Advertisement

ಗ್ರಾಮೀಣ ರಸ್ತೆಗಳ ತ್ವರಿತ ದುರಸ್ತಿ: ಸಚಿವ ಕೋಟ ಸೂಚನೆ

12:28 AM Nov 27, 2019 | Team Udayavani |

ಮಂಗಳೂರು: ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ರಸ್ತೆಗಳ ದುರಸ್ತಿಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ವಿಪತ್ತು ಪರಿಹಾರ ನಿಧಿಯಿಂದ ಅನುದಾನ ಬಿಡುಗಡೆಯಾಗಿದ್ದರೂ ರಸ್ತೆ ದುರಸ್ತಿ ಆರಂಭವಾಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಕೂಡಲೇ ಆರಂಭಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು. ಇಡೀ ರಸ್ತೆ ದುರಸ್ತಿಗೆ ಬದಲು ಅತೀ ಹೆಚ್ಚು ಹಾನಿಗೀಡಾದ ಭಾಗವನ್ನು ಆದ್ಯತೆಯಲ್ಲಿ ದುರಸ್ತಿ ಮಾಡಬೇಕು ಎಂದರು.

ಕುದ್ದುಪದವು ಸಬ್‌ಸ್ಟೇಷನ್‌; ಸಮಸ್ಯೆ ಪರಿಹಾರಕ್ಕೆ ಸೂಚನೆ
ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕುದ್ದುಪದವಿನಲ್ಲಿ 9 ಗ್ರಾಮಗಳಿಗೆ ವಿದ್ಯುತ್‌ ಸರಬರಾಜು ಮಾಡಲು ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಜಮೀನು ಮಂಜೂರಾತಿ ಸಮಸ್ಯೆ ವಾರದೊಳಗೆ ಪರಿಹರಿಸುವಂತೆ ಸೂಚಿಸಿದರು.

ಕಂದಾಯ, ಮೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಪ್ರತ್ಯೇಕ ಸಭೆ ನಡೆಸಿದ ಅವರು, ಸಬ್‌ಸ್ಟೇಷನ್‌ ನಿರ್ಮಾಣಕ್ಕೆ 3.5 ಎಕರೆ ಜಾಗ ಅಗತ್ಯವಿದ್ದು, ಈ ಜಾಗ ಗೇರು ಅಭಿವೃದ್ಧಿ ಮಂಡಳಿ ನಿಯಂತ್ರಣದಲ್ಲಿದೆ. ದಾಖಲೆ ಪರಿಶೀಲಿಸಿ, ಸಮಸ್ಯೆ ಪರಿಹರಿಸಲು ಸೂಚಿಸಿದರು.ಶಾಸಕರಾದ ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್ಕ, ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ಅಪರ ಜಿಲ್ಲಾಧಿಕಾರಿ ರೂಪಾ ಉಪಸ್ಥಿತರಿದ್ದರು.

ಕಟೀಲು ಮೇಳ ವಿವಾದ ಸೌಹಾರ್ದ ಪರಿಹಾರ ಅಗತ್ಯ: ಕೋಟ ಶ್ರೀನಿವಾಸ ಪೂಜಾರಿ
ಮಂಗಳೂರು: ಕಟೀಲು ಮೇಳದ ಪ್ರಕರಣ ಸಂಬಂಧಿಸಿ ಎರಡು ತಂಡಗಳ ನಡುವೆ ಸಮನ್ವಯ ಸಾಧಿಸಿ ಸೌಹಾರ್ದದಿಂದ ಇತ್ಯರ್ಥವಾಗುವ ಆವಶ್ಯಕತೆಯಿದೆ. ಅಗತ್ಯ ಬಿದ್ದರೆ ಸರಕಾರ ಮಧ್ಯ ಪ್ರವೇಶಿಸುತ್ತದೆ ಎಂದು ಸಚಿವ ಕೋಟ ಹೇಳಿದ್ದಾರೆ.

Advertisement

ಅವರು “ಉದಯವಾಣಿ’ ಜತೆ ಮಾತನಾಡಿ, ಮೇಳಕ್ಕೆ ಸಂಬಂಧಪಟ್ಟ ಪ್ರಕರಣ ನ್ಯಾಯಾಲಯದಲ್ಲಿದೆ. ಈ ಬಗ್ಗೆ ನಡೆಯುತ್ತಿರುವ ಚರ್ಚೆ, ಮಾಧ್ಯಮ ವರದಿಗಳು ಮತ್ತು ಕಲಾಸಕ್ತರು ವ್ಯಕ್ತಪಡಿಸುತ್ತಿರುವ ಅಭಿಪ್ರಾಯಗಳನ್ನು ಗಮನದಲ್ಲಿರಿಸಿಕೊಂಡು ಜಿಲ್ಲಾ ಉಸ್ತುವಾರಿ ಸಚಿವನಾಗಿ ಪೂರ್ಣ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೆ; ಅವರು ಸಲ್ಲಿಸಿದ್ದಾರೆ. ಅದನ್ನು ಸರಕಾರ ಕೂಲಂಕಷವಾಗಿ ಪರಿಶೀಲಿಸಿ ಅಂತಿಮ ತೀರ್ಮಾನ ಕೈಗೊಳ್ಳುತ್ತದೆ. ಈ ಸಮಸ್ಯೆ ಸೌಹಾರ್ದಯುತವಾಗಿ ಪರಿಹಾರ ಕಾಣಬೇಕು ಎಂಬುದು ನನ್ನ ಇಚ್ಛೆ ಎಂದರು.

ಸರಕಾರ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದೆ. ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದರ ಜತೆಗೆ ಮುಂದೆ ಇಂತಹ ಸಮಸ್ಯೆಗಳು ಬಾರದಂತೆ ಕ್ರಮ ಕೈಗೊಳ್ಳಬೇಕಿದೆ. ಕೆಲವು ಘಟನೆಗಳಿಗೆ ಪ್ರತಿಕ್ರಿಯಿಸದೆ ಸಮಸ್ಯೆ ಪರಿಹರಿಸುವುದಕ್ಕೆ ಪ್ರಯತ್ನಿಸುವುದು ಹೆಚ್ಚು ಸೂಕ್ತ ಎಂದರು.

ಸಾಮೂಹಿಕ ವಿವಾಹಕ್ಕೆ ಸಿದ್ಧತೆ
“ಎ’ ಗ್ರೇಡ್‌ ಮುಜರಾಯಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲು ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಸಚಿವ ಶ್ರೀನಿವಾಸ ಪೂಜಾರಿ ಸೂಚಿಸಿದ್ದಾರೆ. ವರನಿಗೆ ಪ್ರೋತ್ಸಾಹ ಧನವಾಗಿ 5 ಸಾವಿರ ರೂ., ವಧುವಿಗೆ 10 ಸಾವಿರ ಮತ್ತು 40 ಸಾವಿರ ರೂ. ಬೆಲೆ ಬಾಳುವ ಚಿನ್ನದ ತಾಳಿ, ಅಂದಾಜು 8 ಗ್ರಾಂ ತೂಕದ ಎರಡು ಚಿನ್ನದ ಗುಂಡು ನೀಡಲಾಗುತ್ತದೆ. ಇದನ್ನು ದೇವಾಲಯದ ನಿಧಿಯಿಂದ ಭರಿಸಲಾಗುವುದು. ಸಾಮೂಹಿಕ ವಿವಾಹಕ್ಕಾಗಿ 2020ರ ಎ. 26 ಮತ್ತು ಮೇ 24 ಇವುಗಳಲ್ಲಿ ಒಂದು ದಿನಾಂಕವನ್ನು ನಿಗದಿಪಡಿಸಬೇಕು ಎಂದು ಸೂಚಿಸಿದರು.

ಸಾಮೂಹಿಕ ವಿವಾಹಕ್ಕೆ 30 ದಿನ ಮುಂಚಿತವಾಗಿ ನೋಂದಾಯಿಸಿಕೊಳ್ಳಬೇಕು. ವಿವಾಹ ನಡೆಯುವ ಸ್ಥಳದಲ್ಲೇ ಅಧಿಕಾರಿಗಳು ಇದ್ದು ವಿವಾಹ ನೋಂದಣಿ ಮಾಡಿಸಬೇಕು. ಪ್ರೋತ್ಸಾಹ ಧನವನ್ನು ವಧೂವರರ ಬ್ಯಾಂಕ್‌ ಖಾತೆಗಳಿಗೆ ಜಮೆ ಮಾಡಲಾಗುವುದು. ಜಿಲ್ಲಾಧಿಕಾರಿಗಳು ಮೇಲುಸ್ತುವಾರಿ ವಹಿಸಿಕೊಂಡು ಕಾರ್ಯಕ್ರಮ ಅನುಷ್ಠಾನಿಸಬೇಕು ಎಂದರು.

ಹಗಲು ಮಾತ್ರ ಮರಳು ಸಾಗಾಟ
ದ.ಕ. ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮತ್ತು ಸಾಗಾಟವನ್ನು ಕಟ್ಟುನಿಟ್ಟಾಗಿ ತಡೆಯಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಕೋಟ ಸೂಚಿಸಿದ್ದು, ಅದರನ್ವಯ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ವರೆಗೆ ಮಾತ್ರ ಮರಳು ಸಾಗಾಟದ ವಾಹನಗಳು ಪರವಾನಿಗೆಯೊಂದಿಗೆ ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

ಅಕ್ರಮ ಮರಳುಗಾರಿಕೆ, ಸಾಗಾಟ ಮತ್ತು ದಾಸ್ತಾನನ್ನು ತಡೆಗಟ್ಟಲು ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು. ಜಿಪಿಎಸ್‌ ಅಳವಡಿಸಿದ ವಾಹನಗಳು ಮಾತ್ರ ಮರಳು ಸಾಗಾಟ ಮಾಡಬೇಕು ಮತ್ತು ಜಿಲ್ಲೆಯ ಕೇರಳ ಗಡಿಯಲ್ಲಿ ಯಾವುದೇ ಅಕ್ರಮ ಮರಳುಗಾರಿಕೆ ಅಥವಾ ದಾಸ್ತಾನು ಮಾಡಿದ್ದಲ್ಲಿ ಮೊಕದ್ದಮೆ ಹೂಡಿ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next