Advertisement

ಡಿ.15ರಿಂದ ಸುಮನಹಳ್ಳಿ ಮೇಲ್ಸೇತುವೆ ದುರಸ್ತಿ

12:29 AM Dec 11, 2019 | Team Udayavani |

ಬೆಂಗಳೂರು: ಸಮನಹಳ್ಳಿ ಮೇಲ್ಸೇತುವೆಯಲ್ಲಿ ತಾಂತ್ರಿಕ ಸಮಸ್ಯೆ ಇದೆ ಎಂದು ಸಿವಿಲ್‌ -ಎಡ್‌ ಟೆಕ್ನೋಕ್ಲಿನಿಕ್‌ ಎಂಬ ಸಂಸ್ಥೆ ವರದಿ ನೀಡಿರುವ ಹಿನ್ನೆಲೆಯಲ್ಲಿ ಮೇಯರ್‌ ಎಂ.ಗೌತಮ್‌ ಕುಮಾರ್‌ ಅವರು ಅಧಿಕಾರಿಗಳೊಂದಿಗೆ ಮಂಗಳವಾರ ಸುಮನಹಳ್ಳಿ ಮೇಲ್ಸೇತುವೆ ಪರಿಶೀಲನೆ ನಡೆಸಿದರು.

Advertisement

ಸೇತುವೆ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮನಹಳ್ಳಿ ಮೇಲ್ಸೇತುವೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿದೆ ಎಂದು ಸಿವಿಲ್‌ -ಎಡ್‌ ಟೆಕ್ನೋಕ್ಲಿನಿಕ್‌ ಸಂಸ್ಥೆಯು ಮೇಲ್ಸೇತುವೆಗೆ ಸಂಬಂಧಿಸಿದಂತೆ ವರದಿ ನೀಡಿದೆ. ಈ ಹಿನ್ನೆಲೆಯಲ್ಲಿ ಡಿ.15ರಿಂದ 40 ಲಕ್ಷ ರೂ. ವೆಚ್ಚದಲ್ಲಿ ಮೇಲ್ಸೇತುವೆ ನಿರ್ವಹಣೆ ಮಾಡಲಾಗುವುದು ಎಂದರು.

ಸೇತುವೆ ಬಿಡಿಎಯಿಂದ ಬಿಬಿಎಂಪಿಗೆ ಹಸ್ತಾಂತರವಾದ ಮೇಲೆ ಇದರ ನಿರ್ವಹಣೆ ಹೊಣೆ ಬಿಬಿಎಂಪಿಯದ್ದಾಗಿರುತ್ತೆ. ಹೀಗಾಗಿ, ನಿರ್ವಹಣೆ ವೆಚ್ಚವನ್ನು ಬಿಬಿಎಂಪಿಯೇ ಭರಿಸಲಿದೆ. ಸಂಸ್ಥೆ ಪತ್ತೆ ಮಾಡಿರುವ ಲೋಪದೋಷಗಳನ್ನು 40 ಲಕ್ಷ ವೆಚ್ಚದಲ್ಲಿ ಸರಿ ಪಡಿಸಲಾಗುವುದು ಎಂದರು. ಮೇಲ್ಸೇತುವೆ ನಿರ್ಮಾಣದ ಸಮಯದಲ್ಲಿ ಸಿಮೆಂಟ್‌ ಮಿಶ್ರಣದಲ್ಲಿ ಲೋಪವಾಗಿದೆ.

ಆದರೆ, ಒಟ್ಟಾರೆ ಮೇಲ್ಸೇತುವೆ ಸುರಕ್ಷಿತವಾಗಿದ್ದು, ಆತಂಕಪಡುವ ಅಗತ್ಯ ಇಲ್ಲ. ಸುರಕ್ಷತೆಯ ದೃಷ್ಟಿಯಿಂದ ತುರ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಸೇತುವೆಯ ಬೇರಿಂಗ್‌ನಲ್ಲಿ ಕಂಡು ಬಂದಿರುವ ದೋಷ ಸರಿಪಡಿಸುವ ತಜ್ಞರು ರಾಜ್ಯದಲ್ಲಿ ಇಲ್ಲವಾಗಿರುವುದರಿಂದ ಮುಂಬೈ ಮತ್ತು ದೆಹಲಿಯಿಂದ ವಿವಿಧ ತಜ್ಞರ ಸಂಸ್ಥೆಗೆ ಬಿಬಿಎಂಪಿ ಆಹ್ವಾನ ನೀಡಿದಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬದಲಾವಣೆ ಅಗತ್ಯ ಎಂದ ವರದಿ: ಇತ್ತೀಚೆಗೆ ಮೇಲ್ಸೇತುವೆಯಲ್ಲಿ ಗುಂಡಿ ಸೃಷ್ಟಿಯಾದ ಹಿನ್ನೆಲೆಯಲ್ಲಿ ಸೇತುವೆಯ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಹೀಗಾಗಿ, ಬಿಬಿಎಂಪಿ ಇಡೀ ಸೇತುವೆಯ ಸದೃಢತೆ ಪರೀಕ್ಷೆ ನಡೆಸುವುದಕ್ಕೆ ಸಿವಿಲ್‌ -ಎಡ್‌ ಟೆಕ್ನೋಕ್ಲಿನಿಕ್‌ ಎಂಬ ಸಂಸ್ಥೆಯನ್ನು ನಿಯೋಜಿಸಲಾಗಿತ್ತು. ಸಂಸ್ಥೆಯ ವರದಿಯಲ್ಲಿ ಸೇತುವೆ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ. ಹಲವು ಬೀಮ್‌ ಹಾಗೂ ಸ್ಲಾéಬ್‌ಗಳಲ್ಲಿ ಹನಿಕೂಂಬ್‌ ಸೃಷ್ಟಿಯಾಗಿದ್ದು, ಸೇತುವೆ ರ್‍ಯಾಂಪ್‌ ಮತ್ತು ಪಿಲ್ಲರ್‌ ಮಧ್ಯೆಅಳವಡಿಸಿರುವ ಬೇರಿಂಗ್‌ ದೋಷವಿದೆ. ಅಲ್ಲದೆ,ಇದು ಸೇತುವೆ ಸುರಕ್ಷತೆಯ ದೃಷ್ಟಿಯಿಂದ ಇದನ್ನು ಬದಲಾಯಿಸಬೇಕು ಎಂದು ವರದಿ ತಿಳಿಸಿದೆ.

Advertisement

ಬಿಡಿಎ ತಪ್ಪಿಗೆ ಬೆಲೆತೆತ್ತ ಬಿಬಿಎಂಪಿ: ಸುಮನಹಳ್ಳಿ ಮೇಲ್ಸೇತುವೆಯನ್ನು 2010ರಲ್ಲಿ ಬಿಡಿಎ ನಿರ್ಮಾಣ ಮಾಡಿದ್ದು, 2016ರಲ್ಲಿ ಬಿಬಿಎಂಪಿಗೆ ಹಸ್ತಾಂತರಿಸಿದೆ. ಬಿಡಿಎ ಸೇತುವೆ ನಿರ್ಮಾಣದ ವೇಳೆ ಕಳಪೆ ಕಾಮಗಾರಿಯನ್ನು ತಡೆಯುವಲ್ಲಿ ವಿಫ‌ಲವಾದ ಪರಿಣಾಮ ಬಿಬಿಎಂಪಿ ಈಗ 50 ಲಕ್ಷ ಈಗ ಇದರ ದುರಸ್ತಿಗೆ ಬಳಸುತ್ತಿದೆ. ಈಗಾಗಲೇ ಈ ಸೇತುವೆ ನಿರ್ಮಿಸಿದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಹೀಗಾಗಿ, ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಳ್ಳುವ ಅವಕಾಶವೂ ಇಲ್ಲ.

ಈ ಸೇತುವೆ ಪರಿಶೀಲನೆ ನಡೆಸುವುದಕ್ಕೆ ಸಿವಿಲ್‌ -ಎಡ್‌ ಟೆಕ್ನೋಕ್ಲಿನಿಕ್‌ ಎಂಬ ಸಂಸ್ಥೆಗೆ ಅಂದಾಜು 10 ಲಕ್ಷರೂ. ಬಿಬಿಎಂಪಿ ನೀಡಿದ್ದು, ದುರಸ್ತಿಗೆ ಅಂದಾಜು 40 ಲಕ್ಷ ರೂ. ಆಗಲಿದೆ. ಹಸ್ತಾಂತರ ಮಾಡುವ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ಅಥವಾ ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಬಿಡಿಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರೆ, ವೆಚ್ಚ ಮತ್ತು ಸಾರ್ವಜನಿಕರಲ್ಲಿ ಮೂಡುತ್ತಿರುವ ಆತಂಕವನ್ನು ತಪ್ಪಿಸಬಹುದಿತ್ತು.

ಸೇತುವೆಯ ಪರಿಶೀಲನೆಗೆ ನೇಮಿಸಲಾಗಿದ್ದ ಸಿವಿಲ್‌ -ಎಡ್‌ ಟೆಕ್ನೋಕ್ಲಿನಿಕ್‌ ಸಂಸ್ಥೆಯು ಸೇತುವೆ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವುದು ಖಚಿತಪಡಿಸಿದೆ. ಈಗ ಸೇತುವೆ ಬಿಬಿಎಂಪಿ ಅಧೀನದಲ್ಲಿ ಇರುವುದರಿಂದ ಬಿಬಿಎಂಪಿಯೇ ಇದರ ನಿರ್ವಹಣೆ ವೆಚ್ಚ ಭರಿಸಲಿದೆ.
-ಬಿ.ಎಚ್‌.ಅನಿಲ್‌ಕುಮಾರ್‌, ಬಿಬಿಎಂಪಿ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next