮಂಕುಡೆ, ಬೊಳಾ¾ರು, ಮಾದಕಟ್ಟೆ, ಪಾಟರಕೋಡಿ, ಕಾಗೆಕಾನ, ಕುಕ್ಕಾಜೆ, ಬರಿಮಾರು, ಕೊಡಂಗಾಯಿ, ರಾಧುಕಟ್ಟೆ, ಕೊಕ್ಕಪುಣಿ 2, ಕುಂಡಡ್ಕ, ಕಂಬಳಬೆಟ್ಟು, ಶಿವಾಜಿನಗರ, ಕಾಶಿಮಠ, ಮುಂಡಾಡಿ, ಇರಾ ತಾಳಿತ್ತಬೆಟ್ಟು, ಕಾಡಂಗಡಿ ಅಂಗನವಾಡಿ ಕೇಂದ್ರಗಳಿಗೆ ದುರಸ್ತಿ ಭಾಗ್ಯ ಸಿಗಲಿದೆ.

Advertisement

ಒಟ್ಟು 36 ಲಕ್ಷ ರೂ. ಅನುದಾನ :  ಬಂಟ್ವಾಳ ಯೋಜನೆ ವ್ಯಾಪ್ತಿಯ 33 ಅಂಗನ ವಾಡಿಗಳಿಗೆ 21,54,416 ರೂ. ಅನುದಾನ ಹಾಗೂ ವಿಟ್ಲ ಯೋಜನೆ ವ್ಯಾಪ್ತಿಯ 30 ಕೇಂದ್ರಗಳಿಗೆ 15 ಲಕ್ಷ ರೂ.ಗಳ ಕ್ರಿಯಾಯೋಜನೆ ಸಿದ್ಧಗೊಂಡಿದ್ದು, ಒಟ್ಟು 36,54,416 ರೂ.ಗಳಲ್ಲಿ ಕಾಮಗಾರಿ ನಡೆಯಲಿದೆ. ಇದರಲ್ಲಿ ಈಗಾಗಲೇ 10 ಲಕ್ಷ ರೂ. ಬಿಡುಗಡೆಗೊಂಡಿದ್ದು, ಶೀಘ್ರ ದುರಸ್ತಿ ಕಾರ್ಯ ಪ್ರಾರಂಭಗೊಳ್ಳಲಿದೆ. ಬಂಟ್ವಾಳ ವ್ಯಾಪ್ತಿಯ ಸುಮಾರು 10 ಅಂಗನವಾಡಿ ಕೇಂದ್ರಗಳ ಕಾಮಗಾರಿ ಹಿಂದಿನ ಅವಧಿಯಲ್ಲಿ ನಡೆದಿದ್ದು, ಅದನ್ನು ಈ ಬಾರಿಯ ಅನುದಾನಕ್ಕೆ ಸೇರಿಸಲಾಗಿದೆ.

ಹೊಸ ಕಟ್ಟಡ ಅಸಾಧ್ಯ? : ಅಂಗನವಾಡಿ ನಿರ್ಮಾಣಕ್ಕೆ ಕನಿಷ್ಠ 10 ಲಕ್ಷ ರೂ.ಗಳ ಅನುದಾನ ಬೇಕಿದ್ದು, ಈ ಹಿಂದೆ 5 ಲಕ್ಷ ರೂ.ಗ್ರಾಮ ಪಂಚಾಯತ್‌ಗಳ ಮೂಲಕ ಉದ್ಯೋಗ ಖಾತರಿಯಿಂದ ಮೀಸಲಿಟ್ಟು ಬಳಿಕ 5 ಲಕ್ಷ ರೂ. ಎಂಆರ್‌ಪಿಎಲ್‌ನಂತಹ ಕಂಪೆನಿಗಳಿಂದ ಸಿಎಸ್‌ಆರ್‌ ಅನುದಾನ ಸಿಗುತ್ತಿತ್ತು. ಆದರೆ ಈ ಬಾರಿ ಸಿಎಸ್‌ಆರ್‌ ಅನುದಾನ ಕಷ್ಟವಾಗಿದ್ದು, ಹೀಗಾಗಿ ಹೊಸ ಕಟ್ಟಡ ನಿರ್ಮಾಣ ಅಸಾಧ್ಯ ಎಂದು ಅಧಿಕಾರಿಗಳು ಹೇಳುತ್ತಾರೆ.

ಆರ್‌ಡಿಪಿಆರ್‌ನಿಂದ ಕಾಮಗಾರಿ :  ಮೀಸಲಿಟ್ಟ ಅನುದಾನಗಳ ಪ್ರಕಾರ ಅಂಗನವಾಡಿ ಕೇಂದ್ರಗಳ ದುರಸ್ತಿ ಕಾರ್ಯ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮೂಲಕ ನಡೆಯಲಿದ್ದು, ನಾವು ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತೇವೆ. ಈ ಬಾರಿ ಸಿಎಸ್‌ಆರ್‌ ಅನುದಾನ ಕಷ್ಟವಾಗಿದ್ದು, ಹೀಗಾಗಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಹೊಂದಾಣಿಕೆ ಅಸಾಧ್ಯವಾಗಲಿದೆ.  -ಗಾಯತ್ರಿ ಆರ್‌. ಕಂಬಳಿ ,  ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಬಂಟ್ವಾಳ

 

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next