Advertisement

ನಾಪತ್ತೆಯಾಗಿದ್ದ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಶವವಾಗಿ ಪತ್ತೆ

06:04 PM Nov 03, 2022 | Team Udayavani |

ದಾವಣಗೆರೆ: ಭಾನುವಾರದಿಂದ(ಅಕ್ಟೋಬರ್ 30)ನಾಪತ್ತೆಯಾಗಿದ್ದ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ.ರಮೇಶ್‌ ಅವರ ಪುತ್ರ ಎಂ.ಆರ್‌.ಚಂದ್ರಶೇಖರ್(24) ಅವರು ಗುರುವಾರ ಕಾಲುವೆಯಲ್ಲಿ ಬಿದ್ದ ಕಾರಿನೊಳಗೆ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಪೊಲೀಸರ ಆಳವಾದ ತನಿಖೆಯ ವೇಳೆ ದಾವಣಗೆರೆಯ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ಇರುವ ತುಂಗಾ ಕಾಲುವೆಯಲ್ಲಿ ಬಿಳಿ ಬಣ್ಣದ ಕಾರು ಗುರುವಾರ ಮಧ್ಯಾಹ್ನ ಪತ್ತೆಯಾಗಿದ್ದು, ಕ್ರೇನ್ ಬಳಸಿ ಕಾರನ್ನು ಮೇಲಕ್ಕೆತ್ತಲಾಗಿದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾರಿನ ಏರ್‌ಬ್ಯಾಗ್ ಓಪನ್ ಆಗಿರುವುದು ಕಂಡುಬಂದಿದೆ.

ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನಿಸಲಾಗುತ್ತಿದ್ದು,ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ.

ಕಾರು ರಸ್ತೆ ಅಪಘಾತಕ್ಕೊಳಗಾಗಿ ನಾಲೆಗೆ ಬಿದ್ದಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದರೂ ಕಾರಿನಲ್ಲಿ ಬೇರೆ ಯಾರೂ ಇಲ್ಲದಿರುವುದು, ದೇಹ ಕಾರಿನ ಹಿಂದಿನ ಸೀಟಿನಲ್ಲಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆಕ್ರಂದನ
ರೇಣುಕಾಚಾರ್ಯ ನಿವಾಸದಲ್ಲಿ ಕಳೆದ ಮೂರು ದಿನಗಳಿಂದ ನೀರವ ಮೌನ ಆವರಿಸಿದ್ದು, ಶವ ಪತ್ತೆಯಾದ ವಿಚಾರ ತಿಳಿಯುತ್ತಿದ್ದಂತೆ ಆಕ್ರಂದನ ಮುಗಿಲು ಮುಟ್ಟಿದೆ. ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ ಜನರು ಶಾಸಕರ ಮನೆಗೆ ಆಗಮಿಸುತ್ತಿದ್ದಾರೆ. ರೇಣುಕಾಚಾರ್ಯ ಅವರು ಶವ ಪತ್ತೆಯಾದ ಸ್ಥಳಕ್ಕೆ ಆಗಮಿಸಿದ್ದು,ಕಂಗಾಲಾಗಿ ಹಣೆಗೆ ಕೈಗಳಿಂದ ಬಡಿದುಕೊಂಡು ಗೋಳಾಡಿದರು. ಬೆಂಬಲಿಗರು ಅವರನ್ನು ಸಮಾಧಾನ ಪಡಿಸಲು ಯತ್ನಿಸಿದರು.

Advertisement

ಹೆಚ್ಚಿನ ವಿವರ ಗಳನ್ನು ನಿರೀಕ್ಷಿಸಲಾಗುತ್ತಿದೆ.

ಬುಧವಾರ ಎಸ್‌ಪಿ ರಿಷ್ಯಂತ್‌, ಚನ್ನಗಿರಿ ಉಪ ವಿಭಾಗದ ಡಿವೈಎಸ್ಪಿ ಡಾ|ಸಂತೋಷ್‌ ಹೊನ್ನಾಳಿ, ಪೊಲೀ ಸ್‌ ಇನ್‌ಸ್ಪೆಕ್ಟರ್‌ ಸಿದ್ದೇಗೌಡ ಅವರು ಶಾಸಕ ರೇಣುಕಾಚಾರ್ಯ ಅವರ ಹೊನ್ನಾಳಿ ನಿವಾಸಕ್ಕೆ ಭೇಟಿ ನೀಡಿ ಘಟನೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಚರ್ಚೆ ನಡೆಸಿದ್ದರು. ನಂತರ ಶಾಸಕರ ನಿವಾಸದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ರೇಣುಕಾಚಾರ್ಯ ಅವರ ಕುಟುಂಬದ ಸದಸ್ಯರಿಂದ ಮಾಹಿತಿ ಪಡೆದಿದ್ದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಜಿಪಂ ಸಿಇಒ ಡಾ| ಚನ್ಪಪ್ಪ, ಹೊನ್ನಾಳಿ, ತಹಶೀಲ್ದಾರ್‌ ಎಚ್‌.ಜೆ.ರಶ್ಮಿ ಶಾಸಕರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next