Advertisement

ತಿಂಗಳಾದ್ರೂ ಕರಗದ ಅಪ್ಪು ಅಭಿಮಾನಿಗಳ ಸಾಲು…

10:50 AM Nov 29, 2021 | Team Udayavani |

ಬೆಂಗಳೂರು: ಅಪ್ಪು ಅಗಲಿ ಇಂದಿಗೆ ಒಂದು ತಿಂಗಳು. ಕಳೆದ ಒಂದು ತಿಂಗಳಲ್ಲಿ ಬರೋಬ್ಬರಿ ನಾಲ್ಕು ಲಕ್ಷ ಮಂದಿ ಕಂಠೀರವ ಸ್ಟೂಡಿಯೋಗೆ ಆಗಮಿಸಿ ನಟ ಪುನೀತ್‌ ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಅ.29ರಂದು ನಿಧನರಾದ ನಟ ಪುನೀತ್‌ ರಾಜ್‌ ಕುಮಾರ್‌ ಅವರನ್ನು ಅ.31 ರಂದು ಕಂಠೀರವ ಸ್ಟುಡಿಯೋದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು.

Advertisement

ನ.3 ರಿಂದ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವ ಕಾಶ ಮಾಡಿಕೊಡಲಾಗಿತ್ತು. ಸೋಮವಾರಕ್ಕೆ ಪುನೀತ್‌ ಮೃತಪಟ್ಟು ಒಂದು ತಿಂಗಳಾಗುತ್ತಾ ಬಂದರೂ ಅವರ ಸಮಾಧಿ ದರ್ಶನಕ್ಕೆ ಆಗಮಿಸುತ್ತಿರುವ ಅಭಿಮಾನಿಗಳ ಸಂಖ್ಯೆ ಮಾತ್ರ ಕುಗ್ಗಿಲ್ಲ.

ಇಂದಿಗೂ ನಿತ್ಯ ಸಾವಿರಾರು ಅಭಿಮಾನಿಗಳು ದೂರದ ಊರುಗಳಿಂದ ಕಂಠೀರವ ಸ್ಟುಡಿಯೋಗೆ ಆಗಮಿಸಿ ಸರತಿಯಲ್ಲಿ ನಿಂತು ಸಮಾಧಿ ಕೈಮುಗಿದು, ಫೋಟೋ ಕ್ಲಿಕ್ಕಿಸಿಕೊಂಡು, ಕಣ್ಣೀರಿಟ್ಟು ಹೋಗುತ್ತಿದ್ದಾರೆ. ನಿತ್ಯ ಬೆಳಗ್ಗೆ 9 ಗಂಟೆಯಿಂದ ಸಂಜೆ 7 ಗಂಟೆವರೆಗೂ ಸಾರ್ವಜನಿಕರಿಗೆ ಸಮಾಧಿ ಸ್ಥಳ ಭೇಟಿಗೆ ಅವಕಾಶ ನೀಡಲಾಗಿದೆ. ಮಳೆ, ಚಳಿ ಎನ್ನದೇ ನಿರಂತರವಾಗಿ ಅಭಿ ಮಾನಿಗಳು ಆಗಮಿಸುತ್ತಿದ್ದಾರೆ.

ಸಾಮಾನ್ಯ ದಿನಗಳಲ್ಲಿ 6 ರಿಂದ 7 ಸಾವಿರ ಮಂದಿ, ರಜಾದಿನ, ವಾರಾಂತ್ಯದಲ್ಲಿ 20 ಸಾವಿರ ಮಂದಿ ಭೇಟಿ ನೀಡಿ ನೆಚ್ಚಿನ ನಾಯಕ ನಟನಿಗೆ ನಮನ ಸಲ್ಲಿಸುತ್ತಿದ್ದಾರೆ. ನಂದಿನಿ ಲೇಔಟ್‌ ಪೊಲೀಸ್‌ ಠಾಣೆ ಮಾಹಿತಿ ಪ್ರಕಾರ ಒಟ್ಟಾರೆ ನಾಲ್ಕು ಲಕ್ಷ ಮಂದಿ ಭೇಟಿ ನೀಡಿದ್ದಾರೆ.

ಕುಟುಂಬಸ್ಥರಿಂದ ನಿತ್ಯ ಭೇಟಿ: ಅಂತಿಮ ಸಂಸ್ಕಾರವಾದ ದಿನದಿಂದಲೂ ನಿತ್ಯ ರಾಜ್‌ ಕುಟುಂಬಸ್ಥರು ಪುನೀತ್‌ ಸಮಾಧಿಗೆ ಭೇಟಿ ನೀಡುತ್ತಿದ್ದಾರೆ. ಸಹೋ ದರ ನಟ ರಾಘವೇಂದ್ರ ರಾಜ್‌ಕುಮಾರ್‌ ನಿತ್ಯ ಒಮ್ಮೆ ಆಗಮಿಸಿ ಪೂಜೆ ಸಲ್ಲಿಸಿ, ಸ್ವಲ್ಪ ಹೊತ್ತು ಸಮಾಧಿ ಬಳಿ ಕುಳಿತು ಹೋಗುತ್ತಿದ್ದಾರೆ.

Advertisement

ಅಕ್ಕಂದಿರು, ಶಿವರಾಜ್‌ ಕುಮಾರ್‌, ಪತ್ನಿ ಅಶ್ವಿ‌ನಿ, ಮಗಳು, ಸೇರಿದಂತೆ ಕುಟುಂಬ ಸ್ಥರು ನಿತ್ಯ ತಪ್ಪದೇ ಬರುತ್ತಾರೆ ಎಂದು ಕಂಠೀರವ ಸ್ಟೂಡಿಯೋ ಸಹಾಯಕ ಸಿಬ್ಬಂದಿ ತಿಳಿಸಿದರು.

 ಉತ್ತರ ಕರ್ನಾಟಕದ ಅಭಿಮಾನಿಗಳೇ ಹೆಚ್ಚು: ಸಮಾಧಿ ಸ್ಥಳಕ್ಕೆ ಆಗಮಿಸುತ್ತಿರುವವರಲ್ಲಿ ಉತ್ತರ ಕರ್ನಾ ಟಕ ಜಿಲ್ಲೆಗಳ ಅಭಿಮಾನಗಳ ಸಂಖ್ಯೆಯೇ ಹೆಚ್ಚಿದೆ. ಬೀದರ್‌, ಬೆಳಗಾವಿ, ಧಾರವಾಡ-ಹುಬ್ಬಳ್ಳಿ, ಬಳ್ಳಾರಿ, ಕಲಬುರಗಿ, ವಿಜಯಪುರ, ಕೊಪ್ಪಳ, ರಾಯಚೂರು ಜಿಲ್ಲೆಗಳ ಗ್ರಾಮೀಣ ಭಾಗದಿಂದ ಅಭಿಮಾನಿ ಗಳು ತಂಡೋಪ ತಂಡವಾಗಿ ಲಾರಿ, ಕ್ರೂಸರ್‌, ಟಿಟಿ ವಾಹನ, ಬಸ್‌ -ರೈಲಿನಲ್ಲಿ ಆಗಮಿಸಿ ಪುನೀತ್‌ಗೆ ನಮನ ಸಲ್ಲಿಸುತ್ತಿದ್ದಾರೆ.

ಇದನ್ನೂ ಓದಿ:- ಕುಷ್ಟಗಿ: ಕಳಪೆ ಅಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ; ಶಾಸಕ ಪಾಟೀಲ ಭೇಟಿ

ದೂರದ ಊರಿನಿಂದ ಬಂದಿ ದೇವೆ ಎಂಬ ಕಾರಣಕ್ಕೆ ಎರಡು ಮೂರು ಬಾರಿ ಸರತಿ ಯಲ್ಲಿ ನಿಂತು ದರ್ಶನ ಪಡೆದು ಹೋಗುತ್ತಿದ್ದಾರೆ. ಅಲ್ಲದೆ, ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ದಿಂದಲೂ ಅಭಿಮಾನಿಗಳು, ಪುನೀತ್‌ ನಿಧನ ಸಂದರ್ಭ ದಲ್ಲಿ ವಿದೇಶದಲ್ಲಿದ್ದವರು ಕೂಡಾ ಭೇಟಿ ನೀಡುತ್ತಿದ್ದಾರೆ.

ಕುಟುಂಬ ಸಮೇತ ಆಗಮನ: ಕಣ್ಣೀರು: ಕೌಟುಂಬಿಕ ಚಿತ್ರಗಳಲ್ಲಿ ಹೆಚ್ಚು ನಟಿಸಿ ಮನಗೆದ್ದಿದ್ದ ಪುನೀತ್‌ ಅವರನ್ನು ವಂದಿಸಲು ಕುಟುಂಬ ಸಮೇತರಾಗಿ ಅಭಿಮಾನಿ ಗಳು ಆಗಮಿಸುತ್ತಿದ್ದಾರೆ. ಮಕ್ಕಳು, ಹಿರಿಯರು ಕೂಡಾ ಇಂದಿಗೂ ಸರತಿಯಲ್ಲಿ ನಿಂತು ಸಮಾಧಿ ದರ್ಶನ ಮಾಡುತ್ತಿದ್ದಾರೆ. ಪುನೀತ್‌ ನಟನೆ, ಅವರು ಮಾಡಿದ ಸಹಾಯಗಳನ್ನು ನೆನೆದು ಈಗಲೂ ಕಣ್ಣೀರು ಹಾಕುತ್ತಿದ್ದಾರೆ.

ಮಕ್ಕಳು ಸಮಾಧಿ ಬಳಿ ಇಟ್ಟಿರುವ ಪುನೀತ್‌ ಫೋಟೋ ನೋಡಿ ಅಪ್ಪು ಅಪ್ಪು ಎಂಬ ಕೂಗಿದರೇ, ವಯೋ ವೃದ್ಧರು ನಮ್ಮ ಆಯಸ್ಸನ್ನು ನಿನಗೆ ಕೊಡಬೇಕಿತ್ತು ಆ ದೇವರು ಎಂದು ಕಣ್ತುಂಬಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

 ಅಪ್ಪುವಿನ ನೆಚ್ಚಿನ ಖಾದ್ಯ ನೈವೇದ್ಯ

ಅಪ್ಪು ಆಹಾರ ಪ್ರಿಯರಾಗಿದ್ದರು. ಸದ್ಯ ಅವರ ಸಮಾಧಿ ಭೇಟಿಗೆ ಆಗಮಿಸುವವರು ತಮ್ಮ ಭಾಗದ ವಿಶೇಷ ಖಾದ್ಯವನ್ನು ತರುತ್ತಿದ್ದಾರೆ. ಈ ಹಿಂದೆ ಪುನೀತ್‌ ಭೇಟಿ ನೀಡಿದ್ದ ಹೋಟೆಲ್‌ಗ‌ಳ ಸಿಬ್ಬಂದಿ ಅಪ್ಪುವಿನ ನೆಚ್ಚಿನ ಆಹಾರವನ್ನು ತಂದು ನೈವೇದ್ಯ ಮಾಡುತ್ತಿದ್ದಾರೆ.

ಅಮೀನಘಡ ಕರದಂಟು, ಬೆಳಗಾವಿ ಕುಂದಾ, ಧಾರವಾಡ ಪೇಡ, ಬಿಜಾಪುರ ಜೋಳದ ರೊಟ್ಟಿ, ಮಲೆನಾಡಿನ ಅಕ್ಕಿ ಕಡುಬು ಹೀಗೆ ವಿವಿಧ ಭಾಗದ ವಿಶೇಷ ಆಹಾರ ತಂದು ನೀಡುತ್ತಾರೆ. ತಮ್ಮ ಊರಿನಿಂದಲೇ ಕೈಯಾರೆ ಸಿದ್ಧಪಡಿಸಿದ ಹೂ ಮಾಲೆಗಳನ್ನು ತಂದು ಸಮಾಧಿಗೆ ಹಾಕುತ್ತಾರೆ ಎಂದು ಕಂಠೀರವ ಸ್ಟುಡಿಯೊ ಸಹಾಯಕ ಸಿಬ್ಬಂದಿ ಲಲಿತಮ್ಮ ಹೇಳುತ್ತಾರೆ.

ವಿವಿಧ ಧರ್ಮೀಯರಿಂದ ಪ್ರಾರ್ಥನೆ

ಅಭಿಮಾನಿಗಳು ಧರ್ಮಸ್ಥಳ, ತಿರುಪತಿ, ಮಂತ್ರಾಲಯ, ನಂಜನಗೂಡು, ಚಾಮುಂಡಿಬೆಟ್ಟ ಹೀಗೆ ದೇವಸ್ಥಾನಗಳಿಗೆ ಭೇಟಿ ನೀಡಿ ಅಲ್ಲಿನ ಪ್ರಸಾದ ತಂದು ಪುನೀತ್‌ ಸಮಾಧಿ ಮುಂದಿಟ್ಟು ಪೂಜೆ ಸಲ್ಲಿಸುತ್ತಾರೆ. ಮುಸ್ಲಿಂ ಧರ್ಮದ ಕೆಲವರು ಬಂದು ಹೂ ನೀಡಿ ಪ್ರಾರ್ಥನೆ ಸಲ್ಲಿಸುತ್ತಾರೆ. ಕ್ರಿಶ್ಚಿಯನ್‌ ಧರ್ಮಿಯರು ಮೇಣದ ಭತ್ತಿ ಹಚ್ಚಿ ಪ್ರಾರ್ಥಿಸುತ್ತಾರೆ ಎಂದು ಪೊಲೀಸ್‌ ಸಿಬ್ಬಂದಿ ಮಾಹಿತಿ ನೀಡಿದರು.

ಮಾಡಿದ ಸಹಾಯ ನೆನೆದು ಕಣ್ಣೀರು

ಪುನೀತ್‌ ಹಲವಾರು ಜನರಿಗೆ ಗುಪ್ತವಾಗಿ ಸಹಾಯ ಮಾಡಿದ್ದಾರೆ. ಸಹಾಯ ಪಡೆದವರು ಸದ್ಯ ಸಮಾಧಿಗೆ ಭೇಟಿ ನೀಡಿ ಪುನೀತ್‌ ಮಾಡಿದ ಸಹಾಯ ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಪಡೆದವರು, ಶಸ್ತ್ರಚಿಕಿತ್ಸೆ, ಅನಾರೋಗ್ಯ ಸಂದರ್ಭದಲ್ಲಿ ಧನ ಸಹಾಯ ಪಡೆದವರು, ಉದ್ಯೋಗ ಪಡೆದುಕೊಂಡವರು, ಉದ್ಯಮಕ್ಕೆ ಹಣಕಾಸು ನೆರವು ಪಡೆದವರು, ಸಂಕಷ್ಟದಲ್ಲಿದ್ದಾಗ ಅವಕಾಶ ಪಡೆದ ಕಲಾವಿದರ ಸಂಖ್ಯೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next