Advertisement

ಸುಗ್ಗಿ ಅಂಗಳದಿಂದ ನೆನಪು ಹೆಕ್ಕಿ –ಹಕ್ಕಿ

03:50 AM Mar 19, 2017 | |

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಕುಮಟಾ, ಅಂಕೋಲಾ ಕಡೆ ವಿಶಿಷ್ಟವಾಗಿ ಆಚರಿಸುವ ಸುಗ್ಗಿ ಹಬ್ಬಕ್ಕೆ ಮನಸೋಲದವರು ಯಾರೂ ಇಲ್ಲ. ಸುಗ್ಗಿ ಕುಣಿತದ ಜೊತೆಗೆ ಈ ಹಬ್ಬದ ವಿಶೇಷ ಆಕರ್ಷಣೆ ಕರಡಿ ವೇಷ. ಈ ಕರಡಿಗಳ ಮೋಹಕ್ಕೊಳಗಾಗಿ ವರ್ಷಪೂರ್ತಿ ದುಡ್ಡಿನ ಡಬ್ಬದಲಿ ಚಿಲ್ಲರೆ ಕೂಡಿಡುವ ಮತ್ತು ಆ ದುಡ್ಡನ್ನು ಕರಡಿ ವೇಷಧಾರಿಗಳು ತಮ್ಮ ಮನೆಗೆ ಬಂದಾಗ ನೀಡಬೇಕೆಂಬ ಹಂಬಲದ ಮಕ್ಕಳು, ದೊಡ್ಡವರು ಹಲವಾರು ಮಂದಿ. ಸುಗ್ಗಿ ಹಬ್ಬದ ತುರಾಯಿಗಳು ಪ್ರಮುಖ ಆಕರ್ಷಣೆಯಾಗಿ ಕಣ್‌ ಮನಕ್ಕೆ ಸುಗ್ಗಿಯ ಸೊಬಗು ಭರ್‌ಪೂರ್‌ ಸಿಗುವುದು ಖಂಡಿತ ವಾಸ್ತವದ ಸಂಗತಿ. ಈ ಬಾರಿ ಕೂಡ ಅಂಕೋಲಾ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಹಾಲಕ್ಕಿಗಳು, ಕೋಮಾರಪಂಥ ಸಮಾಜದವರು ಸೇರಿದಂತೆ ಅನೇಕರು ಸುಗ್ಗಿ ಆಚರಣೆಯಲ್ಲಿ ತಮ್ಮ ಸಂಪ್ರದಾಯ-ಸಂಸ್ಕೃತಿಯನ್ನು ಮೆರೆದಿದ್ದಾರೆ. ಈ ಆಚರಣೆ ಸುಗ್ಗಿ ಸಂಭ್ರಮ ಎಂದೆಲ್ಲ ಯೋಚಿಸುತ್ತಿದ್ದಾಗ ನೆನಪು ಕಳೆದ ವರ್ಷದ ಸುಗ್ಗಿ ವೈಭವದತ್ತ ಜಾರಿತು. ಊರಿನ ಮಿತ್ರರೊಬ್ಬರು “ಕಳೆದ ಬಾರಿ ಬೇಲೇಕೇರಿ ಊರಿನ ಸುಗ್ಗಿ ವಿಶೇಷವಾಗಿದೆ, ಎಲ್ಲರೂ ಸಾವಿರದ ಮೇಲೇ ಗೊಂಡೆಗಳಿರುವ ತುರಾಯಿ ಮಾಡಿದ್ದಾರೆ’ ಎಂದಾಗ ಅದನ್ನು ನೋಡಲೆಂದೇ ಊರಿಗೆ ಹೋಗಿದ್ದೆ. 

Advertisement

ಈಗಾಗಲೇ ಭಾರತೀಯ ನೌಕಾಸೇನೆಗಾಗಿ ನೆಲ ಕಳೆದುಕೊಂಡ ಅಂಕೋಲಾ ತಾಲೂಕಿನ ಭಾವಿಕೇರಿ ಗ್ರಾಮದ ಹಾಲಕ್ಕಿ ಒಕ್ಕಲಿಗರಿಗೆ ಅದೇ ತಾಲೂಕಿನ ಬೇಲೇಕೇರಿ ಗ್ರಾಮದಲ್ಲಿ ಪುನರ್ವಸತಿ ಕೇಂದ್ರದ ನೆಲೆ ಒದಗಿಸಿದ್ದಾರೆ.  ಸಧ್ಯ ಆ ಸ್ಥಳ ನಿರಾಶ್ರಿತರ ಕಾಲೋನಿ ಎಂದು ಹೆಸರು ಹೊತ್ತರೂ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಮೂಲನೆಲವಾಗಿ ಅದು ರೂಪಗೊಂಡಿದ್ದು ಇಲ್ಲಿನ ಹಾಲಕ್ಕಿಗಳ ಹಾಲಿನಂತಹ ಮನಸ್ಸಿನಿಂದ. ಹಾಲಕ್ಕಿ ಒಕ್ಕಲು ಉತ್ತರ ಕನ್ನಡ ಜಿಲ್ಲೆಯ ಅತಿ ದೊಡ್ಡ ಬುಡಕಟ್ಟು ಜಾತಿಗಳಲ್ಲೊಂದು. ತನ್ನ ಬುಡಕಟ್ಟು ಅಸಲುತನವನ್ನು ಇನ್ನುವರೆಗೆ ಉಳಿಸಿಕೊಂಡು ಬಂದು ಜಿಲ್ಲೆಯ ಬೇರೆ ಬೇರೆ ಭಾಗದಲ್ಲಿ ನೆಲೆಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಪುಟ್ಟ ಹಳ್ಳಿ ಬೇಲೇಕೇರಿಯಲ್ಲಿ ನಾಡವರು, ಕೋಮಾರಪಂತರು,  ಖಾರ್ವಿ (ಮೀನುಗಾರರು), ಮುಸ್ಲಿಂ ಕುಟುಂಬಗಳು ಪರಸ್ಪರ ಸೌಹಾರ್ದದಿಂದ ಬದುಕುತ್ತ ಒಬ್ಬರ ಸಂತೋಷದಲ್ಲಿ ಮತ್ತೂಬ್ಬರು ಮುಕ್ತವಾಗಿ ಪಾಲ್ಗೊಳ್ಳುತ್ತ, ಹಬ್ಬ ಹರಿದಿನಗಳಲ್ಲಿ ಭಾಗವಹಿಸುತ್ತ ಊರನ್ನು ಸಾಂಸ್ಕೃತಿಕವಾಗಿ ಸದಾ ಜೀವಂತ ತಾಣವಾಗಿಸಿದ್ದಾರೆ. ಪ್ರತಿಯೊಂದು ಸಂಪ್ರದಾಯಗಳ ಹಬ್ಬಗಳಿಗೆ ಇಲ್ಲಿ ಪರಸ್ಪರ ಗೌರವವಿದೆ,  ಪ್ರೀತಿಯಿದೆ,  ಸಹಕಾರವಿದೆ, ಜಾಗೃತ ನೆಲವಾಗಿಡುವ ಹಂಬಲವಿದೆ. 

ಇಂತಿಪ್ಪ ಈ ಹಳ್ಳಿಯಲ್ಲಿ ಹಾಲಕ್ಕಿಗಳ ಸುಗ್ಗಿಹಬ್ಬ ಬಲು ಜೋರಾಗಿಯೇ ನಡೆಯುತ್ತದೆ. ಜಿಲ್ಲೆಯ ಹಲವಾರು ಜಾತಿಯವರು ಸುಗ್ಗಿ  ಕೋಲಾಡುತ್ತಿದ್ದರೂ  ಈ ಕಲೆಯ ಗತ್ತುಗಾರಿಕೆ ದಕ್ಕಿದ್ದು ನಮ್ಮ ಹಾಲಕ್ಕಿಗಳಿಗೆ ಎಂಬ ಯೋಚನೆಯೊಂದಿಗೆ ನಿರಾಶ್ರಿತರ ಕಾಲೋನಿಗೆ ಕಾಲಿಟ್ಟಾಗ ನಡು ಮಧ್ಯಾಹ್ನದ ಹೊತ್ತು. ಇಡೀ ಕಾಲೊನಿಯಲ್ಲಿ ಕಾದ ಬಿಸಿಲು ಬೆಳದಿಂಗಳ ಹಾಗೆ ಹರಡಿದ ಭಾವ. ನಲಿವು ನವಿಲಾಗಿ ಕೋಲಾಡುತ್ತಿದ್ದ ಅನುಭವ. ಪ್ರತಿಯೊಬ್ಬರ ಮನೆಯಲ್ಲಿಯೂ ಖುಷಿಯ ಕೃಷಿ ಬೆಳೆದು ಫ‌ಸಲು ಕೈಗೆ ಬಂದಾಗಿತ್ತು. ಸುಗ್ಗಿಯ ತುರಾಯಿಗಳನ್ನೆಲ್ಲ ಇಟ್ಟ ಊರ ಗೌಡನ ಮನೆಯ ಅಂಗಳದಲ್ಲಿ ನಾನಿದ್ದಾಗ ಗುಮಟೆಯ ಸದ್ದಿನೊಂದಿಗೆ ತುಳಸಿ ಪೂಜೆ ಆರಂಭವಾಗಿತ್ತು. ಅಂಗಳದ ತುಂಬ ಹತ್ತು -ಹನ್ನೆರಡು ಸುಗ್ಗಿ ತುರಾಯಿಗಳು. ಈ ಸುಗ್ಗಿಯ ಶಿರೋಭೂಷಣ ತುರಾಯಿಯನ್ನು ಬಣ್ಣದ ಕಾಗದ, ಬೆಂಡು, ಬೇಗಡೆಗಳಿಂದ ಚೈತ್ರದ ಹೂ, ಹಣ್ಣುಗಳನ್ನು ಹೋಲುವಂತೆ ಅವುಗಳ ಮೇಲೆ ಹಕ್ಕಿಗಳು ಕುಳಿತಂತೆ ಕಾಣುವ ಹಾಗೆ ಮಾಡುತ್ತಾರೆ. ಪರಿಣತಿ ಸಾಧಿಸಿದ ಕಲಾವಿದರು ಸೊಂಟಕ್ಕೆ ಸೀರೆಯನ್ನು ಮೊಣಕಾಲಿನವರೆಗೆ ಬರುವಂತೆ ನೆರಿಗೆಯಾಗುಟ್ಟು ಕೆಂಪು, ಹಸಿರು ನಿಲುವಂಗಿ ಹಾಕಿ ಸೊಂಟಕ್ಕೆ ತುಂಡು ವಸ್ತ್ರ ಕಟ್ಟಿಕೊಂಡ ಸುಗ್ಗಿ ಮಕ್ಕಳು. ಕಾಲಿಗೆ ಕಟ್ಟುವ ಗೆಜ್ಜೆ, ಕಿತ್ತೂಗೆಯಲು ಬೇಗಡೆ ಸರ, ತಲೆಗೆ ಪಂಜಿ (ರುಮಾಲು) ಸುತ್ತಿ ತುರಾಯಿಯನ್ನು ತುಳಸಿ ಎದುರಿಟ್ಟು ಪೂಜಿಸಿ ಕಟ್ಟಿಕೊಳ್ಳುತ್ತಾರೆ.  ಬೆನ್ನಹಿಂದೆ ತುರಾಯಿಯಂತೆ ಕೆಳಗೆ ಬಣ್ಣದ ಕಾಗದ, ಬೇಗಡೆಯಿಂದ ತಯಾರಿಸಿದ ಉದ್ದ ಮಾಲೆಗಳನ್ನು ಇಳಿಬಿಡುತ್ತಾರೆ.

 ಕೈಲಿ ಕೋಲು ಹಿಡಿದು ನಿಂತ ಸುಗ್ಗಿ ಮಕ್ಕಳನ್ನು ನೋಡಿದರೆ ಬರುವ ವಸಂತನಿಗಾಗಿ ಹೂ ಅರಳಿಸಿ ನಿಂತ ಮರದ ಸೊಬಗು ಕಂಡಂತಾಗುತ್ತದೆ. ಸಸ್ಯ ಸಮೃದ್ಧಿಗಾಗಿಯೇ ತುರಾಯಿ ಕಟ್ಟಿಕೊಂಡು ಗಿಡಗಳಂತೆ ತೂಗಿ ಸೃಷ್ಟಿ ಆರಾಧಿಸುವ ರೀತಿಯನ್ನು ಸುಗ್ಗಿ ಆಚರಣೆಯಲ್ಲಿ ನಾವು  ಗಮನಿಸಬಹುದು. 

ಸುಗ್ಗಿ ಪೋಷಾಕು ತೊಟ್ಟ ಕಲಾವಿದರು ಸಮಾನಾಂತರ, ವರ್ತುಲ,  ಚೌಕಾಕಾರದಲ್ಲಿ ನಿಂತು ಹೊಕ್ಕಾಡಿ ಕೋಲಾಡುತ್ತಿದ್ದರೆ ಮನದಲ್ಲೊಂದು ಹೊಸ ಕವನ ಹುಟ್ಟಿದ ಸಂಭ್ರಮ.  ಗುಮಟೆಯ ಲಯಗತಿಗೆ ಅನುಗುಣವಾಗಿ ಜೋ ಹೋ ಹೋ,  ಸೋ ಹೋ ಹೋ, ದಯ್ಯೋ ದಯ್ಯೋ ಎಂದು ಹೊಯ್ಲು ಹಾಕುತ್ತ  ವಿವಿಧ ಭಂಗಿಯಲ್ಲಿ ಕುಣಿಯುತ್ತಿದ್ದರೆ ಎದೆಯಲ್ಲಿ ಹೃದಯರಾಗ ಮಿಡಿದು ಪ್ರಕೃತಿಯಿಡಿ ಜಂಗಮ ರೂಪಿನಲ್ಲಿ ನರ್ತಿಸಿದಂತಾಗುವುದು ಅಕ್ಷರಶಃ ನಿಜ. ಇದಕ್ಕೆ ಸಾಕ್ಷಿಯೆಂಬಂತೆ  ಉತ್ತರಕನ್ನಡ ಜಿಲ್ಲೆಯ ಚೌಪದಿ ಬ್ರಹ್ಮ ಡಾ.ದಿನಕರ ದೇಸಾಯಿಯವರು ಬರೆದ

Advertisement

ಒಂದು ಕಡೆ ಸಹ್ಯಾದ್ರಿ ಒಂದು ಕಡೆ ಕಡಲು
ನಡು ಮಧ್ಯದಲಿ ಅಡಿಕೆ ತೆಂಗುಗಳ ಮಡಿಲು
ಸಿರಿಗನ್ನಡದ ಚಪ್ಪರವೇ ನನ್ನ ಜಿಲ್ಲೆ
ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ.
ಎಂಬ ಪದವನ್ನು ಹಾಲಕ್ಕಿಗಳು ಕೋಲಾಟಕ್ಕೆ ಬಹಳಷ್ಟು ಬಾರಿ ಬಳಸಿಕೊಂಡದ್ದು ಇದೆ. ಅದು ಕೋಲಿಗೆ ಸರಿಹೊಂದುವ ಹಾಡೆಂದು ಅಂಗೀಕರಿಸಿದ್ದು ಇದೆ. ದೇಸಾಯಿಯವರು ಈ ಪದವು  ಜಿಲ್ಲೆಯ ಪ್ರಕೃತಿ ಸೊಬಗು ವಿವರಿಸುತ್ತದೆ. ಹಾಲಕ್ಕಿಗಳ ಈ ಸುಗ್ಗಿ ಕೋಲಿನ ಹಾಡುಗಳಲ್ಲಿ ಪ್ರಕೃತಿ ಹಾಸುಹೊಕ್ಕಿದೆ. ಶ್ರಮಜೀವಿಗಳಾದ ಹಾಲಕ್ಕಿಗಳನ್ನು ಪೊರೆಯುವ ತಾಯಿ ಪ್ರಕೃತಿಯಾಗಿದ್ದು ವಸಂತನನ್ನು ಸ್ವಾಗತಿಸುವ ವಸಂತೋತ್ಸವ ಈ ಸುಗ್ಗಿಹಬ್ಬ. ಸುಗ್ಗಿ ನಂತರ ಚಳಿಯಿಲ್ಲ. ತಮ್ಮ ಕುಣಿತದಲ್ಲಿ ಫ‌ಲ ಸಮೃದ್ಧಿಯಾಗುವುದೆಂದು ಬಗೆದ ಇವರು ಸುಗ್ಗಿ ಕಟ್ಟದ ಊರಲ್ಲಿ ಶುಭವಿಲ್ಲ ಎಂಬ ನಂಬಿಕೆ  ಇಟ್ಟವರು.

   ಈ ಸುಗ್ಗಿಯ ಮತ್ತೂಂದು ವಿಶೇಷವೆಂದರೆ ಊರ ಗೌಡನ ಅಣತಿಯಂತೆ ಎಲ್ಲ ವಿಧಿವಿಧಾನಗಳು ಸಾಗುತ್ತವೆ. ಗೌಡನ ಮಾತನ್ನು ಮರುಪ್ರಶ್ನಿಸದೇ ಪಾಲಿಸುವ ಮೂಲಕ ಗೌಡನಿಗೆ  ಮರ್ಯಾದೆ ಕೊಡಲಾಗುತ್ತದೆ. ಹೀಗಾಗಿ, ಭಿನ್ನಾಭಿಪ್ರಾಯವಿಲ್ಲದ ಒಟ್ಟಂದ ಸುಗ್ಗಿಯಲಿ ಎದ್ದು ಕಾಣುತ್ತದೆ. ಗೌಡನ ಮನೆಯಲ್ಲಿ ಕುಣಿದಾದ ಮೇಲೆ ಊರಿನ ಎಲ್ಲರ ಮನೆಯಂಗಳದಲ್ಲಿ ಸುಗ್ಗಿ ಕುಣಿವಾಗ ಅನ್ಯ ಜಾತಿ ಎಂಬ ಪದವನ್ನು ಮೀರಿ ನಿಲ್ಲುತ್ತದೆ ಈ ಕುಣಿತ.  ಇಡೀ ಊರನ್ನು ಸಾಂಸ್ಕೃತಿಕವಾಗಿ ಬೆಸೆಯುವ ತುಡಿತ ಈ ಕುಣಿತಕ್ಕಿದೆ. ಕುಣಿತ ಮುಗಿದ ಮೇಲೆ ಪ್ರತಿ ಮನೆಯವರು ಕಲಾವಿದರ ಮುಖಂಡನಿಗೆ ಆರತಿ ಎತ್ತಿ ಕಾಣಿಕೆ ನೀಡುವಲ್ಲಿ ಪರಸ್ಪರ ಗೌರವ ಭಾವನೆ, ಅದಕ್ಕೆ ಪ್ರತಿಯಾಗಿ ಅವರ ಕುಟುಂಬಕ್ಕೆ ಶುಭ ಕೋರುವ ಕಮಿ ಯವರ (ಸುಗ್ಗಿ ಕುಣಿತದ ಸಂಪ್ರದಾಯದ, ಪರಂಪರೆಯಿಂದ ಬಂದ ಪದ ಹಾಡುವ ಜನಪದ ಕವಿಗಳು) ನಿರ್ಮಲ ಮನಸ್ಸಿನ ಹಾರೈಕೆ, ತಾವು ಸಂಗ್ರಹಿಸಿದ ಕಾಣಿಕೆಯನ್ನು ತಮ್ಮಲ್ಲಿ ಪಾಲು ಹಂಚಿಕೊಳ್ಳದೆ ಒಟ್ಟುಗೂಡಿದ ಹಣ ಊರ ದೇವಸ್ಥಾನದ ಅಭಿವೃದ್ಧಿಗೆ ಮೀಸಲಿಡುವ ಪದ್ಧತಿಯಲ್ಲಿನ ಅವರ ಔದಾರ್ಯ, ಸಂಪ್ರದಾಯದಂತೆ ಸುಗ್ಗಿ ಧರಿಸಿದಾಗಿನಿಂದ (ಫಾಲ್ಗುಣ ಶುದ್ಧ ದಶಮಿಯಿಂದ ಹುಣ್ಣಿಮೆಯವರೆಗೆ)  ಕಲಾವಿದರು ತಮ್ಮ ಮನೆ ಬಿಟ್ಟು ನೆರೆಯವರ ಮನೆಯಲ್ಲಿ ಉಂಡು ಜಗತ್ತಿಗೆ ಪರಸ್ಪರರಲ್ಲಿರುವ ನಂಬಿಕೆ ವಿಶ್ವಾಸ ಸಾರುವ ಗುಣ,  ಸುಗ್ಗಿಯ ತುರಾಯಿ ತಯಾರಿಸುವಾಗ ಮನೆ ಮಂದಿಯೆನ್ನದೆ ಇಡಿ ಊರಿಗೆ ಊರೇ ಸಹಕಾರ ನೀಡುವ ಬಗೆ,  ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲದಿದ್ದರೂ ಸಹಾಯ ಮಾಡುತ್ತ ಸುಗ್ಗಿಯ ಸೊಬಗು ಹೆಚ್ಚಿಸಲು ಪ್ರಯತ್ನಿಸುವ ಹಾಲಕ್ಕಿಗಳ ಮಾನವೀಯ ಅಂತಃಕರಣ, ಇಡೀ ಕಾಲೋನಿ ಒಂದು ಮನೆಯಾಗಿ ವಿಶ್ವವಾಗಿ ಕಂಡು ಏಕಮೇವ ಜಯತೆ ಎಂದೆನಿಸಿ ಪುಳಕಿತಳಾಗಿ ಮಾತೆ ಹೊರಳದೆ  ಮೌನವಾದ ನನ್ನ ಮುಖದಲ್ಲಿ ಖುಷಿ  ನೆಮ್ಮದಿಯ ಗೆರೆಗಳು ಕೋಲಾಡುತ್ತಿದ್ದವು. ಅಂಗಳದ ತುರಾಯಿಗಳ ನಡುವೆ ಸುಮ್ಮನೆ ಕುಳಿತೆ. ನನ್ನ ಚಿಕ್ಕಂದಿನಿಂದ ನೋಡುತ್ತಲಿದ್ದ ದೇವು ಗೌಡ ಹಗೂರ ಹತ್ತಿರ ಬಂದು, “”ಕೂಚೆ,  ನಿಂಗೂಂದ ಗನಾ ಪ್ರಸ್ನೆ . ಉತ್ರಾ ಕೊಡ್‌ ನೋಡ್ವಾ. ಈ ಗೊಂಡೆಲಿ ಏನ್‌ ವಿಸೇಸಾ” ಎಂದು ಜಾಣ್ಮೆಯ ಪ್ರಶ್ನೆ ಮುಂದಿಟ್ಟಾಗ ನಾನು ಬೊದ್ದಿಯಾಗಿದ್ದೆ. ನಿಜ, ಬೇಲೇಕೇರಿ ಕಲಾವಿದರು ತಾವು ನಿರ್ಮಿಸಿದ ತುರಾಯಿಗಳಿಗೆ ಅಂಗಡಿಯ ಬೇಗಡೆ ಹೆಚ್ಚು ಬಳಸದೇ ಕಡಿಮೆ ಖರ್ಚಿನಲ್ಲಿ ಮಳೆಗಾಲದಲ್ಲಿ ಗದ್ದೆ ಹಾಳೆಯಲಿ ಹುಲುಸಾಗಿ ಬೆಳೆದ ವಿವಿಧ ಕಳೆ ಹುಲ್ಲುಗಳ ಕದಿರು ಸಂಗ್ರಹಿಸಿ ಒಣಗಿಸಿ ಅದಕ್ಕೆ ಸಿಲ್ವರ್‌ ಪೇಂಟ್‌ ಬಡಿದು ಆಕರ್ಷಕ ಗೊಂಡೆ ತಯಾರಿಸಿದ್ದನ್ನು ನೋಡಿದಾಗ ಈ ಕಲೆಗೆ ಬೆಲೆಯಿಲ್ಲ ಎನ್ನಿಸದೇ ಇರಲಿಲ್ಲ. ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಾ ಸುಕ್ರು ಗೌಡ, “”ಗೊಂಡೆ ನಾಮ್‌ ಮಾಡ್ಕೊಳ್ಳೂಕೆ ಹೋಗಿ ಕಮ್ಮಿ ದುಡ್ಡಾತು. ಬ್ಯಾರೋರಿಗೆ ಕೊಟ್ರೆ ಆರ್‌ ಏಳ್‌ ಶಾವ್ರಾ ಆತಿತ್‌” ಎನ್ನುವಾಗ ಕಲಾಕೃತಿಯ ವೈಭವದ ಜೊತೆಗೆ ತುರಾಯಿ ರಚಿಸುವಾಗಿನ ಆರ್ಥಿಕ ಸಮಸ್ಯೆಯ ಆತಂಕವೂ ಕಣ್ಣಿಗೆ ಕಟ್ಟಿತು. ಜೊತೆಗೆ ಗುಮಟೆ,  ದ್ಯೆಮ್ಟೆ,  ತಾಳ,  ಸನ್ನೆಕೋಲು,  ನಾಗಸ್ವರ ಬಳಸಿ ನಿರಂತರ ಸುಗ್ಗಿ ಪದ ಹಾಡುವ,  ತಪ್ಪಿಲ್ಲದೆ ಕೋಲು ಕುಣಿಸುತ್ತ ಸಾಗುವ ಬಹುತೇಕ ಕಲಾವಿದರು ನವಯುವಕರು ಎಂದು ಗಮನಿಸಿದಾಗ ನಮ್ಮ ಸಂಸ್ಕƒತಿಯ ಹೊಸ ಬೇರುಗಳು ಇನ್ನೂ ಹೆಚ್ಚು ಗಟ್ಟಿಯಾಗುತ್ತಲೇ ಇದೆ ಎಂಬ ನಂಬಿಕೆಯನ್ನು ಹುಟ್ಟಿಸಿದಂತೂ ನಿಜ. 

ಕಂಚೀನ ಗುಡುಗುಡಿ ಮಿಂಚೀನ ಮಲಗಂಬ
ಹಸುರು ತಂಬಾಕೊಂದು ಹದಮಾಡಿ ಕೋಲೆ
ಹಸುರು ತಂಬಾಕೊಂದು ಹದಮಾಡಿ ಕೊಡುವ 
ಏ ನನ್ನ ಗೆಣಿಯಾ ಬಾರೋ ನಮ್ಮನಿಗೆ ಕೋಲೆ

ಅಕ್ಷತಾ ಕೃಷ್ಣಮೂರ್ತಿ

Advertisement

Udayavani is now on Telegram. Click here to join our channel and stay updated with the latest news.

Next