Advertisement

ಮನೆ ಮನೆಗಳಲ್ಲಿ ಹಾರಿಸಿದ ತ್ರಿವರ್ಣ ಧ್ವಜ ಇಳಿಸುವ ಮುನ್ನ ಈ ಅಂಶಗಳನ್ನು ನೆನಪಿಡಿ

11:10 AM Aug 15, 2022 | Team Udayavani |

ಮಣಿಪಾಲ: 75 ವಸಂತಗಳ ಸಂಭ್ರಮದಲ್ಲಿರುವ ಭಾರತದಲ್ಲಿ ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಲಾಗುತ್ತಿದೆ. ಹರ್ ಘರ್ ತಿರಂಗ ಅಭಿಯಾನದಡಿ ದೇಶದ ಸುಮಾರು 20 ಕೋಟಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿದೆ.

Advertisement

ಆ.13ರ ಬೆಳಗ್ಗೆ ಆರಂಭವಾದ ಹರ್ ಘರ್ ತಿರಂಗ ಅಭಿಯಾನದಂತೆ ಇಂದು (ಆ.15) ಸಂಜೆ ಮನೆಗಳಲ್ಲಿ ಹಾರಿಸಿದ ಧ್ವಜವನ್ನು ಇಳಿಸಬೇಕಿದೆ. ಆದರೆ ರಾಷ್ಟ್ರಧ್ವಜದ ಗೌರವಕ್ಕೆ ಚ್ಯುತಿ ಬಾರದಂತೆ ಹಲವು ಅಂಶಗಳನ್ನು ಗಮನಿಸಬೇಕಿದೆ.

ಧ್ವಜ ಮಡಚುವುದು ಹೇಗೆ?

ಧ್ವಜವನ್ನು ಸ್ವಚ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾ ಕಾರಾದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ.

ಎಲ್ಲೆಂದರಲ್ಲಿ ಎಸೆಯಬೇಡಿ

Advertisement

ಹಾರಿಸಿದಷ್ಟೇ ಗೌರವಯುತವಾಗಿ ಅದನ್ನು ಸಂರಕ್ಷಿಸುವುದೂ ಮುಖ್ಯ. ಮಡಚಿರುವ ಧ್ವಜವನ್ನು ಒಂದೇ ಕೈನಲ್ಲಿ ಹೇಗಾದರೂ ಹಾಗೆ ಹಿಡಿದುಕೊಳ್ಳುವಂತಿಲ್ಲ. ಗೌರವಪೂರ್ವಕವಾಗಿ ಧ್ವಜವನ್ನು ಎರಡೂ ಅಂಗೈಗಳ ಮೇಲೆ ಇಟ್ಟುಕೊಳ್ಳಬೇಕು. ಅದನ್ನು ನಿಮ್ಮ ಮನೆಯ ಭದ್ರ ಸ್ಥಳದಲ್ಲಿ ಇಡಬೇಕು. ಧ್ವಜದ ಗೌರವಕ್ಕೆ ಧಕ್ಕೆಯಾಗುವಂತಹ ಸ್ಥಳದಲ್ಲಿ ಅದನ್ನು ಇರಿಸುವಂತಿಲ್ಲ. ಇಷ್ಟ ಬಂದಾಗಲೆಲ್ಲಅದನ್ನು ಹೊರತೆಗೆದು ಬಳಕೆ ಮಾಡುವಂತೆಯೂ ಇಲ್ಲ.

ಇದನ್ನೂ ಓದಿ:ಕಡಬ: ಧ್ವಜಾರೋಹಣದ ವೇಳೆ ಕುಸಿದು ಬಿದ್ದ ನಿವೃತ್ತ ಸೈನಿಕ ಮೃತ್ಯು

ಹರಿದರೆ ಏನು ಮಾಡಬೇಕು?

ಒಂದು ವೇಳೆ ಧ್ವಜವು ಹರಿದರೆ ಅಥವಾ ಬಳಸಲಾರದ ಸ್ಥಿತಿಗೆ ಬಂದರೆ, ಅದನ್ನು ಖಾಸಗಿಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು. ಹಾಗೆಯೇ ವಿಶೇಷ ದಿನಗಳಂದು (ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ) ಪೇಪರ್‌ ಧ್ವಜಗಳನ್ನು ಬಳಸಬಹುದು. ಅವುಗಳನ್ನೂ ಕೂಡ ಅಷ್ಟೇ ಗೌರವಯುತವಾಗಿ ಖಾಸಗಿಯಾಗಿ ಸುಟ್ಟು ಹಾಕಬೇಕು.

ಶಿಕ್ಷೆಯಿದೆ

ತ್ರಿವರ್ಣ ಧ್ವಜವನ್ನು ಅವಮಾನಿಸಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು. ಇದಕ್ಕಾಗಿ, ಪ್ರಿವೆನ್ಶನ್ ಆಫ್ ಇನ್ಸಲ್ಟ್ ಟು ನ್ಯಾಶನಲ್ ಪ್ರೈಡ್ ಆಕ್ಟ್ 1971 ರ ಸೆಕ್ಷನ್ 2 ರಲ್ಲಿ ನಿಬಂಧನೆಯನ್ನು ಮಾಡಲಾಗಿದೆ. ಇದರ ಅಡಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತ್ರಿವರ್ಣ ಧ್ವಜ ಮತ್ತು ಸಂವಿಧಾನವನ್ನು ಸುಡುವುದು, ಪುಡಿ ಮಾಡುವುದು, ಹರಿದು ಹಾಕುವುದು ಅಥವಾ ಹಾನಿ ಮಾಡುವುದು ಅಪರಾಧವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next