ಕೆಲವು ಹೆಸರುಗಳನ್ನು ಕೇಳಿದಾಗ ಎಷ್ಟು ಭಯವೆನ್ನಿಸುತ್ತದೆಂದರೆ ಇದೇನಿದು ಹೀಗೆ ಹೆಸರಿಟ್ಟಿದ್ದಾರಲ್ಲ ಎನ್ನಿಸಿ ಆ ಜಾಗದಲ್ಲೇನೋ ಇದ್ದೀತು ಎನ್ನಿಸುತ್ತದೆ. ಇಲ್ಲದೇ ಹೋದರೆ ಇಂತಹ ಹೆಸರನ್ನು ಯಾಕೆ ಇಡುತ್ತಿದ್ದರು? ಉದಾಹರಣೆಗೆ ಇಸ್ರೇಲ್‌ನಲ್ಲಿ ಹಿನ್ನೀರಿನಿಂದ ಆವೃತ್ತವಾದ ಜಾಗವೊಂದಿದೆ. ಅದಕ್ಕೆ “ಡೆಡ್ ಸೀ’ ಎಂದು ಹೆಸರು. ಕನ್ನಡದಲ್ಲಿ ಹೇಳಬೇಕೆಂದರೆ ಸತ್ತ ಸಮುದ್ರ. ಯಾಕೆ ಈ ಹೆಸರು ಎಂದು ಹುಡುಕಿದರೆ ಇಲ್ಲಿ ನೀರಿನಲ್ಲಿರುವ ಉಪ್ಪಿನ ಸಾಂದ್ರತೆ ಜಗತ್ತಿನ ಎಲ್ಲ ಸಮುದ್ರಗಳಿಗೆ ಹೋಲಿಸಿದರೆ ಹತ್ತು ಪಟ್ಟು ಹೆಚ್ಚಿದೆ. ಇಷ್ಟು ಉಪ್ಪಾದ ನೀರಿನಲ್ಲಿ ಯಾವ ಪ್ರಾಣಿಯೂ ಬದುಕುವುದಿಲ್ಲವಂತೆ. ಆ ಕಾರಣದಿಂದಲೇ ಇದಕ್ಕೆ ಈ ಹೆಸರು ಬಂದಿದೆ.
ನ್ಯೂಯಾರ್ಕ್ ನಗರದಲ್ಲಿ ಹೆಲ್ಲ್ಸ್ ಕಿಚನ್ ಎಂಬ ಪ್ರದೇಶವಿದೆ. ಇಲ್ಲಿ ಕಳ್ಳತನ, ದರೋಡೆ, ಸುಲಿಗೆಗಳು ಹೆಚ್ಚಾಗಿ ನಡೆಯುತ್ತಿದ್ದರಿಂದ ಈ ಹೆಸರು ಬಂದಿದೆ. ಹೀಗೆ ಎಂದೂ ಕೇಳಿರದ, ವಿಚಿತ್ರ ಅರ್ಥ ಬರುವಂತಹ ಜಾಗದ ಹೆಸರುಗಳು ಕಿವಿಯ ಮೇಲೆ ಬಿದ್ದಾಗ ಸಹಜವಾಗಿಯೇ ನೆನಪಿನಲ್ಲಿ ಉಳಿದು ಬಿಡುತ್ತವೆ. ಅಂತಹ ಒಂದು ವಿಶಿಷ್ಟ ಹೆಸರಿರುವ ಜಾಗ ಈ ಡೆತ್ ವ್ಯಾಲಿ.
ವ್ಯಾಲಿ ಎಂದರೆ ಉದ್ದಗಲಕ್ಕೂ ವಿಸ್ತರಿಸಿಕೊಂಡಿರುವ ಬಯಲು. ಹಾಗಾಗಿ ಇದು ಕನ್ನಡದಲ್ಲಿ ಸಾವಿನ ಕಣಿವೆ ಎಂದಾಗುತ್ತದೆ. ಕೇಳಿದರೆ ಭಯವಾಗುತ್ತದೆ ಅಲ್ಲವೇ? ಇದು ಅಮೆರಿಕದ ರಾಷ್ಟ್ರೀಯ ಉದ್ಯಾನವನಗಳಲ್ಲಿ ಒಂದು. ಅತ್ತ ನೆವಾಡಾ ಇತ್ತ ಕ್ಯಾಲಿಫೋರ್ನಿಯಾ ರಾಜ್ಯಗಳಲ್ಲಿ ಸುಮಾರು ಮೂವತ್ತಮೂರು ಲಕ್ಷ ಎಕ್ರೆಗಳಷ್ಟು ವ್ಯಾಪ್ತಿಯಲ್ಲಿ ಆವರಿಸಿಕೊಂಡಿರುವ ಈ ಮರುಭೂಮಿಯಲ್ಲಿ ಬದುಕುಳಿಯುವುದು ಕಷ್ಟ ಎನ್ನುವಷ್ಟು ವಿಪರೀತವಾದ ಬಿಸಿಲು.
ಬೇಸಗೆಯಲ್ಲಿ ಉಷ್ಣಾಂಶ ನೂರನ್ನು ದಾಟಿ ಧಗಧಗ ಉರಿಯುತ್ತಿರುತ್ತದೆ. 1913ರಲ್ಲಿ ಉಷ್ಣಾಂಶ 134 ಫ್ಯಾರನ್ ಹೀಟ್ ತಲುಪಿ ಅಮೆರಿಕದ ಇತಿಹಾಸದಲ್ಲಿಯೇ ಗರಿಷ್ಟಮಟ್ಟದ ಉಷ್ಣಾಂಶ ಎಂದು ದಾಖಲಾಗಿದೆ. ಇಡೀ ಭೂಮಿಯ ಮೇಲೆ ದಾಖಲಾಗಿರುವ ಗರಿಷ್ಟ ಉಷ್ಣಾಂಶದ ಮಟ್ಟ 136 ಫ್ಯಾರನಹೀಟ್! ಬೇಸಗೆಯ ಪ್ರತೀ ದಿನವೂ ನೂರಂಕಿ ದಾಟುವುದು ಸರ್ವೇಸಾಮಾನ್ಯ. ಇಲ್ಲಿರುವ ಶುಷ್ಕವಾದ ವಾತಾವರಣ ಎಂತಹವರನ್ನು ಕಂಗೆಡಿಸುತ್ತದೆ. ಬಾಯಾರಿಕೆ, ಸುಸ್ತಿನಿಂದ ಬಳಲುವ ದೇಹಕ್ಕೆ ನೀರು, ಆಹಾರ ಸಿಗುವುದು ಬಹಳ ದುರ್ಲಭ.
ಇಲ್ಲಿಗೆ ಹೋಗುವಾಗ ನೀರು, ಆಹಾರ, ಕಾರಿಗೆ ಪೆಟ್ರೋಲ್ ಹೀಗೆ ಬಹುಮುಖ್ಯವಾದ ಪರಿಕರಗಳ ಸಿದ್ಧತೆ ಮಾಡಿಕೊಂಡು ಹೋಗಬೇಕು. ಇಲ್ಲದೇ ಹೋದರೆ ಅಲ್ಲಿ ಸಿಕ್ಕಿ ಹಾಕಿಕೊಂಡು ಸಹಾಯಕ್ಕೆ ಯಾರೂ ಸಿಗದೇ ಒದ್ದಾಡಬೇಕಾಗುತ್ತದೆ. ಎಲ್ಲ ಪ್ರವಾಸೀ ತಾಣಗಳಲ್ಲಿ ಇರುವ ಹಾಗೆ ಡೆತ್ ವ್ಯಾಲಿಯಲ್ಲಿ ಉಳಿದುಕೊಳ್ಳಲು ಹೊಟೇಲ್ ಗಳು, ತಿನ್ನಲು ರೆಸ್ಟೋರೆಂಟ್‌ಗಳಿಲ್ಲ. ಇದೆಲ್ಲ ಸಿಗಬೇಕೆಂದರೆ ವ್ಯಾಲಿಯಿಂದ ಸುಮಾರು ನೂರು ಮೈಲಿ ಹೊರಬರಬೇಕು.
1849ರಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬಂಗಾರದ ಹುಡುಕಾಟ ಧುತ್ತೆಂದು ಶುರುವಾಗಿತ್ತು. ಕ್ಯಾಲಿಫೋರ್ನಿಯಾ ಗೋಲ್ಡ್ ರಶ್ ಎಂದು ಇತಿಹಾಸದಲ್ಲಿ ಗುರುತಿಸಿಕೊಳ್ಳುವ ಈ ಘಟನೆಯಲ್ಲಿ ಶುರುವಾಗಿದ್ದು ಜಾನ್ ಸಟ್ಟರ್ ಎಂಬಾತನಿಂದ. ಕಾರ್ಪೆಂಟರ್ ಆಗಿದ್ದ ಈತ ಒಂದು ದಿನ ನೀರಿನ ಕೊಳವೆಯನ್ನು ಕೊರೆಯುತ್ತಿದ್ದಾಗ ಬಂಗಾರದ ತುಣುಕುಗಳು ಭೂಮಿಯಲ್ಲಿ ಸಿಕ್ಕವಂತೆ. ಆಗ ಈತ ಮತ್ತು ಅವನ ಜತೆಗೆ ಇದ್ದ ಸಹಾಯಕ ಜೇಮ್ಸ್ ಮಾರ್ಷಲ್, ಇಬ್ಬರು ಈ ರಹಸ್ಯವನ್ನು ತಮ್ಮಲ್ಲಿಯೇ ಇಟ್ಟುಕೊಂಡು ಯಾರಿಗೂ ಗೊತ್ತಾಗದಂತೆ ಸುತ್ತಮುತ್ತಲಿನ ಭೂಮಿಯಲ್ಲಿ ಬಂಗಾರವನ್ನು ಹುಡುಕಿ ತೆಗೆಯುವುದಾಗಿ ತೀರ್ಮಾನಿಸಿದರಂತೆ. ಆದರೆ ಅವರು ಅಂದುಕೊಂಡಂತೆ ರಹಸ್ಯ ಗೌಪ್ಯವಾಗಿ ಉಳಿಯಲಿಲ್ಲ. ಸಾವಿರಾರು ಜನ ಬಂಗಾರದ ಆಸೆಗಾಗಿ ಬಂದು ಭೂಮಿಯನ್ನು ಅಗೆಯತೊಡಗಿದರು. ಬಂದವರು ಸಟ್ಟರ್ ಮನೆಯಲ್ಲಿದ್ದ ಎಲ್ಲವನ್ನು ಕದ್ದು ಅವನು ನಿರ್ಗತಿಕನಾದನಂತೆ.
ಕ್ಯಾಲಿಫೋರ್ನಿಯಾದಲ್ಲಿಯೇ ಬರುವ ಡೆತ್ ವ್ಯಾಲಿಯಲ್ಲಿಯೂ ಜನ ಬಂಗಾರಕ್ಕಾಗಿ ಹುಡುಕಿದರು. ಅಲ್ಲಿರುವ ಮರಳನ್ನು ಹೊತ್ತೊ ಯ್ದು ಏನಾದರೂ ಸಿಕ್ಕಿತೇ ಎಂದು ನೋಡಿದರು. ಅವರಾರಿಗೂ ಬಂಗಾರ ಸಿಗಲಿಲ್ಲ. ಅವರನ್ನು ದಿ ಲಾಸ್ಟ್ ಫೊರ್ಟಿ ನೈನರ್ಸ್ (49rs) ಎಂದು ಕರೆಯುತ್ತಾರೆ. ಡೆತ್ ವ್ಯಾಲಿಗೆ ಈ ಹೆಸರು ಏಕೆ ಬಂತು ಎಂದು ನೋಡಿದರೆ ಕತೆಯೊಂದು ಸಿಗುತ್ತದೆ. ಹೀಗೆ ಈ ಜಾಗಕ್ಕೆ ಬಂದ ಒಂದು ಗುಂಪು ಇಲ್ಲಿ ಕಳೆದು ಹೋದಾಗ ಇನ್ನೇನು ತಾವು ಇಲ್ಲಿಯೇ ಸತ್ತು ಹೂತು ಮಣ್ಣಾಗಿ ಬಿಡುತ್ತೇವೆ ಎಂದು ಭಾವಿಸಿದ್ದರಂತೆ. ಇಬ್ಬರು ಯುವಕರು ಆ ಗುಂಪನ್ನು ಪತ್ತೆ ಮಾಡಿ ರಕ್ಷಿಸಿದರು. ಎಲ್ಲರು ಪಾನಾಮಿಂಟ್ ಪರ್ವತಗಳನ್ನೇರಿ ಈ ಕಣಿವೆಯಿಂದ ಹೊರಬಂದಾಗ ಅದರಲ್ಲಿ ಇದ್ದವನೊಬ್ಬ ಪರ್ವತದ ಮೇಲೆ ನಿಂತು ಗುಡ್ ಬಾಯ್ ಡೆತ್ ವ್ಯಾಲೀ ಎಂದು ಕೂಗಿದನಂತೆ. ಸಾವಿನ ಕಣಿವೆಯೇ ನಿನಗೆ ವಿದಾಯ ಎಂದನಂತೆ. ಅದರಿಂದಲೇ ಜಾಗಕ್ಕೆ ಡೆತ್ ವ್ಯಾಲಿ ಎಂಬ ಹೆಸರು ಬಂದಿತೆಂದು ಹೇಳುತ್ತಾರೆ.
ಅಷ್ಟಕ್ಕೂ ಏನಿದೆ ಈ ಡೆತ್ ವ್ಯಾಲಿಯಲ್ಲಿ? ಇಷ್ಟೆಲ್ಲ ಕಷ್ಟ ಅನುಭವಿಸಿ ಇಲ್ಲಿಗೆ ಯಾಕೆ ಹೋಗಬೇಕು ಎನ್ನಿಸುವುದು ಸಹಜ. ಇಲ್ಲಿರುವ ಸಾಲು ಬೆಟ್ಟಗುಡ್ಡಗಳು, ಕಮ್ಮರಿಗಳು (ಕ್ಯಾನ್ಯಾನ್ಸ್), ಮರಳುಗಾಡು, ಮೈಲುಗಟ್ಟಲೇ ಹಬ್ಬಿರುವ ಉಪ್ಪು ಹೆಪ್ಪುಗಟ್ಟಿರುವ ಚಪ್ಪಟೆಯಾದ ನೆಲ ಇತ್ಯಾದಿಗಳಿಂದ ಡೆತ್ ವ್ಯಾಲೀ ನೋಡಲೇಬೇಕಾದಂತಹ ಪ್ರವಾಸಿ ತಾಣವಾಗಿದೆ. ಉತ್ತರ ಅಮೆರಿಕದಲ್ಲಿ ಸಮುದ್ರ ಮಟ್ಟದಿಂದ ಅತ್ಯಂತ ತಳಭಾಗದ ಜಾಗ ಇದಾಗಿದ್ದು ಬ್ಯಾಡ್ ವಾಟರ್ ಬೇಸಿನ್ ಎಂಬ ಹೆಸರಿನ ಜಾಗ ಸಮುದ್ರ ಮಟ್ಟದಿಂದ 282 ಅಡಿ ಕೆಳಗೆ ಬರುತ್ತದೆ. ಈ ಬೇಸಿನ್‌ನಲ್ಲಿ ಮೈಲುಗಟ್ಟಲೇ ಹಬ್ಬಿರುವ ಚಪ್ಪಟೆಯಾದ ಉಪ್ಪಿನ ಪ್ರದೇಶವಿದೆ. ದೂರದಿಂದ ಬಿಳಿಯ ಸಮುದ್ರದಂತೆ ಕಾಣಿಸುವ ಈ ಜಾಗದಲ್ಲಿ ನಡೆಯುವಾಗ ಕಾಲ ಕೆಳಗೆ ಹೆಪ್ಪುಗಟ್ಟಿರುವ ಉಪ್ಪನ್ನು ಕಾಣಬಹುದು. ಬರಿಗಾಲಿನಲ್ಲಿ ನಡೆದರೆ ಚೂಪಾದ ಉಪ್ಪಿನ ಹರಳುಗಳು ಚುಚ್ಚುತ್ತವೆ. ಇದು ಡೆತ್ ವ್ಯಾಲಿಯ ಪ್ರಮುಖವಾದ ಜಾಗ. ಆರ್ಟಿಸ್ಟ್ ಕೇವ್ ಎಂಬ ಹೆಸರಿನ ಜಾಗವೊಂದಿದೆ. ಕಲಾವಿದ ಬಳಸುವ ಬಣ್ಣಗಳ ತಟ್ಟೆಯ ಹಾಗೆ ಕಾಣುವ ಬಣ್ಣಬಣ್ಣದ ಬೆಟ್ಟಗಳಿಂದ ಆವೃತ್ತವಾಗಿದೆ. ಜಬ್ರಿಸ್ಕಿ ಪಾಯಿಂಟ್ ಎಂಬಲ್ಲಿಯೂ ಒಂದೇ ಕಡೆಯಲ್ಲಿ ಭಿನ್ನವಾದ ಬಣ್ಣಗಳ ಪರ್ವತಗಳ ಮೇಳವಿದೆ. ಇಲ್ಲಿ ಸೂರ್ಯಾಸ್ತ ಬಹಳ ರಮಣೀಯವಾಗಿ ಕಾಣಿಸುತ್ತದೆ.
1933ರಲ್ಲಿ ಈ ಜಾಗವನ್ನು ರಾಷ್ಟ್ರೀಯ ಉದ್ಯಾನವನ ಎಂದು ಅಮೆರಿಕದ ಸರಕಾರ ಘೋಷಿಸಿತು. ಪೂರ್ವದಿಂದ ಉತ್ತರಕ್ಕೆ ಉದ್ದಕ್ಕೆ ಚಾಚಿಕೊಂಡಿರುವ ಹೆದ್ದಾರಿ ನೂರಾತೊಂಬತ್ತರ ಮೇಲೆ ಅಕ್ಕ ಪಕ್ಕದಲ್ಲಿ ಏನೂ ಇಲ್ಲದ ಬರಡು ಭೂಮಿಯಲ್ಲಿ ಮೈಲುಗಟ್ಟಲೇ ಸಾಗಿದಾಗ ಡೆತ್ ವ್ಯಾಲೀ ಸಿಗುತ್ತದೆ. ಚಿಕ್ಕ ಮಕ್ಕಳಿರುವ ಪೋಷಕರು, ವಯಸ್ಸಾದವರು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ತಮಗೆ ಅಗತ್ಯವಿರುವ ಪರಿಕರಗಳನ್ನು ತೆಗೆದುಕೊಂಡು ಹೋಗಬೇಕು. ಕಾರು ಕೈ ಕೊಟ್ಟರೆ, ಹೈಕ್ ಎಂದು ಹೋದವರು ದಾರಿ ತಪ್ಪಿ ಹೊರಬರಲು ಆಗದಿದ್ದರೆ ಅಂತಹವರಿಗೆ ನೆರವಿನ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ನೆಟವರ್ಕ್ ಸಹ ಇರುವುದಿಲ್ಲವಾದ್ದರಿಂದ ಜನ ಸುರಕ್ಷೆಯ ನಿಯಮಗಳನ್ನು ಅನುಸರಿಸಬೇಕೆಂದು ಉದ್ಯಾನವನದ ಪ್ರತಿನಿಧಿಗಳು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಾರೆ. ಡೆತ್ ವ್ಯಾಲಿಗೆ ಹೋಗಿ ಬಂದರೆ ಅಮರರಾದಂತೆಯೇ ಲೆಕ್ಕ!
*ಸಂಜೋತಾ ಪುರೋಹಿತ್