Advertisement

1982ರ ಮಹಾ ಮಳೆಗೆ ತುತ್ತಾದ ನೆನಪು…

11:56 PM Aug 07, 2019 | Sriram |

ಕುಂದಾಪುರ: ಆಶ್ಲೇಷಾ ಮಳೆಗೆ ತುತ್ತಾಗಿ ನಾವುಂದ, ಬಡಾಕೆರೆ, ಸಾಲ್ಪುಡ, ಚಿಕ್ಕಳ್ಳಿ, ಹಡವು, ಪಡುಕೋಣೆ ಭಾಗದ ಮನೆಗಳಿಗೆ ನೀರು ನುಗ್ಗಿತ್ತು. ಎಕರೆಗಟ್ಟಲೆ ಗದ್ದೆ, ತೋಟ ಜಲಾವೃತಗೊಂಡಿವೆ. 1982 ರಲ್ಲೊಮ್ಮೆ ಇಂತಹ ಮಹಾ ಮಳೆ ಬಂದಿದ್ದು, 3 ದಿನಗಳ ಕಾಲ ನೆರೆಗೆ ಊರಿಡೀ ಮುಳುಗಿತ್ತು ಎನ್ನುವುದಾಗಿ “ಉದಯವಾಣಿ’ ಜತೆ ಪಡುಕೋಣೆ, ಬಡಾಕೆರೆಯ ಹಿರಿಯರಿಬ್ಬರು ನೆನಪು ಮಾಡಿಕೊಳ್ಳುತ್ತಾರೆ.

Advertisement

ಹಿಂದಿನ ವರ್ಷಗಳಲ್ಲಿ ಕೂಡ ಇಂತಹ
ಮಳೆ ಬಂದಿದ್ದರೂ, ಇಷ್ಟೊಂದು ಪ್ರಮಾಣದ ನೆರೆ ಬಂದಿರಲಿಲ್ಲ. ಸೋಮ ವಾರ ರಾತ್ರಿಯಿಂದ ಆರಂಭವಾದ ಮಳೆ, ಮಂಗಳವಾರ ದಿನವಿಡೀ ಬಂದಿದ್ದು, ಬುಧವಾರ ಮಳೆ ಪ್ರಮಾಣ ಕಡಿಮೆ ಯಾದರೂ, ನೆರೆ ನೀರು ಮಾತ್ರ ತಗ್ಗಿಲ್ಲ.

2-3 ದಿನ ಮನೆಯಿಂದಲೇ
ಹೊರ ಬಂದಿಲ್ಲ
ಈ ಬಗ್ಗೆ ಪಡುಕೋಣೆಯ 70 ವರ್ಷದ ಅಣ್ಣಪ್ಪ ಪೂಜಾರಿ ಹೇಳುವುದು ಹೀಗೆ ಇದೇ ರೀತಿ 1982ರಲ್ಲಿ ಎಡೆ ಬಿಡದೇ ಮಳೆಯಾಗಿತ್ತು. ಆಗ 2-3 ದಿನಗಳ ಕಾಲ ನಾವೆಲ್ಲ ಮನೆಯಿಂದಲೇ ಹೊರ ಬಂದಿರಲಿಲ್ಲ. ಆಗೆಲ್ಲ ಮರವಂತೆ – ಪಡುಕೋಣೆ ಮಾರ್ಗದಲ್ಲಿ ಮಾರಾಸ್ವಾಮಿ ದೇವಸ್ಥಾನದ ಹತ್ತಿರ ಸೇತುವೆಯೇ ಇರಲಿಲ್ಲ. ದೋಣಿಯಲ್ಲಿಯೇ ಹೋಗಿ ಬರಬೇಕಾಗಿತ್ತು. ಹಾಗಾಗಿ ಪೇಟೆಗೆ ಹೋಗುವುದಿರಲಿ ಹೊರಗೆ ಬರಲು ಸಾಧ್ಯವಾಗದಂತಹ ಸ್ಥಿತಿ ಆಗ ನಮ್ಮದು. ಆಗ ನಮ್ಮ ಪಡುಕೋಣೆ, ನಾಡಾ ಭಾಗದಲ್ಲಿ 50 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಈ ಬಾರಿ ಮಂಗಳವಾರ ಒಂದು ದಿನವಿಡೀ ಬಂದ ಮಳೆಯ ರೀತಿಯೂ ಅದೇ ತರಹ ಇತ್ತು. ಕಳೆದ ವರ್ಷವೂ ಮಳೆ ಬಂದಿದ್ದರೂ, ಈ ರೀತಿ ಬಂದಿರಲಿಲ್ಲ ಎನ್ನುವುದಾಗಿ ನೆನಪಿನ ಬುತ್ತಿಯನ್ನು ಬಿಚ್ಚಿಡುತ್ತಾರೆ ಅಣ್ಣಪ್ಪ.

ಆಗಿನ ಮಹಾ ಮಳೆ ನೆನಪಾಯಿತು..
1982 ರಲ್ಲಿ ಎಲ್ಲೆಡೆ ಭಾರೀ ಮಳೆಯಾಗಿತ್ತು. ಆಗ ಈ ಭಾಗದ 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಆಗ ಮಣ್ಣಿನ ಗೋಡೆಯದ್ದಾಗಿದ್ದರಿಂದ ಅನೇಕ ಮನೆಗಳು ಕುಸಿದು ಬಿದ್ದಿತ್ತು. ನಮ್ಮ ಮನೆಯೂ ಕುಸಿದಿದ್ದು, ಆ ಬಳಿಕ ಹೊಸದಾಗಿ ಕಟ್ಟಲಾಗಿತ್ತು. 3 ದಿನ ಪೂರ್ತಿ ನೆರೆ ನೀರು ನಿಂತಿತ್ತು. ಬಆಗ ನಾವುಂದ – ಬಡಾಕೆರೆ- ನಾಡಗೆ ಹೋಗಲು ಕುದ್ರು ಬಳಿ ಸೇತುವೆಯಿರಲಿಲ್ಲ. ಬಡಾಕೆರೆ ಶಾಲೆಯಲ್ಲಿ ಆಗ ಗಂಜಿ ಕೇಂದ್ರವನ್ನು ತೆರೆಯಲಾಗಿತ್ತು. ಮಂಗಳವಾದ ಬಂದ ಮಳೆಯೂ ಅದೇ ಮಹಾ ಮಳೆಯನ್ನು ಮತ್ತೆ ನೆನಪಿಸುವಂತೆ ಮಾಡಿತು ಎನ್ನುವುದಾಗಿ ಬಡಾಕೆರೆಯ 62 ವರ್ಷದ ಯಾಕೂಬ್‌ ಹೇಳಿಕೊಳ್ಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next