Advertisement

ಮಲ್ಯ ಆಸ್ಪತ್ರೆ ನವೀಕರಣ; ಈಗ ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

03:25 PM Jun 03, 2022 | Team Udayavani |

ಬೆಂಗಳೂರು: ಹಳೆ ಮಲ್ಯ ಆಸ್ಪತ್ರೆಯನ್ನು ಉತ್ಕೃಷ್ಟ ಮಟ್ಟದಲ್ಲಿ ನವೀಕರಿಸಿ, ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾನ್ನಾಗಿ‌ ಅಭಿವೃದ್ಧಿಪಡಿಸಿದ್ದು ಅದನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಗುರುವಾರ ಉದ್ಘಾಟಿಸಿದರು.

Advertisement

ವೈದೇಹಿ ಆಸ್ಪತ್ರೆಗಳ ಸಮೂಹ ಈ ಆಸ್ಪತ್ರೆಯನ್ನು ನಿರ್ವಹಣೆ ಮಾಡಲಿದೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಪ್ರೇಮಾ ಕೃಷ್ಣ ಸೇರಿದಂತೆ ಇತರರು ಇದ್ದರು.

ಸಚಿವರು ಮಾತನಾಡಿ, `ಕೊರೋನಾ ಸಾಂಕ್ರಾಮಿಕ ಸಮಾಜವನ್ನು ಕಾಡಿದ ನಂತರ, ಗುಣಮಟ್ಟದ ಆಸ್ಪತ್ರೆಗಳ ಅಗತ್ಯ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು ನಗರದ ಜನರಿಗೆ ಇಂತಹ ಆಸ್ಪತ್ರೆಗಳ ಜರೂರಿದೆ. ನಗರದ ಹೃದಯ ಭಾಗದಲ್ಲೇ ಈ ಆಸ್ಪತ್ರೆ ತಲೆಯೆತ್ತಿರುವುದು ಒಳ್ಳೆಯದು’ ಎಂದರು.

`ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಮತ್ತು ಇನ್ನಿತರ ಸೇವೆಗಳು ಕೈಗೆಟುಕುವ ದರದಲ್ಲಿ ಸಿಗುವಂತಾಗಬೇಕು ಎನ್ನುವುದು ಪ್ರತಿಯೊಬ್ಬನ ನಿರೀಕ್ಷೆಯಾಗಿದೆ. ವೈದೇಹಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇದು ಸಾಕಾರಗೊಳ್ಳಬೇಕು. ಜತೆಗೆ, ಸಂಶೋಧನೆಗೆ ಒತ್ತು ಕೊಡುವ ಮೂಲಕ ವಿನೂತನ ಚಿಕಿತ್ಸಾ ಪದ್ಧತಿಗಳನ್ನು ವೈದ್ಯಕೀಯ ಸಮುದಾಯ ಆವಿಷ್ಕರಿಸಬೇಕು’ ಎಂದು ಅವರು ಆಶಿಸಿದರು.

Advertisement

ಕೊರೋನಾದಂತಹ ಪಿಡುಗು ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದರೆ, ಇದು ಜಗತ್ತನ್ನೇ ಅಲ್ಲೋಲಕಲ್ಲೋಲಗೊಳಿಸಿತು. ಇದರ ಜತೆಗೆ ಆಧುನಿಕ ಜೀವನ ಶೈಲಿಯ ಸಂಕೀರ್ಣತೆ ಮತ್ತು ಅದು ಸೃಷ್ಟಿಸುತ್ತಿರುವ ಆತಂಕ ಹಾಗೂ ಒತ್ತಡಗಳಿಂದಾಗಿ ಕಂಡುಕೇಳರಿಯದಂತಹ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಇಂತಹ ಕಾಯಿಲೆಗಳ ನಿವಾರಣೆಗೆ ವೈದ್ಯರು ಶ್ರಮಿಸಬೇಕು ಎಂದು ಸೂಚಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೂಡ ಆರೋಗ್ಯ ವಲಯಕ್ಕೆ ಸಾಕಷ್ಟು ಮಹತ್ವ ಕೊಟ್ಟಿದ್ದು, ರಾಜ್ಯದಲ್ಲಿ ಅಂದಾಜು 11 ಕೋಟಿ ಕರೋನಾ ಲಸಿಕೆಗಳನ್ನು ಕೊಡಲಾಗಿದೆ. ಹಾಗೆಯೇ, ದೇಶದ ಮಟ್ಟದಲ್ಲಿ 192 ಕೋಟಿಗೂ ಹೆಚ್ಚು ಡೋಸ್ ಕೊಡಲಾಗಿದೆ. ಇವುಗಳ ಜತೆಗೆ, ಖಾಸಗಿ ಆಸ್ಪತ್ರೆಗಳು ಕೂಡ ಸಾಮಾಜಿಕ ಕಳಕಳಿಯೊಂದಿಗೆ ಕೈಜೋಡಿಸಿ, ಜನ ಸಮುದಾಯಗಳ ಸಬಲೀಕರಣಕ್ಕೆ ಇಂಬು ನೀಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ವೈದೇಹಿ ಆಸ್ಪತ್ರೆಗಳ ಸಮೂಹದ ಕಲ್ಪಜಾ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next