Advertisement

ನೀರು ಹರಿಸುವ ವೇಳೆ ಕಾಲುವೆ ದುರಸ್ತಿ!

04:29 PM Jun 29, 2020 | Suhan S |

ಗಂಗಾವತಿ: ತುಂಗಭದ್ರಾ ಯೋಜನೆಯ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಎಡದಂಡೆ ಕಾಲುವೆಯ ಒಳಮೈ ಭದ್ರಪಡಿಸುವ ಕಾಮಗಾರಿ ಕೈಗೊಳ್ಳಲು ರಾಜ್ಯ ಸರಕಾರ 63.19 ಕೋಟಿ ರೂ. ಟೆಂಡರ್‌ ಪ್ರಕ್ರಿಯೆ ಮುಗಿಸಿ ಗುತ್ತೆಗೆದಾರನಿಗೆ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದೆ.

Advertisement

ಡ್ಯಾಂನಿಂದ 47 ಮೈಲ್‌ವರೆಗೆ ಎಡದಂಡೆ ಕಾಲುವೆಯ ಲೈನಿಂಗ್‌ ಅಭದ್ರವಾಗಿರುವ ಕಡೆ ಒಳಮೈ ಭದ್ರಪಡಿಸಲು ಯೋಜನೆಯಲ್ಲಿ  ಪ್ರಸ್ತಾಪಿಸಲಾಗಿದೆ. ಪ್ರತಿಬಾರಿಯೂ ಕಾಲುವೆಯ ಕ್ಲೋಸರ್‌ ಸಂದರ್ಭದಲ್ಲಿ ದುರಸ್ತಿ ಕಾರ್ಯ ಮಾಡಲಾಗುತ್ತದೆ. ಕಾಲುವೆ ಕಾಮಗಾರಿ ಕೈಗೊಳ್ಳಲು ಕನಿಷ್ಠ 4-5 ತಿಂಗಳು ಬೇಕಾಗುತ್ತದೆ. ಜುಲೈ ತಿಂಗಳಲ್ಲಿ ಕಾಲುವೆಗಳಿಗೆ ನೀರು ಹರಿಸಲು ಯೋಜಿಸಿರುವಾಗ ಕಾಮಗಾರಿ ಮಾಡಲು ಟೆಂಡರ್‌ ಕರೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಹಿಂದೆ ಕಾಂಗ್ರೆಸ್‌ ಮತ್ತು ಸಮ್ಮಿಶ್ರ ಸರಕಾರದ ಅವಧಿಯಲ್ಲೂ ಇದೇ ರೀತಿ ಅವರಸದಲ್ಲಿ ಕಾಮಗಾರಿ ಮಾಡಲು ಮುಂದಾದಾಗ ಬಿಜೆಪಿ, ರೈತ ಸಂಘ ಸೇರಿ ವಿವಿಧ ಸಂಘ ಸಂಸ್ಥೆಯ ಮುಖಂಡರು ಹೋರಾಟ ಮಾಡಿ ಕಾಮಗಾರಿ ನಡೆಸದಂತೆ ಒತ್ತಾಯಿಸಿದ್ದರು. ಎರಡು ವರ್ಷಗಳ ಹಿಂದೆ ಎಡದಂಡೆ ಕಾಲುವೆ ಲೈನಿಂಗ್‌ ಅಭದ್ರವಾಗಿರುವ ಕಡೆ ಲೈನಿಂಗ್‌ ಭದ್ರಪಡಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಪುನಃ ಲೈನಿಂಗ್‌ ದುರಸ್ತಿ ನೆಪದಲ್ಲಿ ಸರಕಾರದ ಹಣ ಪೋಲು ಮಾಡಲಾಗುತ್ತಿದೆ.

ಕಳೆದ ವರ್ಷ 19 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಮಲ್ಲಾಪೂರ, ರಾಂಪೂರ, ದಾಸನಾಳ ಸೇರಿ ವಿವಿಧೆಡೆ ಲೈನಿಂಗ್‌ ಕಾಮಗಾರಿ ನಡೆಸಲಾಗಿದೆ ಎಂದು ಬಿಲ್‌ ಎತ್ತುವಳಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಪುನಃ ಲೈನಿಂಗ್‌ ದುರಸ್ತಿ ಮಾಡಲು 63.19 ಕೋಟಿ ಖರ್ಚು ಮಾಡುವ ಅವಶ್ಯಕತೆ ಇದೆಯಾ ಎಂದು ರೈತ ಮುಖಂಡರು ಪ್ರಶ್ನೆ ಮಾಡಿದ್ದಾರೆ.

ಅವಸರದ ಕಾಮಗಾರಿ: ಕಾಲುವೆ ಲೈನಿಂಗ್‌ ಕಾಮಗಾರಿಯನ್ನು ಕಾಲುವೆಗಳಿಗೆ ನೀರು ಹರಿಸುವ ಮುಂಚೆ ಮಾಡುವ ಭರದಲ್ಲಿ ಗುಣಮಟ್ಟ ಕಾಪಾಡಲು ಸಾಧ್ಯವಿಲ್ಲ. ಅವರಸರದಲ್ಲಿ ಕಾಮಗಾರಿ ಮಾಡಿ ಹಣ ಪೋಲು ಮಾಡುವ ಬದಲಿಗೆ ಕಾಲುವೆ ಕ್ಲೋಸರ್‌ ಸಂದರ್ಭದಲ್ಲಿ ಪ್ರಮುಖವಾಗಿ ಎಲ್ಲಿ ಕಾಲುವೆಯಲ್ಲಿ ಬೋಂಗಾ ಬಿದ್ದು ನೀರು ಪೋಲಾಗುವುತ್ತಿದೆ ಎಂದು ಪತ್ತೆ ಮಾಡಬೇಕು.

Advertisement

ಪ್ರಮುಖವಾಗಿ ಅಕ್ವಾಡೆಕ್ಟ್ ಇರುವ ಕಡೆ ನೀರು ಪೋಲಾಗುತ್ತಿದ್ದು, ಪ್ರಮುಖ ಅಕ್ವಾಡೆಕ್ಟ್ ದುರಸ್ತಿ ಮಾಡುವ ಅವಸರವಿದ್ದು, ಬರೀ ಲೈನಿಂಗ್‌ ಮಾಡಲು ಇಲಾಖೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸುತ್ತಿರುವುದು ಅನುಮಾನಕ್ಕೀಡು ಮಾಡಿದೆ. ಕಳೆದ ವರ್ಷ ಕೇಸರಟ್ಟಿ ಮತ್ತು ಸೋಮನಾಳ ಹತ್ತಿರ ಅಕ್ವಾಡೆಕ್ಟ್ ಹತ್ತಿರ ಕಾಲುವೆ ಕುಸಿತ ಕಂಡು ಬಂದಿತ್ತು.

ಎರಡ್ಮೂರು ವರ್ಷಗಳ ಹಿಂದೆ ತುಂಗಭದ್ರಾ ಎಡದಂಡೆ ಕಾಲುವೆಯ ಒಳಮೈ ಭದ್ರಪಡಿಸುವ (ಲೈನಿಂಗ್‌)ಕಾಮಗಾರಿ ಮಾಡಲಾಗಿದೆ. ಪುನಃ ಕಾಲುವೆಗಳಿಗೆ ನೀರು ಹರಿಸುವ ಸಂದರ್ಭದಲ್ಲಿ ಲೈನಿಂಗ್‌ ಮಾಡಲು 63.19 ಕೋಟಿ ವೆಚ್ಚದ ಟೆಂಡರ್‌ ಕರೆದು ಕಾಮಗಾರಿ ಕೈಗೊಳ್ಳಲು ಪೂಜೆ ಮಾಡುವ ಮೂಲಕ ಸಾರ್ವಜನಿಕರ ಕೋಟ್ಯಂತರ ರೂ. ಪೋಲು ಮಾಡುತ್ತಿರುವುದು ಅನ್ಯಾಯ. ಸರ್ಕಾರಕ್ಕೆ ಕಾಲುವೆ ಲೈನಿಂಗ್‌ ಭದ್ರಪಡಿಸುವ ಕಾಳಜಿ ಇದ್ದರೆ ಕಾಲುವೆ ಕ್ಲೋಸರ್‌ ಸಂದರ್ಭದಲ್ಲಿ ಕಾಮಗಾರಿ ಮಾಡಬೇಕು. ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜುಲೈನಲ್ಲಿ ಕಾಲುವೆಗಳಿಗೆ ನೀರು ಹರಿಸುವ ಸಿದ್ಧತೆ ನಡೆಯುತ್ತಿರುವ ಸಂದರ್ಭದಲ್ಲಿ ಕಾಮಗಾರಿ ಮಾಡುತ್ತಿರುವುದು ಎಷ್ಟು ಸರಿ. ಕಾಮಗಾರಿ ನಿಲ್ಲಿಸುವಂತೆ ರೈತ ಸಂಘ ಹೋರಾಟ ರೂಪಿಸಲಿದೆ.ಚಾಮರಸಪಾಟೀಲ್‌ ಬೆಟ್ಟದೂರು ಕರ್ನಾಟಕ ರೈತ ಸಂಘ ಹಸಿರು ಸೇನೆ ಮುಖಂಡರು

ಎಡದಂಡೆ ಕಾಲುವೆಯ ಒಳಮೈ ಅಲ್ಲಲ್ಲಿ ಹಾಳಾಗಿದ್ದು, ಅಂತಹ ಕಡೆ ಲೈನಿಂಗ  ಹರಿಸಲು ಸಿದ್ಧ ಮಾಡಿಕೊಳ್ಳುವ ಸಂದರ್ಭದಲ್ಲಿ ಕಾಮಗಾರಿ ಮಾಡಲು ಅಸಾಧ್ಯವಾಗಿದೆ. ಡ್ಯಾಂ ಭರ್ತಿಯಾಗುವ ತನಕ ಆಯ್ದ ಕಡೆ ಕಾಮಗಾರಿ ಮಾಡಿ ಮುಂದಿನ ಕಾಮಗಾರಿಯನ್ನು ಕ್ಲೋಸರ್‌ ಸಂದರ್ಭದಲ್ಲಿ ಮಾಡುವಂತೆ ಗುತ್ತೆದಾರನಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ಅವಧಿ  12 ತಿಂಗಳಾಗಿದ್ದು ಅನುದಾನ ವಾಪಸ್‌ ಹೋಗುವುದಿಲ್ಲ. ರೈತರು ಆತಂಕಪಡುವ ಅಗತ್ಯವಿಲ್ಲ. –ಪರಣ್ಣ ಮುನವಳ್ಳಿ, ಶಾಸಕರು

 

-ಕೆ. ನಿಂಗಜ್ಜ

Advertisement

Udayavani is now on Telegram. Click here to join our channel and stay updated with the latest news.

Next