Advertisement
ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಸುಗ್ಗಿಯ ಹಿಗ್ಗು ಒಂದಿಡಿ ಹೆಚ್ಚೇ. ಹೆಂಗೆಳೆಯರಿಗೆ ಹಬ್ಬವೆಂದರೆ ವಿಶೇಷ ಸಡಗರ. ವರ್ಷಪೂರ್ತಿಯ ಸಡಗರಕ್ಕೆ ಸಂಕ್ರಾಂತಿ ಮುನ್ನುಡಿಯನ್ನೇ ಬರೆಯುತ್ತದೆ. ದೀಪಾವಳಿ ಮುಗಿದ ಅನಂತರ ಕಾಯುವುದೇ ಹೊಸವರ್ಷದ ಮೊದಲ ಹಬ್ಬ ಸಂಕಾಂತಿಗೆ. ವರ್ಷದ ಮೊದಲ ಹೊಸ ಉಡುಗೆ ತೆಗೆದುಕೊಳ್ಳುವ ಖುಷಿಯೂ ಆರಂಭವಾಗುವುದು ಇಲ್ಲಿಯೇ. ಒಬ್ಬಕ್ಕಾಗಿ ಹೊಸ ಬಟ್ಟೆ ಖರೀದಿಸುವುದರಿಂದ ಹಿಡಿದು ಅದನ್ನು ಯಾವ ಡಿಸೈನ್ ಕೊಟ್ಟು ಹೊಲಿಸಬೇಕೆಂಬುದರ ವರೆಗೂ ನಮ್ಮ ಸಡಗರ.
Related Articles
Advertisement
ಹಬ್ಬದ ದಿನದ ನಮ್ಮ ಆನಂದಕ್ಕೆ ಇನ್ನೊಂದು ಕಾರಣ ಅಡುಗೆಮನೆಯಲ್ಲಿ ಸಿಹಿ-ಖಾರ ಪೊಂಗಲ್‌ನ ಘಮ. ಧನುìಮಾಸದಲ್ಲಿ ಪೊಂಗಲ್‌ನದ್ದು ವಿಶೇಷ ತಿಂಡಿಗಳ ಸಾಲಿನಲ್ಲಿ ಅಗ್ರ ಸ್ಥಾನ. ಇನ್ನು ಜತೆಗೆ ವಿಧ-ವಿಧ ಅಡುಗೆಗೆ ಅಮ್ಮನ ಓಡಾಟ. ಮೊದಲೇ ಸಿದ್ಧಪಡಿಸಿದ ಎಳ್ಳು-ಬೆಲ್ಲವನ್ನು ಇಟ್ಟು ಪೂಜೆ ಮುಗಿಸಿ ರಸ್ತೆಯಲ್ಲಿರುವ ಗೋವನ್ನು ಕರೆತಂದು ಕಾಲೊ¤ಳೆದು ಅರಶಿನ-ಕಂಕುಮ ಹೂವಿನಿಂದ ಪೂಜಿಸಿ ಪೊಂಗಲ್ ತಿನ್ನಿಸಿದರೆ ಹಬ್ಬದ ಒಂದು ಭಾಗ ಆದಂತೆ. ಅನಂತರ ನಮ್ಮ ಉಪಾಹಾರ. ಮನೆ-ಮನೆಗೆ ಹೋಗಿ ಎಳ್ಳು-ಬೆಲ್ಲ ಹಂಚುವುದರೊಂದಿಗೆ ನಮ್ಮ ಸಂಭ್ರಮ ಆರಂಭವಾಗುತ್ತಿತ್ತು. ಪುಟ್ಟ – ಪುಟ್ಟ ಅಡುಗೆ ಪಾತ್ರೆಗಳ ಆಕಾರದ ಅಥವಾ ಸಣ್ಣ ಕುಡಿಕೆಗಳಲ್ಲಿ ಎಲ್ಲರಿಗೂ ಎಳ್ಳು ಹಂಚುವುದು ಅದಕ್ಕಿಂತ ಹೆಚ್ಚಾಗಿ ನಮಗೆ ಯಾವ ಬಣ್ಣ ಯಾವ ಪುಟ್ಟ ಪಾತ್ರೆ ಸಿಗುತ್ತದೆ ಎನ್ನುವ ಕುತೂಹಲ. ಸಿಕ್ಕ ಅನಂತರ ದುಪ್ಪಟ್ಟಾಗುತ್ತಿದ್ದ ಸಂಭ್ರಮ.
ನಮ್ಮ ಮನೆಯ ಸಡಗರ ಇಷ್ಟಾದರೆ ಬಾಲ್ಯದಲ್ಲಿ ಅಜ್ಜಿ ಮನೆಯಲ್ಲಿ ಸಂಕ್ರಾಂತಿ ಆಚರಿಸುವ ಸಂಭ್ರಮಕ್ಕೆ ಸರಿಸಾಟಿ ಮತ್ತೂಂದಿಲ್ಲ. ನಮಗೆ ಮುದ್ದೂ ಹೆಚ್ಚು , ನಮ್ಮ ಪಾಲಿನ ಕೆಲಸವೂ ಕಡಿಮೆ. ಹಿರಿಯರ ಕಾರ್ಯವೈಖರಿ, ರೀತಿ, ರಿವಾಜು, ಚಾಕಚಕ್ಯತೆ ನೋಡುತ್ತಾ ಕಣ್ತುಂಬಿಕೊಳ್ಳುವುದೊಂದು ಅನುಭೂತಿ.
ಹಲವು ಗೋವುಗಳಿದ್ದರಿಂದ ಅಲ್ಲಿನ ಹಬ್ಬದ ವೈಖರಿಯೇ ಭಿನ್ನ. ಕೊಟ್ಟಿಗೆಯನ್ನು ಸೆಗಣಿಯಿಂದ ಸಾರಿಸಿ ಸ್ವತ್ಛಗೊಳಿಸಿ ಹಸುಗಳ ಮೈತೊಳೆದು ಮೈಯೆಲ್ಲ ಅರಿಶಿನ ಲೇಪಿಸಿ, ಕೊಂಬುಗಳಿಗೆ ಬಣ್ಣ ಹಚ್ಚಿ ಸಿಂಗರಿಸುವುದು ಒಂದಕ್ಕಿಂತ ಒಂದು ಚೆಂದವಾಗಿ ಅಲಂಕರಿಸಿ ಜತೆಗೆ ಕುರಿ, ಮೇಕೆಗಳಂತಹ ಪ್ರಾಣಿಗಳನ್ನು ಚಂದಗೊಳಿಸುವುದು. ಅರಶಿನ ಕುಂಕುಮದಿಂದ ಕರ್ನಾಟಕದ ಬಣ್ಣವನ್ನು ಅದರ ಮೇಲೆ ಲೇಪಿಸಿ ರಾಜ್ಯದ ಬಗೆಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು.
ಮುಸ್ಸಂಜೆಯ ತಂಪಲ್ಲಿ ಗಲ್ಲಿಯುದ್ದಕ್ಕೂ ಹುಲ್ಲಿನ ಸಾಲುಗಳನ್ನು ಹಾಕಿ ಕತ್ತಲೆಯಾದನಂತರ ಸಾಲಿಗೆ ಬೆಂಕಿ ಹಚ್ಚಿ ಅದರ ಮೇಲೆ ಹಸುಗಳನ್ನು ಹಾರಿಸುವುದು ಪ್ರತೀ ಗೋವು ಪಾಲಕರ ವಾಡಿಕೆ. ಇದರಿಂದ ಹಸುಗಳ ಚರ್ಮಕ್ಕೂ ಬಿಸಿಯ ಶಾಖದಿಂದ ಹುಳು – ಉಪ್ಪಟೆಗಳಿಂದ ಮುಕ್ತವಾಗಿ ಆರೋಗ್ಯವಾಗಿರಲು ಸಹಕಾರಿಯಾಗುತ್ತದೆ. ಇದನ್ನು ನೋಡಲೆಂದೇ ಸೇರುವ ಜನಜಂಗುಳಿ. ಎಲ್ಲರಿಗೂ ಎಳ್ಳು-ಬೆಲ್ಲ ಹಂಚಿ ಸಂಭ್ರಮಿಸುವ ಪರಿ ಇತ್ತೀಚೆಗೆ ಕಾಣಸಿಗುವುದೇ ಅಪರೂಪ.
ಊರಿನಿಂದ ಜೀವನ ಜರ್ಮನಿಗೆ ಕರೆದೊಯ್ಯಿತು. ಜರ್ಮನಿಯ ನೆಲದಲ್ಲಿ ಪ್ರತೀ ಬಾರಿ ಹಬ್ಬಗಳು ಸರಳ ಆಚರಣೆಗೆ ಸೀಮಿತವಾಗಿದೆ. ಹಬ್ಬವನ್ನು ನೆನಪಿನ ಗುಂಗಿನಲ್ಲೇ ಕಳೆದು ಬಹಳ ಸರಳವಾಗಿ ಪೂಜೆ ಮತ್ತು ಒಂದಿಷ್ಟು ಹಬ್ಬದಡಿಗೆಯೊಂದಿಗೆ ಮುಗಿಸುವಾಗ, ಮನಸ್ಸು ಭಾರತದ ನೆಲದಲ್ಲೂ ನಾವು ಕೂಡು ಕುಟುಂಬದೊಂದಿಗೆ ಸೇರಿ ಮಾಡುತ್ತಿದ್ದ ಹಬ್ಬ – ಸಂಪ್ರದಾಯದಗಳು ಕಣ್ಮರೆಯಾಗುತ್ತಿವೆ. ನಮ್ಮ ಮುಂದಿನ ಪೀಳಿಗೆಗೆ ಒಂದು ಅಭೂತಪೂರ್ವ ಕ್ಷಣ-ಘಳಿಗೆಗಳನ್ನು ಕಟ್ಟಿಕೊಡುವಲ್ಲಿ ಸೋಲುತ್ತಿದ್ದೇವೇನೋ, ಬಾಂಧವ್ಯಗಳ ಆನ್‌ಲೈನ್‌ಗಷ್ಟೇ ಸೀಮಿತವಾಗಿವೆ ಎಂಬ ಭಾವ ಬಹಳ ಕಾಡುವುದು.
*ಶೋಭಾ ಚೌಹ್ಹಾಣ್, ಫ್ರಾಂಕ್‌ಫರ್ಟ್