ವಿಧಾನಸಭೆ: ಕಳೆದ ಎರಡೂವರೆ ವರ್ಷದಿಂದ ಮುಖ್ಯಮಂತ್ರಿ ಹತ್ರ ಯಾವುದೇ ಕೆಲಸ ಮಾಡಿಸ್ಕೊಂಡಿಲ್ಲ ಎಂಬ ಎಚ್.ಡಿ.ರೇವಣ್ಣ ಮಾತನ್ನು ಕಡತದಿಂದ ತೆಗೆದುಹಾಕಬೇಕು!
ಹೀಗೆಂದು ಕಾಂಗ್ರೆಸ್ ಸದಸ್ಯ ವಿನಯಕುಮಾರ್ ಸೊರಕೆ ಹೇಳಿದ ಮಾತು ಒಂದು ಕ್ಷಣ ಸದನದಲ್ಲಿದ್ದ ಇತರೆ ಸದಸ್ಯರ ಅಚ್ಚರಿಗೆ ಕಾರಣವಾಯಿತು. ನಂತರ ಆ ಮಾತಿನ ಅರ್ಥ ತಿಳಿದು ಜೋರಾಗಿ ನಕ್ಕರು.
ಹಾಸನ ಜಿಲ್ಲೆ ಚನ್ನರಾಯಪಣ್ಣದ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಗಮನ ಸೆಳೆಯುವ ಸೂಚನೆಗೆ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನೀಡಿದ ಉತ್ತರದಿಂದ ಸಮಾಧಾನಗೊಳ್ಳದ ಎಚ್.ಡಿ.ರೇವಣ್ಣ, ಏನ್ ಸರ್ಕಾರಾನೋ? ಸಾವಿರಾರು ಕೋಟಿ ರೂ. ಯೋಜನೆಗಳನ್ನ ಮಾಡ್ತೀರಿ. ಪುಟ್… 47 ಕೋಟಿ ರೂ. ಯೋಜನೆಗೆ ಇಷ್ಟೊಂದು ಕೇಳ್ಕೊàಬೇಕಾ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಎಂ.ಬಿ.ಪಾಟೀಲ್, ರೇವಣ್ಣ ಅವರು ಮುಖಅಯಮಂತ್ರಿ ಹತ್ರ ಎಲ್ಲಾ ಕೆಲ್ಸಾನೂ ಮಾಡಿಸ್ಕೋತಾರೆ. ಈ ವಿಷಯದಲ್ಲಿ ಯಾಕೋ ನಮ್ ಮೇಲೆ ಗೂಬೆ ಕೂರಿಸ್ಕೋಬೇಕು ಅಂತ ಈ ರೀತಿ ಹೇಳುತ್ತಿದ್ದಾರೆ ಎಂದಾಗ, ಕಳೆದ ಎರಡೂವರೆ ವರ್ಷದಿಂದ ಮುಖ್ಯಮಂತ್ರಿ ಹತ್ರ ಏನೂ ಕೆಲಸ ಮಾಡಿಸ್ಕೊಂಡಿಲ್ಲ ಎಂದು ರೇವಣ್ಣ ಹೇಳಿದರು.
ಕೂಡಲೇ ಎದ್ದುನಿಂತ ವಿನಯಕುಮಾರ್ ಸೊರಕೆ, ಕಳೆದ ಎರಡೂವರೆ ವರ್ಷದಿಂದ ಮುಖ್ಯಮಂತ್ರಿ ಹತ್ರ ಏನೂ ಕೆಲಸ ಮಾಡಿಸ್ಕೊಂಡಿಲ್ಲ ಎಂದು ರೇವಣ್ಣ ಸುಳ್ಳು ಹೇಳಿದ್ದಾರೆ. ಆದ್ದರಿಂದ ಅವರ ಮಾತನ್ನು ಕಡತದಿಂದ ತೆಗೆದುಹಾಕಬೇಕು ಎಂದರು.
ಒಂದು ಕ್ಷಣ ಇತರೆ ಸದಸ್ಯರು, ರೇವಣ್ಣ ಕಡತದಿಂದ ತೆಗೆಯುವಂತಹಾ ಪದಗಳನ್ನು ಏನು ಬಳಸಿದ್ದಾರೆ ಎಂಬ ಅರ್ಥದಲ್ಲಿ ವಿನಯಕುಮಾರ್ ಸೊರಕೆ ಮುಖ ನೋಡಿದರು. ಅಷ್ಟರಲ್ಲಿ ಕೆಲ ಸದಸ್ಯರಿಗೆ ಸೊರಕೆ ಮಾತಿನ ಗೂಡಾರ್ಥ ತಿಳಿಯಿತು. ಜೆಡಿಎಸ್ ಶಾಸಕರಾಗಿದ್ದರೂ ರೇವಣ್ಣ ಮುಖ್ಯಮಂತ್ರಿಗಳಿಗೆ ಆತ್ಮೀಯ. ಏನೇ ಕೆಲಸ ಆಗಬೇಕಿದ್ದರೂ ನೇರವಾಗಿ ಮುಖ್ಯಮಂತ್ರಿಗಳ ಬಳಿ ಹೋಗಿ ಮಾಡಿಸಿಕೊಳ್ಳುತ್ತಾರೆ. ಹೀಗಾಗಿ ವಿನಯ್‌ಕುಮಾರ್ ಸೊರಕೆ ರೇವಣ್ಣ ಅವರು ಮುಖ್ಯಮಂತ್ರಿಗಳಿಂದ ಕೆಲಸ ಮಾಡಿಸಿಕೊಂಡಿಲ್ಲ ಎಂದು ಹೇಳಿದ್ದನ್ನು ಕಡತದಿಂದ ತೆಗೆಯುವಂತೆ ಹೇಳಿದ್ದರು.