ಎಸ್.ಎ. ರವೀಂದ್ರನಾಥ್, ಶಾಸಕರು
ದಾವಣಗೆರೆ: ಆವಾಗಿನ್ ಎಲೆಕ್ಷನ್‌ಗಳಿಗೂ ಇವತ್ತಿನ ಎಲೆಕ್ಷನ್‌ಗೂ ಬಹಳ ಬದಲಾವಣೆ ಆಗಿವೆ. ಆವಾಗ ರೂಪಾಯಿಗಿಂತಲೂ ಪಾರ್ಟಿ, ಯಾರು ನಿಂತಿದ್ದಾರೆ ಅಂತ ನೋಡಿ ಜನ ಅವರಾಗಿಯೇ ಬಂದು ವೋಟ್ ಹಾಕುತ್ತಿದ್ದರು. ಈಗ ಅಂಗಿಲ್ಲ. ರೂಪಾಯಿಗೇ ಬಹಳ ವ್ಯಾಲ್ಯೂ ಇರೋದು ಕಂಡು ಬರುತ್ತಿದೆ.
ಇದು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿರಿಯ ಶಾಸಕ ಎಸ್.ಎ. ರವೀಂದ್ರನಾಥ್ ಮೊದಲ ಚುನಾವಣೆ ಬಗ್ಗೆ ಹಂಚಿಕೊಂಡ ಅಭಿಪ್ರಾಯ.
ನಾನು ಜನಸಂಘದ ಅನಂತರ ಬಿಜೆಪಿಯಲ್ಲೇ ಇದ್ದೇನೆ. 1983ರಲ್ಲಿ ನಾನು ಮೊದಲ ಚುನಾವಣೆಗೆ ನಿಂತಾಗ ಬಹಳ ದುಡ್ಡೇನು ಖರ್ಚು ಆಗಿರಲಿಲ್ಲ. ನಾನು ಈಗಲೂ ರೊಕ್ಕ ಖರ್ಚು ಮಾಡಲ್ಲ. ಆದರೆ ಒಂದಂತೂ ನಿಜ, ಆಗಿನದ್ದಕ್ಕೂ ಇವಾಗಿನದ್ದಕ್ಕೂ ಬಹಳ ಚೇಂಜ್ ಆಗಿದೆ. ಜನರೂ ಬದಲಾಗಿದ್ದಾರೆ.
ನಾನು ಫಸ್ಟ್ ಎಲೆಕ್ಷನ್‌ಗೆ ನಿಂತಾಗ ಇವತ್ತಿ ನಂತೆ ಅಬ್ಬರ ಇರಲಿಲ್ಲ. ಆದರೆ ಎಲೆಕ್ಷನ್ ಜೋಶ್ ಬಹಳ ಇರೋದು. ದಿನಪೂರ್ತಿ ಪ್ರಚಾರ ಮಾಡೋದು. ಖಾರಾ, ಮಂಡಕ್ಕಿ, ಮೆಣಸಿನಕಾಯಿ, ಟೀ… ಅದರಲ್ಲೇ ಎಲ್ಲ ಮುಗಿದು ಹೋಗೋದು. ಯಾರು ಸಹ ದುಡ್ಡಿಗೆ ಡಿಮ್ಯಾಂಡ್ ಮಾಡುತ್ತಿರಲಿಲ್ಲ. ಪಾರ್ಟಿ ಫಂಡ್ ಅಂತಾನೇ ಬರುತ್ತಿರಲಿಲ್ಲ. ಹಣದ್ದು ಅಷ್ಟೊಂದು ಅಗತ್ಯನೂ ಇರುತ್ತಿರಲಿಲ್ಲ. ಆದರೆ ಈಗ ಎಲೆಕ್ಷನ್ ಮಾಡಬೇಕು ಅಂದರೆನೇ ಕೋಟಿಗಟ್ಟಲೆ ದುಡ್ಡು ಇರಬೇಕು ಅನ್ನುವಂತಾ ಗಿದೆ. ಎಲ್ಲದ್ದಕ್ಕೂ ರೂಪಾಯಿ ಇದ್ದರೆನೇ ನಡೆಯೋದು. ನಮ್ ಪಾರ್ಟೀಲಿ ಅಂತಹ ದುಡ್ಡಿನ ಮಾತಿಲ್ಲ. ನಮ್ ಪಕ್ಷದ ಮುಖಂಡರು, ಕಾರ್ಯಕರ್ತರು ಖರ್ಚು ಮಾಡುತ್ತಾರೆ.
ನಮ್ ಮೊದಲ ಎಲೆಕ್ಷನ್ ಮತ್ತೆ ಮಾಡೋಕೆ ಆಗಲ್ಲ. ನಮ್ ನಾಯಕರು ಪ್ರಚಾರ ಮಾಡಿದರೆ ಸಾಕು ಅನ್ನುವ ಕಾಲ ಇತ್ತು. ಹೀಗಾಗಿ ಮಾಯ ಕೊಂಡದಲ್ಲಿ ಸತತ ಮೂರು ಬಾರಿ ಗೆಲ್ಲುವುದಕ್ಕೆ ಸಾಧ್ಯ ಆಯಿತು. ಈಗ ನಾವು ನಿಧಾನವಾಗಿ ಬದಲಾಗಿದೀವಿ. ಅಂದರೆ ರೊಕ್ಕ ಖರ್ಚು ಮಾಡುವುದರಲ್ಲಿ ಅಲ್ಲ. ನನ್ ಹತ್ತಿರ ಬೇರೆ ಪಾರ್ಟಿಯ ವರಂತೆ ಕೋಟಿಗಟ್ಟಲೆ ದುಡ್ಡು ಇಲ್ಲ. ಜನರ ಪ್ರೀತಿ, ಅಭಿಮಾನ, ವಿಶ್ವಾಸದಿಂದ ಗೆಲ್ಲುತ್ತಿದ್ದೇನೆ.
ನನ್ ಪ್ರಕಾರ ಎಲೆಕ್ಷನ್‌ನಲ್ಲಿ ಹಣದ ಪ್ರಭಾವ ಕಡಿಮೆ ಆಗಬೇಕು. ಪಾರ್ಟಿ ತತ್ವ, ಸಿದ್ಧಾಂತ, ಜನರಿಗೆ ಮಾಡೋ ಕೆಲಸ ಮುಖ್ಯ ಆಗಬೇಕು. ಜನ ಮಾತ್ರ ಅಲ್ಲ, ನಮ್ಮಂತಹ ರಾಜಕಾರಣಿಗಳು ಸಹ ಬದಲಾಗಬೇಕು. ದುಡ್ಡು ಖರ್ಚು ಮಾಡಿದರೆ ಗೆದ್ದೇ ಗೆಲ್ಲುತ್ತೇವೆ ಎಂಬ ಮನೋಭಾವ ಬದಲಾಯಿಸಿಕೊಳ್ಳಬೇಕು. ಜನ ನಮ್ಮಿಂದ ಏನು ಬಯಸುತ್ತಾರೋ ಆ ರೀತಿಯಲ್ಲಿ ಕೆಲಸ ಮಾಡಿ ಗೆದ್ದು ಬರುವಂತೆ ಇರಬೇಕು. ಆದರೆ ಇವತ್ತಿನ ಪರಿಸ್ಥಿತಿ ನೋಡಿದರೆ ಅದು ಬಹಳ ಕಷ್ಟ ಅನ್ನಿಸುವಂತಿದೆ. ಮುಂದೆ ಎಲ್ಲವೂ ಬದಲಾಗಬಹುದು ಎಂಬ ಆಶಾಭಾವನೆ 76 ವರ್ಷದ ಮಾಜಿ ಸಚಿವ ರವೀಂದ್ರನಾಥ್ ಅವರದ್ದಾಗಿದೆ.
-ರಾ.ರವಿಬಾಬು