Advertisement
“ನಿಮಗೊಂದು ಗುಟ್ಟು ಹೇಳುತ್ತೇನೆ. ನಿಮಗೆ ಸಂಶಯ/ಅಹಂಕಾರ ಬಂದಾಗ ಬಡವರು, ದುರ್ಬಲರನ್ನು ನೆನಪಿಸಿಕೊಳ್ಳಿ. ಅವರ ಬದುಕು ಸರಿಯಾಗಲು ನೀವು ಏನು ಮಾಡಿದ್ದೀರಿ? ಅವರ ಜೀವನ ಒಂದಿಷ್ಟು ಸುಧಾರಿಸಲು, ಅವರು ಕಷ್ಟಕಾಲ ದಲ್ಲಿದ್ದಾಗ ಚೇತರಿಸಿಕೊಳ್ಳಲು ನೀವೆಷ್ಟು ಕಳಕಳಿ ಪಟ್ಟಿದ್ದೀರಿ?’- ಇದು ಗಾಂಧೀಜಿ ಯವರ ಸಮಾಧಿ ಇರುವ ದಿಲ್ಲಿಯ ರಾಜ್‌ಘಾಟ್‌ನಲ್ಲಿ ಕೆತ್ತಲ್ಪಟ್ಟ ಅವರದೇ ಮಾತುಗಳು. ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಜಿ20 ಶೃಂಗ ಸಭೆಯಲ್ಲಿ ಭಾಗಿಯಾದ ರಾಷ್ಟ್ರ ನಾಯಕರ ಸಹಿತ 1948ರಿಂದ ಇದುವರೆಗೆ ವಿಶ್ವದ ವಿವಿಧ ದೇಶಗಳನ್ನಾಳಿದ ನಾಯಕರಲ್ಲಿ ಎಷ್ಟು ಮಂದಿ ಇಲ್ಲಿಗೆ ಭೇಟಿ ನೀಡಿರಬಹುದು? ಎಷ್ಟು ಮಂದಿ ಇದನ್ನು ಓದಿರಬಹುದು? ಓದಿ ಆತ್ಮಶೋಧನೆ ಮಾಡಿಕೊಂಡಿದ್ದಾರೆಯೆ?
Related Articles
Advertisement
“ಗಾಂಧೀಜಿ ನಾಡಿನಲ್ಲಿ ಬಡತನ ಇನ್ನೂ ಇದೆ. ಉಳ್ಳವರು ಮತ್ತು ಇಲ್ಲದವರ ನಡುವೆ ಅಂತರ ಜಾಸ್ತಿಯಾಗುತ್ತಿದೆ’ ಎಂದು ಸ್ವಾತಂತ್ರ್ಯಪೂರ್ವದಲ್ಲಿ ಗಾಂಧೀಜಿ ಮತ್ತು ಕಾಂಗ್ರೆಸ್ ಚಟುವಟಿಕೆಗಳಲ್ಲಿ ಸಕ್ರಿಯವಿದ್ದ ತೋನ್ಸೆ ಪೈ ಕುಟುಂಬದ ಡಾ|ಟಿಎಂಎ ಪೈಯವರು ಆರಂಭಿಸಿದ ಗಾಂಧೀಜಿ ಹೆಸರು ಹೊತ್ತ ಉಡುಪಿ ಎಂಜಿಎಂ ಕಾಲೇಜಿನ ಅಮೃತಮಹೋತ್ಸವ ಉದ್ಘಾಟನ ಸಮಾರಂಭದಲ್ಲಿ ಬೆಂಗಳೂರಿನ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈ.ಲಿ. ಅಧ್ಯಕ್ಷ ಡಾ| ಸುದರ್ಶನ್ ಬಲ್ಲಾಳ್ ಇತ್ತೀಚೆಗೆ ಹೇಳಿದ್ದರು. ಗಾಂಧೀಜಿ ಅಂದು ಹೇಳಿದ್ದನ್ನು ಡಾ| ಬಲ್ಲಾಳರು ಇತ್ತೀಚೆಗೆ ಹೇಳಿದ್ದನ್ನು ಹತ್ತಿರ ಹತ್ತಿರ ಇರಿಸಿ ನೋಡಿದರೆ ನಮ್ಮ ನಡಿಗೆ ಎತ್ತ ಸಾಗಿದೆ? ಎತ್ತ ಸಾಗುತ್ತಿದೆ? ಎಂದು ಅರ್ಥ ಮಾಡಿಕೊಳ್ಳಬಹುದು. ಗಾಂಧೀಜಿಗೆ ಮಾತುಕೊಟ್ಟ ಬಾಲಕಿಯರು ಜೀವಿತದ ಕೊನೆಯವರೆಗೂ ತಮ್ಮ ಮಾತನ್ನು ಉಳಿಸಿಕೊಂಡರು. ಈಗ ನಾವೇನಾಗಿದ್ದೇವೆ? ಮದುವೆ ಮುಂಜಿಯಂತಹ ಕಾರ್ಯಕ್ರಮಗಳಲ್ಲಿ ದೊಡ್ಡಸ್ತಿಕೆ, ಉಡುಗೆ, ಆಭರಣಗಳ ಪೈಪೋಟಿಯಲ್ಲಿಯೇ ಕಾಲ ಕಳೆಯುತ್ತಿದ್ದೇವಲ್ಲ? ಈ ತೋರಿಕೆಯ ಪೈಪೋಟಿಗಾಗಿ ಸಾಲಗಾರರ ಸಂಖ್ಯೆ ಹೆಚ್ಚುತ್ತಿವೆ, ಮತ್ತಷ್ಟು ಬಡತನಕ್ಕೆ ಕಾರಣವಾಗುತ್ತಿದೆ. ತೋರಿಸುವುದು ಲಿಪ್‌ಸ್ಟಿಕ್ ನಗೆಗಡಲು ಮಾತ್ರ.
ಪ್ರಧಾನಮಂತ್ರಿ ಪಟ್ಟಕ್ಕೇರಿದ ಲಾಲ್‌ಬಹಾದ್ದೂರ್ ಶಾಸ್ತ್ರಿಗಳ ಮೂಲ ಹೆಸರು ಲಾಲ್ ಬಹಾದ್ದೂರ್ ವರ್ಮ. ಗಾಂಧೀಜಿ ಆರಂಭಿಸಿದ ರಾಷ್ಟ್ರೀಯ ಶಿಕ್ಷಣ ಉದ್ದೇಶದಿಂದ ಆರಂಭಿಸಿದ ಕಾಶೀ ವಿದ್ಯಾಪೀಠದಲ್ಲಿ (ಈಗ ಮಹಾತ್ಮಾ ಗಾಂಧೀ ಕಾಶೀ ವಿದ್ಯಾಪೀಠ ವಿ.ವಿ.) ಉತ್ತೀರ್ಣರಾದಾಗ ದೊರಕಿದ “ಶಾಸ್ತ್ರಿ’ ಪದವಿಯನ್ನು ತನ್ನ ಜಾತಿ ಸೂಚಕ ವರ್ಮ ಪದದ ಜಾಗದಲ್ಲಿ ಸೇರಿಸಿಕೊಂಡರು. ಅವರು ಜಾತಿ ಪಿಡುಗಿನಿಂದ ಹೊರಬರಲು ಈ ನಿರ್ಧಾರ ತಳೆದರೂ ನಮ್ಮ ಬುದ್ಧಿ ಮತ್ತೆ ಜಾತಿ ಕಡೆಗೇ ವಾಲಿ “ಶಾಸ್ತ್ರಿ’ ಶಬ್ದಕ್ಕೆ ಜಾತಿ ಹುಡುಕಿದರು, ಈಗಲೂ ತಪ್ಪಾಗಿಯೇ ಗ್ರಹಿಸುತ್ತಿದ್ದಾರೆ.ಅವರು ಗೃಹ ಸಚಿವರಾಗಿದ್ದಾಗ ಸ್ವಂತ ಗೃಹವಿಲ್ಲದ ಗೃಹ ಮಂತ್ರಿ ಎಂದು ತಮ್ಮನ್ನು ತಾವೇ ಲೇವಡಿ ಮಾಡಿಕೊಳ್ಳುತ್ತಿದ್ದರು. ಸಂಸತ್ ಸದಸ್ಯರಾಗಿದ್ದಾಗ ಸ್ವಂತ ವಾಹನವಿರಲಿಲ್ಲ. ಬಾಡಿಗೆ ವಾಹನದಲ್ಲಿ ಹೋಗುವಷ್ಟು ಆರ್ಥಿಕ ಶಕ್ತಿ ಇದ್ದಿರಲಿಲ್ಲ. ಹೀಗಾಗಿ ಮನೆಯಿಂದ ಸಂಸತ್ ಭವನಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಅವರು ರೈಲ್ವೇ ಸಚಿವರಾಗಿದ್ದಾಗ ಅಪಘಾತಕ್ಕೆ ಸಂಬಂಧಿಸಿ ರಾಜೀನಾಮೆ ನೀಡಿದ್ದು ಬಹುತೇಕರಿಗೆ ಗೊತ್ತು. ಆದರೆ ಇತರರಿಗೆ ಸಿಕ್ಕದ ಸೌಲಭ್ಯ ತನಗೂ ಬೇಡವೆಂದು ನಿರಾಕರಿಸಿದ್ದು ಬಹುತೇಕರಿಗೆ ಗೊತ್ತಿಲ್ಲ. ರೈಲ್ವೇ ಸಚಿವರು ಹೋದಲ್ಲಿ ವಿಶೇಷವಾಗಿ ಅಳವಡಿಸುವ ಎಸಿ ಬೋಗಿ ಯನ್ನು ನಿರಾಕರಿಸಿದ್ದರು. ಆದ್ದ ರಿಂದ ಅವರಿಗೆ ಮೊದಲ ದರ್ಜೆ ಬೋಗಿಯಲ್ಲಿ ಏರ್ಪಾ ಟು ಮಾಡಲಾಯಿತು. ಎಲ್ಲೇ ಹೋದರೂ ಆ ಬೋಗಿಯನ್ನು ಜೋಡಿಸುತ್ತಿದ್ದರು. ಒಂದು ದಿನ ಕಡುಬೇಸಗೆಯಲ್ಲಿ ಹೊರಗೆ ಸೆಕೆ, ಒಳಗೆ ತಣ್ಣಗಿದ್ದುದರಿಂದ ಆಪ್ತ ಕಾರ್ಯದರ್ಶಿ ಕೈಲಾಶ್ ಬಾಬು ಅವರನ್ನು
ಕೇಳಿದರು. ಬೋಗಿಯಲ್ಲಿ ಕೂಲರ್ ಅಳವಡಿಸಿದ್ದನ್ನು ಆತ ಹೇಳಿದ. ರೈಲಿನ ಇತರ ಪ್ರಯಾಣಿಕರಿಗೆ ಸೆಕೆಯಾಗುವುದಿಲ್ಲವೆ? ಸಾಮಾನ್ಯ ಜನರಿಗಿಲ್ಲದ ಸೌಲಭ್ಯ ತನಗೂ ಬೇಡವೆಂದು ಮುಂದಿನ ನಿಲ್ದಾಣ ಮಥುರಾದಲ್ಲಿ ಕೂಲರ್ ತೆಗೆಸಲು ಆದೇಶಿಸಿದರು. ಮುಂದಿನ ದಿನಗಳಲ್ಲಿ ಇಂತಹ ಸ್ಥಾನಗಳಲ್ಲಿ ಕುಳಿತವರು ಏನು ಮಾಡಿದರು ಎಂಬುದಕ್ಕೆ ಪ್ರತ್ಯೇಕ ಉದಾಹರಣೆ ಬೇಕಿಲ್ಲ. ಮಟಪಾಡಿ ಕುಮಾರಸ್ವಾಮಿ