Advertisement

ಹುಬ್ಳಿ ಸಿಟಿ-ಇ ಗ್ರುಪ್‌ನ ಪರಿಸರ ಪ್ರೇಮ

10:09 AM Jun 05, 2019 | Naveen |

ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿ ಎಂಟು ಸದಸ್ಯರ ತಂಡವೊಂದು ಕಳೆದ 3-4 ವರ್ಷಗಳಿಂದ ಪರಿಸರ ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಿದ್ದು, ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.

Advertisement

ಯಾರು ತಮ್ಮ ಮನೆ, ಕಚೇರಿ, ತೋಟ, ಹೊಲಗಳಲ್ಲಿ ಸಸಿ ನೆಡಲು ಉತ್ಸುಕತೆ ತೋರುವ, 12 ತಿಂಗಳು ಪೋಷಿಸಿ ಬೆಳೆಸುವ ಬದ್ಧತೆ ಹೊಂದಿರುತ್ತಾರೋ ಅಂಥವರಿಗೆ ನಗರದ ಹುಬ್ಳಿ ಸಿಟಿ-ಇ ಗ್ರುಪ್‌ ತಂಡದ ಸದಸ್ಯರು ಕಳೆದ ಒಂದು ವರ್ಷದಿಂದ ಉಚಿತವಾಗಿ ಸಸಿಗಳನ್ನು ವಿತರಿಸುತ್ತಿದ್ದಾರೆ. ಜತೆಗೆ ನೀರಿನ ವ್ಯವಸ್ಥೆ ಇರುವ ಪಾಲಿಕೆಯ ಉದ್ಯಾನಗಳಲ್ಲಿ ಸ್ವತಃ ತಾವೇ ಗುಂಡಿ ತೋಡಿ, ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಇಲ್ಲವೇ ಕೆಲವರಿಗೆ ಅವುಗಳ ಪೋಷಣೆಗೆ ಜವಾಬ್ದಾರಿ ವಹಿಸಿದ್ದಾರೆ.

ತಂಡದ ಸದಸ್ಯರು ಮೂರು ವರ್ಷಗಳಲ್ಲಿ 250 ಸಸಿಗಳನ್ನು ನೆಟ್ಟಿದ್ದರು. ಅದರಲ್ಲಿ ಈಗ 200 ಗಿಡಗಳು ಉಳಿದಿವೆ. ಆದರೆ ಈ ವರ್ಷ ಅವಳಿ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದರಿಂದ ಅದನ್ನರಿತ ತಂಡದ ಸದಸ್ಯರು ಅವಳಿ ನಗರದ ವಿವಿಧ ಆಯ್ದ ಪ್ರದೇಶಗಳಲ್ಲಿ ಅಂದಾಜು 500 ಸಸಿಗಳನ್ನು ನೆಡುವ ಗುರಿ ಇಟ್ಟುಕೊಂಡಿದ್ದರು. ಆದರೆ ಜನರು ತಂಡದ ಸದಸ್ಯರ ಕಾರ್ಯವೈಖರಿ ನೋಡಿ ತಾವಾಗಿಯೇ ಸಸಿಗಳನ್ನು ನೆಟ್ಟು ಪೋಷಿಸಲು ಮುಂದಾದರು. ಅಲ್ಲದೆ ತಮಗೂ ಸಸಿಗಳನ್ನು ಕೊಡುವಂತೆ ಹೆಚ್ಚಿನ ಬೇಡಿಕೆ ಬಂದಿದ್ದರಿಂದ ಅವರಿಗೆ ಪೋಷಿಸಿ-ಬೆಳೆಸಬೇಕೆಂಬ ಷರತ್ತಿನೊಂದಿಗೆ ಈಗಾಗಲೇ 800ಕ್ಕೂ ಅಧಿಕ ಸಸಿಗಳನ್ನು ಉಚಿತವಾಗಿ ವಿತರಿಸಿದ್ದಾರೆ.

ಗಿಡ ನೆಟ್ಟು ಬೆಳೆಸಿದವರಿಗೆ ಸನ್ಮಾನ
ಹುಬ್ಳಿ ಸಿಟಿ-ಇ ಗ್ರುಪ್‌ ತಂಡದವರು ಯಾರು ಉತ್ಸುಕತೆ, ಕಾಳಜಿಪೂರ್ವಕವಾಗಿ ಸಸಿಗಳನ್ನು ನೆಟ್ಟು, 12 ತಿಂಗಳು ಪೋಷಿಸಿ ಬೆಳೆಸುತ್ತಾರೋ ಅವರನ್ನು ಸನ್ಮಾನಿಸುತ್ತಿದ್ದಾರೆ. ಯಾರು ತಂಡದವರಿಂದ ಸಸಿ ತೆಗೆದುಕೊಂಡು ಹೋಗಿರುತ್ತಾರೋ ಅವರು ಪ್ರತಿ 30 ದಿನಕ್ಕೊಮ್ಮೆ ಗಿಡದ ಫೋಟೋ ತೆಗೆದು ತಂಡದ ಸದಸ್ಯರಿಗೆ ಕಳುಹಿಸಬೇಕು. ಮೊದಲ ಆರು ತಿಂಗಳು ಯಾರು ಉತ್ತಮವಾಗಿ ಗಿಡ ಬೆಳೆಸಿರುತ್ತಾರೋ ಅಂತಹ ಆರು ಜನರನ್ನು ಗುರುತಿಸಿ ಅವರಿಗೆ ಸನ್ಮಾನಿಸಿ, ಸ್ಮರಣಿಕೆ ನೀಡುತ್ತಿದ್ದಾರೆ. ಅದೇ ರೀತಿ 12 ತಿಂಗಳು ಕಾಲ ಉತ್ತಮವಾಗಿ ಗಿಡ ಬೆಳೆಸಿದ 12 ಜನರನ್ನು ಗುರುತಿಸಿ ಸನ್ಮಾನಿಸಿ, ಸ್ಮರಣಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಪರಿಸರ ರಕ್ಷಣೆ ಮಾಡಲು ಎಲ್ಲರನ್ನೂ ಪ್ರೋತ್ಸಾಹಿಸುತ್ತಿದ್ದಾರೆ ತಂಡದ ಸದಸ್ಯರು.
ತೆರವುಗೊಳಿಸಿದ ಮರಕ್ಕೆ ಪರ್ಯಾಯವಾಗಿ ಬಿಆರ್‌ಟಿಎಸ್‌ ಇನ್ನೂ ಗಿಡ ನೆಟ್ಟಿಲ್ಲ
ಅವಳಿ ನಗರ ನಡುವೆ ಬಿಆರ್‌ಟಿಎಸ್‌ ಯೋಜನೆಯಲ್ಲಿ ಸಾಕಷ್ಟು ದೊಡ್ಡ ಮರಗಳನ್ನು ತೆರವುಗೊಳಿಸಿದರು. ಆದರೆ ಅದಕ್ಕೆ ಪರ್ಯಾಯವಾಗಿ ಸಂಸ್ಥೆಯವರು ಗಿಡಗಳನ್ನು ನೆಡುತ್ತೇವೆಂದು ಹೇಳಿದರೆ ಹೊರತು ಕಾರ್ಯಗತಗೊಳಿಸಲಿಲ್ಲ. ನಾವು ಅನೇಕ ಬಾರಿ ಮನವಿ ಮಾಡಿದೆವು. ಆದರೆ ಅದು ಈಡೇರಲಿಲ್ಲ. ಇದರಿಂದ ಅವಳಿ ನಗರದಲ್ಲಿ ಪರಿಸರ ಮೇಲೆ ದುಷ್ಪರಿಣಾಮ ಉಂಟಾಯಿತು. ಹೀಗಾಗಿ ಈ ವರ್ಷ ಅವಳಿ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಯಿತು. ಸರಕಾರಕ್ಕೆ ಹೇಳುವ ಬದಲು ನಾವೇ ಏಕೆ ಸಸಿಗಳನ್ನು ನೆಟ್ಟು ಬೆಳೆಸಬಾರದೆಂದು ತೀರ್ಮಾನಿಸಿದೆವು. ಈಗ 800ಕ್ಕೂ ಅಧಿಕ ಸಸಿಗಳನ್ನು ಅವಳಿ ನಗರದ ಮನಗುಂಡಿ ಗ್ರಾಮದ ಗೌರಿ ಶಂಕರ ಡೇರಿ, ಹುಬ್ಬಳ್ಳಿ ಗೋಕುಲ ರಸ್ತೆ ಬ್ಯಾಂಕರ್ಸ್‌ ಕಾಲೊನಿ, ಪ್ರಶಾಂತ ಆಡೂರ ಸಂಸ್ಥೆ, ರೇಣುಕಾ ನಗರ, ಆರ್‌.ಎಂ. ಲೋಹಿಯಾ ನಗರ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನೆಡಲಾಗಿದೆ. ಅವನ್ನು ಪೋಷಿಸುವ ಜವಾಬ್ದಾರಿಯನ್ನು ಕೆಲವರಿಗೆ ವಹಿಸಲಾಗಿದೆ. ಉತ್ಸುಕತೆ ಹೊಂದಿದ ಜನರಿಗೆ ಆಕಳು, ಆಡು-ಕುರಿ ಇತರೆ ಪ್ರಾಣಿಗಳು ತಿನ್ನದಂತೆ 3-4 ತಿಂಗಳು ಬೆಳೆದ ಸಸಿಗಳನ್ನು ವಿತರಿಸಲಾಗಿದೆ. ಜತೆಗೆ ಸಾವಯವ ಗೊಬ್ಬರ ಕೂಡ ಕೊಡಲಾಗಿದೆ. ಇದರಿಂದ ಜನರು ಗಿಡಗಳನ್ನು ರಕ್ಷಿಸಿ ಬೆಳೆಸಬಹುದು ಎನ್ನುತ್ತಾರೆ ತಂಡದ ಸದಸ್ಯ ಉಪೇಂದ್ರ ಕುಕನೂರ.
ಜಾಗೃತಿ ನಾಮಫಲಕ
ಸಂದೀಪ ಕುಲಕರ್ಣಿ ಎಂಬುವರು ತಮ್ಮ ಕಂಪೆನಿ ಆವರಣದಲ್ಲಿ 40 ಸಸಿಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ. ಮನೆಯ ಎದುರಿನ ಖುಲ್ಲಾ ಜಾಗದಲ್ಲಿ ಐದು ಗಿಡಗಳನ್ನು ನೆಟ್ಟು ಅವುಗಳನ್ನು ಕಳೆದ 11 ವರ್ಷಗಳಿಂದ ಪೋಷಿಸಿ ಬೆಳೆಸುತ್ತಿದ್ದಾರೆ. ಜತೆಗೆ ಗಿಡಗಳು ನಮ್ಮ ಉತ್ತಮ ಸ್ನೇಹಿತರು. ಅವು ನಮಗೆ ಉಚಿತವಾಗಿ ಆಮ್ಲಜನಕ (ಆಕ್ಸಿಜನ್‌) ಕೊಡುತ್ತವೆ. ಹೆಚ್ಚೆಚ್ಚು ಗಿಡಗಳನ್ನು ಬೆಳೆಸಿ, ಪರಿಸರ ಸಂರಕ್ಷಿಸಿ, ಗಿಡ ನೆಡಿ-ರಕ್ಷಿಸಿ, ಬಡಾವಣೆಯನ್ನು ಹಸಿರಿನಿಂದ ಕಂಗೊಳಿಸಿ ಎಂಬ ಸಂದೇಶವುಳ್ಳ ಫಲಕಗಳನ್ನು ಗಿಡಗಳಿಗೆ ಜೋತುಬಿಟ್ಟು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಂದೀಪ ಅವರು ತಮ್ಮ ಕಚೇರಿಯಲ್ಲಿ ಸದಾಬಹಾರ, ನಿತ್ಯ ಪುಷ್ಪ, ಬಟ್ಟಿಲು ಹೂವು, ವಿಂಕ ರೋಸಿಯಾ, ಪೆರಿವಿಂಕಲ್, ನಿತ್ಯ ಕಲ್ಯಾಣಿ ಗಿಡಗಳನ್ನು ಬೆಳೆಸಿದ್ದಾರೆ. ಇವು ಅವರ ಕಚೇರಿಗೆ ಬರುವ ಗ್ರಾಹಕರು, ಜನರನ್ನು ಆಕರ್ಷಿಸುತ್ತಿವೆ. ಅವರನ್ನು ಕೈಬೀಸಿ ಸ್ವಾಗತಿಸುತ್ತಿವೆ. ಇರುವ ಜಾಗವನ್ನೇ ಹಾಳು ಮಾಡದೆ, ಅದನ್ನು ಸದ್ಬಳಕೆ ಮಾಡಿಕೊಂಡು ಒಂದಿಷ್ಟು ಗಿಡಗಳನ್ನು ನೆಟ್ಟರೆ ಅದು ನಮ್ಮ ಮನಸ್ಸನ್ನು ಆಹ್ಲಾದಕರವಾಗಿರಿಸುತ್ತದೆ ಎನ್ನುತ್ತಾರೆ ಅವರು.
Advertisement

Udayavani is now on Telegram. Click here to join our channel and stay updated with the latest news.

Next