ಯಾದಗಿರಿ: ಜಿಲ್ಲಾ ಕೇಂದ್ರದ ಹೊರವಲಯದ ಯಾದಗಿರಿ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿದ್ದ ಗಿರಿಜಿಲ್ಲೆಗೆ ಸ್ವಾಗತ ಬಯಸುವ ಮಾಹಿತಿಯುಳ್ಳ ಕಮಾನು ಮುರಿದು ಬಿದ್ದು ವರ್ಷಗಳೇ ಕಳೆದರೂ ದುರಸ್ತಿಗೆ ಇನ್ನೂ ಯಾರೂ ಮುಂದಾಗುತ್ತಿಲ್ಲ.
ಸದ್ಯ ಯಾದಗಿರಿ ಜಿಲ್ಲೆಗೆ ಆಗಮಿಸುವ ಸವಾರರಿಗೆ ಮಾಹಿತಿ ದೊರೆಯುವುದು ಕಷ್ಟವಾಗಿದೆ. ಅಲ್ಲದೇ ಸರಹದ್ದು ಆರಂಭದ ಕುರಿತ ಮಾಹಿತಿ ಸಾರ್ವಜನಿಕರಿಗೆ ಲಭ್ಯವಿಲ್ಲದಂತಾಗಿದೆ. ರಾಯಚೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಹೋಗುವ ಸಾರ್ವಜನಿಕರು ಇದೇ ಹೆದ್ದಾರಿ ಬಳಸುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ಹೊಸದಾಗಿ ಮೆಡಿಕಲ್ ಕಾಲೇಜು ಕೂಡ ಆರಂಭಿಸಲಾಗಿದ್ದು, ಹೊರ ರಾಜ್ಯ ಮತ್ತು ಇತರೆ ಜಿಲ್ಲೆಗಳಿಂದ ಆಗಮಿಸುವ ವಿದ್ಯಾರ್ಥಿಗಳಿಗೆ, ಪಾಲಕರಿಗೆ ಮುಂದಿನ ದಿನಗಳಲ್ಲಿ ತುಂಬಾ ತೊಂದರೆಯಾಗಲಿದೆ. ಕಲಬುರಗಿ, ಬೀದರ, ರಾಯಚೂರು, ಆಂಧ್ರಪ್ರದೇಶ, ಮಹಾರಾಷ್ಟ್ರ, ತೆಲಂಗಾಣಸೇರಿದಂತೆಹಲವುಪ್ರದೇಶಗಳಿಗೆ ಭೇಟಿ ನೀಡಲು ಈ ಮಾರ್ಗವೇ ಮುಖ್ಯರಸ್ತೆಯಾಗಿದೆ. ಹೀಗಾಗಿ ಈ ರಸ್ತೆ ಮೂಲಕವೇ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ.
ಕಲ್ಯಾಣ ಕರ್ನಾಟಕ ಭಾಗದ ರಂಗನತಿಟ್ಟು ಎಂದೇ ಖ್ಯಾತಿ ಪಡೆದ ರಾಜ್ಯದ ಎರಡನೇ ಅತಿ ದೊಡ್ಡ ಪಕ್ಷಿಧಾಮ ಬೋನಾಳ್ ಕೆರೆ, ಶಹಾಪುರ ಪ್ರಸಿದ್ಧ ಬುದ್ಧ ಮಲಗಿರುವ ಬೆಟ್ಟದ ದೃಶ್ಯ, ಚಿಂತನಹಳ್ಳಿ ಗವಿ ಸಿದ್ಧಲಿಂಗೇಶ್ವರ, ಯಾದಗಿರಿ ಕೋಟೆ, ದೇವಾಲಯಗಳ ತವರು ಶಿರವಾಳ ಹೀಗೆ ಹತ್ತು ಹಲವು ಪ್ರವಾಸಿ ತಾಣಗಳನ್ನು ಹೊಂದಿದ್ದು, ಯಾದಗಿರಿ ಮಾರ್ಗವಾಗಿ ಹೋಗುವಾಗ ಸ್ವಾಗತ ಕಮಾನು ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಮಾಹಿತಿ ಸಂಪರ್ಕದ ಕೊರತೆ ಎದುರಾಗುತ್ತದೆ ಸ್ವಾಗತ ಕಮಾನು ಅವಶ್ಯವಿದ್ದರೂ ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಇಚ್ಛಾಸಕ್ತಿ ಕೊರತೆಯಿಂದ ಇನ್ನೂ ಸ್ಥಾಪನೆಯಾಗದಿರುವುದು ದುರಂತವೇ ಸರಿ.
ಯಾದಗಿರಿ ಜಿಲ್ಲಾ ಕೇಂದ್ರಕ್ಕೆ ಆಗಮಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ವಾಗತ ಕಮಾನು ಇಲ್ಲದಿರುವುದು ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಹಲವು ಪ್ರವಾಸಿ ತಾಣಗಳಿದ್ದು, ಸ್ವಾಗತ ಕಮಾನಿನ ತೀರಾ ಅವಶ್ಯಕತೆ ಇದೆ. ಅಧಿಕಾರಿಗಳಿಗೆ ಹೇಳಿ ಶೀಘ್ರದಲ್ಲೇ ಸ್ವಾಗತ ಕಮಾನು ದುರಸ್ತಿಗೆ ಕ್ರಮ ಕೈಗೊಳ್ಳುತ್ತೇನೆ.
ವೆಂಕಟರೆಡ್ಡಿಗೌಡ ಮುದ್ನಾಳ, ಶಾಸಕರು, ಯಾದಗಿರಿ ಮತಕ್ಷೇತ್ರ
ಯಾದಗಿರಿ ಜಿಲ್ಲೆಗೆ ಸ್ವಾಗತಿಸುವ ಕಮಾನು ಮುರಿದು ಬಿದ್ದಿದ್ದು ನನ್ನ ಗಮನಕ್ಕಿದೆ. ಶೀಘ್ರದಲ್ಲಿಯೇ ಸ್ಥಳ ಪರಿಶೀಲನೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚಿಸಿ ಸ್ವಾಗತ ಕಮಾನು ಪುನರ್ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತೇನೆ.
ವಿಲಾಸ್ ಪಾಟೀಲ, ನಗರಸಭೆ ಅಧ್ಯಕ್ಷರು, ಯಾದಗಿರಿ
ದೂರದ ಪ್ರದೇಶಗಳಿಂದ ಜಿಲ್ಲಾ ಕೇಂದ್ರದ ಸರಹದ್ದಿನಲ್ಲಿ ಬರುವ ಪ್ರವಾಸಿಗರಿಗೆ ಯಾದಗಿರಿ ಜಿಲ್ಲೆ ಎಲ್ಲಿದೆ ಎನ್ನುವುದು ಗೊತ್ತಾಗಲು ಬೇಕಾದ ಸ್ವಾಗತ ಕಮಾನು ನಿರ್ಮಿಸಿಲ್ಲದಿರುವುದು ದುರಂತ. ಕೂಡಲೇ ಜಿಲ್ಲಾಡಳಿತ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು.
ಮಲ್ಲು ಮಾಳಿಕೇರಿ, ಕರವೇ ತಾಲೂಕಾಧ್ಯಕ್ಷ, ಯಾದಗಿರಿ
*ಮಹೇಶ ಕಲಾಲ