Advertisement

ಮರೆಯದಿರಿ; ನಿಮ್ಮ ಮತವೇ ನಿರ್ಣಾಯಕವಾದೀತು

12:29 PM Apr 06, 2018 | Team Udayavani |

ಮಂಗಳೂರು: ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್‌ ಸಮಿತಿಯು ಜಿಲ್ಲೆಯ ಮತದಾರರಲ್ಲಿ ಮತ ಚಲಾವಣೆಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಕೆಲವೊಂದು ಕಾರ್ಯಕ್ರಮಗಳನ್ನು ಜಿಲ್ಲಾ ಸಮಿತಿಯ ಕಲ್ಪನೆಯಲ್ಲೇ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಶೇ. 80 ಪ್ಲಸ್‌ ಮತದಾನದ ಗುರಿಯನ್ನು ಸ್ವೀಪ್‌ ಹಾಕಿಕೊಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್‌ (ಸಿಸ್ಟಮೆಟಿಕ್‌ ವೋಟರ್ ಎಜುಕೇಶನ್‌ ಆ್ಯಂಡ್‌ ಇಲೆಕ್ಟೋರಲ್‌ ಪಾರ್ಟಿಸಿಪೇಶನ್‌) ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿರುವ ಡಾ| ಎಂ.ಆರ್‌. ರವಿ ಅವರು ವಿವರಿಸುತ್ತಾರೆ.

Advertisement

ಜಿಲ್ಲೆಯಲ್ಲಿ ಸ್ವೀಪ್‌ ಕಾರ್ಯಚರಣೆಯ ಕುರಿತು ಅವರು ‘ಉದಯವಾಣಿ’ ಜತೆ ತನ್ನ ಅಭಿಪ್ರಾಯ ಹಂಚಿಕೊಂಡರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಶಿಕ್ಷಿತರು ಹೆಚ್ಚಿದ್ದರೂ ಚುನಾವಣೆ ದಿನ ಮತ ಚಲಾಯಿಸುವುದಕ್ಕೆ ಮಾತ್ರ ಹಿಂದೇಟು ಹಾಕುತ್ತಿದ್ದಾರೆ. ಆದರೆ ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಸುಮಾರು ಶೇ. 2ರಷ್ಟು ವೃದ್ಧಿಯಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಶೇ. 80ಕ್ಕಿಂತ ಹೆಚ್ಚಿನ ಮತದಾನವಾಗುವ ವಿಶ್ವಾಸವಿದೆ.

‘ಒಳಗೊಳ್ಳುವ, ಸುಗಮ ಮತ್ತು ನೈತಿಕ ಚುನಾವಣೆ’ ಎಂಬುದು ಈ ಬಾರಿ ಆಯೋಗದ ಧ್ಯೇಯ ವಾಕ್ಯವಾಗಿದ್ದು, ಜಿಲ್ಲೆಯಲ್ಲಿ ‘ಬನ್ನಿ ಮತದಾನ ಕೇಂದ್ರಕ್ಕೆ’ ಎಂಬ ಕಲ್ಪನೆಯಲ್ಲಿ ಸ್ವೀಪ್‌ ಕಾರ್ಯಾಚರಿಸುತ್ತಿದೆ. ಆಯೋಗದ ನಿರ್ದೇಶನದಂತೆ ಕೆಲವೊಂದು ಟಾರ್ಗೆಟ್‌ ಗ್ರೂಪ್‌ ಗಳನ್ನು ತಲುಪುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.

ಸುಶಿಕ್ಷಿತರೇ ಹಿಂದೆ !
ಜಿಲ್ಲೆಯು ಶೇ. 88 ಸಾಕ್ಷರ ಜಿಲ್ಲೆಯಾಗಿದ್ದರೂ ಸುಮಾರು ಶೇ. 25ರಷ್ಟು ಮತದಾರರು ಚುನಾವಣೆ ಬಂದಾಗ ಸುಮ್ಮನಿದ್ದು ಬಿಡುತ್ತಾರೆ. ತಮ್ಮ ಹಕ್ಕಿನ ಚಾಲವಣೆಗೆ ಮುಂದೆ ಬರದಿರುವುದೇ ದೊಡ್ಡ ಸಮಸ್ಯೆ. 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ. 74.71 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಶೇ. 77.14 ಮತದಾನವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಶೇ. 64.71 ಮತದಾನವಾಗಿ ಜಿಲ್ಲೆಯಲ್ಲೇ ಕಡಿಮೆ ಮತದಾನವಾದ ಕ್ಷೇತ್ರವಾಗಿದೆ. ನಗರ ಪ್ರದೇಶದಲ್ಲಿ ಸುಶಿಕ್ಷಿತರೇ ಹೆಚ್ಚಿದ್ದರೂ ನಗರವಾಸಿಗಳು ಮತದಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ!

Advertisement

ವಿಭಿನ್ನ ಕಾರ್ಯ !
ಮತದಾರರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ‘ಜೀವ ಉಳಿಸಲು ರಕ್ತದಾನ, ದೇಶ ಉಳಿಸಲು ಮತದಾನ’ ಎಂಬ ಕಲ್ಪನೆಯಲ್ಲಿ ರಕ್ತದಾನ ಶಿಬಿರ ನಡೆಸಲಾಗಿದೆ. ಜತೆಗೆ ನಾನು ಮತ ಚಲಾಯಿಸುತ್ತೇನೆ ಎಂಬ ವಿಚಾರದ ಕುರಿತು ಬಹುಭಾಷಾ ಕವಿಗೋಷ್ಠಿ ಆಯೋಜಿಸಲಾಗಿದೆ. ಕರಾವಳಿಯ ಮೀನುಗಾರರಲ್ಲಿ ಮತ ಚಲಾವಣೆ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಎ. 8ರಂದು ಜಲಥಾನ್‌ ಎಂಬ ವಿನೂತನದ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

ಪೋಷಕರ ಸಂಕಲ್ಪ ಪತ್ರ
ಜಿಲ್ಲೆಯ 1,196 ಪ್ರೌಢಶಾಲೆಗಳಲ್ಲಿ ಮತದಾರರ ಸಾಕ್ಷರತಾ ಸಂಘ(ಇಎಲ್‌ಸಿ) ರಚಿಸಲಾಗಿದ್ದು, ಆ ಮೂಲಕ ಅಲ್ಲಿನ 8-9ನೇ ತರಗತಿಯ ಸುಮಾರು 68,000 ವಿದ್ಯಾರ್ಥಿಗಳಿಗೆ ಪೋಷಕರು ಸಹಿ ಹಾಕುವುದಕ್ಕೆ 1,36,000 ಸಂಕಲ್ಪ ಪತ್ರಗಳನ್ನು ವಿತರಿಸಲಾಗಿದೆ. ಇದರಲ್ಲಿ 98,881 ಸಂಕಲ್ಪ ಪತ್ರಗಳು ಈಗಾಗಲೇ ಸಹಿ ಮಾಡಿ ಹಿಂದೆ ಬಂದಿರುತ್ತವೆ.

ಕಾಲೇಜುಗಳಲ್ಲಿ ಮತದಾನದ ಜಾಗೃತಿಗಾಗಿ 40 ಪದವಿ ಕಾಲೇಜುಗಳಲ್ಲಿ 76 ಕ್ಯಾಂಪಸ್‌ ಅಂಬಾಸೆಡರ್‌ಗಳನ್ನು ಆಯ್ಕೆ ಮಾಡಲಾಗಿದೆ. ಮತಗಟ್ಟೆ ಜಾಗೃತಿ ತಂಡಗಳನ್ನೂ ನೇಮಿಸಲಾಗಿದೆ. ಬೇರೆ ಬೇರೆ ಇಲಾಖೆಗಳನ್ನೂ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ.

ಆಸ್ಪತ್ರೆಗಳ ರೋಗಿಗಳ ಸ್ಲಿಪ್‌ಗಳಲ್ಲಿ ಮತದಾನನ ಸ್ಲೋಗನ್‌ ಬರೆಯಲಾಗಿದೆ. ಈಗಾಗಲೇ 86,422 ಸ್ಲಿಪ್‌ ನೀಡಲಾಗಿದ್ದು, ಪ್ರತಿ ದಿನ ಸುಮಾರು 4,578 ಸ್ಲಿಪ್‌ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸುಮಾರು 510 ಸಹಕಾರ ಸಂಘಗಳಿದ್ದು, 6.5 ಲಕ್ಷ ಸದಸ್ಯರಿಗೆ ಕರಪತ್ರಗಳನ್ನು ವಿತರಿಸಲಾಗಿದೆ.

ಆಡಿಯೋ-ವಿಡಿಯೋ ಪ್ರಚಾರ
ಈಗಾಗಲೇ ಮಂಗಳೂರು ಆಕಾಶವಾಣಿಯಲ್ಲಿ ಚುನಾವಣಾ ಕರೆಯೋಲೆ ಎಂಬ ಫೋನ್‌-ಇನ್‌ ಕಾರ್ಯಕ್ರಮ ಆರಂಭಿಸಲಾಗಿದ್ದು, ಪ್ರತಿ ರವಿವಾರ ಇದು ಪ್ರಸಾರವಾಗುತ್ತಿದೆ.

ಜತೆಗೆ ಕರಾವಳಿಯ ಸೆಲೆಬ್ರಿಟಿಗಳಿಂದ ಆಡಿಯೋ ಜಿಂಗಲ್ಸ್‌ಗಳನ್ನೂ ರಚಿಸಲಾಗಿದೆ. ಡಾ| ವೀರೇಂದ್ರ ಹೆಗ್ಗಡೆ, ಡಾ| ಬಿ.ಎಂ. ಹೆಗ್ಡೆ, ಕುದ್ರೋಳಿ ಗಣೇಶ್‌, ನವೀನ್‌ ಡಿ. ಪಡೀಲ್‌, ದೇವದಾಸ್‌ ಕಾಪಿಕಾಡ್‌, ಸಾರಾ ಅಬೂಬಕ್ಕರ್‌, ಲಲಿತಾ ರೈ, ಪಟ್ಲ ಸತೀಶ್‌ ಶೆಟ್ಟಿ ಅವರು ಸಂದೇಶ ನೀಡಿದ್ದಾರೆ. ಜತೆಗೆ ಕಿರುಚಿತ್ರಗಳನ್ನೂ ನಿರ್ಮಿಸಲಾಗಿದ್ದು, ಆಯೋಗದ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

ಅಭಿವೃದ್ಧಿಯ ಪಾಲುದಾರರಾಗಿ
ಮತ ಚಲಾವಣೆ ಎಂಬುದು ನಮ್ಮ ಭಾರತೀಯತೆಯ ಪ್ರಶ್ನೆಯಾಗಿದ್ದು, ನನ್ನೊಬ್ಬನ ಮತದಿಂದ ಏನೂ ಆಗಲಾರದು ಎಂಬ ಧೋರಣೆ ಬದಲಾಗಬೇಕು. ‘ನನ್ನ ಸರಕಾರದ ಆಯ್ಕೆ ನನ್ನದು’ ಎಂಬ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೂಡ ಮೇ 12ರಂದು ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಯ ಪಾಲುದಾರರಾಗಬೇಕು. ಓಟು ಎನ್ನುವುದು ಪ್ರಜೆಗಳ ಪ್ರಬಲ ಅಸ್ತ್ರವಾಗಿದ್ದು, ಅದನ್ನು ಚಲಾಯಿಸುವ ಮೂಲಕ ಸೂಕ್ತ ಸರಕಾರ ರಚನೆಗೆ ನೆರವಾಗಬೇಕು ಎಂದು ಡಾ| ಎಂ.ಆರ್‌. ರವಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಆಯೋಗದ ಮಾನವೀಯ ನಡೆ
ದೇಶದ 18 ವರ್ಷ ದಾಟಿದ ಎಲ್ಲಾ ವರ್ಗದ ಪ್ರಜೆಗಳೂ ಮತದಾನಕ್ಕೆ ಅರ್ಹರು ಎಂಬ ನಿಟ್ಟಿನಲ್ಲಿ ಅಂಗವಿಕಲರು, ಹಿರಿಯ ನಾಗರಿಕರ ಜತೆಗೆ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಮತದಾನಕ್ಕೆ ಆಯೋಗವು ಕೆಲವೊಂದು ಮಾನವೀಯ ನಡೆಗಳನ್ನು ಕೈಗೊಂಡಿದೆ. ಇವರಿಗೆ ಮತದಾನ ಕೇಂದ್ರಕ್ಕೆ ಬರಲು ಸಹಾಯಕವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿರುವ ಒಟ್ಟು 1878 ಮತಗಟ್ಟೆಗಳಲ್ಲಿ 10911 ಅಂಗವಿಕಲ ಮತದಾರರನ್ನು ಗುರುತಿಸಲಾಗಿದೆ. ಇವರಲ್ಲಿ 5756 ಮಂದಿ ದೈಹಿಕ ಅಂಗವಿಕಲರು, 829 ಮಂದಿ ಅಂಧರು, 1006 ಕಿವುಡರು ಹಾಗೂ 3320 ಇತರೆ ಅಂಗವಿಕಲರು ಇದ್ದಾರೆ. ಇವರಲ್ಲಿ 554 ಮಂದಿಗೆ ಗಾಲಿಕುರ್ಚಿ, 1659 ಮಂದಿಗೆ ವಾಹನ, 588 ಮಂದಿಗೆ ಸಂಗಡಿಗರ ವ್ಯವಸ್ಥೆಯ ಅಗತ್ಯತೆಯ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರ ನೀಡಲಾಗಿದೆ.

ಜಿಲ್ಲೆಯಲ್ಲಿ ಸುಮಾರು 250 ಮಂದಿ ಲಿಂಗತ್ವ ಅಲ್ಪಸಂಖ್ಯಾಕರು ಕಂಡುಬಂದಿದ್ದು, ಅವರ ಸಂಘಟನೆಯವರು 178 ಮಂದಿಯ ಹೆಸರು ನೀಡಿದ್ದಾರೆ. ಈಗಾಗಲೇ ಅವರ ಎರಡು ಸುತ್ತಿನ ಸಭೆ ನಡೆಸಲಾಗಿದೆ. ಈಗಾಗಲೇ ಸುಮಾರು 70 ಮಂದಿ ಲಿಂಗತ್ವ ಅಲ್ಪಸಂಖ್ಯಾಕರು ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರು ಇದೇ ಮೊದಲ ಬಾರಿಗೆ ಮತದಾನ ಮಾಡುತ್ತಿದ್ದು, ಇದು ಆರೋಗ್ಯಕರ ಬೆಳವಣಿಗೆ ಎನಿಸಿಕೊಂಡಿದೆ. 

 ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next