ಹೊನ್ನಾಳಿ: ನನ್ನ ಮಗ ಚಂದ್ರುವಿನ ಸಾವು ಅಪಘಾತದಿಂದಾಗಿಲ್ಲ, ಪೂರ್ವ ನಿಯೋಜಿತ ಕೊಲೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ಹಿರೇಕಲ್ಮಠ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಚಂದ್ರು ಸಾವಿನ ತನಿಖೆಯನ್ನು ಸರಿಯಾದ ಆಯಾಮದಲ್ಲಿ ಮಾಡುತ್ತಿಲ್ಲ. ಚಂದ್ರು ಮೃತಪಟ್ಟು ಆರು ದಿನ ಕಳೆದಿದ್ದರೂ ಪೊಲೀಸರು ವ್ಯವಸ್ಥಿತವಾಗಿ ಹಲವಾರು ತಂಡಗಳನ್ನು ರಚಿಸಿ, ಇಲಾಖೆ ನಿಯಮಾವಳಿಗಳ ಪ್ರಕಾರ ತನಿಖೆ ಚುರುಕುಗೊಳಿಸಿ ದುಷ್ಕರ್ಮಿಗಳನ್ನು ಬಂಧಿಸಬಹುದಿತ್ತು, ಆದರೆ ಪೊಲೀಸರು ಸಮಗ್ರವಾಗಿ ತನಿಖೆ ಮಾಡುತ್ತಿಲ್ಲ.
ನನ್ನ ಕಾರ್ಯಕರ್ತರು, ಮುಖಂಡರು ಪ್ರತಿಯೊಂದು ಹಳ್ಳಿ, ಗುಡ್ಡ, ಕಾಡು, ಕ್ವಾರೆ ಸೇರಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಪೊಲೀಸರು ಎಲ್ಲಿಯೂ ಕೂಡ ಚಂದ್ರುವಿಗಾಗಿ ಸಮರ್ಪಕ ಹುಡುಕಾಟ ನಡೆಸಿಲ್ಲ.
ಚಂದ್ರುವನ್ನು ಪತ್ತೆ ಹಚ್ಚಿದ್ದು ಕೂಡ ನಮ್ಮ ಕಾರ್ಯಕರ್ತರು, ಅವರು ತಮ್ಮ ಬುದ್ಧಿಶಕ್ತಿಯಿಂದ ಡ್ರೋಣ್ ಕ್ಯಾಮರಾ ಬಳಿಸಿ ಚಂದ್ರು ಕಾರ್ ಪತ್ತೆ ಹಚ್ಚಿದ್ದಾರೆ. ಆದರೆ ಪೊಲೀಸರು ತಾವು ಡ್ರೋಣ್ ಬಳಸಿ ಚಂದ್ರು ಕಾರ್ ಪತ್ತೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದರು.
ನೀವು ಅಧಿಕಾರದಲ್ಲಿದ್ದರೂ ಕೂಡ ಚಂದ್ರುವಿನ ಸಾವಿನ ಪ್ರಕರಣದ ತನಿಖೆ ಸರಿಯಾಗಿಲ್ಲ ಎಂದು ಸಾರ್ವಜನಿಕರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಈ ಹಿಂದೆ ನನಗೆ ಕೊಲೆ ಬೆದರಿಕೆ ಬಂದು ಒಂದು ವರ್ಷ ಆಯಿತು. ಈ ಬಗ್ಗೆ ದೂರು ಕೊಟ್ಟರೂ ಪೊಲೀಸರು ಸರಿಯಾಗಿ ತನಿಖೆ ಮಾಡಿಲ್ಲ. ಇದುವರೆಗೂ ಅದರ ಬಗ್ಗೆ ನನ್ನನ್ನು ಏನೂ ವಿಚಾರಿಸಿಲ್ಲ. ಪೊಲೀಸ್ ಅಧಿಕಾರಿಗಳು ಕಾರು ಓವರ್ ಸ್ಪೀಡ್‌ನಲ್ಲಿತ್ತು ಎಂದು ಹೇಳುತ್ತಾರೆ. ಕಾರಿನ ಮುಂದಿನ ಸೀಟ್‌ನಲ್ಲಿ ಚಂದ್ರುವಿನ ಶವ ಇರಬೇಕಿತ್ತು. ಆದರೆ ಹಿಂದಿನ ಸೀಟಿನಲ್ಲಿ ಇದೆ. ಇದು ಹೇಗಾಯ್ತು? ಇದೊಂದು ಪ್ರಿಪ್ಲ್ಯಾನ್ ಮರ್ಡರ್. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದರು.
ಚಂದ್ರು ಸಾವು ಓವರ್ ಸ್ಪೀಡ್‌ನಿಂದ ಆಗಿದೆ ಎಂದು ಎಡಿಜಿಪಿ ಅಲೋಕ್‌ಕುಮಾರ್ ಹೇಳಿದ್ದು ತಪ್ಪು. ಪ್ರಾಥಮಿಕ ತನಿಖೆ ನನ್ನಿಂದ ಆರಂಭವಾಗಬೇಕಿತ್ತು. ಅವರು ನನ್ನ ಬಳಿ ಚರ್ಚೆ ಕೂಡ ಮಾಡಿಲ್ಲಾ. ಅಲೋಕ್ ಕುಮಾರ್ ಸಿದ್ದರಾಮಯ್ಯ ಅವಧಿಯಲ್ಲಿ ಸಿಂಗಲ್ ಲಾಟರಿ ವಿಚಾರದಲ್ಲಿ ಸಸ್ಪೆಂಡ್ ಆಗಿದ್ದು, ಇಂತಹವರು ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ. ಪೊಲೀಸರು ಘಟನೆ ಬಗ್ಗೆ ಕಟ್ಟು ಕಥೆ ಕಟ್ಟಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಿಎಂ ಬಳಿ ಚರ್ಚೆ ಮಾಡುತ್ತೇನೆ ತಿಳಿಸಿದರು.