Advertisement

ರೆಂಜಾಳ: ಇವಿಷ್ಟು ಸೌಕರ್ಯ ಈಡೇರಿದರೆ ನಿರಾಳ

12:34 PM Jul 19, 2022 | Team Udayavani |

ಕಾರ್ಕಳ: ರೆಂಜಾಳ ಗ್ರಾಮ ಹಲವು ವೈಶಿಷ್ಟ್ಯಗಳ ಗ್ರಾಮ. ಜೈನರಸರ ಆಳ್ವಿಕೆಗೆ ಒಳಪಟ್ಟ ಗ್ರಾಮದಲ್ಲಿ ಕೃಷಿಕರು ಹೆಚ್ಚು. ಅದರೊಂದಿಗೆ ಹೈನುಗಾರಿಕೆ ಆರ್ಥಿಕ ಶಕ್ತಿಯಾಗಿದೆ. ಸಣ್ಣ ಉದ್ದಿಮೆಗಳೂ ಇರುವ ಗ್ರಾಮವಿದು.

Advertisement

2011ರ ಜನಗಣತಿಯ ಪ್ರಕಾರ 2,832 ಇಲ್ಲಿಯ ಜನಸಂಖ್ಯೆ. 2,545.80 ಎಕ್ರೆ ಈ ಗ್ರಾಮದ ವಿಸ್ತೀರ್ಣ. ಕೃಷಿ ಅವಲಂಬಿತ ಗ್ರಾಮದಲ್ಲಿ ರೈತರ ಅನುಕೂಲತೆಗೆ ಕೃಷಿ ಮಾರುಕಟ್ಟೆ ಬೇಡಿಕೆ ಮುಖ್ಯವಾದುದು. ಇಲ್ಲಿ ಕೃಷಿ ಮಾರುಕಟ್ಟೆ ಇಲ್ಲದ ಕಾರಣ ತಮ್ಮ ಬೆಳೆಗಳನ್ನು ಮಾರಲು ತಾಲೂಕು ಕೇಂದ್ರಗಳೆಡೆಗೆ ಸಾಗಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಕೃಷಿ ಮಾರುಕಟ್ಟೆ ಈಡೇರಬೇಕಾದ ಮೊದಲ ಬೇಡಿಕೆ. ಇದರೊಂದಿಗೆ ಪಶು ಚಿಕಿತ್ಸಾ ಕೇಂದ್ರದ ವ್ಯವಸ್ಥೆಯೂ ಆಗಬೇಕಿದೆ.

ರಸ್ತೆಗಳ ಅಭಿವೃದ್ಧಿ ನಡೆದಿದೆ ನಿಜ. ಆದರೆ ಒಳಗುಡ್ಡೆ, ನೆಲ್ಲಿಕಾರು ಸಂಪರ್ಕ ರಸ್ತೆ, ಪೇರಾಲ್‌ ಬೆಟ್ಟು, ಇರ್ವತ್ತೂರು, ರಸ್ತೆ, ರೆಂಜಾಳ ಬನಂದ ಬೆಟ್ಟು ಬಳಿಯಿಂದ ಬೋರ್ಕಟ್ಟೆ ರಸ್ತೆ, ರೆಂಜಾಳ ಅಂತಪಾಂಡ್ಯ ರಸ್ತೆ, ಬನ್ನಂದ ಬೆಟ್ಟು ಕಿರು ಸೇತುವೆಯಿಂದ 1 ಕಿ.ಮೀ, ರಸ್ತೆಗಳ ಪೈಕಿ ಹಲವು ರಸ್ತೆಗಳ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಂಡರೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಶ್ಮಶಾನಕ್ಕೆ ಜಾಗ ಗುರುತಿಸಲಾಗಿದ್ದು, ಮೂಲ ಸೌಕರ್ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕೆಂಬುದು ಮತ್ತೂಂದು ಬೇಡಿಕೆ.

ಗ್ರಾಮದಲ್ಲಿ ಸಮಗ್ರ ನೀರಾವರಿಯಲ್ಲಿ ಕುಡಿಯುವ ನೀರಿನ ಯೋಜನೆಗಳು ಜಾರಿಯಲ್ಲಿವೆ. ಜಲ ಜೀವನ್‌ ಮಿಷನ್‌ ಯೋಜನೆಯಡಿ 5 ಓವರ್‌ಹೆಡ್‌ ಟ್ಯಾಂಕ್‌, ಬೋರ್‌ವೆಲ್‌ ನಿರ್ಮಾಣ ಪ್ರಗತಿಯಲ್ಲಿದೆ. ಮುಂದಿನ ಒಂದು ವರ್ಷದಲ್ಲಿ ಎಲ್ಲ ಮನೆಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯ ಚುರುಕುಗೊಳ್ಳಬೇಕಿದೆ. ಪಂಚಾಯತ್‌ನ ಕಾರ್ಯಕ್ರಮ ಇತ್ಯಾದಿ ಚಟುವಟಿಕೆ ನಡೆಸಲು ಪಂ. ಕಟ್ಟಡ ಮೇಲೆ ಸಭಾಂಗಣ ನಿರ್ಮಿಸಲು ಗ್ರಾ.ಪಂ ಆಡಳಿತ ಮುಂದಾಗಿದೆ. ತ್ವರಿಗತಿಯಲ್ಲಿ ಪೂರ್ಣಗೊಳ್ಳಬೇಕಿದೆ.

ವಿದ್ಯುತ್‌ ವ್ಯತ್ಯಯ ಬಹುವಾಗಿ ಜನತೆಯನ್ನು ಕಾಡುತ್ತಲಿತ್ತು. ನಾಲ್ಕು ವಿದ್ಯುತ್‌ ಪರಿವರ್ತಕ ಘಟಕಗಳ ಪೈಕಿ ಎರಡು ಈಡೇರಿವೆ. ಇನ್ನೆರಡು ಘಟಕ ಸ್ಥಾಪಿಸದಲ್ಲಿ ವಿದ್ಯುತ್‌ ವ್ಯತ್ಯಯ ಸಮಸ್ಯೆ ಬಹುಪಾಲು ನಿವಾರಣೆಯಾಗಲಿದೆ. ವಿದ್ಯುತ್‌ ಮಾರ್ಗದಲ್ಲಿ ಸಂಭವಿಸುವ ತಾಂತ್ರಿಕ ದೋಷ ಹೊರತುಪಡಿಸಿ ಬೇರೆ ಸಮಸ್ಯೆ ಇಲ್ಲ ಎನ್ನುತ್ತಾರೆ ಸ್ಥಳೀಯರು.

Advertisement

ರೆಂಜಾಳ ಗ್ರಾಮವು ತಾ| ಕೇಂದ್ರದಿಂದ ಒಳ ಭಾಗದಲ್ಲಿದೆ. ಸರಕಾರಿ ಗ್ರಾಮೀಣ ಬಸ್ಸುಗಳ ಓಡಾಟವಿಲ್ಲ. ಹೀಗಾಗಿ ಗ್ರಾಮಸ್ಥರು ಖಾಸಗಿ ಬಸ್‌ ಹಾಗೂ ವಾಹನಗಳನ್ನೇ ಅವಲಂಬಿಸಬೇಕು. ಶಾಲೆ ಮಕ್ಕಳಿಗೂ ಇದೇ ಸಮಸ್ಯೆ. ಇದರೊಂದಿಗೆ ಕೋವಿಡ್‌ ಕಾರಣದಿಂದ ಗ್ರಾಮಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗಳ ಟ್ರಿಪ್‌ಗಳಲ್ಲಿ ಕಡಿತವಾಗಿದೆ. ಇದರಿಂದ ಗ್ರಾಮಸ್ಥರಿಗೆ ಬಹಳ ತೊಂದರೆಯಾಗುತ್ತಿದೆ. ಸರಕಾರಿ ಗ್ರಾಮೀಣ ಬಸ್‌ಗಳ ಓಡಾಟ ಹೆಚ್ಚಬೇಕಿದೆ. ಮೊಬೈಲ್‌ ನೆಟ್‌ವರ್ಕ್‌ ಸಮಸ್ಯೆಯೂ ಬಗೆಹರಿಯಬೇಕಿದೆ. ಗ್ರಾಮ ಕರಣಿಕರ ಕಚೇರಿ ಈಗ ಪೇಟೆಯ ರಸ್ತೆ ಬದಿಯ ಖಾಸಗಿ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಿ ಸುತ್ತಿದೆ. ಖಾಯಂ ಕಚೇರಿಯ ಆವಶ್ಯಕತೆಯಿದೆ.

ಶ್ರೀ ವಾದಿರಾಜರಿಗೂ ಸಂಬಂಧ ಸೋದೆ ಮಠದ ಆಚಾರ್ಯ ಶ್ರೀ ವಾದಿರಾಜರಿಗೂ ಈ ಗ್ರಾಮಕ್ಕೂ ಸಂಬಂಧವಿದೆ. ಸುಮಾರು 400 ವರ್ಷಗಳ ಇತಿಹಾಸದ ಪುರಾತನ ಸೋದೆ ವಾದಿರಾಜ ಮಠ ಈ ಗ್ರಾಮದಲ್ಲಿದೆ. ಶ್ರೀ ವಾದಿರಾಜ ಗುರುಗಳ ಅಜ್ಜಿಯ ಮನೆ ಇಲ್ಲಿದೆ. ಇದಲ್ಲದೇ ಗ್ರಾಮದಲ್ಲಿ ಮುಗೇರ್ಕಳ, ಶ್ರೀ ಮಾರಿಯಮ್ಮ ಮಹಮ್ಮಾಯಿ ದೇವಸ್ಥಾನ, ಕೊಡಮಣಿತ್ತಾಯ, ಕುಕ್ಕಿನಂತಾಯ, ಬ್ರಹ್ಮಲಿಂಗೇಶ್ವರ, ಸತ್ಯಸಾರಮಣಿ ದೈವಸ್ಥಾನ, ಚಂದ್ರಸ್ವಾಮಿ ಬಸದಿಗಳಿವೆ. ಚೆಂಡೆ ಬಸದಿಯಲ್ಲಿ ಶಾಸನವಿದೆ. ಶ್ರೀ ಮಹಮ್ಮಾಯಿ ದೇವಸ್ಥಾನವು 500 ವರ್ಷಗಳ ಹಿಂದಿನದ್ದು ಎನ್ನಲಾಗಿದೆ.

ಹಂತ ಹಂತವಾಗಿ ಈಡೇರಿಕೆ: ಗ್ರಾ.ಪಂ ಕಟ್ಟಡದ ಮೇಲ್ಮಹಡಿಯಲ್ಲಿ ಕಟ್ಟಡ ವಿಸ್ತರಣೆ ಯೋಜನೆಯಿದೆ. ವಿಎ ಕಚೇರಿ ಸೇರಿದಂತೆ ಇತರ ಸೇವೆಗಳಿಗೂ ಅವಕಾಶ ಕಲ್ಪಿಸಲಾಗುವುದು. ಗ್ರಾಮದ ಇತರ ಬೇಡಿಕೆಗಳನ್ನೂ ಹಂತ ಹಂತವಾಗಿ ಈಡೇರಿಸಲಾಗುವುದು. -ದೀಪಿಕಾ ಶೆಟ್ಟಿ , ಅಧ್ಯಕ್ಷೆ ಗ್ರಾ.ಪಂ. ರೆಂಜಾಳ

ನೆಟ್‌ವರ್ಕ್‌ ಸಮಸ್ಯೆ: ನೆಟ್‌ವರ್ಕ್‌ ಸಮಸ್ಯೆಯಿಂದ ಬಹಳ ಅಡಚಣೆಯಾಗುತ್ತಿದೆ. ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮುಗಿಸಲು ಆಗುತ್ತಿಲ್ಲ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಪರಿಹಾರ ಹುಡುಕಿ ಸಮಸ್ಯೆ ಬಗೆಹರಿಸಬೇಕು. –ಸದಾಶಿವ, ಸ್ಥಳಿಯರು

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next