Advertisement

ಪೊಲೀಸರ “ಆಪದ್ಭಾಂಧವ’ಮೆಕ್ಯಾನಿಕ್‌ ಬಾಲಣ್ಣ

09:49 PM Nov 22, 2021 | Team Udayavani |

ಮಹಾನಗರ: ಕಳೆದ 45 ವರ್ಷಗಳಿಂದ ರಾತ್ರಿ ಹಗಲೆನ್ನದೆ ತುರ್ತು ಸಂದರ್ಭಗಳಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ವಾಹನಗಳನ್ನು ದುರಸ್ತಿ ಮಾಡಿಕೊಡುವ ಅತ್ತಾವರದ ಮೆಕ್ಯಾನಿಕ್‌ ತಿಲಕ್‌ ಕುಮಾರ್‌(ಬಾಲಣ್ಣ) ಅವರು “ಆಪದ್ಭಾಂಧವ’ ಎನಿಸಿಕೊಂಡಿದ್ದಾರೆ.

Advertisement

ಪೊಲೀಸರ ವಾಹನದಲ್ಲಿ ಏನೇ ದೋಷವುಂಟಾದರೂ ಹೆಚ್ಚಾಗಿ ಕರೆ ಹೋಗುವುದೇ ಬಾಲಣ್ಣ ಅವರಿಗೆ. ಅದೆಷ್ಟೋ ಬಾರಿ ತಡರಾತ್ರಿ ಕೂಡ ರಸ್ತೆಯಲ್ಲಿ ಕೆಟ್ಟು ನಿಂತಿದ್ದ ಪೊಲೀಸರ ವಾಹನಗಳನ್ನು ದುರಸ್ತಿಗೊಳಿಸಿದ್ದಾರೆ. ಕೆಲವು ಬಾರಿ ಡೀಸೆಲ್‌ ಖಾಲಿಯಾಗಿ ರಸ್ತೆಯಲ್ಲಿ ನಿಂತಿದ್ದ ಪೊಲೀಸ್‌ ವಾಹನಗಳಿಗೆ ಡೀಸೆಲ್‌ ತಂದು ಕೊಟ್ಟಿದ್ದಾರೆ. ಬಾಲಣ್ಣ ಅವರ ಕೆಲಸವನ್ನು ಕಂಡ ಪೊಲೀಸರು ಇಲಾಖೆಯ ವಾಹನವಲ್ಲದೆ ಅವರ ಖಾಸಗಿ ಬಳಕೆಯ ವಾಹನವನ್ನು ಕೂಡ ಅವರಿಂದಲೇ ದುರಸ್ತಿ ಮಾಡಿಸುತ್ತಾರೆ.

ಕೇವಲ ಆ್ಯಂಬುಲೆನ್ಸ್‌ಗಳನ್ನು ಕೂಡ ಅನೇಕ ಬಾರಿ ದುರಸ್ತಿ ಮಾಡಿಕೊಟ್ಟಿದ್ದಾರೆ. ವೈದ್ಯರು, ಸಾರ್ವಜನಿಕ ವಾಹನಗಳನ್ನು ಕೂಡ ದುರಸ್ತಿ ಮಾಡಿಕೊಟ್ಟು ಪ್ರೀತಿ, ವಿಶ್ವಾಸ ಗಳಿಸಿದ್ದಾರೆ. ಕೊರೊನಾ-ಲಾಕ್‌ಡೌನ್‌ ಸಂದರ್ಭದಲ್ಲಿಯೂ ಅನೇಕ ಮಂದಿ ಇವರಿಂದ ತುರ್ತುಸೇವೆ ಪಡೆದುಕೊಂಡಿದ್ದಾರೆ. ಕೇವಲ ದುರಸ್ತಿ ಮಾತ್ರವಲ್ಲದೆ ವಾಹನಗಳನ್ನು ಪಕ್ಕಕ್ಕೆ ಎತ್ತಿ ಇಡಬೇಕಾದ ಸಂದರ್ಭ ಬಂದರೆ ಜನ ಸೇರಿಸಿ ಆ ಕೆಲಸವನ್ನೂ ಮಾಡಿಕೊಡುತ್ತಿದ್ದಾರೆ. ಒಟ್ಟಿನಲ್ಲಿ ಬಾಲಣ್ಣ ಅವರು ಅವರಿಂದ ಸಹಾಯ ಬಯಸಿದವರನ್ನು ಅರ್ಧದಾರಿಯಲ್ಲಿ ಬಿಟ್ಟು ಹೋಗುವುದಿಲ್ಲ.

ಹಣದಾಸೆ ಇಲ್ಲ
ಅತ್ತಾವರದಲ್ಲಿರು ಶ್ರೀ ಶಕ್ತಿ ಮೋಟಾರ್‌ ವರ್ಕ್ಸ್ ನನ್ನ ಗ್ಯಾರೇಜ್‌. ನಾನು ಅದರಲ್ಲಿ ದುಡಿದು ಸಂಪಾದಿಸುತ್ತೇನೆ. ಆದರೆ ತುರ್ತು ಸಂದರ್ಭಗಳಲ್ಲಿ ಕರೆ ಬಂದಾಗ ಹಣದ ಆಸೆಯಿಂದ ಮಾಡುವುದಿಲ್ಲ. ಅದೆಷ್ಟೋ ಮಂದಿಯಿಂದ ಹಣ ಪಡೆಯದೇ ವಾಪಸ್‌ ಬಂದಿದ್ದೇನೆ. ಸಹಾಯ ಮಾಡಿದ ತೃಪ್ತಿ ನನಗಿದೆ. ಹಿಂದೆ ಪೊಲೀಸ್‌ ಇಲಾಖೆಯಲ್ಲಿ ಕೆಲವೇ ವಾಹನಗಳಿದ್ದವು. ಒಂದು ವಾಹನ ಕೆಟ್ಟು ಹೋದರೂ ಪೊಲೀಸರು ಪರದಾಡುವಂತಹ ಸ್ಥಿತಿ ಇತ್ತು. ಆಗ ಅದೇ ವಾಹನವನ್ನು ದುರಸ್ತಿ ಮಾಡುವುದು ಅನಿವಾರ್ಯವಿತ್ತು. ಈಗಲೂ ಪೊಲೀಸರ ವಾಹನವೆಂದರೆ ಸ್ವಲ್ಪವೂ ತಡಮಾಡದೆ ಹೋಗಿ ದುರಸ್ತಿ ಮಾಡಿಕೊಡುತ್ತಿದ್ದೇನೆ. ಅವರು ಕೂಡ ನನ್ನ ಮೇಲೆ ವಿಶ್ವಾಸವಿಟ್ಟಿದ್ದಾರೆ ಎನ್ನುತ್ತಾರೆ ಬಾಲಣ್ಣ.

ಆಯುಕ್ತರ ಮೆಚ್ಚುಗೆ
ಇತ್ತೀಚೆಗೆ ಮಂಗಳೂರು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರು ತಮ್ಮ ಖಾಸಗಿ ವಾಹನವನ್ನು ದುರಸ್ತಿಗೆಂದು ಬಾಲಣ್ಣ ಅವರ ಬಳಿ ತೆಗೆದುಕೊಂಡು ಹೋದಾಗ ಬಾಲಣ್ಣ ಅವರ ಸೇವೆಯ ಬಗ್ಗೆ ತಿಳಿಯಿತು. ಆಯುಕ್ತರು ಬಾಲಣ್ಣ ಅವರ ಸೇವೆಯನ್ನು ಶ್ಲಾಘಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next