ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿ 17 ಮಂದಿ ಆರೋಪಿಗಳ ವಿರುದ್ಧ ತಾಂತ್ರಿಕ ಸಾಕ್ಷ್ಯ ಕಲೆ ಹಾಕುತ್ತಿರುವ ಪೊಲೀಸರು, ಆರೋಪಿಗಳ ಮೊಬೈಲ್ ಹಾಗೂ ಸಿಸಿಟೀವಿ ಡಿವಿಆರ್‌ನಿಂದ ಅಳಿಸಿ ಹಾಕಿದ್ದ ದತ್ತಾಂಶವನ್ನು ಮರು ಸಂಗ್ರಹಿಸಿದ್ದಾರೆ.
ಆರೋಪಿಗಳ ಹೆಸರಿನಲ್ಲಿ ಹೊಸ ಸಿಮ್‌ಕಾರ್ಡ್ ಪಡೆದುಕೊಂಡು, ಅವರ ಮೊಬೈಲ್‌ನಲ್ಲಿದ್ದ ಪ್ರಕರಣ ಕುರಿತು ಎಲ್ಲಾ ದತ್ತಾಂಶಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಕೊಲೆ ಮಾಡಿದ ಬಳಿಕ ಆರೋಪಿಗಳು ರೇಣುಕಸ್ವಾಮಿ ಮೊಬೈಲ್ ಅನ್ನು ನಾಶಪಡಿಸಿದ್ದರು. ಹೀಗಾಗಿ ಆತನ ಹೆಸರನಲ್ಲೂ ಸಿಮ್ ಪಡೆದು ರೇಣುಕಸ್ವಾಮಿ ಬಳಸುತ್ತಿದ್ದ ಇನ್‌ಸ್ಟ್ರಾಗ್ರಾಂ ಹಾಗೂ ವಾಟ್ಸ್‌ಆ್ಯಪ್ ಖಾತೆಗಳನ್ನು ರಿಟ್ರೈವ್ ಮಾಡಿ ಎಲ್ಲಾ ದತ್ತಾಂಶವನ್ನು ಮರು ಸಂಗ್ರಹಿಸಿದ್ದಾರೆ. ಈ ವೇಳೆ ರೇಣುಕಸ್ವಾಮಿ, ಪವಿತ್ರಾಗೌಡ ಹಾಗೂ ಕೆಲ ನಟಿಯರು, ಯುವತಿಯರಿಗೆ ಕಳುಹಿಸಿರುವ ಅಶ್ಲೀಲ ಸಂದೇಶಗಳನ್ನು ದೊರಕಿವೆ ಎಂದು ಮೂಲಗಳು ಹೇಳಿವೆ.
ಜೂನ್ 8 ರಿಂದ 10ರವರೆಗೆ ದರ್ಶನ್ ಅವರ ಚಲನವಲನಗಳ ದೃಶ್ಯಗಳನ್ನು ಅವರ ಮನೆಯ ಸಿಸಿ ಕ್ಯಾಮೆರಾ ಡಿವಿಆರ್‌ನಿಂದ ಮರುಸಂಗ್ರಹಿಸಲಾಗಿದೆ. ಹತ್ಯೆಗೆ ಬಳಸಿದ್ದ ಮೆಗ್ಗರ್ ಉಪಕರಣವನ್ನು ಧನರಾಜ್ ಎಂಬಾತ ಆನ್‌ಲೈನ್ ಮೂಲಕ ಆರ್ಡರ್ ಮಾಡಿದ್ದ. ಅದನ್ನು ತಂದುಕೊಟ್ಟಿದ್ದ ಡೆಲಿವರಿ ಬಾಯ್ ನನ್ನು ಸಹ ವಿಚಾರಣೆ ನಡೆಸಿ, ಹೇಳಿಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.