ಪುದುಚೇರಿ:ಖ್ಯಾತ ತಮಿಳು ಲೇಖಕ, ಕಾದಂಬರಿಕಾರ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೀರಾ ಎಂದೇ ಜನಪ್ರಿಯರಾಗಿದ್ದ ಕೆ.ರಾಜಾನಾರಾಯಣನ್ (98ವರ್ಷ) ಸೋಮವಾರ (ಮೇ 17) ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:22ರ ನಂತರ ಸ್ಥಿತಿ ನೋಡಿ ಲಾಕ್‌ಡೌನ್ : ಸಚಿವ ಪ್ರಹ್ಲಾದ ಜೋಶಿ
ಇಬ್ಬರು ಪುತ್ರರು, ಅಪಾರ ಹಿತೈಷಿಗಳನ್ನು ಅಗಲಿರುವ ಕೆ.ರಾಜಾನಾರಾಯಣ್ ಅವರು ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದರು. ತಮಿಳುನಾಡು ಗವರ್ನರ್ ತಮಿಳ್ ಸಾಯಿ ಸೌಂದರ್ ರಾಜನ್ ಮಂಗಳವಾರ ಲೇಖಕರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ಗೌರವ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಕೀರಾ ಅವರು ವಾಸವಾಗಿದ್ದ ಮನೆಯನ್ನು ಸ್ಮಾರಕ ಗ್ರಂಥಾಲಯವನ್ನಾಗಿ ಪರಿವರ್ತಿಸಬೇಕು ಎಂದು ತಮಿಳು ಲೇಖಕರು ಮನವಿ ಸಲ್ಲಿಸಿರುವುದಾಗಿ ಗವರ್ನರ್ ತಮಿಳ್ ಸಾಯಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದು, ಲೇಖಕರ ಮನವಿಯನ್ನು ಪರಿಗಣಿಸುವುದಾಗಿ ಹೇಳಿದರು.
1980ರಲ್ಲಿ ರಾಜಾನಾರಾಯಣನ್ ಅವರು ಪುದುಚೇರಿ ಯೂನಿರ್ವಸಿಟಿಯಲ್ಲಿ ಜಾನಪದ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇವರು ಸಣ್ಣ ಕಥೆಗಳು, ಕಾದಂಬರಿ, ಜಾನಪದ ಕಥೆಗಳು ಮತ್ತು ಪ್ರಬಂಧಗಳ ಖ್ಯಾತ ಲೇಖಕರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಗೋಪಲ್ಲಾಪುರತು ಮಕ್ಕಳ್ ಕಾದಂಬರಿಗಾಗಿ ಕೀರಾ ಅವರು 1991ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು. ದಕ್ಷಿಣ ತಮಿಳುನಾಡಿನ ಬಿಸಿ ಮತ್ತು ಒಣ ಭೂಮಿಯಾದ “ಕರಿಸಲ್ ಭೂಮಿ”ಯ ಜನರ ಜೀವನ ಮತ್ತು ಸಂಸ್ಕೃತಿಗೆ ಹೆಸರಾಗಿದ್ದರು.
ಹಿರಿಯ ಸಾಹಿತಿ ಕೀರಾ ಅವರ ನಿಧನಕ್ಕೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪ ವ್ಯಕ್ತಪಡಿಸಿದ್ದು, ಕೀರಾ ಅವರ ಅಂತ್ಯಕ್ರಿಯೆಯನ್ನು ಅವರ ಹುಟ್ಟೂರಿನಲ್ಲಿ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ತಿಳಿಸಿದ್ದಾರೆ.