Advertisement
ಈವರೆಗೆ ಕರ್ನಾಟಕದ ರಾಜಧಾನಿ, ಐಟಿ ಕ್ಯಾಪಿಟಲ್ ಎಂದಷ್ಟೇ ಪರಿಚಿತವಾಗಿತ್ತು. ಇದೀಗ ಮತ್ತೂಂದು ಗರಿ ನಗರದ ಮುಡಿಗೇರಿದೆ. “ಸ್ಕೂಟರ್ ಶೇರಿಂಗ್'(ಬಾಡಿಗೆ ಬೈಕು) ವ್ಯವಸ್ಥೆ ಚಾಲ್ತಿಯಲ್ಲಿರುವ ಪ್ರಪಂಚದ ಪ್ರಮುಖ ನಗರಗಳಲ್ಲೇ ಅತಿ ಹೆಚ್ಚು ಕ್ರಿಯಾಶೀಲವಾಗಿರುವ ಮತ್ತು ಅತಿ ಹೆಚ್ಚು ಶೇರಿಂಗ್ ಸ್ಕೂಟರ್‌ಗಳಿರುವ ನಗರ, ಬೆಂಗಳೂರು ಎಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ. ಸ್ಕೂಟರ್ ಶೇರಿಂಗ್ ಉದ್ದಿಮೆಯಲ್ಲಿ ಬೌನ್ಸ್ ಮತ್ತು ವೋಗೋ ಸಂಸ್ಥೆಗಳು ಮುನ್ನಡೆಯನ್ನು ಕಾಯ್ದುಕೊಂಡಿವೆ. ಇವೆರಡೂ ಸಂಸ್ಥೆಗಳು ಕೋಟ್ಯಂತರ ರೂ. ಬಂಡವಾಳವನ್ನು ಹೂಡಿಕೆದಾರರಿಂದ ಪಡೆದುಕೊಂಡಿವೆ. ಆ್ಯಪ್ ಆಧಾರಿತ ಟ್ಯಾಕ್ಸಿ ಕ್ಯಾಬ್ ಓಲಾ ಮತ್ತು ಊಬರ್ ಕೂಡಾ ಬೈಕ್ ರೆಂಟಲ್ಸ್ ಕ್ಷೇತ್ರದಲ್ಲಿ ಸಾಮರ್ಥ್ಯ ಪರೀಕ್ಷೆಗೆ ಇಳಿದಿದೆ. ಓಲಾ ಟ್ಯಾಕ್ಸಿ, ವೋಗೋ ಬೈಕ್ ರೆಂಟಲ್ಸ್‌ನಲ್ಲಿ ಹಣ ಹೂಡಿದ್ದರೆ, ಊಬರ್ ಮತ್ತೂಂದು ಬೈಕ್ ರೆಂಟಲ್ಸ್ “ಯುಲು’ನಲ್ಲಿ ಹೂಡಿಕೆ ನಡೆಸಿದೆ.
ಎಲ್ಲಾ ಸ್ಕೂಟರ್‌ಗಳಲ್ಲೂ ವಿ.ಟಿ.ಎಸ್ (ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್) ವ್ಯವಸ್ಥೆಯನ್ನು ಅಳವಡಿಸಲಾಗಿದ್ದು ಅದು ಕ್ಷಣ ಕ್ಷಣವೂ ಸ್ಕೂಟರ್‌ನ ಮಾಹಿತಿಯನ್ನು ಬೌನ್ಸ್‌ನ ಸರ್ವರ್‌ಗಳಿಗೆ ರವಾನೆ ಮಾಡುತ್ತಲೇ ಇರುತ್ತದೆ. ಗಾಡಿ ಇರುವ ಸ್ಥಳ, ಇದುವರೆಗೂ ಓಡಿರುವ ದೂರ (ಕಿ.ಮೀ), ಟ್ರಿಪ್ಪುಗಳ ಸಂಖ್ಯೆ, ಇಂಧನ ಟ್ಯಾಂಕಿನ ಮಾಹಿತಿ, ಇನ್ನೂ ಹತ್ತು ಹಲವು ಸಂಗತಿಗಳು ಸಂಸ್ಥೆಯ ಕೇಂದ್ರ ಸರ್ವರ್‌ನಲ್ಲಿ ದಾಖಲಾಗುತ್ತಲೇ ಇರುತ್ತವೆ. ಬೌನ್ಸ್‌ನ ವೈಶಿಷ್ಟé ಇರುವುದು ಅದರ ಕೀಲೆಸ್ ತಂತ್ರಜ್ಞಾನದಲ್ಲಿ. ಗಾಡಿಯನ್ನು ಚಲಾಯಿಸಲು ಕೀ ಬೇಕೆಂದಿಲ್ಲ. ಆ್ಯಪ್‌ನಲ್ಲಿ ಗಾಡಿ ಬುಕ್ ಮಾಡಿ, ಅಲ್ಲಿ ತೋರಿಸುವ ಓಟಿಪಿ ಸಂಖ್ಯೆಯನ್ನು ಗಾಡಿಯ ಕೀಪ್ಯಾಡ್‌ನಲ್ಲಿ ಎಂಟ್ರಿ ಮಾಡಿದರೆ ಮುಗಿಯಿತು. ಸ್ಕೂಟರ್‌ನ ಲಾಕ್ ತೆರೆದುಕೊಳ್ಳುತ್ತದೆ. ಸವಾರಿ ಶುರು ಮಾಡಬಹುದು. ಟ್ರಿಪ್ ಎಂಡ್ ಮಾಡಿ ಹಣವನ್ನು ಆನ್‌ಲೈನ್ ಮುಖಾಂತರ ಪೇ ಮಾಡಿದರೆ ಮುಗಿಯಿತು. ಈ ಬೈಕುಗಳಲ್ಲಿ ಇಂಧನ ಮುಂಚಿತವಾಗಿಯೇ ತುಂಬಿಸಿರಲಾಗುತ್ತದೆ. ಒಂದು ವೇಳೆ ಬಳಕೆದಾರ ತಾನೇ ಇಂಧನ ಹಾಕಿಸಿದರೆ ಅದರ ಬಿಲ್ಲನ್ನು ತೋರಿಸಿದರೆ ಸಂಸ್ಥೆ ಹಣವನ್ನು ಹಿಂತಿರುಗಿಸುತ್ತದೆ. ಬೌನ್ಸ್ ಸಂಸ್ಥೆಯ ಸ್ಕೂಟರ್‌ಗಳನ್ನು ಚಾಲಕ ಎಲ್ಲಿ ಬೇಕಾದರೂ ನಿಲ್ಲಿಸಬಹುದು. ವೋಗೋ ಆ್ಯಪ್ ಹೇಗೆ ಕೆಲಸ ಮಾಡುತ್ತೆ?
ಬಳಕೆದಾರರು ತಮ್ಮ ಮೊಬೈಲ್‌ಗಳಲ್ಲಿ ಬೈಕ್ ರೆಂಟಲ್ಸ್ (ಬೌನ್ಸ್, ವೋಗೋ, ಯುಲು) ಸಂಸ್ಥೆಗಳ ಆ್ಯಪ್‌ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕು. ಅದು ಬಳಕೆದಾರ ಇರುವ ಪ್ರದೇಶದ ಹತ್ತಿರದಲ್ಲಿ ಎಲ್ಲೆಲ್ಲಿ ಬೈಕುಗಳಿವೆ ಎಂಬ ಮಾಹಿತಿಯನ್ನು ಕಲೆ ಹಾಕಿ ಬಳಕೆದಾರನ ಮುಂದಿರಿಸುತ್ತದೆ. ತನಗೆ ಅತಿ ಹತ್ತಿರದ ಬೈಕನ್ನು ಆಯ್ಕೆ ಮಾಡಿದಾಗ, ಆಯಾ ಬೈಕಿನ ಗುರುತಿನ ಸಂಖ್ಯೆಯನ್ನು ತೋರಿಸುತ್ತದೆ. ಆ ನಿರ್ದಿಷ್ಟ ಸ್ಕೂಟರ್‌ನ ಬಳಿ ತೆರಳಿ ಅಲ್ಲಿನ ಕ್ಯು ಆರ್ ಕೋಡನ್ನು ಸ್ಕ್ಯಾನ್ ಮಾಡಿದಾಗ ಬೈಕ್ ಅನ್‌ಲಾಕ್ ಆಗುತ್ತದೆ. ಆಗ ಕೀಯನ್ನು ಅದರ ಸ್ಥಾನದಿಂದ ತೆಗೆದು ಸೀಟಿನಡಿ ಇಡಲಾಗಿರುವ ಹೆಲ್ಮೆಟ್‌ಅನ್ನು ಎತ್ತಿಕೊಳ್ಳಬೇಕು. ನಂತರ ಕೀಯನ್ನು ಅದರ ಜಾಗದಲ್ಲಿ ತೂರಿಸಿ ನಂತರ ಬಳಕೆದಾರ ಸವಾರಿ ಹೊರಡಬಹುದು. ತನ್ನ ನಿಲ್ದಾಣ ಬಂದಾಗ ನಿಲ್ಲಿಸಬೇಕಾದ ಜಾಗದಲ್ಲಿಯೇ ಬೈಕನ್ನು ಪಾರ್ಕ್ ಮಾಡಿ, ಆ್ಯಪ್‌ನಲ್ಲಿ ಟ್ರಿಪ್ ಎಂಡ್ ಮಾಡಬೇಕು. ತೆರೆಯ ಮೇಲೆ ಬಿಲ್ ಮೂಡುತ್ತದೆ. ಅದನ್ನು ಆನ್‌ಲೈನ್ ಸೇವೆಗಳ(ಪೇ ಟಿಎಂ, ಗೂಗಲ್ ಪೇ, ನೆಟ್ ಬ್ಯಾಂಕಿಂಗ್) ಮುಖಾಂತರ ಪೇ ಮಾಡಿ ಹೆಲ್ಮೆಟ್‌ಅನ್ನು ಸೀಟಿನಡಿ ಇಟ್ಟು ಕೀಯನ್ನು ಯಥಾ ಸ್ಥಾನದಲ್ಲಿ ಇಟ್ಟರೆ ಮುಗಿಯಿತು.
Related Articles
ಪುಟ್ಟ ಗಾತ್ರದ ಈ ದ್ವಿಚಕ್ರ ವಾಹನ “ಯುಲು’ ಕೂಡಾ ಬೈಕ್ ರೆಂಟಲ್ಸ್‌ನಡಿ ಕಾರ್ಯಾಚರಿಸುತ್ತಿರುವ ಸಂಸ್ಥೆ. ಟ್ಯಾಕ್ಸಿ ಕ್ಯಾಬ್ ಊಬರ್ ಈ ಸಂಸ್ಥೆಯಲ್ಲಿ ಬಂಡವಾಳವನ್ನು ತೊಡಗಿಸಿದೆ. ಇದು ವಿದ್ಯುತ್‌ಚಾಲಿತ ಬೈಕಾಗಿದ್ದು, ಗಂಟೆಗೆ 25 ಕಿ.ಮೀನಷ್ಟು ವೇಗದಲ್ಲಿ ಚಲಿಸುತ್ತದೆ. ಒಂದು ಬಾರಿ ಚಾರ್ಚ್ ಮಾಡಿದರೆ ಸುಮಾರು 60 ಕಿ.ಮೀ.ವರೆಗೂ ಪ್ರಯಾಣಿಸಬಲ್ಲುದು. ಬಳಕೆದಾರ ಬ್ಯಾಟರಿ ಬಗೆಗೆ ಚಿಂತಿಸುವ ಅಗತ್ಯವಿಲ್ಲ. ಈ ಬೈಕುಗಳಲ್ಲಿ ಚಾರ್ಜ್ ಕಡಿಮೆಯಾದ ಕೂಡಲೆ ಯುಲು ಕೇಂದ್ರಕ್ಕೆ ಸೂಚನೆ ರವಾನೆಯಾಗಿ ಬ್ಯಾಟರಿ ಬದಲಾಯಿಸಲಾಗುವುದು.
Advertisement
ರ್ಯಾಪಿಡೋಇದನ್ನು ಆ್ಯಪ್ ಆಧಾರಿತ “ಬೈಕ್ ರೆಂಟಲ್ಸ್’ ಎಂದು ಕರೆಯಬಹುದಾದರೂ ಮಿಕ್ಕೆಲ್ಲಾ ಸೇವೆಗಳಿಗಿಂತ ಭಿನ್ನವಾದುದು. ಇದನ್ನು “ಬೈಕ್ ಟ್ಯಾಕ್ಸಿ’ ಎಂದು ಕರೆಯುವುದು ಸೂಕ್ತ. ಏಕೆಂದರೆ ಮಿಕ್ಕ ಸಂಸ್ಥೆಗಳ ಬೈಕುಗಳನ್ನು ಬಳಕೆದಾರನೇ ಖುದ್ದಾಗಿ ಸವಾರಿ ಮಾಡಿದರೆ ರ್ಯಾಪಿಡೋ ಬಳಕೆದಾರನಿಗೆ ಬೈಕ್ ಚಾಲಕನನ್ನೂ ಒದಗಿಸುತ್ತದೆ. ಅಂದರೆ, ಬೈಕ್ ಚಲಾಯಿಸಲು ಬಾರದೇ ಇರುವವರೂ ರ್ಯಾಪಿಡೋ ಸೇವೆಯನ್ನು ಬಳಸಬಹುದು. ತನ್ನ ಚಾಲಕನನ್ನು ರ್ಯಾಪಿಡೋ, “ಕ್ಯಾಪ್ಟನ್’ ಎಂದು ಕರೆಯುತ್ತದೆ. ದ್ವಿಚಕ್ರವಾಹನ ಸವಾರರು ಯಾರು ಬೇಕಾದರೂ ಕ್ಯಾಪ್ಟನ್‌ಗಳಾಗಬಹುದು. ಆ ಮೂಲಕ ಉದ್ಯೋಗ ಸೃಷ್ಟಿಗೂ ಕಾರಣವಾಗಿರುವುದು ಇದರ ಹೆಗ್ಗಳಿಕೆ. ಹೆಲ್ಮೆಟ್ ಮತ್ತು ಮಳೆಯಿಂದ ರಕ್ಷಣೆಗೆ ಬಳಕೆದಾರನಿಗೆ, ಟೋಪಿಗಳನ್ನು ಸಂಸ್ಥೆಯೇ ಒದಗಿಸುತ್ತದೆ. ರ್ಯಾಪಿಡೋ ಕೂಡಾ ಆ್ಯಪ್ ಆಧಾರಿತ ಬೈಕ್ ರೆಂಟಲ್ಸ್ ಸೇವೆಯಾಗಿದ್ದು ಓಲಾ, ಊಬರ್ ಮುಂತಾದ ಟ್ಯಾಕ್ಸಿಗಳ ಮಾದರಿಯಲ್ಲಿಯೇ ಕಾರ್ಯಾಚರಿಸುತ್ತದೆ. ದರ
ಬೌನ್ಸ್- ಪ್ರತಿ ಕಿ.ಮೀ ಗೆ 5 ರೂ.
ವೋಗೋ- ಪ್ರತಿ ಕಿ.ಮೀ ಗೆ 3 ರೂ.
ಯುಲು- ಹತ್ತು ನಿಮಿಷಕ್ಕೆ 10 ರೂ. (ಕನಿಷ್ಠ ದರ 10 ರೂ.)
ರ್ಯಾಪಿಡೋ- ನಿಮಿಷಕ್ಕೆ 3 ರೂ. (ಕನಿಷ್ಠ ದರ 15 ರೂ.)