Advertisement

High Court; ನಟ ದರ್ಶನ್ ಗೆ ಕೊಂಚ ರಿಲೀಫ್:ವೈದ್ಯಕೀಯ ಜಾಮೀನು ಮಂಜೂರು

01:12 PM Oct 30, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ  (Renukaswamy Case) ಕೊಲೆ ಪ್ರಕರಣದ 2ನೇ ಆರೋಪಿ ನಟ ದರ್ಶನ್ (Darshan) ಅವರಿಗೆ ಬುಧವಾರ(ಅ30) ಹೈಕೋರ್ಟ್‌ ವೈದ್ಯಕೀಯ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ಚಿಕಿತ್ಸೆ ಪಡೆದುಕೊಳ್ಳಲು ಇದ್ದ ಅಡ್ಡಿ ನಿವಾರಣೆಯಾಗಿದ್ದು ಸಣ್ಣ ಮಟ್ಟಿಗಿನ ರಿಲೀಫ್ ಸಿಕ್ಕಂತಾಗಿದೆ.

Advertisement

ತೀವ್ರ ಬೆನ್ನುನೋವಿನಿಂದ ಬಳಲುತ್ತಿರುವ ಕಾರಣದಿಂದಾಗಿ ದರ್ಶನ್‌ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಮಧ್ಯಂತರ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ 6 ವಾರಗಳ ಕಾಲ ಷರತ್ತು ಬದ್ದ ಜಾಮೀನು ಮಂಜೂರು ಮಾಡಿ, ತತ್ ಕ್ಷಣ ದರ್ಶನ್ ತಮ್ಮ ಆಯ್ಕೆಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದಿದೆ. 131 ದಿನಗಳ ಬಳಿಕ ದರ್ಶನ್ ಜೈಲಿನಿಂದ ಹೊರಬರಲಿದ್ದಾರೆ.

ಇಬ್ಬರ ಶ್ಯೂರಿಟಿ ಮತ್ತು 2 ಲಕ್ಷ ರೂ ಬಾಂಡ್ ಪಡೆದು ಜಾಮೀನು ನೀಡಲಾಗಿದೆ. ಸಾಕ್ಷಿಗಳನ್ನು ಸಂಪರ್ಕಿಸಬಾರದು, ಪಾಸ್ ಪೋರ್ಟ್ ಸರೆಂಡರ್ ಮಾಡಲು ಕೋರ್ಟ್ ಸೂಚನೆ ನೀಡಿದೆ.

ದರ್ಶನ್‌ ಪರ ಹಿರಿಯ ಸಿ.ವಿ.ನಾಗೇಶ್‌ ವಾದ ಮಂಡಿಸಿದರು. ದರ್ಶನ್‌ ಬೆನ್ನುಮೂಳೆ ಎಂಆರ್‌ ಐ ಸ್ಕ್ಯಾನ್‌ ಮಾಡಿದ್ದು, ಬೆನ್ನಿನ ನರದ L5, S1 ಡಿಸ್ಕ್‌ ನೂನ್ಯತೆ ಕಂಡು ಬಂದಿದ್ದು, ಡಿಸ್ಕ್‌ ನಲ್ಲಿನ ಸಮಸ್ಯೆಯಿಂದಾಗಿ ರಕ್ತಪರಿಚಲನೆದಲ್ಲಿ ತೊಂದರೆ ಆಗುತ್ತಿದೆ. ಹಾಗಾಗಿ ಅವರಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿದ್ದು ಸಾಮಾನ್ಯ ಚಿಕಿತ್ಸೆಯಿಂದ ಪರಿಹಾರ ಸಾಧ್ಯವಿಲ್ಲ ಎಂದು ವಾದ ಮಂಡನೆ ಮಾಡಿದ್ದರು.

ರೋಗಿಯ ಪರಿಸ್ಥಿತಿಯನ್ನು ಅನುಮಾನಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದ್ದು, ವೈದ್ಯಕೀಯ ಕಾರಣಕ್ಕೆ ಜಾಮೀನು ನೀಡಿರುವ ಅನೇಕ ಉದಾಹರಣೆಗಳಿವೆ. ಈ ಪ್ರಕರಣ ಕೂಡ ಜಾಮೀನು ನೀಡಲು ಅರ್ಹವಾಗಿದೆ ಎಂದು ಡಿ.ಕೆ. ಶಿವಕುಮಾರ್‌ ಅವರ ಪ್ರಕರಣವನ್ನು ಉಲ್ಲೇಖಿಸಿ ನಾಗೇಶ್‌ ವಾದ ಮಂಡಿಸಿದ್ದರು.

Advertisement

ವೈದ್ಯಕೀಯ ಜಾಮೀನು ಮಂಜೂರು ಮಾಡುವಂತೆ ಸಲ್ಲಿಸಲಾಗಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ, ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರು.

ವಾದ ಮಂಡಿಸಿದ ನಾಗೇಶ್‌, ದರ್ಶನ್‌ ಈಗಾಗಲೇ ಎರಡು ಬಾರಿ ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತಮ್ಮದೇ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುವುದರಿಂದ ಪ್ರಾಸಿಕ್ಯೂಷನ್‌ ಸಾಕ್ಷಿಗೂ ಯಾವುದೇ ಸಮಸ್ಯೆಯಾಗುವುದಿಲ್ಲ. ಷರತ್ತು ವಿಧಿಸಿ, ಮೂರು ತಿಂಗಳು ಮಧ್ಯಂತರ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಆಕ್ಷೇಪ ವ್ಯಕ್ತಪಡಿಸಿದ ಪ್ರಾಸಿಕ್ಯೂಷನ್‌ ಪರ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್‌, ನ್ಯಾಯಾಲಯವು ತಜ್ಞ ವೈದ್ಯರನ್ನು ಒಳಗೊಂಡ ವೈದ್ಯಕೀಯ ಮಂಡಳಿ ರಚಿಸಿ, ಅವರ ‌ ವರದಿ ಆಧರಿಸಿ ವೈದ್ಯಕೀಯ ಜಾಮೀನು ಮಂಜೂರು ಮಾಡಬೇಕು. ಸುಪ್ರೀಂ ಕೋರ್ಟ್‌ ಸಹ ಹಲವು ಪ್ರಕರಣಗಳಲ್ಲಿ ವೈದ್ಯಕೀಯ ಮಂಡಳಿಯ ಶಿಫಾರಸು ಆಧರಿಸಿದೆ. ದರ್ಶನ್‌ ಬೆಂಗಳೂರಿಗೆ ಬಂದು ಇಲ್ಲಿ ವೈದ್ಯಕೀಯ ಮಂಡಳಿಯ ತಜ್ಞರ ತಪಾಸಣೆಗೆ ಒಳ ಗಾಗಲಿ. ವೈದ್ಯರು ಏನೆಲ್ಲಾ ಚಿಕಿತ್ಸೆ, ಎಷ್ಟು ದಿನ ಚಿಕಿತ್ಸೆ ಅಗತ್ಯವಿದೆ ಎಂದು ವರದಿ ನೀಡಲಿ. ಇದನ್ನು ಆಧರಿಸಿ ನ್ಯಾಯಾಲಯವು ನಿರ್ಧರಿಸಬೇಕೆಂದು ಮನವಿ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next