ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಪಾಲಾಗಿ 50 ದಿನ ಕಳೆದಿದ್ದು ಇನ್ನೂ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ. ಮತ್ತೂಂದೆಡೆ ನಟ ಚಿಕ್ಕಣ್ಣ ಅವರಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ 164 ಅಡಿ ಘಟನೆಯ ಸಾಕ್ಷಿಯಾಗಿ ಹೇಳಿಕೆ ದಾಖಲು ಮಾಡಲಾಗಿದೆ.
ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹ ಸೇರಿ ಶನಿವಾರಕ್ಕೆ (ಆ.10) 50 ದಿನಗಳು ಕಳೆದಿವೆ. ಆದರೆ ಇದುವರೆಗೆ ಜಾಮೀನಿಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿಲ್ಲ. ತನಿಖಾಧಿಕಾರಿಗಳು ಕೃತ್ಯ ನಡೆದ 90 ದಿನದೊಳಗೆ ಚಾರ್ಜ್‌ಶೀಟ್ ಸಲ್ಲಿಸಬೇಕಿದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ಈ ನಡುವೆ ಮನೆಯೂಟ ನೀಡುವಂತೆ ಕೋರ್ಟ್ ಮೊರೆ ಹೋಗಿದ್ದ ದರ್ಶನ್‌ಗೆ ಮನೆಯೂಟ ಸವಿಯುವ ಭಾಗ್ಯ ಸಿಗಲಿಲ್ಲ. ಇನ್ನು ನಟ ದರ್ಶನ್ ಸೇರಿ ಪ್ರಕರಣದ 17 ಆರೋಪಿಗಳೂ ಜೈಲಿನಲ್ಲಿದ್ದಾರೆ.
ನಟ ಚಿಕ್ಕಣ್ಣ ಹೇಳಿಕೆ ದಾಖಲು:
ಈ ಹಿಂದೆಯೇ ಠಾಣೆಗೆ ಕರೆಸಿ ತೀವ್ರ ವಿಚಾರಣೆ ನಡೆಸಿ ಕಳಿಸಿದ್ದ ಪೊಲೀಸರು ಇದೀಗ ಮತ್ತೆ ನಟ ಚಿಕ್ಕಣ್ಣನನ್ನು 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಸಿಆರ್‌ಪಿಸಿ 164ರ ಅಡಿ ಘಟನೆಯ ಸಾಕ್ಷಿಯಾಗಿ ಹೇಳಿಕೆ ದಾಖಲು ಮಾಡಿದ್ದಾರೆ. ಕೃತ್ಯ ನಡೆದ ದಿನ ರಾತ್ರಿ ರಾಜರಾಜೇಶ್ವರಿನಗರದ ಸ್ಟೋನಿ ಬ್ರೋಕ್ ರೆಸ್ಟೋರೆಂಟ್‌ನಲ್ಲಿ ನಡೆದಿದ್ದ ಪಾರ್ಟಿಯಲ್ಲಿ ನಟ ದರ್ಶನ್ ಜೊತೆಗೆ ಚಿಕ್ಕಣ್ಣ ಸಹ ಭಾಗಿಯಾಗಿದ್ದರು. ಈ ನಡುವೆ ಚಿತ್ರದುರ್ಗದಿಂದ ರೇಣುಕಾಸ್ವಾಮಿ ಕರೆತಂದ ಬಗ್ಗೆ ಆರೋಪಿ ಪವನ್ ಪಾರ್ಟಿಯಲ್ಲಿದ್ದ ದರ್ಶನ್‌ಗೆ ಮಾಹಿತಿ ಕೊಟ್ಟಿದ್ದ. ನಂತರ ದರ್ಶನ್ ಸ್ಟೋನಿ ಬ್ರೂಕ್ ರೆಸ್ಟೋರೆಂಟ್‌ನಿಂದ ಪಟ್ಟಣಗೆರೆ ಶೆಡ್‌ಗೆ ತೆರಳಿದ್ದರು. ಪಾರ್ಟಿಯಲ್ಲಿ ರೇಣುಕಾಸ್ವಾಮಿ ಬಗ್ಗೆ ದರ್ಶನ್ ಗ್ಯಾಂಗ್ ಮಾತುಕತೆ ನಡೆಸಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ.
ಈಗಾಗಲೇ ಸ್ಯಾಂಡಲ್‌ವುಡ್‌ನ ಹಲವು ಸೆಲೆಬ್ರೆಟಿಗಳು ಜೈಲಿಗೆ ಆಗಮಿಸಿ ದರ್ಶನ್ ಭೇಟಿ ಮಾಡಿದ್ದಾರೆ. ಇನ್ನು ನಟ ದರ್ಶನ್ ಸೇರಿ ಪ್ರಕರಣದ 17 ಆರೋಪಿಗಳೂ ಜೈಲಿನಲ್ಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 11 ರಂದು ಮೈಸೂರಿನಲ್ಲಿ ದರ್ಶನ್ ಅವರನ್ನ ಬಂಧಿಸಲಾಗಿತ್ತು. ಜೂನ್ 20ರಂದು ಪವಿತ್ರಾ ಗೌಡ ಹಾಗೂ ಇತರ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಯಿತು. ಜೂನ್ 22ರಂದು ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳಿಗೆ 24ನೇ ಎಸಿಎಂಎಂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಇದರ ಬೆನ್ನಲ್ಲೇ ದರ್ಶನ್ ಹಾಗೂ ಇತರ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.