ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಶುಕ್ರವಾರ (ಜ.10) ನ್ಯಾಯಾಲಯಕ್ಕೆ ಹಾಜರಾದರು. ಬೆಂಗಳೂರಿನ ಸಿಸಿಎಚ್ 57ರ ಕೋರ್ಟ್ಗೆ ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ, ಪ್ರದೋಶ್ ಸೇರಿ ಎಲ್ಲಾ ಆರೋಪಿಗಳು ಹಾಜರಾದರು. ನ್ಯಾಯಾಧೀಶರು ಪ್ರಕರಣದ ತನಿಖೆಯನ್ನು ಫೆ.25ಕ್ಕೆ ಮುಂದೂಡಿ ಆದೇಶಿಸಿದರು.
ಜಾಮೀನು ನೀಡುವ ಸಮಯದಲ್ಲಿ ಪ್ರತಿ ತಿಂಗಳು ಆರೋಪಿಗಳು ಹಾಜರಾಗಬೇಕು ಎಂದು ಷರತ್ತು ಕೋರ್ಟ್ ವಿಧಿಸಲಾಗಿತ್ತು. ಅದರಂತೆ ಶುಕ್ರವಾರ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.
ದರ್ಶನ್ ಅವರು ನಟ, ಆಪ್ತ ಧನ್ವೀರ್ ಅವರೊಂದಿಗೆ ಕೋರ್ಟ್ ಗೆ ಆಗಮಿಸಿದರು. ಪವಿತ್ರಾ ಗೌಡ ಅವರು ವಕೀಲರೊಂದಿಗೆ ಕೋರ್ಟ್ ಆವರಣದಲ್ಲಿ ಚರ್ಚೆ ನಡೆಸುತ್ತಿರುವುದು ಕಂಡು ಬಂತು.
ಎಲ್ಲ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದ ಬಳಿಕ ಹಾಜರಿ ಪಡೆದುಕೊಂಡ ನ್ಯಾಯಾಧೀಶರು ವಿಚಾರಣೆಯನ್ನು ಫೆ.25ಕ್ಕೆ ಮುಂದೂಡಿ ಆದೇಶಿಸಿದರು.