Advertisement

Bangalore: ರಾಮೇಶ್ವರಂ ಕೆಫೆ ಪುನಾರಂಭ

11:39 AM Mar 10, 2024 | Team Udayavani |

ಬೆಂಗಳೂರು: ಬಾಂಬ್‌ ಸ್ಫೋಟಗೊಂಡು ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದ ವೈಟ್‌ ಫೀಲ್ಡ್‌ನ ಕುಂದಲಹಳ್ಳಿಯಲ್ಲಿರುವ “ರಾಮೇಶ್ವರಂ ಕೆಫೆ’ ಶನಿವಾರ ಮತ್ತೆ ಪುನಾರಂಭಗೊಂಡಿತು. ಪೊಲೀಸರ ಭದ್ರತೆ ನಡುವೆ ಗ್ರಾಹಕರು ಆತಂಕ ಬಿಟ್ಟು ನೆಚ್ಚಿನ ತಿನಿಸು ಸವಿದರು.

Advertisement

ಮಾರ್ಚ್‌ 1ರಂದು ಬಾಂಬ್‌ ಸ್ಫೋಟಗೊಂಡು ತಲ್ಲಣಗೊಂಡಿದ್ದ ಕೆಫೆ ಕೃತ್ಯ ನಡೆದ 8 ದಿನಗಳ ಬಳಿಕ ಪುನಾರಂಭಗೊಂಡಿದೆ. ಹೂವು, ತಳಿರು ತೋರಣಗಳಿಂದ ಕೆಫೆ ಅಲಂಕೃತಗೊಂಡಿದೆ. ಈ ಹಿಂದೆಗಿಂತ ಹೆಚ್ಚಿನ ಭದ್ರತೆ ಯಲ್ಲಿ ಕೆಫೆ ಆರಂಭಿಸಲಾಗಿದೆ. ಪ್ರವೇಶಿಸುವಲ್ಲಿ ಹೊಸದಾಗಿ ಮೆಟಲ್‌ ಡಿಟೆಕ್ಟರ್‌ ಅಳವಡಿಸಲಾಗಿದೆ. ಸಂಶಯಾಸ್ಪದ ಜನರ ಮೇಲೆ ಹೆಚ್ಚಿನ ನಿಗಾ ಇಡಲಾಗುತ್ತಿದೆ. ಸೆಕ್ಯೂರಿಟಿಗೆ ನಿವೃತ್ತ ಸೈನಿಕರನ್ನು ನೇಮಿಸಿಕೊಳ್ಳಲಾಗಿದೆ. ಗ್ರಾಹಕರ ಬ್ಯಾಗ್‌ ತಪಾಸಣೆ ಮಾಡಲಾಗುತ್ತಿದೆ.

ಕಳೆದ 1 ವಾರದಿಂದ ವಿವಿಧ ತನಿಖಾ ಸಂಸ್ಥೆಗಳ ತನಿಖೆ ಮತ್ತಿತರ ಕಾನೂನು ಪ್ರಕ್ರಿಯೆಗಳಿಗಾಗಿ ರಾಮೇಶ್ವರಂ ಕೆಫೆ ಬಂದ್‌ ಆಗಿತ್ತು. ಈ ಸಮಯದಲ್ಲೇ ಬಾಂಬ್‌ ಸ್ಫೋಟ ದಿಂದಾಗಿ ಹಾನಿಯಾಗಿದ್ದ ಪೀಠೊಪಕರಣ, ಚಾವಣಿ ಸೇರಿ ಎಲ್ಲವನ್ನೂ ಮಾಲೀಕರು ಸರಿಪಡಿಸಿದ್ದಾರೆ. ಶುಕ್ರವಾರ ಕೆಫೆಯಲ್ಲಿ ವಿಶೇಷ ಪೂಜೆ ಕೂಡ ನೆರವೇರಿತ್ತು. ರಾಷ್ಟ್ರಗೀತೆ ಯೊಂದಿಗೆ ಕೆಫೆಯನ್ನು ಹೋಟೆಲ್‌ ಮಾಲೀಕ ರಾಘವೇಂದ್ರ ರಾವ್‌ ಆರಂಭ ಮಾಡಿದರು.

ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ: ಬಾಂಬ್‌ ಸ್ಫೋಟ ಗೊಂಡ ಬಳಿಕ ಗ್ರಾಹಕರು ರಾಮೇಶ್ವರಂ ಕೆಫೆಯಪತ್ತ ಸುಳಿ ಯುತ್ತಾರೋ ಎಂಬ ಅನುಮಾನಗಳು, ಚರ್ಚೆಗಳು ಎಲ್ಲೆಡೆ ನಡೆಯುತ್ತಿತ್ತು. ಆದರೆ, ಶನಿವಾರ ಬೆಳಗ್ಗಿನಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹೋಟೆಲ್‌ಗೆ ಆಗಮಿಸಿದ್ದು ವಿಶೇಷವಾಗಿತ್ತು. ಕೆಫೆ ಮಾಲೀಕ ಗ್ರಾಹಕರ ಬಳಿ ಬಂದು ಧೈರ್ಯ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next