ಗಂಗಾವತಿ: ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿಯಲ್ಲಿ ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಅನ್ಯಕೋಮಿನ ಜನರು ವ್ಯಾಪಾರ ವಹಿವಾಟು ನಡೆಸದಂತೆ ಹಿಂದೂಜಾಗರಣಾ ವೇದಿಕೆಯ ಕಾರ್ಯಕರ್ತರು ಅಂಜನಾದ್ರಿಯ ಸುತ್ತ ಹಾಕಿದ್ದ ಬ್ಯಾನರ್ ಬಂಟಿಂಗ್ಸ್ ಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ಮುಖಂಡರು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಪುನಃ ಬ್ಯಾನರ್ ಗಳನ್ನು ಜಿಲ್ಲಾಡಳಿತ ನಿಮಯಗಳಡಿಯಲ್ಲಿ ಅಳವಡಿಸಬೇಕು.ಇಲ್ಲದಿದ್ದರೆ ಹನುಮಮಾಲಾ ವಿಸರ್ಜನೆಯ ಸಂದರ್ಭದಲ್ಲಿ ದೇಶದ ವಿವಿಧೆಡೆಯಿಂದ ಆಗಮಿಸುವ ಹನುಮಭಕ್ತರಿಂದ ಪರಿಣಾಮ ಎದುರಿಸಬೇಕಾಗುತ್ತದೆ. ಕೂಡಲೇ ಅಂಜನಾದ್ರಿಯ ಕೆಳಗಿರುವ ಅನ್ಯ ಕೋಮಿನವರ ಅಂಗಡಿಗಳನ್ನು ಬಂದ್ ಮಾಡಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಬಸವಣೆಪ್ಪ ಕಲಶೆಟ್ಟಿ ಮಾತನಾಡಿ, ನಿಯಮ11 ರಲ್ಲಿ ಅನ್ಯಕೋಮಿನವರಿಗೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡದಂತೆ ವಿವಿಧ ಸಂಘಟನೆಗಳ ಮುಖಂಡರು ಸಭೆಯಲ್ಲಿ ಒತ್ತಾಯಿಸಿದ್ದು, ಅಂಜನಾದ್ರಿಯಲ್ಲಿ ಮುಖ್ಯದ್ವಾರದ ವರೆಗೆ ಮಾತ್ರ ದೇಗುಲದ ಜಾಗವಿದ್ದು ಈ ಜಾಗದಲ್ಲಿ ನಿಯಮಗಳಂತೆ ವ್ಯಾಪಾರ ಮಾಡಲು ಅವಕಾಶ ಕೊಡಲಾಗುತ್ತದೆ. ಈಗ ವ್ಯಾಪಾರಿಗಳು ವ್ಯಾಪಾರ ಮಾಡುವ ಜಾಗ ರಸ್ತೆ ಮತ್ತು ಕೆಲ ಮಾಲೀಕರ ಒಡೆತನದ ಭೂಮಿ ಇದೆ. ಇಲ್ಲಿ ವ್ಯಾಪಾರ ಮಾಡಲು ಯಾರಿಗೆ ಬೇಕಾದರೂ ಭೂಮಿಯ ಮಾಲೀಕರು ಲೀಜ್ ಗೆ ಕೊಡಬಹುದು ಎಂದಿದ್ದಾರೆ.
ಸದ್ಯ ಇಲ್ಲಿರುವ ವ್ಯಾಪಾರಿಗಳನ್ನು ಡಿ.03,04 ಮತ್ತು 05 ರಂದು ವರೆಗೆ ಮೂರ್ತಿ ಎನ್ನುವ ರೈತನ ಗದ್ದೆಯಲ್ಲಿ ವ್ಯಾಪಾರ ಮಾಡಲು ಜಾಗ ನಿಗದಿ ಮಾಡಲಾಗಿದೆ. ಗದ್ದೆಯ ಮಾಲೀಕ ಯಾರಿಗೆ ಬೇಕಾದರೂ ವ್ಯಾಪಾರ ಮಾಡಲು ಅವಕಾಶ ಕೊಡಬಹುದಾಗಿದೆ.ಸಂಚಾರದಟ್ಟಣೆ ಕಡಿಮೆ ಮಾಡಲು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ತೆರವು ಮಾಡಲಾಗುತ್ತದೆ. ಆಕ್ಷೇಪಾರ್ಹವಾದ ಬ್ಯಾನರ್ ಬಂಟಿಂಗ್ಸ್ ಹಾಕಲು ಪುನಃ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಅನ್ಯರಿಗೆ ವ್ಯಾಪಾರ ಮಾಡಲು ಅವಕಾಶ ಬೇಡ
ಅಂಜನಾದ್ರಿ ಸೇರಿ ಜಿಲ್ಲೆಯ ಇತರೆ ದೇವಾಲಯ ಗಳಲ್ಲಿ ಅನ್ಯ ಕೋಮಿನವರಿಗೆ ವ್ಯಾಪಾರ ವಹಿವಾಟು ಮಾಡಲು ಅವಕಾಶ ನೀಡಬಾರದು. ಅಂಜನಾದ್ರಿಯಲ್ಲಿ ಬ್ಯಾನರ್ ತೆರವು ಮಾಡಿದ್ದು ಸರಿಯಲ್ಲ. ಪುನಃ ಬ್ಯಾನರ್ ಹಾಕುವಂತೆ ಒತ್ತಾಯಿಸಲಾಗಿದೆ. ಹನುಮಮಾಲೆ ವಿಸರ್ಜನೆಯ ಎಲ್ಲಾಕಾರ್ಯಗಳಲ್ಲಿ ಹಿಂಜಾವೇ ಹಾಗೂ ಸಂಘದ ಕಾರ್ಯಕರ್ತರು ಸಹಕಾರ ನೀಡಲಿದ್ದಾರೆಂದು ಆರ್ ಆರ್ ಎಸ್ ಎಸ್ ಮುಖಂಡ ಅಯ್ಯನಗೌಡ ಹೇರೂರು ತಿಳಿಸಿದ್ದಾರೆ.
ಸಭೆಯಲ್ಲಿ ಎಸಿ ಬಸವಣೆಪ್ಪ ಕಲಶೆಟ್ಟಿ, ತಹಶೀಲ್ದಾರ್ ಯು.ನಾಗರಾಜ, ಡಿಎಸ್ಪಿ ರುದ್ರೇಶ ಉಜ್ಜನಕೊಪ್ಪ, ಸಿಪಿಐ ಮಂಜುನಾಥ, ವೆಂಕಟಸ್ವಾಮಿ, ಆರ್ ಐ ಮಂಜುನಾಥ ಸ್ವಾಮಿ ಸೇರಿ ಸಂಘಪರಿವಾರದ ಕಾರ್ಯಕರ್ತರು ಮುಖಂಡರು ಹಾಗು ಹನುಮಮಾಲಾಧಾರಿಗಳಿದ್ದರು.