ಮೈಸೂರು: ಅತ್ಯಂತ ಪುರಾತನ ಮೈಸೂರು ಅರಮನೆಯ ಕಟ್ಟಡ ಅಲ್ಲಲ್ಲಿ ಶಿಥಿಲಾವಸ್ಥೆ ತಲುಪಿದ್ದು, ಪಾರಂಪರಿಕ ಶೈಲಿಯಲ್ಲೇ ನಿರ್ವಹಣೆ ಆಗಬೇಕಿದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು. ಮೈಸೂರು ಅರಮನೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ಅರಮನೆ ನಿರ್ವಹಣೆಗೆ ಸರ್ಕಾರ ಹಣ ಕೊಡಬೇಕಿಲ್ಲ. ಅರಮನೆ ಪ್ರವೇಶದರದಿಂದ ಬರುವ ಆದಾಯದಿಂದಲೇ ನಿರ್ವಹಣೆ ಸಾಧ್ಯ.
ಆದರೆ, ಅರಮನೆಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಸರ್ಕಾರವೇ ಕಟ್ಟಡದ ನಿರ್ವಹಣೆ ಮಾಡಬೇಕಿದೆ. ಸರ್ಕಾರವೇನೋ ಅರಮನೆ ಕಟ್ಟಡದ ವಾರ್ಷಿಕ ನಿರ್ವಹಣೆ ಮಾಡುತ್ತಿದೆ. ಆದರೆ, ಟೆಂಡರ್ ಕರೆದು ಈ ಕೆಲಸ ಮಾಡುತ್ತಿರುವುದರಿಂದ ಟೆಂಡರ್ ಪಡೆಯುವವರಲ್ಲಿ ಪಾರಂಪರಿಕ ಕಟ್ಟಡಗಳ ನಿರ್ವಹಣೆ ಮಾಡುವ ಕೌಶಲವಿರುವುದಿಲ್ಲ. ಅವರು ಕೇವಲ ಸಿವಿಲ್ ಎಂಜಿನಿಯರಿಂಗ್ ಕೆಲಸ ಮಾಡಿ ಹೋಗುತ್ತಿದ್ದಾರೆ.
ಹೀಗಾಗಿ 2-3 ವರ್ಷಕ್ಕೆ ಮರು ನಿರ್ವಹಣೆ ಮಾಡಬೇಕಾಗಿ ಬರುತ್ತಿದೆ. ಅರಮನೆಯಲ್ಲಿ ಸುಣ್ಣದಗಾರೆ, ತಡಿಕೆಗೋಡೆಗಳಿದ್ದು, ಅವುಗಳನ್ನು ಕಾಪಾಡಿಕೊಳ್ಳಬೇಕಿದೆ. ನಮ್ಮ ನೇತೃತ್ವದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಷ್ಠಾನದಲ್ಲಿ ಪಾರಂಪರಿಕ ತಜ್ಞರ ತಂಡವಿದ್ದು, ಅರಮನೆ ನಿರ್ವಹಣೆಯನ್ನು ಪ್ರತಿಷ್ಠಾನಕ್ಕೆ ವಹಿಸಿದರೆ ಜಗನ್ಮೋಹನ ಅರಮನೆ ಮಾದರಿಯಲ್ಲಿ ಪುನಶ್ಚೇತನಗೊಳಿಸುವುದಾಗಿ ಹೇಳಿದರು.
ಅರಮನೆ ಕರಿಕಲ್ ತೊಟ್ಟಿ ಪ್ರದೇಶ ಬಹಳ ಶಿಥಿಲಾವಸ್ಥೆಗೆ ತಲುಪಿದ್ದರಿಂದ ವೈಯಕ್ತಿಕವಾಗಿ ಪ್ರತಿಷ್ಠಾನದ ತಜ್ಞರ ತಂಡದಿಂದ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿದ್ದು, ಕಳೆದ 3 ತಿಂಗಳಿಂದ ಕೆಲಸ ನಡೆಯುತ್ತಿದ್ದು, ಅಲ್ಲಿನ ಪೇಟಿಂಗ್ ಎಲ್ಲ ಹಾಳಾಗಿದೆ. ಸರ್ವಿಲ್ಲೆನ್ಸ್ ಆಗಬೇಕಿದೆ. ವಿದ್ಯುತ್ ವ್ಯವಸ್ಥೆ ಮೇಲ್ದರ್ಜೆಗೇರಿಸಬೇಕಿದೆ. ಅಗ್ನಿಶಾಮಕ ವ್ಯವಸ್ಥೆ ಮಾಡಬೇಕಿದೆ. ಈ ಕೆಲಸಕ್ಕೆ ಸರ್ಕಾರ ನೆರವು ನೀಡುವ ಭರವಸೆ ನೀಡಿದ್ದು, ಈಗಾಗಲೇ ಸರ್ಕಾರ 4ಜಿ ವಿನಾಯಿತಿ ನೀಡಿದೆ ಎಂದು ತಿಳಿಸಿದರು.
ಕಾಪಾಡಿಕೊಳ್ಳಬೇಕು: ದೇವರಾಜ ಮಾರುಕಟ್ಟೆಯನ್ನು ಸೂಪರ್ ಮಾರ್ಕೆಟ್ ಪರಿಕಲ್ಪನೆಯೊಂದಿಗೆ ಕಟ್ಟಲಾಗಿದೆ. ಹೀಗಾಗಿ ದೇವರಾಜ ಮಾರುಕಟ್ಟೆಯನ್ನು ಕಾಪಾಡಿಕೊಳ್ಳಬೇಕಿದೆ. ಪ್ರತಿಷ್ಠಾನಕ್ಕೆ ವಹಿಸಿದರೆ ದೇವರಾಜ ಮಾರುಕಟ್ಟೆಯ ಸಂರಕ್ಷಣೆಗೆ ಬದ್ಧವಾಗಿರುವುದಾಗಿ ಹೇಳಿದರು.