ರಾಯಚೂರು: ಸಿದ್ಧರಾಮಯ್ಯನವರ ಕಾಲದಲ್ಲಿ ಕಾಲದಲ್ಲಿ 34 ಕೊಲೆಗಳಾಯ್ತು. ಉದ್ದೇಶಿತ, ಧಾರ್ಮಿಕ, ಮತೀಯ ಕೊಲೆಗಳಾದವು. ಹೀಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರ ಎರಡನ್ನೂ ನೀವು ಹೋಲಿಕೆ ಮಾಡಿ ನೋಡಿ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಮಂತ್ರಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಅಂದು ಅವರು ಟಿಪ್ಪು ಜಯಂತಿಯನ್ನು ಉದ್ದೇಶಪೂರ್ವಕವಾಗಿ ಮಾಡಿಸಿ ರಾಜ್ಯದಲ್ಲಿ ರಕ್ತ ಹರಿಸಿದರು. ಎರಡು ಜನ ಗೃಹ ಸಚಿವರುಗಳು ಡಮ್ಮಿಯಾಗಿದ್ದರು. ಕೆಂಪಯ್ಯನವರ ಕೈಗೆ ಜುಟ್ಟು ಜನಿವಾರ ಕೊಟ್ಟಿದ್ದರು. ಪೊಲೀಸರು ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ರಸ್ತೆಗೆ ಇಳಿಯುವ ಹಾಗಾಯಿತು. ರೌಡಿಯನ್ನು ಹಿಡಿಯುವಂತ ಒಬ್ಬ ಡಿವೈಎಸ್ಪಿ ಕೊಲೆಯಾಯ್ತು. ಇವೆಲ್ಲ ಅವರ ಆಡಳಿತಾವಧಿಯಲ್ಲಿ ಆಗಿದ್ದು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಡಾ. ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಹೇಗಾಯ್ತೆಂದು ಗೊತ್ತಿದೆ. ಆ ವೇಳೆ ಫೈರಿಂಗ್ ಆಗಿ ಎಂಟು ಜನರ ಸಾವಾಯಿತು. ಅವರ ಮಗ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ನಾವು ಎಷ್ಟು ಶಾಂತಿಯುತವಾಗಿ ಮಾಡಿದೆವು ಎಂಬುದನ್ನು ತಿಳಿಯಲಿ. ನಾನು, ಮುಖ್ಯಮಂತ್ರಿ, ಹಾಗೂ ಕೆಲ ಕ್ಯಾಬಿನೆಟ್ ಸಚಿವರು ಪಾರ್ಥಿವ ಶರೀರ ಪಕ್ಕದಲ್ಲೇ ಕೂತಿದ್ದೆವು. 25 ಲಕ್ಷ ಜನ ಬಂದರೂ ಎಲ್ಲವನ್ನು ನಿಭಾಯಿಸಲಾಯಿತು. ಹುಬ್ಬಳಿ ಗಲಭೆಯನ್ನು, ಕೇವಲ ಮೂರು ಗಂಟೆಯಲ್ಲಿ ನಮ್ಮ ಪೋಲೀಸರು ತಹಬದಿಗೆ ತಂದಿದ್ದಾರೆ. ಇಲ್ಲಾಂದ್ರೆ ಹುಬ್ಬಳ್ಳಿ ಹತ್ತಿ ಉರಿಯುತ್ತಿತ್ತು. ಶಿವಮೊಗ್ಗ ಕೊಲೆ ಆರೋಪಿಗಳನ್ನು 48 ಗಂಟೆಯಲ್ಲೇ ಹಿಡಿದೆವು. ಮೈಸೂರು ರೇಪ್ ಕೇಸ್ ಇರಬಹುದು, ಚಂದ್ರು ಬೆಂಗಳೂರು ಕೊಲೆ ಕೇಸ್ ಇರಬಹುದು, ಕೇವಲ ಕೆಲವೇ ಗಂಟೆನಲ್ಲಿ ನಮ್ಮ ಪೊಲೀಸರು ಬೇಧಿಸಿದ್ದಾರೆ. ಇವೆಲ್ಲವೂ ಗೃಹ ಇಲಾಖೆಯನ್ನು ನಾವು ನಿಭಾಯಿಸಿರುವ ರೀತಿಯಾಗಿದೆ ಎಂದು ಟಾಂಗ್ ಕೊಟ್ಟರು.
ನಮ್ಮ ಪೊಲೀಸರು ರಾತ್ರಿ ಹಗಲು ಕಣ್ಣಲ್ಲಿ ಕಣ್ಣಿಟ್ಟು ಚೆನ್ನಾಗಿ ಕಾರ್ಯ ನಿರ್ವಹಿಸಿದಾರೆ. ನನಗೆ ಹೆಮ್ಮೆಯಿದೆ. ಮೊನ್ನೆ ಮಂಗಳೂರಿನಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಗಳನ್ನು ಬಿಡಲಿಲ್ಲ. ಕೊಂಚ ವಿಳಂಬ ಮಾಡಿದರೂ ಕೆಲ ಮತಾಂಧ ಶಕ್ತಿಗಳು, ಆರೋಪಿಗಳು ತಪ್ಪಿಸಿಕೊಳ್ಳುವಂತೆ ಮಾಡುತ್ತಿದ್ದರು ಎಂದರು.
ಇದನ್ನೂ ಓದಿ:ಜಮ್ಮು-ಕಾಶ್ಮೀರ ಸರ್ಕಾರದಿಂದ ಹಿಜ್ಬುಲ್ ಮುಖ್ಯಸ್ಥ ಸೈಯದ್ ಪುತ್ರ ಸೇರಿದಂತೆ 4 ಉದ್ಯೋಗಿಗಳ ವಜಾ
ಹರ್ ಘರ್ ತಿರಂಗಾ ಕಾರ್ಯಕ್ರಮವು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವ ಹಿರಿಯರ ನೆನಪು ಮಾಡಿಕೊಳ್ಳುವಂತದ್ದು. ಆದರೆ, ಎಲ್ಲದರ ಬಗ್ಗೆ ನಿಕೃಷ್ಟವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಚಾಳಿ. ಕಾಂಗ್ರೆಸ್ ನವರು ಧರ್ಮದ ಆಧಾರದ ಮೇಲೆ ದೇಶ ಒಡೆದಿದ್ದಾರೆ. ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ನವರಿಗೆ ನಾಡಿನ ಪ್ರಜ್ಞೆ, ರಾಷ್ಟ್ರೀಯ ಪ್ರಜ್ಞೆಯಿಲ್ಲ. ಆರ್ ಎಸ್ ಎಸ್ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಿಂದ ಪಾಠ ಕಲಿಯುವಂಥದ್ದೇನೂ ಇಲ್ಲ. ನಮಗೆಲ್ಲ ಆರ್ ಎಸ್ ಎಸ್ ಶಾಖೆಯಲ್ಲೇ ಸಂಸ್ಕಾರ ತುಂಬಿ ದೇಶ ಸೇವೆಗೆ ಬಿಟ್ಟಿದ್ದಾರೆ ಎಂದರು.
ಸರ್ಕಾರದಲ್ಲಿ ಉದ್ಯೋಗ ಮಾಡಬೇಕಾದರೆ ಮಂಚ ಏರಬೇಕು ಎನ್ನುವ ಪ್ರಿಯಾಂಕ ಖರ್ಗೆ ಈಗ ಪ್ರಚಾರ ಖರ್ಗೆಯಾಗಿದ್ದಾರೆ. ಪ್ರಚಾರಕ್ಕೆ ಏನೇನೊ ಮಾತನಾಡುತ್ತಾರೆ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಪಿಎಸ್ ಐ ಹಗರಣದಲ್ಲಿ ತಮಗೆ ಏನೋ ಗೊತ್ತಿದೆ ಎಂದು ಹೇಳಿ ದಾಖಲಾತಿ ಕೇಳಿದರೆ ಓಡಿ ಹೋದರು ಎಂದು ಲೇವಡಿ ಮಾಡಿದರು.