Advertisement

ಕಳವೆಯಲ್ಲಿ ಅಡವಿ ಅಡುಗೆ ನೆನಪು

12:18 PM Feb 15, 2019 | |

ಶಿರಸಿ: ಶತಮಾನಗಳ ಹಿಂದೆ ಮಲೆನಾಡು, ಕರಾವಳಿಯ ತಾಯಂದಿರು ಅಡುಗೆ ತಯಾರಿಯಲ್ಲಿ ಬಳಸುತ್ತಿದ್ದ ಸಸ್ಯಗಳ ಮರು ನೆನಪು ಮಾಡುವ ವಿಶೇಷ ಕಾರ್ಯಕ್ರಮ ತಾಲೂಕಿನ ಕಳವೆಯಲ್ಲಿ ಏರ್ಪಾಟಾಗಿದೆ. ಪಶ್ಚಿಮ ಘಟ್ಟದ 100ಕ್ಕೂ ಹೆಚ್ಚು ಸಸ್ಯ ಬಳಸಿ ತಂಬುಳಿ, ಕಷಾಯ, ಚಟ್ನಿ, ಸಾಂಬಾರ್‌, ಕಟ್ನೆ, ಸಾಸ್ಮೆ, ಅಮ್ಟಿ , ಫಲ್ಯ, ಬಂಪು ತಯಾರಿಗಳ ಪ್ರಾತ್ಯಕ್ಷಿಕೆ ನಡೆಸುವರು.

Advertisement

ಕರಾವಳಿ, ಮಲೆನಾಡಿನ 25 ಮಹಿಳೆಯರು ಎರಡು ದಿನದಲ್ಲಿ 75 ರೀತಿಯ ಅಡುಗೆಗಳ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ಬಿದರಕ್ಕಿ ಅನ್ನ, ಮರ ಬಾಳೆಕಾಯಿ ದೋಸೆ, ಕಾಡರಿಶಿನದ ಮಣ್ಣಿ ಮುಂತಾದ ಹಲವು ಅಡುಗೆ ತಯಾರಿ ನಡೆಯಲಿದೆ.

ಭವಿಷ್ಯದಲ್ಲಿ ನಮ್ಮ ಕಾಡಿನ ಕರಡಿ ಸೊಪ್ಪು, ಒಂದೆಲಗ, ಬಿಳಿ ಕೌರಿ, ಶಿವಣೆ, ದಾಲ್ಚಿನ್ನಿ, ಬಲಗಣೆ, ಬಿಳಿಮತ್ತಿ, ಅಮೃತಬಳ್ಳಿ, ಮಸೆ, ಏಕನಾಯಕ ಮುಂತಾದ ಹಲವು ಸಸ್ಯಗಳನ್ನು ಕೃಷಿಯಲ್ಲಿ ಅಭಿವೃದ್ಧಿಗೊಳಿಸಲು ಅವಕಾಶಗಳಿವೆ. ಚಹಾ, ಕಾಫಿ  ಬಳಕೆಗೆ ಬರುವ ಪೂರ್ವದಲ್ಲಿದ್ದ 60ಕ್ಕೂ ಹೆಚ್ಚು ಕಷಾಯಗಳನ್ನು ಈಗಾಗಲೇ ಗುರುತಿಸಲಾಗಿದೆ. ಕುನ್ನೇರಲು, ಏಕನಾಯಕನ ಎಲೆ ಕಷಾಯಗಳು ಚಹಾದಷ್ಟೇ ಮಹತ್ವ ಹೊಂದಿದ್ದರೂ ಮಲೆನಾಡು ಮರೆಯುತ್ತಿದೆ. ನೀರನ್ನು ಕಡಿಮೆ ಬಳಸಿ ಬೆಳೆಯುವ ಈ ಸಸ್ಯಗಳು ಬರಗಾಲದಲ್ಲಿ ಆಹಾರ ಸುಸ್ಥಿರತೆ ಆಧಾರವಾಗಿವೆ. ಇವು ಭವಿಷ್ಯದಲ್ಲಿ ಪರಿಸರ ಸ್ನೇಹಿ ಅಭ್ಯುದಯದ ದಾರಿಯಾಗಬಹುದು ಎಂಬ ಆಶಯ ಉಂಟಾಗಿದೆ.

ಅಡುಗೆ ಪ್ರಾತ್ತಕ್ಷಿಕೆ ಜೊತೆಯಲ್ಲಿ ತಜ್ಞ ಸಲಹೆಗಳನ್ನು ನೀಡಲು ವೈದ್ಯರು ಭಾಗವಹಿಸುವರು. ಚಿಕ್ಕಮಗಳೂರಿನ ಕೊಪ್ಪ ಆಯುರ್ವೇದ ಕಾಲೇಜಿನ ವೈದ್ಯರಾದ ಡಾ| ಭಾನು, ಸಾಗರದ ಡಾ| ಪತಂಜಲಿ, ಗೋಕರ್ಣದ ವೇದಶ್ರವ ಶರ್ಮಾ, ಜೊಯಿಡಾ ಗುಂದದ ಖ್ಯಾತ ನಾಟಿ ವೈದ್ಯ ಶ್ರೀಧರ ದೇಸಾಯಿ, ಶಿರಸಿಯ ಜಿ.ಎಸ್‌. ಹೆಗಡೆ ಲಕ್ಕಿಸವಲು ಸಸ್ಯ ಬಳಕೆ ಕುರಿತು ಮಾಹಿತಿ ನೀಡುವರು. ಕರ್ನಾಟಕ ಅರಣ್ಯ ಇಲಾಖೆ ಶಿರಸಿ ವಿಭಾಗದ ವಿವಿಧ ಅರಣ್ಯ ನರ್ಸರಿ ಹಾಗೂ ಯೂಥ್‌ ಫಾರ್‌ ಸೇವಾ ಸಂಸ್ಥೆಯ ಉಮಾಪತಿ ಕೆ.ವಿ. ಸಹಕಾರದೊಂದಿಗೆ ಅಡುಗೆಗೆ ಬಳಸುವ ಸಸ್ಯ ಪ್ರದರ್ಶನ ನಡೆಯಲಿದೆ.

ಅಡವಿ ಅಡುಗೆ ಕಾರ್ಯಕ್ರಮ ಫೆ.16, 17 ಶಿರಸಿ ತಾಲೂಕಿನ ಕಳವೆಯ ಕಾನ್ಮನೆಯಲ್ಲಿ ನಡೆಯಲಿದೆ. ಮೆಗ್ಸೆàಸೆ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಹರೀಶ್‌ ಹಂದೆ 16ರ ಬೆಳಗ್ಗೆ 10:30ಕ್ಕೆ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಿರಸಿ ಉಪ ಅರಣ್ಯ  ರಕ್ಷಣಾಧಿಕಾರಿ ಎನ್‌.ಡಿ. ಸುದರ್ಶನ್‌, ಯಲ್ಲಾಪುರ ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್‌.ಎನ್‌. ಹೆಗಡೆ ಗೋರ್ಸಗದ್ದೆ, ಸಾಮಾಜಿಕ ಕಾರ್ಯಕರ್ತ ಆರ್‌.ಎಸ್‌. ಹೆಗಡೆ ಹರಗಿ ಭಾಗವಹಿಸುವರು. ಕಳವೆ ಗ್ರಾಮದ ಈರಾ ನಾರಾಯಣ ಗೌಡ ಅಧ್ಯಕ್ಷತೆ ವಹಿಸುವರು. ಸೆಲ್ಕೋ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ್‌ ಹೆಗಡೆ ಉಪಸ್ಥಿತರಿರುವರು ಎಂದು ಸಂಘಟಕ ಶಿವಾನಂದ ಕಳವೆ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next