ಹೊಸದಿಲ್ಲಿ: ಕೊರೊನಾ ಚಿಕಿತ್ಸೆಗೆ ಬಳಸಲಾಗುವ ರೆಮಿಡಿಸಿವಿರ್ ಇಂಜೆಕ್ಷನ್‌ನ ಉತ್ಪಾದನೆಯು ದೇಶಾದ್ಯಂತ ಹೆಚ್ಚಳವಾಗಿದ್ದು, ಈ ಹಿನ್ನೆಲೆಯಲ್ಲಿ ಇಂಜೆಕ್ಷನ್‌ನ ಖರೀದಿ ಹೊಣೆಯನ್ನು ಕೇಂದ್ರ ಸರಕಾರವು ರಾಜ್ಯಗಳಿಗೆ ವಹಿಸಿದೆ. ಪರಿಣಾಮ, ಕೋವಿಡ್-19 ಲಸಿಕೆಯ ಮಾದರಿಯಲ್ಲೇ ರೆಮಿಡಿಸಿವಿರ್ ಅನ್ನು ಕೂಡ ಇನ್ನು ಮುಂದೆ ರಾಜ್ಯಗಳೇ ಖರೀದಿಸಬೇಕಾಗುತ್ತದೆ.
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವ ಮಾನ್ಸುಖ್ ಮಾಂಡವೀಯ ಶನಿವಾರ ಈ ವಿಚಾರ ತಿಳಿಸಿದ್ದಾರೆ. ಪ್ರಸ್ತುತ ದೇಶದಲ್ಲಿ ರೆಮಿಡಿಸಿವಿರ್ ಪೂರೈಕೆ ಬೇಡಿಕೆಗಿಂತಲೂ ಹೆಚ್ಚಾಗಿದೆ. ಎ.11ರಂದು ಪ್ರತೀ ದಿನ 33 ಸಾವಿರ ಶೀಶೆ ಇಂಜೆಕ್ಷನ್ ಉತ್ಪಾದಿಸಲಾಗುತ್ತಿತ್ತು. ಈಗ ಅದು 10 ಪಟ್ಟು ಹೆಚ್ಚಳವಾಗಿದ್ದು, ದಿನಕ್ಕೆ 3.50 ಲಕ್ಷ ಶೀಶೆಗಳನ್ನು ತಯಾರಿಸಲಾಗುತ್ತಿದೆ. ಹೀಗಾಗಿ ಇನ್ನು ಮುಂದೆ ಕೇಂದ್ರ ಸರಕಾರವು ರಾಜ್ಯಗಳಿಗೆ ರೆಮಿಡಿಸಿವಿರ್ ಹಂಚಿಕೆ ಮಾಡುವುದಿಲ್ಲ. ಬದಲಿಗೆ ರಾಜ್ಯಗಳೇ ಅದನ್ನು ಖರೀದಿಸಬಹುದು ಎಂದು ಮಾಂಡವೀಯ ಹೇಳಿದ್ದಾರೆ.
ಕಳೆದ ವಾರದವರೆಗೆ, ಕೇಂದ್ರವು 98.87 ಲಕ್ಷ ವಯಲ್‌ಗಳಷ್ಟು ರೆಮಿಡಿಸಿವಿರ್ ಅನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದೆ. ಸುಮಾರು 50 ಲಕ್ಷ ವಯಲ್ ಗಳನ್ನು ಖರೀದಿಸಿ, ತುರ್ತು ಅಗತ್ಯದ ವೇಳೆಗೆ ಬಳಸಿಕೊಳ್ಳಲು ಕೂಡ ಕೇಂದ್ರ ಸರಕಾರ ತೀರ್ಮಾನಿಸಿದೆ ಎಂದೂ ಅವರು ತಿಳಿಸಿದ್ದಾರೆ.
ಈ ನಡುವೆ, ವಿದೇಶಗಳಿಂದ ದೇಣಿಗೆ ರೂಪದಲ್ಲಿ ಬಂದ 18,040 ಆಮ್ಲಜನಕ ಸಾಂದ್ರಕಗಳು, 19,085 ಆಕ್ಸಿಜನ್ ಸಿಲಿಂಡರ್ ಗಳು ಹಾಗೂ ಸುಮಾರು 7.7 ಲಕ್ಷ ರೆಮಿಡಿಸಿವಿರ್ ಶೀಶೆಗಳನ್ನು ಎ.27ರಿಂದ ಮೇ 28ರವರೆಗೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಜುಲೈ ಅಂತ್ಯದ ವೇಳೆಗೆ ಪ್ರತೀ ದಿನ 1 ಕೋಟಿ ಮಂದಿಗೆ ಲಸಿಕೆ ವಿತರಿಸಲು ಭಾರತ ಸರಕಾರ ಚಿಂತನೆ ನಡೆಸಿದೆ. ದೇಶದಲ್ಲಿ ಲಸಿಕೆಯ ಉತ್ಪಾದನೆಗೆ ವೇಗ ನೀಡಬೇಕು ಮತ್ತು ಎಷ್ಟು ಸಾಧ್ಯವೋ ಅಷ್ಟು ಲಸಿಕೆಗಳನ್ನು ವಿದೇಶಗಳಿಂದ ಖರೀದಿಸಬೇಕು.
– ಡಾ| ರಣದೀಪ್ ಗುಲೇರಿಯಾ, ಏಮ್ಸ್ ಮುಖ್ಯಸ್ಥ