ಸವಣೂರು : ಸವಣೂರು-ಬೆಳ್ಳಾರೆ ರಸ್ತೆಯ ನಡುವೆ ಕನಡಕುಮೇರು ಸಮೀಪದ ಪರಣೆಯ ರಸ್ತೆ ಬದಿಯಲ್ಲಿ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದ್ದ ವಿದ್ಯುತ್ ಕಂಬಕ್ಕೆ ಅಳವಡಿಸಿದ್ದ ಸ್ಟೇ ವೈರ್ ಅನ್ನು ಮೆಸ್ಕಾಂ ಜ. 29ರಂದು ತೆರವುಗೊಳಿಸಿದೆ.
ತಿಂಗಳಲ್ಲಿ 7 ಅಪಘಾತ
ಈ ಜಾಗದಲ್ಲಿ ಡಿಸೆಂಬರ್‌ನಲ್ಲಿ 7 ಅಪಘಾತಗಳು ನಡೆದಿದ್ದವು. ಇಲ್ಲಿ ನಿರಂತರವಾಗಿ ಅಪಘಾತವಾಗಿ ವಾಹನ ಸವಾರರಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಆದರೂ ಸಂಬಂಧಪಟ್ಟ ಇಲಾಖೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಜಾಗ ತಿರುವು ಆಗಿರುವುದರಿಂದ ವಾಹನ ಸವಾರರಿಗೆ ಸ್ಟೇ ವೈರ್ ಗೋಚರಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಇದು ಅಪಘಾತದ ಸ್ಥಳವಾಗಿ ಮಾರ್ಪಟ್ಟಿತು. ಹಿಂದೆ ಈ ಸ್ಥಳದಲ್ಲಿ ರಿಕ್ಷಾ ಅಪಘಾತವಾದ ಅನಂತರ ಮೆಸ್ಕಾಂ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಕುರಿತು ಜನಪರ ಕಾಳಜಿಯಿಂದ ಜ. 17ರಂದು ‘ಉದಯವಾಣಿ’ ಸುದಿನ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನ ಸೆಳೆದಿತ್ತು.
ವರದಿ ಪ್ರಕಟಗೊಂಡು 10 ದಿನಗಳಲ್ಲಿ ಸ್ಟೇ ವೈರ್‌ಅನ್ನು ಸವಣೂರು ಮೆಸ್ಕಾಂ ಜೆಇ ನಾಗರಾಜ್ ನೇತೃತ್ವದಲ್ಲಿ ತೆರವು ಮಾಡಲಾಗಿದೆ. ಗ್ರಾ.ಪಂ. ಸದಸ್ಯ ಸತೀಶ್ ಅಂಗಡಿಮೂಲೆ ಪರಿಕರ ಸಾಗಾಟಕ್ಕೆ ವಾಹನ ಕಲ್ಪಿಸಿದ್ದರು.