Advertisement

ಏಕವಚನದ ಗೆಳೆಯ

10:57 AM Jun 17, 2019 | mahesh |

ನಾನು ಮತ್ತು ಗಿರೀಶ್‌ ಕಾರ್ನಾಡ್‌ ಮೊದಲು ಭೇಟಿಯಾದದ್ದು 1967ರಲ್ಲಿ ಇರಬೇಕು. ಅದು, ಜಿ. ಬಿ. ಜೋಶಿ ಅವರ ಮನೋಹರ ಗ್ರಂಥಮಾಲೆಯ ಅಟ್ಟದಲ್ಲಿ. ನಮ್ಮಿಬ್ಬರನ್ನು ಪರಸ್ಪರ ಪರಿಚಯಿಸಿದವರು ಕೀರ್ತಿನಾಥ ಕುರ್ತಕೋಟಿ. ಆ ವೇಳೆಗಾಗಲೇ ಗಿರೀಶ್‌ ಕಾರ್ನಾಡ್‌ ಬರೆದಿದ್ದ ತುಘಲಕ್‌ನ್ನು ಓದಿ ಮೆಚ್ಚಿಕೊಂಡಿದ್ದೆ. ನಾನೂ ಋಷ್ಯಶೃಂಗ ಬರೆದಿದ್ದೆ. ಅದನ್ನೂ ನನ್ನ ಇತರ ಬರಹಗಳನ್ನೂ ಕಾರ್ನಾಡ್‌ ಓದಿದ್ದ. ಪರಿಚಯವಾದ ಕೂಡಲೇ ಆತ ಮೊತ್ತಮೊದಲು ಹೇಳಿದ್ದು, “ಇನ್ನು ಮುಂದೆ ನಾವಿಬ್ಬರೂ ಏಕವಚನದಲ್ಲಿಯೇ ಮಾತನಾಡೋಣ’ ನನಗೂ ಸರಿ ಎನ್ನಿಸಿತು. ಅಂದಿನಿಂದ ಮೊನ್ನೆ ನಿರ್ಗಮಿಸುವವರೆಗೂ ನಾವು “ಹೋಗು’, “ಬಾ’ ಎಂದೇ ಮಾತನಾಡಿಕೊಳ್ಳುತ್ತಿದ್ದೆವು. ಜಿ. ಬಿ. ಜೋಶಿ ಸೂಕ್ಷ್ಮ ಸಂವೇದನಶೀಲ ನಾಟಕಕಾರರಾಗಿದ್ದರಿಂದ ನಮ್ಮಿಬ್ಬರೊಳಗಿನ ನಾಟಕಕಾರನನ್ನು ಬೆಳೆಸಿದರು.

Advertisement

ಗಿರೀಶ್‌ ಕಾರ್ನಾಡ್‌ ಕೇವಲ ನಾಟಕಕಾರ ಮಾತ್ರವಲ್ಲ ; ಒಳ್ಳೆಯ ಚಿತ್ರಕಾರ ಕೂಡ. ಆ ದಿನಗಳಲ್ಲಿಯೇ ಟಿ.ಎಸ್‌. ಎಲಿಯೆಟ್‌ನ ಚಿತ್ರ ಬರೆದು, ಆತನಿಗೆ ತೋರಿಸಿ, ಸಹಿ ಪಡೆದುಕೊಂಡು ಬಂದದ್ದು ನಮಗೆಲ್ಲ ರೋಮಾಂಚನವನ್ನು ಉಂಟುಮಾಡಿತ್ತು. ಅದರಿಂದ ಉತ್ತೇಜಿತನಾದ ನಾನು ಋಷ್ಯಶೃಂಗ ನಾಟಕಕ್ಕೆ ಕಾರ್ನಾಡ್‌ನಿಂದ ಚಿತ್ರ ಬರೆಸಿ ಮುಖಪುಟಕ್ಕೆ ಬಳಸಿದೆ. ನಾವು ಏಕವಚನದಲ್ಲಿ ಮಾತನಾಡುತ್ತ ಆಪ್ತರಾಗಿದ್ದರೂ ಸಾಹಿತ್ಯದ ವಿಚಾರದಲ್ಲಿ ಸ್ಪರ್ಧಾತ್ಮಕ ಮನೋಭಾವದಲ್ಲಿದ್ದೆವು. ನಾನೊಂದು ನಾಟಕ ಬರೆದರೆ ಅವನೂ ಬರೆಯುತ್ತಿದ್ದ. ಅವನು ಬರೆದರೆ ನಾನೂ ಬರೆಯುತ್ತಿದ್ದೆ. ಒಮ್ಮೆ ಎ. ಕೆ. ರಾಮಾನುಜನ್‌ ಜಾನಪದ ಕತೆಯೊಂದನ್ನು ನಮ್ಮಿಬ್ಬರಿಗೂ ಹೇಳಿದ್ದರು. ಅದನ್ನು ಆಧರಿಸಿ ನಾನು ಸಿರಿ ಸಂಪಿಗೆ ಬರೆದೆ. ಅದು ಉದಯವಾಣಿ ದೀಪಾವಳಿ ವಿಶೇಷಾಂಕದಲ್ಲಿ ಮೊದಲು ಪ್ರಕಟವಾಯಿತು. ಕಾರ್ನಾಡ್‌ ಆ ಹೊತ್ತಿಗಾಗಲೇ ಅದೇ ವಸ್ತುವಿನ ಹಯವದನ ಬರೆದಿದ್ದ. ಸಿರಿ ಸಂಪಿಗೆ ಓದಿ, “ನಾನೂ ಇದೇ ವಸ್ತುವಿನ ನಾಟಕ ಬರೆಯುತ್ತೇನೆ’ ಎಂದ. “ನೀನು ಈಗಾಗಲೇ ಬರೆದಿರುವೆಯಲ್ಲ, ಮತ್ತೂಂದು ನಾಟಕವೇಕೆ?’ ಎಂದು ಕೇಳಿದೆ. “ಇಲ್ಲ, ನನಗೆ ಬರೆಯಬೇಕೆನಿಸಿದೆ. ಬರೆಯುತ್ತೇನೆ’ ಎಂದು ನಾಗಮಂಡಲ ಬರೆದ. ಮುಂದಿನದ್ದೆಲ್ಲ ಎಲ್ಲರಿಗೂ ತಿಳಿದ ವಿಚಾರವೇ.

ಕಾರ್ನಾಡ್‌ ತಲೆದಂಡ ಬರೆದ. ನಾನು ಶಿವರಾತ್ರಿ ಬರೆದೆ. ಈಚೆಗೆ ರಾಕ್ಷಸ ತಂಗಡಿ ಬರೆದ. ನಾನು ಮಹಮದ್‌ ಗಾವಾನ್‌ ಬರೆದೆ. ಹೀಗೆ ನಮ್ಮಿಬ್ಬರ ನಡುವೆ ಇರುವ ಸ್ಪರ್ಧಾತ್ಮಕ ಮನೋಭಾವವೇ ಸೃಜನಶೀಲ ನೆಲೆಗಳಲ್ಲಿ ಬೆಳೆಸಿತು. ಪ್ರತಿಯೊಬ್ಬ ಲೇಖಕನಲ್ಲಿಯೂ ಅವನದ್ದೇ ಆದ ಸೃಜನಶೀಲ ಉಪಕರಣಗಳು ಇರುತ್ತವೆ. ಅವು ಕಲ್ಪನೆಯ ಸಾಧ್ಯತೆಗಳನ್ನು ಹಿಗ್ಗಿಸಿ ಕೃತಿಗಳನ್ನು , ಆಕೃತಿಗಳನ್ನು ಬೇರೆಯೇ ಆಗಿಸುತ್ತವೆ. ಹೀಗಾಗಿ, ನನ್ನ ಶಿವರಾತ್ರಿ ಇರಬಹುದು, ಲಂಕೇಶ್‌ನ ಸಂಕ್ರಾಂತಿ ಇರಬಹುದು, ಕಾರ್ನಾಡ್‌ನ‌ ತಲೆದಂಡ ಇರಬಹುದು, ಎಚ್‌. ಎಸ್‌. ಶಿವಪ್ರಕಾಶನ ಮಹಾಚೈತ್ರ ಇರಬಹುದು- ವಸ್ತು ಒಂದೇ, ಆಕೃತಿಗಳು ಬೇರೆ ಬೇರೆ.

ಬಸವಣ್ಣನನ್ನೇ ಕೇಂದ್ರವಾಗಿರಿಸಿಕೊಂಡು ಬರೆದ ನನ್ನ ನಾಟಕದಲ್ಲಿ ಬಸವಣ್ಣ ಮತ್ತು ಬಿಜ್ಜಳ ಶೂದ್ರನ ಮನೆಯಲ್ಲಿ ಭೇಟಿಯಾಗುವ ಹಾಗೆ ಚಿತ್ರಿಸಿದೆ. ಕಾರ್ನಾಡ್‌ ಬಸವಣ್ಣನನ್ನು ಬಿಜ್ಜಳ- ಬಸವಣ್ಣರನ್ನು ಅರಮನೆ, ಪ್ರಭುತ್ವಗಳ ಹಿನ್ನೆಲೆಯಲ್ಲಿ ಮರುರೂಪಿಸಿದ. ಕಾರ್ನಾಡ್‌ನ‌ ನಾಟಕಗಳಲ್ಲಿ ಪ್ರಖರ ವೈಚಾರಿಕತೆ ಇರುತ್ತಿತ್ತು. ನನ್ನ ನಾಟಕಗಳಲ್ಲಿ ಕಾವ್ಯಾತ್ಮಕ ಕ್ರಿಯೆ ಎದ್ದು ತೋರುತ್ತಿತ್ತು. ಎಷ್ಟೋ ಬಾರಿ ಕಾರ್ನಾಡ್‌ ನನ್ನ ನಾಟಕಗಳನ್ನು ಮೆಚ್ಚಿ ಅದರಲ್ಲಿನ ಕಾವ್ಯಾತ್ಮಕತೆಗೆ ಮಾರುಹೋಗಿರುವುದಾಗಿ ಹೇಳುತ್ತಿದ್ದ.

ರಂಗಭೂಮಿಯಲ್ಲಿ ವೈಚಾರಿಕ ಆವರಣವನ್ನಿಟ್ಟುಕೊಂಡು ಕೃತಿ ರಚಿಸಿದವರಲ್ಲಿ ಕಾರ್ನಾಡ್‌ ಮೊದಲಿಗನೇನಲ್ಲ. ಆ ಹೊತ್ತಿಗಾಗಲೇ ಶ್ರೀರಂಗ, ಕೈಲಾಸಂ ಮುಂತಾದವರು ಪ್ರಖರ ವೈಚಾರಿಕ ನೆಲೆಯ ನಾಟಕಗಳನ್ನು ಬರೆದಿದ್ದರು. ಈ ಪರಂಪರೆಯನ್ನು ಮುಂದುವರಿಸಿದವರಲ್ಲಿ ಕಾರ್ನಾಡ್‌ ಮತ್ತು ಲಂಕೇಶ್‌ ಪ್ರಮುಖರು.

Advertisement

ಒಮ್ಮೆ ಲಂಕೇಶ್‌ಗೆ ಕನ್ನಡ ನಾಟಕ ಸಾಹಿತ್ಯವನ್ನು ರಾಷ್ಟ್ರಮಟ್ಟದಲ್ಲಿ ಕಾಣಿಸಬೇಕೆಂಬ ಯೋಚನೆ ಬಂತು. 1972ರಲ್ಲಿ ಬಿ.ವಿ. ಕಾರಂತರ ನಿರ್ದೇಶನದಲ್ಲಿ ನಾಟಕೋತ್ಸವವನ್ನು ಆಯೋಜಿಸಿದ್ದ. ನನ್ನ ನಾಟಕ ಜೋಕುಮಾರಸ್ವಾಮಿ ಮತ್ತು ಲಂಕೇಶರ ಈಡಿಪಸ್‌, ಸಂಕ್ರಾಂತಿ ಈ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡವು. ಜೋಕುಮಾರ ಸ್ವಾಮಿಯಲ್ಲಿ ಗೌಡನಾಗಿ, ಈಡಿಪಸ್‌ನಲ್ಲಿ ಈಡಿಪಸ್‌ ಆಗಿ ಕಾರ್ನಾಡ್‌ ಅದ್ಭುತವಾಗಿ ಅಭಿನಯಿಸಿದ್ದ. ಕೆಲವೇ ದಿನಗಳಲ್ಲಿ ಈ ರಾಷ್ಟ್ರೀಯ ನಾಟಕೋತ್ಸವದ ಸುದ್ದಿ ದೇಶದೆಲ್ಲೆಡೆ ಹಬ್ಬಿ , ಕನ್ನಡ ನಾಟಕಗಳ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುವಂತಾಯಿತು.

ಕಾರ್ನಾಡ್‌ದ್ದು ಬಹುಮುಖೀ ವ್ಯಕ್ತಿತ್ವ. ಒಂದೆಡೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದರೆ, ಮತ್ತೂಂದೆಡೆ ಸಿನೆಮಾದಲ್ಲಿ ನಟಿಸುತ್ತಿದ್ದ. ಶ್ರೇಷ್ಠ ಚಲನಚಿತ್ರಗಳ ನಿರ್ದೇಶನವನ್ನೂ ಮಾಡಿದ್ದ. ಆಡಳಿತಗಾರನಾಗಿ ಹಲವು ಸಂಘಸಂಸ್ಥೆಗಳನ್ನು ಕಟ್ಟಿ ಬೆಳೆಸಿದ, ಸಮರ್ಥವಾಗಿ ನಡೆಸಿದ ಹೆಗ್ಗಳಿಕೆ ಆತನದು. ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿ ಇರಬಹುದು, ಪ್ಯಾರಿಸ್‌ನ ನೆಹರೂ ಸೆಂಟರ್‌ ಇರಬಹುದು, ಪುಣೆಯ ಫಿಲ್ಮ್ ಆ್ಯಂಡ್‌ ಟೆಲಿವಿಷನ್‌ ಇನ್‌ಸ್ಟಿಟ್ಯೂಟ್‌ ಇರಬಹುದು- ಎಲ್ಲವೂ ಕಾರ್ನಾಡ್‌ನ‌ ನೇತೃತ್ವದಲ್ಲಿ ಉನ್ನತಿಕೆಯನ್ನು ಸಾಧಿಸಿದವು. ದೇಶದಲ್ಲಿ , ವಿದೇಶಗಳಲ್ಲಿ ತಾನು ಹೋದಲ್ಲೆಲ್ಲ ಕನ್ನಡತನ ಮತ್ತು ಭಾರತೀಯತೆಯನ್ನು ಪ್ರತಿಪಾದಿಸಿದ. ನನಗಾದರೋ ಕನ್ನಡ ಭಾಷೆಯೊಂದೇ, ಅವನಿಗೆ ಏಳೆಂಟು ಭಾಷೆಗಳ ಬಳಕೆ ಇತ್ತು.

ಆಗಿನ ಚಾರಿತ್ರಿಕ ಸನ್ನಿವೇಶವೇ ಹಾಗಿತ್ತು. ಇಂಗ್ಲಿಷ್‌ನ ಸಣ್ತೀವನ್ನು ಹೀರಿಕೊಂಡು ಕನ್ನಡ ಭಾಷೆ ಬೆಳೆದಿತ್ತು. ಗೋಪಾಲಕೃಷ್ಣ ಅಡಿಗರಂಥವರು ಈಡಿಪಸ್ಸಿನ ಗೂಢ ಪಾಪಲೇಪಿತ ನಾನು ಎಂಬ ಸಾಲನ್ನು ಬರೆದು ಆಘಾತಗೊಳಿಸಿದ್ದರು. ಅನಂತಮೂರ್ತಿ ಕ್ಲಿಪ್‌ ಪಾಯಿಂಟ್‌ನಂಥ ಕಥೆ ಬರೆದಿದ್ದರು. ಲಂಕೇಶ್‌ ತಮ್ಮ ಪ್ರಯೋಗಶೀಲತೆಯಿಂದಲೇ ಹೆಸರಾಗಿದ್ದರು.

ಇಂಥ ಸಂದರ್ಭದಲ್ಲಿ ನಾನು ಮತ್ತು ಕಾರ್ನಾಡ್‌ ಸಹಜವಾದ ಸ್ಪರ್ಧಾತ್ಮಕ ಮನೋಭಾವದಲ್ಲಿ ಸಾಹಿತ್ಯ ರಚನೆ ಮಾಡಿದೆವು. ನಮ್ಮ ಸ್ನೇಹ ಸೃಜನಶೀಲತೆಗೆ ಪರಸ್ಪರ ಪೂರಕವಾಗಿ ಇರುತ್ತಿತ್ತು. ಯಾವತ್ತೂ ಕಹಿ ಉಳಿಯಲಿಲ್ಲ. ಅದಕ್ಕೆ ನಾವಿಬ್ಬರು ಸೇರಿ ಮಾಡಿದ ಕೆಲಸಗಳೇ ಸಾಕ್ಷಿ. ಅವನು ಎಸ್‌.ಎಲ್‌. ಭೈರಪ್ಪ ಅವರ ವಂಶವೃಕ್ಷ ಕಾದಂಬರಿಯನ್ನು ನಿರ್ದೇಶಿಸಿದ. ನಾನು ಆ ಸಿನೆಮಾಕ್ಕೆ ಹಾಡುಗಳನ್ನು ಬರೆದೆ. ಕಾರ್ನಾಡ್‌, ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ನಾನು ಸದಸ್ಯನಾಗಿದ್ದೆ. ನಾನು ನ್ಯಾಶನಲ್‌ ಸ್ಕೂಲ್‌ ಆಫ್ ಡ್ರಾಮಾದ ನಿರ್ದೇಶಕನಾಗಿದ್ದಾಗ ಕಾರ್ನಾಡ್‌ನ‌‌ನ್ನು ಕರೆಸಿ ಹಲವು ಕೆಲಸಗಳನ್ನು ಮಾಡಿಸಿದೆ. ನಾನು ಮತ್ತು ಕಾರ್ನಾಡ್‌ ನಾಟಕ, ಸಿನೆಮಾಗಳನ್ನು ಒಟ್ಟೊಟ್ಟಿಗೆ ನೋಡುತ್ತಿದ್ದೆವು. ಕಾರ್ಯಕ್ರಮಗಳಲ್ಲಿ ಪರಸ್ಪರ ಚರ್ಚಿಸುತ್ತಿದ್ದೆವು, ಬಿಡುವಿನಲ್ಲಿ ಹರಟೆ ಹೊಡೆಯುತ್ತಿದ್ದೆವು.

ಅತ್ಯುತ್ತಮ ನಾಟಕಕ್ಕೊಂದು ವಿಶಿಷ್ಟವಾದ ಶಕ್ತಿ ಇದೆ. ಕಾವ್ಯೇಷು ನಾಟಕಂ ರಮ್ಯಂ ಎನ್ನುವ ಮಾತಿದೆ. ಕಾವ್ಯದ ಉತ್ತಮಿಕೆಯೇ ನಾಟಕವೆಂದೇ ಪ್ರಸಿದ್ಧವಾಗಿತ್ತು. ಬಹಳ ಹಿಂದಿನಿಂದಲೂ ಪುರಾಣ, ಇತಿಹಾಸ ಆಧಾರಿತ ಕಥಾವಸ್ತುಗಳ ನಾಟಕಗಳು ಪ್ರದರ್ಶನಗೊಳ್ಳುತ್ತಿದ್ದವು. ಆ ವಸ್ತುಗಳನ್ನು ನಾವು ಆಧುನಿಕ ಸಂವೇದನೆಯಿಂದ ಮರುಸೃಷ್ಟಿಸಿದೆವು. ಪುರಾಣ, ಇತಿಹಾಸಗಳ ಬಗ್ಗೆ ಅರಿವಿದ್ದ ಜನಗಳು ಕೂಡ ಈ ಪ್ರಯೋಗಗಳನ್ನು ಸ್ವೀಕರಿಸಿದರು.

ಕಾರ್ನಾಡ್‌ನ‌ ನಾಟಕಗಳಲ್ಲಿ ಶಬ್ದಕ್ಕೇ ಹೆಚ್ಚಿನ ಪ್ರಾಧಾನ್ಯವಿರುತ್ತಿತ್ತು. “ನೋಡು’ವುದಕ್ಕಿಂತ “ಆಲಿಸು’ವುದಕ್ಕೇ ಅಲ್ಲಿ ಪ್ರಾಧಾನ್ಯ. ನಮ್ಮಲ್ಲಿ ಸೀಯಿಂಗ್‌ ಈಸ್‌ ಬಿಲೀವಿಂಗ್‌ ಎಂಬ ಗ್ರಹಿಕೆ ಬಂದದ್ದರಿಂದ ಕಲ್ಪನಾಶಕ್ತಿ ಕ್ಷೀಣವಾಯಿತು. “ಒಂದು ಮಾತಿನಲ್ಲಿ ನೂರಾರು ಕೋಟಿ ದೇವತೆಗಳಿದ್ದಾರೆ’ ಎಂದು ಹೇಳಿದರೆ ಅದನ್ನು ಜನ ನಂಬುತ್ತಾರೆ. ಛಂದಸ್ಸಿನಲ್ಲಿ ದೇವರು ಅಡಗಿದ್ದಾನೆ ಎಂದು ಹೇಳುವುದೇ ಅದಕ್ಕೆ. ಕಣ್ಣು ಒಂದೇ ಪ್ರತಿಮೆಯನ್ನು ಕಣ್ಣೆದುರು ನಿಲ್ಲಿಸುತ್ತದೆ, ಆದರೆ, ಕಿವಿ ನೂರಾರು ಪ್ರತಿಮೆಗಳನ್ನು ಕಲ್ಪಿಸುವ ಅವಕಾಶ ನೀಡಿ ಕಲ್ಪನೆಯನ್ನು ಹಿಗ್ಗಿಸುತ್ತದೆ. ಕಾರ್ನಾಡ್‌ಗೆ ಮಾತಿನ ಶಕ್ತಿಯಲ್ಲಿ ನಂಬಿಕೆ ಅಧಿಕ. ಅವನ ನಾಟಕಗಳಲ್ಲಿ ಚಿತ್ರಕ್ಕಿಂತ ಮಾತೇ ಪ್ರಧಾನ.

ಇತ್ತೀಚೆಗಿನ ದಿನಗಳಲ್ಲಿ ಕಾರ್ನಾಡ್‌ಗೆ ಅನಾರೋಗ್ಯ ಬಾಧಿಸುತ್ತಿದ್ದರೂ ವೈಚಾರಿಕ ಪ್ರಖರತೆ ಒಂದಿಷ್ಟೂ ಕುಂದಿರಲಿಲ್ಲ. ಸ್ಮಾರಕಗಳು ಬೇಡ, ಆಚರಣೆಗಳು ಬೇಡ ಎಂಬುದು ಆತನ‌ ದೃಢ ನಿಲುವಾಗಿತ್ತು. ಕೊನೆಯ ದಿನಗಳವರೆಗೂ ಆ ಮಾತಿಗೆ ಬದ್ಧನಾಗಿಯೇ ಬದುಕಿದ. ತೀರಿಕೊಂಡ ಬಳಿಕವೂ ಆ ತಣ್ತೀಬದ್ಧತೆ ಉಳಿಯುವಂತೆ ಕಾಳಜಿ ವಹಿಸಿದ.

ನಾನು, ಕಾರ್ನಾಡ್‌ ಹಳೆಯ ಕಾಲದವರು. ನಾವು ಬೆಳೆದ ಕಾಲದಲ್ಲಿ ಇವತ್ತಿನಂತೆ ತಂತ್ರಜ್ಞಾನ, ಸೌಕರ್ಯಗಳು ಇರಲಿಲ್ಲ. ಈಗ ಕಲ್ಪಿಸಿದ್ದನ್ನು ಈಗಲೇ ಬರೆದುಬಿಡಬೇಕು. ಈಗ ಬರೆದಿದ್ದಕ್ಕೆ ಈಗಲೇ ಮನ್ನಣೆ ಸಿಗಬೇಕು ಎಂಬಂಥ ಕಾಲ ಅದಲ್ಲ. ಹೊಳೆದದ್ದನ್ನು ಬರೆದು ಬಿಡಲು ಸಾಧ್ಯವಿರಲಿಲ್ಲ. ಬರೆಯುವ ಮುನ್ನ ಸುದೀರ್ಘ‌ವಾದ ಧ್ಯಾನಶೀಲತೆ ಬೇಕಾಗುತ್ತಿತ್ತು. ಕಾರ್ನಾಡ್‌ನ‌ಲ್ಲಿ ಅಂಥ ಧ್ಯಾನಶೀಲತೆಯನ್ನು ಉದ್ದಕ್ಕೂ ಗಮನಿಸಿದ್ದೇನೆ.

(ನಿರೂಪಣೆ: ನ. ರವಿಕುಮಾರ್‌)

ಚಂದ್ರಶೇಖರ ಕಂಬಾರ

Advertisement

Udayavani is now on Telegram. Click here to join our channel and stay updated with the latest news.

Next