Advertisement

ಯಶೋದಮ್ಮನ ನೆನೆದು…

10:56 PM Aug 22, 2019 | mahesh |

ತಾಯೆ ಯಶೋದಾ, ನಿನ್ನ ಮಗನ ತುಂಟಾಟವನ್ನು ಹೇಗೆ ಹೇಳಲಿ…

Advertisement

ತಾಯೇ ಯಶೋದಾ ಉಂದನ್‌ ಆಯರ್‌ಕುಲತ್ತುದಿತ್ತ ಮಾಯನ್‌ ಗೋಪಾಲಕೃಷ್ಣನ್‌ ಸೆಯ್ಯಮ್‌…
ಇದು ತಮಿಳು ಭಾಷೆಯಲ್ಲಿರುವ ಒಂದು ದೇವರ ನಾಮ. ಬರೆದವರು ಊಟುಕ್ಕಾಡು ವೆಂಕಟಸುಬ್ಬಯ್ಯರ್‌. ಕರ್ನಾಟಕ ಸಂಗೀತಪ್ರಿಯರಿಗೆ ತೋಡಿ ರಾಗ ನೆನಪು ಬಂದರೆ ಒಡ ನೆ ಯೇ ಕಿವಿಗಳಲ್ಲಿ ತಾಯೇ ಯಶೋದೆ ಹಾಡಿನ ಅನುರಣನ ಆರಂಭವಾಗುತ್ತದೆ.

ಈಗಂತೂ ಎಲ್ಲರ ಮೊಬೈಲ್‌ಗ‌ಳಲ್ಲೂ ಯೂಟ್ಯೂಬ್‌ ಇದೆ. ಸುಮ್ಮನೆ ತಾಯೇ ಯಶೋದಾ- ತೋಡಿ ರಾಗ ಅಂತ ಹಾಕಿದ ತತ್‌ ಕ್ಷಣ ಆ ಹಾಡು ಸಿಗುತ್ತದೆ. ಅದನ್ನು ಆಲಿಸುವುದೇ ಒಂದು ಸುಖ.

ಒಬ್ಟಾಕೆ ಗೃಹಿಣಿ, ಆಕೆಯ ತುಂಟ ಮಗ, ಆತ ಮನೆಮನೆಗೆ ಹೋಗಿ ಮಾಡುವ ಉಪಟಳ, ಆ ಮನೆಗಳ ಹೆಂಗಸರು ಗೃಹಿಣಿಗೆ ದೂರು ಕೊಡುವುದು- ಇಂಥ ಚಿತ್ರಗಳೆಲ್ಲ ಸೇರಿ ಉಲ್ಲಾಸದಾಯಕ ದಿನ ಮಾನದ ಹಳ್ಳಿಯ ಒಂದು ಕೊಲಾಜ್‌ ಕಣ್ಣೆದುರು ಬರುತ್ತದೆ.

ನಮ್ಮ ಮನೆಯಲ್ಲಾಗಲಿ, ನೆರೆಮನೆಗಳಲ್ಲಾಗಲಿ ತುಂಟ ಮಕ್ಕಳಿದ್ದೇ ಇರುತ್ತಾರೆ. ಅವರು ಎಸಗುವ ಅಧ್ವಾನಗಳಿಂದ ರೋಸಿಹೋಗಿರುತ್ತೇವೆ. ಮಕ್ಕಳಿಗೆ ಬೈಯುವುದು, ಮಕ್ಕಳು ಅವುಗಳನ್ನು ಕೇಳದೇ ತಮ್ಮದೇ ಹಾದಿಯಲ್ಲಿ ಸಾಗುವುದು- ಇವೆಲ್ಲ ಆ ಕ್ಷಣದಲ್ಲಿ ಕಿರಿಕಿರಿ. ಆದರೆ, ಬಹಳ ಕಾಲದ ಬಳಿಕ ನೆನಪಿಸಿಕೊಂಡಾಗಲೆಲ್ಲ ಮನಸ್ಸಿಗೆ ಎಂಥದೋ ಹಿತ ! ಇಂಥ ಮುನಿಸುಕೊಳ್ಳುವಿಕೆಯಲ್ಲಿಯೇ ಪ್ರೀತಿಯ ಬಂಧ ಸಾಂದ್ರವಾಗುವು ದು. ಮುನಿಸಿಕೊಳ್ಳದೆ ಪ್ರೀತಿಯ ಬೆಲೆ ಗೊತ್ತಾಗುವುದಿಲ್ಲ.

Advertisement

ಯಶೋದೆ ಎಂದಾಗ ಆಕೆಯನ್ನು ಕೇವಲ ಮಹಿಳೆ ಎಂದು ಭಾವಿಸಲು ಸಾಧ್ಯವಿಲ್ಲ. ಆಕೆ ತಾಯಿ! ಯಶೋದೆ ಎಂದರೆ ತಾಯಿ ಯಶೋದೆಯೇ. ಒಂದರ್ಥ ದಲ್ಲಿ ಯಶೋದೆ ಎಂದ ಮೇಲೆ ತಾಯಿ ಎಂದು ಬೇರೆ ಹೇಳ ಬೇಕಾ ಗಿಲ್ಲ? ಎಲ್ಲ ತಾಯಂದಿರೂ ತಾವು ಯಶೋದೆಯರೆಂದು ಭಾವಿಸುವ, ಎಲ್ಲ ಮಕ್ಕಳು ತಮ್ಮ ತಾಯಿ ಯಶೋದೆಯಂತೆ ಎಂದು ತಿಳಿಯುವ ಒಂದು ಬಗೆಯ ಆದರ್ಶ ವ್ಯಕ್ತಿತ್ವವದು. ಹಾಗೆ ನೋಡಿದರೆ ಪುರಾಣ ಕತೆಗಳೆಂದು ನಾವು ಭಾವಿಸುವ ಕತೆಗಳು ಯಾವುದೋ ಲೋಕದಲ್ಲಿ ನಡೆದದ್ದಲ್ಲ. ನಮ್ಮ ನಡುವೆಯೇ ಸಂಭವಿಸಿದ, ಸಂಭವಿಸುತ್ತಿರುವ ಘಟನೆಗಳವು. ಪುರಾಣ ಪಾತ್ರಗಳು ನಮ್ಮ-ನಿಮ್ಮಂತೆಯೇ ಬದುಕಿದವರು. ಅದಕ್ಕೆ ದೃಷ್ಟಾಂತವಾಗಿ ನಮ್ಮ ಮುಂದಿದ್ದಾರೆ ತಾಯಿ- ಮಗ ಯಶೋದೆ-ಕೃಷ್ಣರು.

ನಂದಗೋಕುಲವೆಂಬುದು ಭಾರತದ ಒಂದು ಅಪ್ಪಟ ಹಳ್ಳಿ. ಸುಗ್ರಾಮ! ಪಶುಸಂಗೋಪನೆ ಅಲ್ಲಿನ ಪ್ರಮುಖ ವೃತ್ತಿ. ಹಾಗಾಗಿ, ಅಲ್ಲಿಯ ಒಡೆಯನಿಗೆ “ಗೋ-ಪ’ನೆಂಬ ಉಪನಾಮ. ಅವನ ಪತ್ನಿ ಗೋಪಿ. ಯಶೋದೆ ಎಂಬವಳು ಗೋಪಿಯೇ. ಕನಕದಾಸರು ನೋಡು ನೋಡು ಗೋಪಿ ನಿನ್ನ ಮಗನ ಲೂಟಿಯ- ಎಂದು ಕಲ್ಯಾಣಿ ರಾಗದಲ್ಲಿ ಹಾಡಿದ್ದನ್ನು ಒಮ್ಮೆ ಸ್ಮರಿಸಿಕೊಳ್ಳಿ.

ನಂದಗೋಕುಲದ ಎಲ್ಲ ನಾರಿಯರು ಗೋಪಿಕೆಯರೇ. ಯಾವ ಗೋಪಿಕೆಗೂ ಕೃಷ್ಣನನ್ನು ಕಂಡರೆ ಆಗದು. ಅವನು ಬೆಣ್ಣೆ ಕದಿಯುತ್ತಾನೆ, ಮೊಸರು ತಿನ್ನುತ್ತಾನೆ, ತುಂಟಾಟ ಮಾಡುತ್ತಾನೆ ಎಂಬುದು ಅವರ ದೂರು. ಆದರೆ, ಕೊನೆಗೆ ಕೃಷ್ಣ “ಗೋಕುಲ ನಿರ್ಗಮನ’ಕ್ಕೆ ಸನ್ನಿಹಿತನಾದಾಗ ಎಲ್ಲಾ ಗೋಪಿಕೆಯರು ಅವನ ದಾರಿಗೆ ಅಡ್ಡಲಾಗಿ ಮಲಗಿ “ನಮ್ಮನ್ನು ತೊರೆದು ಹೋಗಬಾರದು’ ಎಂದು ಆಕ್ಷೇಪಿಸುತ್ತಾರೆ. “ಕೃಷ್ಣನಿಲ್ಲದೆ, ಕೃಷ್ಣನ ತುಂಟಾಟವಿಲ್ಲದೆ ಹೇಗೆ ಬದುಕಲಿ?’ ಎಂದು ಅವರು ವಿಲಪಿಸುತ್ತಾರೆ. ಕೃಷ್ಣನಿರುವಾಗಲೆಲ್ಲ ಅವನೊಂದಿಗೆ ಮುನಿಸಿಕೊಂಡವರು ಅವನು ತಮ್ಮನ್ನು ಬಿಟ್ಟುಹೋಗುತ್ತಾನೆ ಎನ್ನುವಾಗ ಸಂಕಟಪಡುವುದು ವಿಚಿತ್ರವಲ್ಲವೆ? ವಿಚಿತ್ರವೇನಲ್ಲ, ಎಲ್ಲರ ಬದುಕು ಹೀಗೆಯೇ.

ಪ್ರತಿ ಸ್ತ್ರೀಯಲ್ಲಿಯೂ ಅಂತಸ್ಥವಾಗಿರುವ ಸ್ಥಾಯಿಭಾವ “ತಾಯಿ’ ಯದ್ದೇ. ಎಲ್ಲ ಹೆಣ್ಣುಮಕ್ಕಳು ಒಂದು ದೃಷ್ಟಿಯಲ್ಲಿ ತಾಯಿಯಂದಿರೇ. ಅಜ್ಜಿಯೂ ತಾಯಿಯೇ. ತಾಯಿ ಹೇಗೂ ತಾಯಿಯೇ. ಹೆಂಡತಿಯೂ ತಾಯಿಯೇ. ಮಗಳು ಕೂಡ ತಾಯಿಯೇ. ಜನ್ಮಕೊಟ್ಟ ತಾಯಿಯ ಕುರಿತ ಉತ್ಕಟವಾದ ಹಂಬಲ ಗಂಡಸಿನಲ್ಲಿ ಅಭಿವ್ಯಕ್ತಗೊಳ್ಳುವುದು ಹೆಂಡತಿಯೊಂದಿಗಿನ ಪ್ರೀತಿಯಲ್ಲಿ. ಸಾಮಾನ್ಯವಾಗಿ ಉತ್ತಮ ದಾಂಪತ್ಯವೆಂದರೆ ಅಲ್ಲಿ ಯಾವಾಗಲೂ ಹೆಂಡತಿ ಬೈಯುತ್ತಿರ‌ಬೇಕು, ಗಂಡ ಸುಮ್ಮನೆ ಆಲಿಸುತ್ತಿರಬೇಕು. ಇದು ಒಂದು ರೀತಿಯಲ್ಲಿ ತಾಯಿಯ ಅಧಿಪತ್ಯ, ಮಗನ ಆಧೀನತೆ ಇದ್ದ ಹಾಗೆ. ಗಂಡಸರು ವೃದ್ಧರಾದ ಮೇಲಂತೂ ಅವರಿಗೆ ಗಂಡುಮಕ್ಕಳಿಗಿಂತ ಹೆಣ್ಣುಮಕ್ಕಳೇ ಆಸರೆ. ಮಗಳು ತಾಯಿಯಂತೆ ಗದರಿದಾಗ ಅದನ್ನು ಅನುಸರಿಸುವುದು ಕೂಡ ವಾರ್ಧಕ್ಯದ ಸಾರ್ಥಕತೆಯೇ.

ತಾಯ್ತನದ ಹರಹು ಬಹಳ ವಿಸ್ತಾರವಾದದ್ದು. ಯಶೋದೆಯಲ್ಲಿ ಅಂಥ ತಾಯ್ತನವಿತ್ತು. ಗುಡಿಯೊಂದರೊಳಗೆ ಯಶೋದೆಯ ಮೂರ್ತಿ ಪೂಜೆಗೊಳ್ಳುವಂತಿದ್ದರೆ, ಅದರ ಬಳಿ ಮಡಿವಂತಿಕೆಯ ಕಟ್ಟಳೆ ಇಲ್ಲ. ಭಯಪಡಬೇಕಾದ ಸಮಸ್ಯೆ ಇಲ್ಲ. ಕೃತಕವಾಗಿರಬೇಕಾದ ಬದ್ಧತೆ ಇಲ್ಲ. ಅಮ್ಮನ ಬಳಿಗೆ ಹೋಗುವಾಗ ಎಂಥ ತಯಾರಿ ಬೇಕು? ಎಂಥದೂ ಬೇಡ. ಬಾಗುವ ವಿನಯವೊಂದಿದ್ದರೆ ಸಾಕು.

ಯಶೋದೆ-ಕೃಷ್ಣರ ಕತೆಗಳು ಯಾರಿಗೆ ಇಷ್ಟವಿಲ್ಲ ಹೇಳಿ! ಕೇಳಿದಷ್ಟೂ ಮತ್ತೆ ಮತ್ತೆ ಕೇಳ್ಳೋಣ ಅಂತನ್ನಿಸುತ್ತದೆ. ಒಮ್ಮೆ ಕೃಷ್ಣ ಮಣ್ಣು ತಿಂದನಂತೆ… ಎಂಬ ಕತೆಯನ್ನು ಎಷ್ಟು ಸಲ ಕೇಳಲಿಲ್ಲ ಹೇಳಿ! ಎಲ್ಲರೂ ಶೈಶವಾವಸ್ಥೆಯಲ್ಲಿ ಮಣ್ಣು ತಿಂದವರೇ. ಯಾವುದನ್ನು ತಿನ್ನಬೇಕು, ಯಾವುದನ್ನು ವರ್ಜಿಸಬೇಕು ಎಂಬ ವಿವೇಕ ಇಲ್ಲದ ಮುಗ್ಧ ಮನಸ್ಸಿನ ದಿನಗಳವು. ಯಶೋದೆ ತಾಯಿ “ಬಾಯಿ ತೆರೆ’ ಎಂದು ಗದರಿಸಿದಳಂತೆ. ಕೃಷ್ಣ ಬಾಯಿ ತೆರೆದ. ಆತನ ಬಾಯಿಯೊಳಗೆ ಮೂರು ಲೋಕಗಳೂ ಕಾಣಿಸಿಕೊಂಡವು ಎಂಬುದು ಕತೆ. ಆದರೆ, ಮೂರು ಲೋಕದೊಳಗೆ ಯಶೋದೆಯೂ ಇದ್ದಳಾ ಎಂಬುದು ಪ್ರಶ್ನೆ! ಇಲ್ಲ, ಬಹುಶಃ ಇರಲಿಲ್ಲ.

ದೇವರು ಯಾವತ್ತೂ ದೊಡ್ಡವನೇ. ಆದರೆ, ತಾಯಿಯು ದೇವರಿಗಿಂತ ದೊಡ್ಡವಳು.

ಮತ್ತೂಮ್ಮೆ ಹೀಗಾಯಿತು. ದೇವರಿಗೆ ಒಂದು ಯೋಚನೆ ಬಂತು. ದೇವರೆಂದು ತನ್ನನ್ನು ತಿಳಿಯದೆ ಹಗೂರವಾಗಿ ಎತ್ತಿ ಆಡಿಸುವ ಯಶೋದಮ್ಮನನ್ನೇ ಚಕಿತಗೊಳಿಸಬೇಕು! ಅದಕ್ಕಾಗಿ ದೇವರು ಒಂದು ಹೂಟ ಹೂಡಿದ. ಗೋಪಿಕೆಯರು ಬಂದು ಎತ್ತಿಕೊಂಡಾಗ ಮಣಭಾರವಾದ. ಪುಟ್ಟ ಕೃಷ್ಣನನ್ನು ಎತ್ತಿಕೊಳ್ಳಲಾಗದೆ ಗೋಪಿಕೆಯರು ತಳಮಳಿಸಿದರು. ಕೃಷ್ಣ ಅಳುವನ್ನು ನಿಲ್ಲಿಸಲಿಲ್ಲ. ಎತ್ತಿಕೊಳ್ಳಲು ಸಾಧ್ಯವಿಲ್ಲ. ಗೋಪಿಕೆಯ ತಳಮಳವನ್ನು ನೋಡಿ ಯಶೋದೆ ಆಗಮಿಸಿದಳು. ಕೃಷ್ಣ ಜೋರಾಗಿ ಅಳುತ್ತಿದ್ದ. “ಕೃಷ್ಣ ಕಲ್ಲಿನಂತೆ ಭಾರವಾಗಿದ್ದಾನೆ. ಎತ್ತಿಕೊಳ್ಳಲಾಗದು ತಾಯೆ’ ಎಂದು ಗೋಪಿಕೆಯರು ದೂರಿತ್ತರು. ಕೃಷ್ಣ ಹೊರಗೆ ಅಳುತ್ತಿದ್ದರೂ ಒಳಗೊಳಗೆ ನಗುತ್ತಿದ್ದ. ಯಶೋದೆ ತನ್ನನ್ನು ಎತ್ತಿಕೊಳ್ಳಲು ಉದ್ಯುಕ್ತಳಾದಾಗ ಇನ್ನಷ್ಟು ಭಾರವಾಗಿ ಆಕೆಯನ್ನೂ ಕಂಗೆಡಿಸೋಣ ಎಂಬ ಹುನ್ನಾ ರ ಅವನದು.

ಆದರೆ, ತಾಯಿಯ ಮುಂದೆ ದೇವರ ಆಟವೂ ನಡೆಯಲಿಲ್ಲ. ಯಶೋದೆ ಬಂದವಳೇ, “ಯಾಕೊ ಅಳುತ್ತೀ ಪುಟ್ಟಾ , ಸುಮ್ಮನಿರಬಾರದೆ’ ಎನ್ನುತ್ತ ಕೃಷ್ಣನನ್ನು ಹೂವಿನಂತೆ ಎತ್ತಿಕೊಂಡಳು. ಗೋಪಿಕೆಯರಿಗೆಲ್ಲ ಆಶ್ಚರ್ಯ.
ಸ್ವತಃ ದೇವರೇ ಮಗುವಾಗಿ ಬಂದರೂ ತಾಯಿಗೆ ಅದು ಭಾರವಲ್ಲ.
ತಾಯಿಗೆ ಯಾವ ಮಕ್ಕಳೂ ಭಾರವಲ್ಲ. ಅಥವಾ ತಾಯಿಯ ಮುಂದೆ ಎಂಥ ಮಕ್ಕಳೂ ಹಗುರವೇ!  ಊರಿಗೆ ಅರಸನಾದರೂ ತಾಯಿಗೆ ಮಗ ಎನ್ನುತ್ತಾರಲ್ಲ , ಹಾಗೆ.

ಯಶೋದೆಯ ಬದುಕು ಎಂಬುದು ಒಂದು ತಣ್ತೀ ಇದ್ದ ಹಾಗೆ. ಅಂದರೆ, ಅದು ಡಾ. ಸರ್ವಪಳ್ಳಿ ರಾಧಾಕೃಷ್ಣನ್‌, ಡಾ. ಪಾಂಡುರಂಗ ವಾಮನ ಕಾಣೆ ಮುಂತಾದ ತಣ್ತೀಶಾಸ್ತ್ರಜ್ಞರ ಪುಸ್ತಕಗಳಲ್ಲಿ ಉಲ್ಲೇಖಗೊಳ್ಳಬಹುದಾದ ತಣ್ತೀಜ್ಞಾನವಲ್ಲ. ಸರಳವಾದ “ಅಮ್ಮನ’ ಬದುಕದು. ಸರಳ- ಹೇಳು ವು ದಕ್ಕೆ ಸರಳ. ಬದು ಕು ವುದು ಕಷ್ಟ. ಸರಳವಾದ ಬದುಕಿಗಿಂತ ಸಂಕೀರ್ಣವಾಗಿರುವ ಸಂಗತಿ ಬೇರುಂಟೆ?
ಮಕ್ಕಳಂತಿರುವ ನಮ್ಮನ್ನು ಯಶೋದಮ್ಮ ಕೈಹಿಡಿದು ನಡೆಸಲಿ.

ಎನ್‌. ವಿ. ಧಾತ್ರಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next