Advertisement

Renukaswamy Case: ನಟ ದರ್ಶನ್‌ಗೆ ಜಾಮೀನು ಕೊಟ್ಟು ಹೈಕೋರ್ಟ್‌ ವಿಧಿಸಿರುವ ಷರತ್ತುಗಳೇನು?

02:13 AM Oct 31, 2024 | Team Udayavani |

ಬೆಂಗಳೂರು: ನಟ ದರ್ಶನ್‌ಗೆ ಜಾಮೀನು ನೀಡಿರುವ ನ್ಯಾಯಪೀಠ 8 ಷರತ್ತುಗಳನ್ನು ವಿಧಿಸಿದೆ. ಜೈಲಿನಿಂದ ಬಿಡುಗಡೆಯಾದ ತತ್‌ಕ್ಷಣ ಆಸ್ಪತ್ರೆಗೆ ದಾಖಲಾಗಿ, ವೈದ್ಯಕೀಯ ತಪಾಸಣೆಗೆ ಒಳಗಾಗಿ, ಶಸ್ತ್ರಚಿಕಿತ್ಸೆಯ ಸಂಭವನೀಯ ದಿನಾಂಕ, ಎಷ್ಟು ದಿನ ಆಸ್ಪತ್ರೆಯಲ್ಲಿ ದಾಖಲಾಗಿರಬೇಕು? ಆನಂತರದ ಚಿಕಿತ್ಸೆ ಏನಾದರೂ ಇರಲಿದೆಯೇ? ಎಂಬುದರ ವರದಿಯನ್ನು ಜೈಲಿನಿಂದ ಬಿಡುಗಡೆಯಾದ ದಿನದಿಂದ ಒಂದು ವಾರದೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ.

Advertisement

ಪಾಸ್‌ಪೋರ್ಟ್‌ ವಶಕ್ಕೆ
ಹೈಕೋರ್ಟ್‌ನ ಮುಂದಿನ ಆದೇಶಕ್ಕೆ ಒಳಪಟ್ಟು ಮಧ್ಯಾಂತರ ಜಾಮೀನು ಅವಧಿ ಮುಗಿದ ತತ್‌ಕ್ಷಣ ವಿಚಾರಣಾಧೀನ ನ್ಯಾಯಾಲಯಕ್ಕೆ ಶರಣಾಗಬೇಕು. ತಮ್ಮ ಪಾಸ್‌ಪೋರ್ಟ್‌ ಅನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜಾಮೀನು ಅವಧಿಯಲ್ಲಿ ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ ಎಂಬ ಷರತ್ತನ್ನು ಹಾಕಲಾಗಿದೆ.

ಆಮ್‌ ಆದ್ಮಿ ಪಕ್ಷದ ಮುಖಂಡ ಸತ್ಯೇಂದ್ರ ಕುಮಾರ್‌ ಜೈನ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಜನರು ತಮ್ಮ ಖರ್ಚಿನಲ್ಲಿ ತಮ್ಮ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಹೇಳಿದೆ. ಹೀಗಾಗಿ ತಮ್ಮ ಇಚ್ಛೆಯ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲು ಅನುಮತಿ ಕೋರಿ ದರ್ಶನ್‌ ಸಲ್ಲಿಸಿರುವ ಅರ್ಜಿಯನ್ನು ಪುರಸ್ಕರಿಸಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ನ್ಯಾಯಮೂರ್ತಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನ ಕೇಂದ್ರದ (ಬಿಎಂಸಿಆರ್‌ಸಿ) ನರರೋಗ ವಿಭಾಗದ ಮುಖ್ಯಸ್ಥರು ದರ್ಶನ್‌ಗೆ ಶಸ್ತ್ರಚಿಕಿತ್ಸೆ ಮಾಡದಿದ್ದರೆ ಆರೋಗ್ಯದ ಮೇಲೆ ಆಗಬಹುದಾದ ಪರಿಣಾಮಗಳ ಬಗ್ಗೆ ಉಲ್ಲೇಖೀಸಿ, ಮೇಲ್ನೋಟಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು ಅಲ್ಲಿಯವರೆಗೆ ಫಿಸಿಯೋಥೆರಪಿ ಮಾಡಬೇಕು ಎಂಬ ಸಲಹೆಯನ್ನು ನೀಡಿದ್ದಾರೆ.

ದರ್ಶನ್‌ಗೆ ಬಂಧನಕ್ಕೂ ಹಿಂದೆಯೇ ಪ್ರಸಕ್ತ ಆರೋಗ್ಯ ಸಮಸ್ಯೆಗಳಿದ್ದವು. ಬಂಧನದ ಬಳಿಕ ಸೂಕ್ತ ಚಿಕಿತ್ಸೆ ದೊರೆಯದಿರುವುದು ನೋವು ಉಲ್ಬಣಿಸಿರಬಹುದು. ಅ. 10ರಂದು ಬಿಎಂಸಿಆರ್‌ಸಿಯ ವೈದ್ಯರು ಮತ್ತು ಹಿಂದಿನ ವೈದ್ಯಕೀಯ ವರದಿಗಳನ್ನು ನೋಡಿದಾಗ ದರ್ಶನ್‌ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಆದಷ್ಟು ಬೇಗ ಸರ್ಜರಿ ಮಾಡಿದರೆ ತ್ವರಿತವಾಗಿ ಚೇತರಿಸಿಕೊಳ್ಳಬಹುದು ಎಂದು ವರದಿಯನ್ನು ಓದಿದಾಗ ಸ್ಪಷ್ಟವಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

Advertisement

ಜೈಲಿನ ಆಸ್ಪತ್ರೆ ಅಥವಾ ಸರಕಾರಿ ಆಸ್ಪತ್ತೆಯಲ್ಲಿ ನಿಗದಿತ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಮಾತ್ರ ಮಧ್ಯಾಂತರ ಅಥವಾ ಸಾಮಾನ್ಯ ಜಾಮೀನು ನೀಡಬಹುದು. ಈ ಪ್ರಕರಣದಲ್ಲಿ ಶಿಫಾರಸು ಮಾಡಿರುವ ಚಿಕಿತ್ಸೆಯು ಜೈಲಿನ ಆಸ್ಪತ್ರೆ ಅಥವಾ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿಲ್ಲ ಮತ್ತು ದರ್ಶನ್‌ಗೆ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡಬಾರದು ಎಂಬ ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರ ವಾದ ಸಮರ್ಥನೀಯವಾಗಿಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

ಇತರ ಷರತ್ತುಗಳು?
* ವೈದ್ಯಕೀಯ ತಪಾಸಣೆ, ಶಸ್ತ್ರಚಿಕಿತ್ಸೆ, ಎಷ್ಟು ದಿನ ಆಸ್ಪತ್ರೆಗೆ ದಾಖಲಾಗಿರಬೇಕು ಎಂಬ ಮಾಹಿತಿಯನ್ನು ವಾರದೊಳಗೆ ಕೋರ್ಟ್‌ಗೆ ಸಲ್ಲಿಸಬೇಕು.

* 2 ಲಕ್ಷ ರೂ. ವೈಯಕ್ತಿಕ ಬಾಂಡ್‌, ಇಬ್ಬರ ಭದ್ರತೆ ಒದಗಿಸಬೇಕು.

* ಪ್ರಾಸಿಕ್ಯೂಷನ್‌ ಸಾಕ್ಷಿಗಳಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕಬಾರದು, ಸಾಕ್ಷ್ಯ ತಿರುಚಬಾರದು.

* ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಮತ್ತು ಆ ಚಿಕಿತ್ಸೆಯ ಮುನ್ನೋಟವನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು.

* ಜಾಮೀನಿನ ಅವಧಿಯಲ್ಲಿ ಯಾವುದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು.

* ಹೈಕೋರ್ಟ್‌ನ ಮುಂದಿನ ಆದೇಶಕ್ಕೆ ಒಳಪಟ್ಟು ಮಧ್ಯಂತರ ಜಾಮೀನು ಅವಧಿ ಮುಗಿದ ತತ್‌ಕ್ಷಣ ವಿಚಾರಣಾಧೀನ ನ್ಯಾಯಾಲಯಕ್ಕೆ ಶರಣಾಗಬೇಕು.

* ಪಾಸ್‌ಪೋರ್ಟ್‌ ಅನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬೇಕು.

* ಜಾಮೀನು ಅವಧಿಯಲ್ಲಿ ವಿಚಾರಣಾಧೀನ ನ್ಯಾಯಾಲಯದ ವ್ಯಾಪ್ತಿಯಿಂದ ಹೊರಹೋಗುವಂತಿಲ್ಲ.

ಮುಂದೇನು?
* ಸಾಮಾನ್ಯ ಜಾಮೀನಿಗಾಗಿ ಕಾನೂನು ಹೋರಾಟ ಮುಂದುವರಿಸಬಹುದು.

* 6 ವಾರಗಳ ಚಿಕಿತ್ಸೆಯ ಬಳಿಕ ವೈದ್ಯಕೀಯ ಪರಿಸ್ಥಿತಿಗೆ ಅನುಗುಣವಾಗಿ ಜಾಮೀನಿನ ಅವಧಿಯನ್ನು ಮತ್ತಷ್ಟು ವಿಸ್ತರಿಸಲು ಮನವಿ ಮಾಡಬಹುದು.

* ಜಾಮೀನು ಅವಧಿಯೊಳಗೆ ಆರೋಗ್ಯ ಸುಧಾರಣೆಯಾಗಿ, ಸಾಮಾನ್ಯ ಜಾಮೀನು ಸಿಗದಿದ್ದರೆ 6 ವಾರಗಳ ಅವಧಿ ಮುಕ್ತಾಯಗೊಂಡ ಬಳಿಕ ಮತ್ತೆ ಜೈಲಿಗೆ ಹೋಗಬೇಕು.

* ಹೈಕೋರ್ಟ್‌ ಸಾಮಾನ್ಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರೆ ಸುಪ್ರೀಂ ಕೋರ್ಟ್‌ನಲ್ಲಿ ಅದನ್ನು ಪ್ರಶ್ನಿಸಬಹುದು.

* ಹೈಕೋರ್ಟ್‌ ವಿಧಿಸಿರುವ ಜಾಮೀನು ಷರತ್ತುಗಳ ಉಲ್ಲಂಘನೆಯಾದರೆ ಜಾಮೀನು ರದ್ದಾಗಬಹುದು.

Advertisement

Udayavani is now on Telegram. Click here to join our channel and stay updated with the latest news.

Next