Advertisement

ಜಡೆ ಗ್ರಾಮಕ್ಕೆ ಜಟಾಯುಪುರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯ

09:23 PM Jul 11, 2022 | Vishnudas Patil |

ಸೊರಬ: ಐತಿಹಾಸಿಕ ಹಾಗೂ ಪುರಾಣಗಳಲ್ಲಿ ದಾಖಲಾಗಿರುವಂತೆ ಜಡೆ ಗ್ರಾಮಕ್ಕೆ ಜಟಾಯುಪುರ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ತಾಲೂಕಿನ ಜಡೆ ಗ್ರಾಪಂಗೆ ತೆರಳಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಚಿದಾನಂದ ಅವರ ಮೂಲಕ ಸೋಮವಾರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಜಡೆ ಸಂಸ್ಥಾನ ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಮಾತನಾಡಿ, ರಾಮಾಯಣದ ಪುರಾಣಗಳ ಪ್ರಕಾರ ತಾಲೂಕಿನಲ್ಲಿ ಹಲವು ಕುರುಹುಗಳು ಇವೆ. ಈ ಪೈಕಿ ರಾಮಾಯಣದಲ್ಲಿ ಸೀತೆಯನ್ನು ರಾವಣನು ಅಪಹರಣ ಮಾಡಿಕೊಂಡು ಆಕಾಶ ಮಾರ್ಗವಾಗಿ ಸಂಚರಿಸುವಾಗ ಜಟಾಯು ಪಕ್ಷಿಯು ರಾವಣನನ್ನು ತಡೆಯುತ್ತದೆ. ರಾವಣನು ಹರಿತವಾದ ತನ್ನ ಖಡ್ಗದಿಂದ ಜಟಾಯು ಪಕ್ಷಿಯ ಒಂದು ರೆಕ್ಕೆಯನ್ನು ಕತ್ತರಿಸುತ್ತಾನೆ. ಆಗ ಜಟಾಯು ಪಕ್ಷಿಯ ರಕ್ಕೆ ಬಿದ್ದ ಸ್ಥಳವೇ ಜಟಾಯುಪುರವಾಯಿತು. ಇನ್ನು ಕದಂಬರ ಆಡಳಿತಾವಧಿಯಲ್ಲಿಯೂ ಜಟಾಯುಪುರವೆಂದೇ ಕರೆಯಲಾಗುತ್ತಿತ್ತು ಎಂದರು.

ರಾಜ್ಯದಲ್ಲಿ ಈಗಾಗಲೇ ಗುಲ್ಬರ್ಗವನ್ನು ಕಲಬುರಗಿ ಎಂದು, ಬಿಜಾಪುರವನ್ನು ವಿಜಯಪುರವೆಂದು ಹಾಗೂ ಹೈದರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಲಾಗಿದೆ. ದೇಶದಲ್ಲಿ ಹಲವಾರು ಮಹಾನಗರಗಳನ್ನು ಆ ಪ್ರದೇಶದ ಐತಿಹಾಸಿಕ ಮತ್ತು ಪೌರಾಣಿಕ ದಾಖಲೆಗಳಿಗೆ ಅನುಗುಣವಾಗಿ ಮರುನಾಮಕರಣ ಮಾಡುವ ಮೂಲಕ ಸ್ಥಳ ಮಹಿಮೆ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸುವ ಕಾರ್ಯವಾಗುತ್ತಿದೆ. ಈ ನಿಟ್ಟಿನಲ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿರುವ ಜಡೆ ಗ್ರಾಮಕ್ಕೆ ಜಟಾಯುಪುರ ಎಂದು ಮರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಅಧ್ಯಕ್ಷ ಕೇಶವ ರಾಯ್ಕರ್, ಉಪಾಧ್ಯಕ್ಷೆ ರೇಖಾ ಕೆರೆಸ್ವಾಮಿ, ಸದಸ್ಯರಾದ ನಾಗರಾಜಗೌಡ ಬಂಕಸಾಣ, ಅಮಿತ್ ಗೌಡ, ಬಸವಂತಪ್ಪ, ಉಪನ್ಯಾಸಕಿ ಶಾಂತಕುಮಾರಿ, ಪ್ರಮುಖರಾದ ಬಸವಂತಪ್ಪ ಕೋಟೆ, ಈರಪ್ಪ, ನಿಂಗಪ್ಪ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next