Advertisement

Renukaswamy Case: ಬೆಂಗಳೂರು ಜೈಲಲ್ಲಿ ರಾಜಾತಿಥ್ಯ; ನಟ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ

01:09 AM Aug 28, 2024 | Team Udayavani |

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ನಟ ದರ್ಶನ್​ಗೆ ರಾಜಾತಿಥ್ಯ ನೀಡುತ್ತಿರುವ ಫೋಟೊ, ವಿಡಿಯೋ ಬಹಿರಂಗವಾದ್ದರಿಂದ ಈಗ ದರ್ಶನ್‌ನನ್ನುಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ.  ಹಾಗೆಯೇ ಇತರ 9 ಆರೋಪಿಗಳು ಕೂಡ ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರವಾಗಲಿದ್ದಾರೆ.

Advertisement

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್‌ಗೆ ರಾಜಾತಿಥ್ಯ ಹಾಗೂ ರೌಡಿ ಶೀಟರ್‌ಗಳಾದ ವಿಲ್ಸನ್‌ ಗಾರ್ಡನ್‌ ನಾಗನೊಂದಿಗೆ  ಕುರ್ಚಿ ಹಾಕಿ ಕುಳಿತು ಒಂದು ಕೈಯಲ್ಲಿ ಮಗ್‌ ಹಿಡಿದು, ಮತ್ತೊಂದು ಕೈಯಲ್ಲಿ ಸಿಗರೇಟ್‌ ಹಿಡಿದಿರುವ ಫೋಟೋ ಹಾಗೂ ಸ್ನೇಹಿತರೊಂದಿಗೆ ಮಾತನಾಡುವ ವಿಡಿಯೋ ಕಾಲ್‌ಗಳು ಬಹಿರಂಗಗೊಂಡ ಬಳಿಕ ಈ ಬೆಳವಣಿಗೆಗೆ ಕಾರಣವಾಗಿದೆ.

ದರ್ಶನ್‌ ಸೇರಿ 10  ಆರೋಪಿಗಳು ಸ್ಥಳಾಂತರ:
ರಾಜಾತಿಥ್ಯ ವಿಚಾರವಾಗಿ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್‌ ಬಳ್ಳಾರಿ ಜೈಲಿಗೆ ಸ್ಥಳಾಂತರವಾದರೆ, ಇತರ ಆರೋಪಿಗಳು ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸ್ಥಳಾಂತರವಾಗುತ್ತಿದ್ದಾರೆ. ಒಟ್ಟು 17 ಆರೋಪಿಗಳ ಪೈಕಿ  ಪವಿತ್ರಾಗೌಡ, ಅನುಕುಮಾರ್‌, ದೀಪಕ್‌ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲೇ ಉಳಿದರೆ, ಇತರ14 ಆರೋಪಿಗಳಲ್ಲಿ ನಾಲ್ವರು ಈಗಾಗಲೇ ತುಮಕೂರು ಜೈಲ್ಲಿನಲ್ಲಿದ್ದಾರೆ. ಇತರ ಆರೋಪಿಗಳಾದ ಪವನ್‌, ನಂದೀಶ್‌, ರಾಘವೇಂದ್ರ ಮೈಸೂರು ಜೈಲು,  ಪ್ರದೋಷ್‌ ಬೆಳಗಾವಿ, ಜಗದೀಶ್‌, ಲಕ್ಷ್ಮಣ್‌ ಶಿವಮೊಗ್ಗ, ವಿನಯ್‌ ವಿಜಯಪುರ, ಧನ್‌ರಾಜ್‌ ಧಾರವಾಡ, ನಾಗರಾಜ್‌ ಕಲಬುರಗಿ ಜೈಲುಗಳಿಗೆ ಸ್ಥಳಾಂತರವಾಗಲಿದ್ದಾರೆ.

9 ಬ್ಯಾರಕ್ ಗಳಿರುವ ಬಳ್ಳಾರಿ ಜೈಲಿನಲ್ಲಿ ಕೋರ್ಟ್ ಕಲಾಪಕ್ಕೆ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯ ಜೊತೆಗೆ ಸಿಸಿ ಕ್ಯಾಮೆರಾಗಳ ಕಣ್ಗಾವಲಿದೆ. ಜೈಲಿನಲ್ಲಿ ಅಟ್ಯಾಚ್ ಬಾತ್ ರೂಂ ಇರುವ ಸೆಲ್ ಗಳಿದ್ದು, ಅವೇ ಸೆಲ್ ಗಳಲ್ಲಿ ದರ್ಶನ್ ಅವರನ್ನ ಇರಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಆಪ್ತರು, ಕುಟುಂಬಸ್ಥರಿಂದ ದೂರ
ಬೆಂಗಳೂರಿನ ಸೆಂಟ್ರಲ್ ಜೈಲಿರುವ ದರ್ಶನ್​ ನನ್ನು ನೋಡಲು ಪತ್ನಿ, ಪುತ್ರ, ಸಹೋದರ ಸೇರಿ ಕುಟುಂಬಸ್ಥರು  ಬಂದು ನೋಡಿಕೊಂಡು ಹೋಗುತ್ತಿದ್ದರು. ಅಲ್ಲದೇ ಗೆಳೆಯರು, ಆಪ್ತರು ಕೂಡ ಪರಪ್ಪನ ಅಗ್ರಹಾರಕ್ಕೆ ತೆರಳಿ ದರ್ಶನ್​ನನ್ನು ಮಾತನಾಡಿಸಿ ಆರೋಗ್ಯ ವಿಚಾರಿಸಿ ಹೋಗುತ್ತಿದ್ದರು. ಆದರೆ  ಇದೀಗ ದರ್ಶನ್ ನನ್ನು ಬಳ್ಳಾರಿಗೆ ಸ್ಥಳಾಂತರವಾಗುವುದರಿಂದ   ಭೇಟಿಯಾಗಲು ಕುಟುಂಬಸ್ಥರಿಗೆ ಕೊಂಚ ದೂರವಾಗಲಿದೆ.

Advertisement

ಭದ್ರತೆ, ರೌಡಿಗಳ ಸಖ್ಯವೇ ಕಾರಣ
ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ ಮೋಜಿನ ಪ್ರಕರಣ ಬೆಳಕಿಗೆ ಬಂದ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ| ಪರಮೇಶ್ವರ್‌ ದರ್ಶನ್‌ನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಮಂಗಳವಾರ ಜೈಲಿನ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ದರ್ಶನ್‌ ಜೈಲಿನಲ್ಲಿ ರೌಡಿಶೀಟರ್‌ಗಳ ಸಖ್ಯ ಬೆಳೆಸುತ್ತಿದ್ದಾನೆ. ಈ ಹಿಂದೆ ಜೈಲು ಸೇರಿದ್ದಾಗಲೂ ರೌಡಿಶೀಟರ್‌ಗಳ ಮೂಲಕ ಕೆಲವು ಸೌಲಭ್ಯ ಪಡೆದುಕೊಂಡಿದ್ದ. ಹೀಗಾ ಗಿ ಮುಂದಿನ ದಿನಗಳಲ್ಲಿ ಕಾರಾಗೃಹದ ಭದ್ರತೆ ಹಾಗೂ ಇತರ ತೊಡಕುಗಳು ಉಂಟಾಗುತ್ತವೆ. ಹೀಗಾಗಿ ಅವರನ್ನು ಸ್ಥಳಾಂತರ ಮಾಡಬೇಕು ಎಂದು ಕಾರಣ ನೀಡಿದರು. ಅದಕ್ಕೆ ಸಮ್ಮತಿಸಿ ಕೋರ್ಟ್‌ ಆದೇಶ ಹೊರಡಿಸಿದೆ.

ಪ್ರಕರಣಗಳ ವಿಚಾರಣೆಗೂ ಸೂಚನೆ
ದರ್ಶನ್‌ ಮೋಜಿನ ಪ್ರಸಂಗದ ಬೆನ್ನಲ್ಲೇ ಪರಪ್ಪನ ಅಗ್ರಹಾರ ಕಾರಾಗೃಹ ಪೊಲೀಸ್‌ ಠಾಣೆಯಲ್ಲಿ 3 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 2ರಲ್ಲಿ ದರ್ಶನ್‌ ಎ 1 ಆರೋಪಿ ಯಾಗಿದ್ದಾನೆ. ಹೀಗಾಗಿ ಈ ಪ್ರಕರಣಗಳಲ್ಲೂ ವಿಚಾರಣೆಗೆ ಕೋರ್ಟ್‌ ಸೂಚನೆ ನೀಡಿದೆ. ಆದರೆ ಈಗ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಿರುವುದರಿಂದ ಪೊಲೀಸರು, ಆರೋಪಿ ಜತೆ ವೀಡಿಯೋ ಕಾನ್ಫರೆನ್ಸ್‌ ಅಥವಾ ಬಳ್ಳಾರಿ ಜೈಲಿಗೆ ಹೋಗಿ ಹೇಳಿಕೆ ಪಡೆಯಬಹುದಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next