ಕೊಳ್ಳೇಗಾಲ: ಪಟ್ಟಣದ ಹೃದಯ ಭಾಗದ ಕಬಿನಿ ನಾಲಾ ವಿಭಾಗದ ಚಿಕ್ಕರಂಗನಾಥ ಕೆರೆಯಿಂದ ಪಾಪನಕೆರೆಗೆ ಸಂಪರ್ಕ ಕಲ್ಪಿಸುವ ಮುಖ್ಯ ನಾಲೆ ಸಂಪೂರ್ಣ ಹಾಳಾಗಿದ್ದು, ಗಿಡಗಂಟೆ ಬೆಳೆದು ವಿಷಜಂತುಗಳ ವಾಸಸ್ಥಾನವಾಗಿದೆ. ಅಲ್ಲದೆ ನಾಲೆಯಲ್ಲಿ ನೀರು ಹರಿಯದೆ ರೈತರು ಸಂಕಷ್ಟದಲ್ಲಿದ್ದರೂ ಕಾವೇರಿ ಮತ್ತು ಕಬಿನಿ ನಾಲೆ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿಥಿಲಗೊಂಡಿರುವ ನಾಲೆಗಳು: ಕಾವೇರಿ ಮತ್ತು ಕಬಿನಿ ನಾಲೆ ವಿಭಾಗದ ನಿಗಮ, ಈ ಭಾಗದ ಕೆರೆಕಟ್ಟೆಗಳನ್ನು ಭರ್ತಿಗೊಳಿಸಿ, ನಾಲೆಗಳಿಂದ ರೈತರ ಜಮೀನುಗಳಿಗೆ ನೀರು ಹರಿಸಿ, ವಿವಿಧ ಫಸಲುಗಳನ್ನು ಬೆಳೆಯಲೆಂದು ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದ ನಾಲೆಗಳು ಶಿಥಿಲಗೊಂಡಿದ್ದು, ನೀರು ಹರಿಯದಂತಾಗಿದೆ.
ನಾಲೆ ಸದೃಢವಾಗಿದ್ದರೆ ರೈತರ ಜಮೀನಿಗೆ ನೀರು: ಚಿಕ್ಕರಂಗನಾಥ ಬೃಹತ್ ಕೆರೆ ಭರ್ತಿಗೊಂಡರೆ ನಾಲೆಗಳಿಂದ ಸಾವಿರಾರು ಎಕರೆ ಜಮೀನುಗಳಿಗೆ ನೀರು ಒದಗಿಸುವ ಬೃಹತ್ ಕೆರೆಯಾಗಿದೆ. ಕೆರೆಯ ನಾಲೆಗಳು ಸಂಪೂರ್ಣವಾಗಿ ಸ್ವಚ್ಛವಾಗಿ ಹಾಗೂ ಸದೃಢವಾಗಿದ್ದರೆ ಮಾತ್ರ, ಈ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆಯಾಗಲು ಸಾಧ್ಯ. ಆದರೆ ನಾಲೆಗಳೆ ಒಡೆದಿದ್ದು ಹಾಗೂ ಕಸ ಕಡ್ಡಿಗಳಿಂದ ತುಂಬಿದೆ. ಹೀಗಾಗಿ ನಾಲೆಗಳಿಗೆ ನೀರು ಹರಿಸಿದರೂ ರೈತರ ಜಮೀನುಗಳಿಗೆ ತಲುಪುವುದು ಕಷ್ಟ ಎಂದು ರೈತರ ಆರೋಪವಾಗಿದೆ. ಅಲ್ಲದೆ ಹೆಚ್ಚಿನ ಪ್ರಮಾಣದ ನೀರು ಪೋಲಾಗಲಿದೆ.
ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ: ಕಬಿನಿ ನಾಲಾ ವಿಭಾಗದ ಅಧಿಕಾರಿಗಳು, ನಾಲೆಗಳನ್ನು ಸೂಕ್ತವಾಗಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಬೇಸಿಗೆ ಸಂದರ್ಭದಲ್ಲಿ ನಾಲೆಗಳಲ್ಲಿರುವ ಹೂಳು ಎತ್ತಬೇಕು. ಜತೆಗೆ ನಾಲೆ ಶಿಥಿಲಗೊಂಡಿರುವ ಭಾಗದಲ್ಲಿ ದುರಸ್ತಿ ಕಾರ್ಯ ಮಾಡಬೇಕು. ನಾಲೆಯಲ್ಲಿ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಿ, ನೀರು ಸರಾಗವಾಗಿ ಹರಿಯವುಂತೆ ನಿಗಾ ವಹಿಸಬೇಕು. ಆದರೆ ನಾಲೆ ಅಧಿಕಾರಿಗಳು ಈವರೆಗೂ ಕುಂಭಕರ್ಣ ನಿದ್ದೆಯಿಂದ ಏಳದೇ, ನಾಲೆ ಅಭಿವೃದ್ಧಿಯತ್ತ ಗಮನ ಹರಿಸದೇ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಮಾತುಗಳು ಕೇಳುತ್ತಿವೆ.
ಸಾಲದ ಸಂಕಷ್ಟದಲ್ಲಿ ರೈತರು: ರೈತರು ಆರ್ಥಿಕವಾಗಿ ಸದೃಢರಾಗುವ ಉದ್ದೇಶದಿಂದ ವಿವಿಧ ರಾಷ್ಟ್ರೀಕೃತ ಮತ್ತು ಸಹಕಾರ ಬ್ಯಾಂಕ್‌ಗಳಲ್ಲಿ ಹಾಗೂ ಶ್ರೀಮಂತರಿಂದ ಸಾಲ ಮಾಡಿ ಜಮೀನುಗಳಿಗೆ ಬಿತ್ತನೆ ಮಾಡುತ್ತಾರೆ. ಆದರೆ ಮಳೆಯ ಕೊರತೆ ಮತ್ತು ಕೆರೆ ನೀರು ಅಸಮರ್ಪಕವಾಗಿ ಹರಿಯುವಿಕೆಯಿಂದಾಗಿ ಉತ್ತಮ ಫಸಲು ದೊರೆಯುತ್ತಿಲ್ಲ. ಇದರ ಪರಿಣಾಮವಾಗಿ ಈ ಭಾಗದ ಸಾಕಷ್ಟು ರೈತರ ಕುಟುಂಬಗಳು ಸಾಲ ಶೂಲೆಗೆ ಸಿಲುಕಿವೆ. ಅಲ್ಲದೆ ಸಾಲಗಾರರ ಕಾಟ ತಾಳಲಾರದೆ ಹಾಗೂ ಸಾಲ ತೀರಿಸಲಾಗದೆ ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ನಿಗಮದ ಅಧಿಕಾರಿಗಳು ನಾಲೆ ನಿರ್ವಹಣೆಗೆ ಕಾಳಜಿ ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.
ನಾಲೆ ದುರಸ್ತಿಗೆ ಒತ್ತಾಯ: ಚಿಕ್ಕರಂಗನಾಥ ಕೆರೆ ನೀರು ಹರಿಯುವ ಕಬಿನಿ ನಾಲೆ ಶಿಥಿಲಾವವಸ್ಥೆಗೆ ತಲುಪಿದೆ. ಗಿಡಗಂಟೆ ಬೆಳೆದು, ವಿಷ ಜಂತುಗಳ ಕಾಟ ಹೆಚ್ಚಾಗಿದೆ. ಇದರಿಂದಾಗಿ ನಾಲೆಗೆ ಹರಿಸುವ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕೂಡಲೇ ಕಬಿನಿ ನಾಲಾ ವಿಭಾಗದ ಅಧಿಕಾರಿಗಳು ಶಿಥಿಲಗೊಂಡಿರುವ ಸ್ಥಳಗಳಲ್ಲಿ ನಾಲೆ ದುರಸ್ತಿಗೊಳಿಸಿ, ನೀರು ಜಮೀನುಗಳಿಗೆ ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು ಎಂದು ರೈತ ಮುಖಂಡ ಶಾಂತರಾಜು ಒತ್ತಾಯಿಸಿದ್ಧಾರೆ.
ಕಬಿನಿ ನಾಲೆಗೆ ಸೇರಿದ ತೂಬು ಶಿಥಿಲಗೊಂಡಿದೆ. ನಾಲೆ ಉದ್ದಕ್ಕೂ ಬೆಳೆದಿರುವ ಗಿಡಗಂಟೆಗಳನ್ನು ತೆರವುಗೊಳಿಸಿ, ಕ್ರಿಯಾಯೋಜನೆಯಲ್ಲಿ ಸೇರಿಸಿ ಅಭಿವೃದ್ಧಿಗೊಳಿಸಲಾಗುವುದು.
● ಪ್ರಶಾಂತ್, ನಿಗಮದ ಸಹಾಯಕ ಎಂಜಿನಿಯರ್
● ಡಿ.ನಟರಾಜು