ಕೆಂಭಾವಿ: ನನ್ನ ಕ್ಷೇತ್ರದಲ್ಲಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವ ಎಲ್ಲ ಪ್ರಾಥಮಿಕ, ಪೌಢಶಾಲೆ ಹಾಗೂ ಕಾಲೇಜು ಕಟ್ಟಡಗಳನ್ನು ಹಂತಹಂತವಾಗಿ ನವೀಕರಣ ಮಾಡಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಲಾಗುವುದು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗನೂರ ಗ್ರಾಮದಲ್ಲಿ ಸೋಮವಾರ ಎಚ್ಕೆಆರ್‌ಡಿಬಿ ಯೋಜನೆಯಡಿ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮಾಂತರ ಪ್ರದೇಶದ ಶಾಲೆಗಳನ್ನು ಅಭಿವೃದ್ಧಿಪಡಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹಲವು ಯೋಜನೆ ರೂಪಿಸಿದೆ. ಅಂತಹ ಯೋಜನೆಗಳ ಸದುಪಯೋಗ ಪಡೆದು ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.
ಇತ್ತೀಚೆಗೆ ನೆರೆ ಹಾವಳಿಯಿಂದ ಜಿಲ್ಲೆಯ ಅನೇಕ ಗ್ರಾಮಗಳು ಕೃಷ್ಣಾ ನೀರಿನಲ್ಲಿ ಮುಳುಗಡೆಯಾಗಿವೆ. ಇದರಿಂದ ಅನೇಕ ಕುಟುಂಬಗಳು ಬೀದಿಪಾಲಾಗಿವೆ. ಅಂತಹ ಕುಟುಂಬಗಳ ನೆರವಿಗೆ ಧನ ಸಹಾಯ, ಆಹಾರಾಧಾನ್ಯ, ಬಟ್ಟೆಬರೆ ಸೇರಿದಂತೆ ವಿವಿಧ ರೀತಿಯ ಸಹಾಯ ನೀಡುವಂತೆ ಜನರಲ್ಲಿ ಮನವಿ ಮಾಡಿದರು. ನಂತರ ಗ್ರಾಮಸ್ಥರ ಕುಂದುಕೊರತೆ ವಿಚಾರಿಸಿದರು.
ದಾಸೋಹ ಮಠದ ಶರಣಪ್ಪ ಶರಣರು, ಗ್ರಾಪಂ ಅಧ್ಯಕ್ಷ ಶಾಂತಣ್ಣ ಚನ್ನೂರ, ಮುಖಂಡರಾದ ಶಂಕ್ರಣ್ಣ ವಣಕ್ಯಾಳ, ಅಶೋಕ ಗೂಗಲ, ಬಸನಗೌಡ ಹೊಸಮನಿ, ಗುರಪ್ಪಗೌಡ ಪೊಲೀಸ್‌ಪಾಟೀಲ, ಸಿದ್ರಾಮರೆಡ್ಡಿ ಗೂಗಲ, ಶಿವರಾಜ ಬೂದೂರ, ಹಳ್ಳೆಪ್ಪ ಹವಾಲ್ದಾರ, ಚನ್ನಬಸಪ್ಪ ದೇಸಾಯಿ, ಶಿವಮಹಾಂತ ಚಂದಾಪುರ, ರಾಮಣ್ಣ ದೇಶಪಾಂಡೆ, ರಾವಸಾಬ ದೇಸಾಯಿ, ಚನ್ನಾರೆಡ್ಡಿ ದೇಸಾಯಿ, ಶ್ರೀಮಂತ ತಿಪ್ಪಶೆಟ್ಟಿ, ಕರ್ನಾಟಕ ಭೂಸೇನಾ ನಿಗಮದ ಅಧಿಕಾರಿಗಳು ಇದ್ದರು.