ಹೊಸದಿಲ್ಲಿ: ಅತ್ಯಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾ ಮಾಡಿದೆ.
ಸೋಮವಾರ (ನ.11) ವಿಚಾರಣೆ ನಡೆಸಿದ ನ್ಯಾ.ಬೆಲಾ ಎಂ ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠವು, ಪ್ರಜ್ವಲ್ ರೇವಣ್ಣ ಅವರ ಮೇಲಿರುವ ಆರೋಪಗಳು ಗಂಭೀರವಾಗಿದೆ ಎಂದು ಹೇಳಿದೆ.
ಆರೋಪದ ಗಂಭೀರತೆಯನ್ನು ಪರಿಗಣಿಸಿ ರೇವಣ್ಣ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ರೇವಣ್ಣ ವಿರುದ್ಧ ದಾಖಲಾಗಿರುವ ದೂರಿನಲ್ಲಿ ಅತ್ಯಾಚಾರದ ಉಲ್ಲೇಖವಿಲ್ಲ ಎಂದು ಪ್ರಜ್ವಲ್ ವಕೀಲರು ವಾದಿಸಿದರು. ಆದರೆ ಪ್ರಜ್ವಲ್ ರೇವಣ್ಣ ವಿರುದ್ಧ ಹಲವಾರು ದೂರುಗಳಿವೆ ಎಂದು ಪೀಠವು ಗಮನಿಸಿತು.
ಪ್ರಜ್ವಲ್ ರೇವಣ್ಣ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದ್ದರು.
ನಾವು ಆರು ತಿಂಗಳ ಬಳಿಕ ಅರ್ಜಿ ಸಲ್ಲಿಸಬಹುದೇ ಎಂದು ರೋಹಟಗಿ ಕೇಳಿದರು. ಇದಕ್ಕೆ ಉತ್ತರಿಸಿದ ನ್ಯಾ.ತ್ರಿವೇದಿ, “ನಾವು ಏನನ್ನೂ ಹೇಳುತ್ತಿಲ್ಲ” ಎಂದರು.
ಅ.21ರಂದು ಕರ್ನಾಟಕ ಹೈಕೋರ್ಟ್ ನ ನ್ಯಾ.ನಾಗಪ್ರಸನ್ನ ಅವರಿದ್ದ ಪೀಠ ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.