Advertisement
ಈ ಕುರಿತ ಜಾಮೀನು ಅರ್ಜಿಯನ್ನು ದರ್ಶನ್ ಪರ ವಕಾಲತ್ತು ವಹಿಸಿರುವ ಹೈಕೋರ್ಟ್ ವಕೀಲ ಎಸ್.ಸುನಿಲ್‌ಕುಮಾರ್ ಮಂಗಳವಾರ ಮಧ್ಯಾಹ್ನ ಹೈಕೋರ್ಟ್ ಫೈಲಿಂಗ್ ವಿಭಾಗಕ್ಕೆ ಸಲ್ಲಿಸಿದರು. 300 ಪುಟಗಳಿಗೂ ಅಧಿಕ ದಸ್ತಾವೇಜು ಹೊಂದಿರುವ ಈ ಅರ್ಜಿಗೆ ಸದ್ಯ ಎಫ್ಆರ್ ನಂಬರ್ ನೀಡಲಾಗಿದ್ದು ಅದರ ಕ್ರಿಮಿನಲ್ ಅರ್ಜಿ ಸಂಖ್ಯೆ ಇನ್ನಷ್ಟೇ ನಮೂದಾಗಬೇಕಿದೆ. ನಂತರವೇ ಅದು ನ್ಯಾಯಪೀಠದ ಮುಂದೆ ಬರಲಿದೆ ಅಥವಾ ಅವರ ಪರ ವಕೀಲರು ಮೆಮೊ ಸಲ್ಲಿಕೆಯ ಮೂಲಕ ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಸೂಕ್ತ ನ್ಯಾಯಪೀಠದಲ್ಲಿ ಮನವಿ ಮಾಡಲಿದ್ದಾರೆ.
ದರ್ಶನ್ ಮತ್ತು ಸಂಗಡಿಗರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 57ನೇ ಸಿಸಿಎಚ್ ನ್ಯಾಯಾಲಯವು ಸೋಮವಾರ ವಜಾಗೊಳಿಸಿತ್ತು. ಆರೋಪಿ ದರ್ಶನ್, ರೇಣುಕಸ್ವಾಮಿ ಹಲ್ಲೆ ಹಾಗೂ ಹತ್ಯೆ ವೇಳೆ ಘಟನಾ ಸ್ಥಳದಲ್ಲಿದ್ದರು ಎಂಬುದಕ್ಕೆ ಸಿಡಿಆರ್ ಸಾಕ್ಷ್ಯ ಇದೆ. ದರ್ಶನ್ ಡಿಎನ್‌ಎ ಪರೀಕ್ಷೆಯಿಂದ ಘಟನಾ ಸ್ಥಳದಲ್ಲಿ ಇದ್ದರು ಎಂಬುದು ಪತ್ತೆಯಾಗುತ್ತದೆ. ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಹೀಗಾಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಸರ್ಕಾರಿ ವಿಶೇಷ ಅಭಿಯೋಜಕರು ಕೋರ್ಟ್‌ನಲ್ಲಿ ವಾದಿಸಿದ್ದರು. ಈ ಎಲ್ಲ ಅಂಶಗಳನ್ನು ಮಾನ್ಯ ಮಾಡಿದ ಕೋರ್ಟ್ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.