ಪರೀಕ್ಷೆಯ ಈ ಸಮಯದಲ್ಲಿ ಇಂಥ ಸಂಗತಿಗಳ ತಲೆಕೆಡಿಸಿಕೊಳ್ಳಬೇಕಾದವರು, ವಿದ್ಯಾರ್ಥಿಗಳಲ್ಲ ; ಅವರ ಹೆತ್ತವರು !
Advertisement
ಸಾಮಾನ್ಯವಾಗಿ ಪರೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸ್ಪರ್ಧೆ ಕಂಡುಬರುತ್ತದೆ. ಅವರನ್ನು ವಿವಿಧ ಕೊಡುಗೆಗಳನ್ನು ಕೊಟ್ಟು ಆದರಿಸಲು ಎಲ್ಲರೂ ತಾ ಮುಂದು ತಾ ಮುಂದು ಎಂದು ಬರುತ್ತಾರೆ. ಇದರಲ್ಲಿ ತಪ್ಪೇನೂ ಇಲ್ಲ, ಅವರವರ ಸಂಭ್ರಮ ಅವರವರಿಗೆ. ಆದರೆ ಈ ಅತಿ ಸಡಗರದ ಮಧ್ಯೆ ಒಂದು ಮನೋಸ್ಥಿತಿ ಕೆಲಸ ಮಾಡುತ್ತಿರುತ್ತದೆ. “ಉತ್ತಮ ಅಂಕ ಪಡೆದು ಹಲವಾರು ಪ್ರಶಂಸೆಗಳನ್ನು ಗಿಟ್ಟಿಸಿಕೊಂಡ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಮುಂದಿನ ಶಿಕ್ಷಣದ ದಿನಗಳಲ್ಲಿ ಆ ಪ್ರಥಮ ಸ್ಥಾನವನ್ನು ಬಿಟ್ಟುಕೊಡಲೇಬಾರದು’ ಎಂಬ ಒತ್ತಡವನ್ನು ಹೇರುವ ಮನೋಸ್ಥಿತಿಯದು. ಯಾವುದೋ ಕಾರಣದಿಂದ ಮುಂದಿನ ತರಗತಿಗಳಲ್ಲಿ ಅಷ್ಟೇ ಪ್ರಮಾಣದ ಅಂಕಗಳನ್ನು ಗಳಿಸದೇ ಹೋದರೆ ಅವಹೇಳನೆಗೆ ಗುರಿಯಾಗುವ ಸಾಧ್ಯತೆಯೂ ಇದೆ.
ಹೆಚ್ಚಿನವರ ವಿದ್ಯಾಭ್ಯಾಸದ ಉದ್ದೇಶ ಉತ್ತಮ ಕೆಲಸವನ್ನು ದೊರಕಿಸಿಕೊಂಡು, ಧಾರಾಳವಾಗಿ ಸಂಪಾದನೆ ಮಾಡಿ, ಸಾಂಸಾರಿಕ-ಸಾಮಾಜಿಕ ಹೊಣೆಗಳನ್ನು ನಿರ್ವಹಿಸಿ, ಸಾಧ್ಯವಾದರೆ ವಿದೇಶ ಪ್ರಯಾಣಗಳನ್ನೂ ಮಾಡಿ, ಹೇಗಾದರೂ ಜೀವನದಲ್ಲಿ ಯಶಸ್ವಿಯಾಗುವುದು! ಜೀವನದಲ್ಲಿ ಯಶಸ್ವಿಯಾಗಲು ಮಾರ್ಕ್ಸ್ ಬೇಕು, ಆದರೆ ಅದೊಂದೇ ವ್ಯಕ್ತಿತ್ವದ ಮಾನದಂಡವಲ್ಲ. ಇಂದು ವಿವಿಧ ಕ್ಷೇತ್ರಗಳಲ್ಲಿ ಅಚ್ಚಳಿಯದ ಹೆಜ್ಜೆಗಳನ್ನು ಮೂಡಿಸಿದ ಹಲವಾರು ದಿಗ್ಗಜರು ತಮ್ಮ ಸಾಧನೆಗಳ ಮತ್ತು ಕೊಡುಗೆಗಳ ಮೂಲಕ ಗುರುತಿಸಲ್ಪಡುತ್ತಾರೆಯೇ ಹೊರತು ತಾವು ಗಳಿಸಿದ ಅಂಕಗಳ ಮೂಲಕ ಅಲ್ಲ. ಉದಾಹರಣೆಗೆ ಎಡಿಸನ್, ನ್ಯೂಟನ್, ಗಾಂಧೀಜಿ, ಕುವೆಂಪು, ಅಬ್ದುಲ್ ಕಲಾಂ, ಅಮಿತಾಭ್ ಬಚ್ಚನ್, ಸಚಿನ್ ತೆಂಡುಲ್ಕರ್… ಹೀಗೆ ಹಲವಾರು ಹೆಸರುಗಳನ್ನು ಸೇರಿಸಬಹುದು. ವಿಶ್ವದ ಅತಿ ಧನಿಕರ ಪಟ್ಟಿಯಲ್ಲಿರುವ ವಾರೆನ್ ಬಫೆಟ್, ಬಿಲ್ ಗೇಟ್ಸ್, ಭಾರತದ ರತನ್ ಟಾಟಾ, ಅಂಬಾನಿ ಸಹೋದರರು ಎಷ್ಟು ಅಂಕ ಪಡೆದಿದ್ದರೋ ಯಾರಿಗೂ ಗೊತ್ತಿಲ್ಲ. ಅಂಕ ಎಂದರೆ ವಿದ್ಯಾರ್ಥಿಯ ಕಲಿಕಾಶಕ್ತಿ, ಏಕಾಗ್ರತೆ, ಸ್ಮರಣಶಕ್ತಿ ಮತ್ತು ಸೀಮಿತ ಅವಧಿಯಲ್ಲಿ ತನ್ನ ಕಲಿಕೆಯನ್ನು ಪ್ರಸ್ತುತಪಡಿಸುವ ಚುರುಕುತನಗಳ ಅಳತೆಗೋಲು ಅಷ್ಟೆ . ಪ್ರತಿಭೆ ಇದ್ದರೂ ಪೂರಕ ವಾತಾವರಣ ಇಲ್ಲದಿರುವುದು, ಅನಾರೋಗ್ಯ, ಆರ್ಥಿಕ ಅಭದ್ರತೆ, ಅಸುರಕ್ಷಿತ ಬಾಲ್ಯ- ಇತ್ಯಾದಿ ಕಾರಣಗಳಿಂದ ಅಂಕಗಳಿಕೆ ಕಡಿಮೆಯಾಗಬಹುದು. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಆತ್ಮವಿಶ್ವಾಸ ತುಂಬುವ ಪ್ರಯತ್ನ ಶಾಲಾ-ಕಾಲೇಜುಗಳಲ್ಲಿ ನಡೆಯುತ್ತದೆಯೆ? ಬಹುತೇಕ ಇಲ್ಲ .
Related Articles
Advertisement
ಇನ್ನು ಕೆಲವರು ಸ್ವದೇಶದಲ್ಲಿಯೇ ವಿವಿಧ ಹು¨ªೆಗಳಲ್ಲಿ, ಸ್ವಂತ ಉದ್ಯೋಗಗಳಲ್ಲಿ ಅಥವಾ ಪಾರಂಪರಿಕ ಕಸುಬುಗಳಲ್ಲಿ ತೊಡಗಿಸಿಕೊಂಡಿರಬಹುದು. ಈ ರೀತಿ “ಸಾಮಾನ್ಯ’ರಾಗಿ ಬದುಕಲು, ಅಸಾಮಾನ್ಯ ಅಂಕ ಯಾಕೆ ಬೇಕು? ಅದಕ್ಕಾಗಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳಬೇಕೆ?
ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಇಪ್ಪತ್ತು ವರ್ಷ ಕೆಲಸ ಮಾಡಿದ ನನ್ನ ಅನುಭವದಲ್ಲಿ, ಅಂಕಗಳಿಕೆಗೂ ಕಾರ್ಯಕ್ಷಮತೆಗೂ ನೇರ ಸಂಬಂಧವೇನಿಲ್ಲ. ಉದ್ಯೋಗಕ್ಕೆ ಅರ್ಹತೆಯನ್ನು ನಿರ್ಧರಿಸುವಾಗ ಅಭ್ಯರ್ಥಿಯು ಸಂಬಂಧಿಸಿದ ಪದವಿ ಪಡೆದಿರಬೇಕು ಎಂದು ನಮೂದಿಸುತ್ತಾರೆ. ಇಲ್ಲಿ ಗರಿಷ್ಠ ಅಂಕ ಗಳಿಸಿದವರಿಗೂ ನಿಗದಿತ ಕನಿಷ್ಟ ಅರ್ಹತೆ ಪಡೆದಿರುವವರಿಗೂ ಸಮಾನ ಸ್ಥಾನಮಾನ. ಕನಿಷ್ಟ ಅರ್ಹತೆಯ ಜೊತೆಗೆ ತಂಡದಲ್ಲಿ ಕೆಲಸ ಮಾಡುವ ಕೌಶಲ, ನಾಯಕತ್ವ ಗುಣ, ಶ್ರದ್ಧೆ, ಸಂವಹನ ಸಾಮರ್ಥ್ಯ ಇತ್ಯಾದಿ ಅಪೇಕ್ಷಣೀಯ ಗುಣಗಳನ್ನು ಹೊಂದಿರುವವರು ಉದ್ಯೋಗಕ್ಕೆ ಆಯ್ಕೆಯಾಗುತ್ತಾರೆ.
ಒಂದೇ ಅಳತೆಯ ರೆಡಿಮೇಡ್ ಬಟ್ಟೆಯನ್ನು ಎಲ್ಲರೂ ಧರಿಸಲಾಗದು. ಏಕರೂಪದ ವಿದ್ಯಾಭ್ಯಾಸದಲ್ಲಿ ಎಲ್ಲರೂ ಪರಿಣಿತರಾಗಲು ಸಾಧ್ಯವಿಲ್ಲ. ಅದರ ಅಗತ್ಯವೂ ಇಲ್ಲ. ಪ್ರತಿಯೊಬ್ಬರಲ್ಲೂ ತನ್ನದೇ ಆದ ವಿಶಿಷ್ಟ ಪ್ರತಿಭೆಯು (Core Competence) ಬಾಲ್ಯದಲ್ಲಿ ಸುಪ್ತವಾಗಿರುತ್ತದೆ. ಮೀನಿನ ವಿಶಿಷ್ಟ ಸಾಮರ್ಥ್ಯ ತಿಳಿಯಬೇಕಿದ್ದರೆ ಅದನ್ನು ನೀರಿನಲ್ಲಿ ಈಜಲು ಬಿಡಬೇಕೆ ಹೊರತು ಮರಹತ್ತುವ ಸ್ಪರ್ಧೆಗೆ ಕಳುಹಿಸಬಾರದು! ವಿದ್ಯಾರ್ಥಿಗಳ ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಪಾಲಕರು, ಅಧ್ಯಾಪಕ/ಅಧ್ಯಾಪಕಿಯರು ಲಭಿಸಿದರೆ ಆ ವಿದ್ಯಾರ್ಥಿಗಳು ನಿಜಕ್ಕೂ ಅದೃಷ್ಟವಂತರು.ದೈನಂದಿನ ಉದ್ಯೋಗದಲ್ಲಿ, ನಾವು ಶಾಲಾ ದಿನಗಳಲ್ಲಿ ಕಲಿತ ಪಠ್ಯದ ಯಥಾವತ್ ಬಳಕೆ ಆಗುವುದು ಬಲು ವಿರಳ. ಹೆಚ್ಚಿನ ಉದ್ಯೋಗಸ್ಥರು ಹೇಳುವ ಮಾತು- ನಾನು ಓದಿದ್ದಕ್ಕೂ ಮಾಡುವ ಕೆಲಸಕ್ಕೂ ಸಂಬಂಧವೇ ಇಲ್ಲ. ಇದು ನನ್ನ ಅನುಭವ ಕೂಡ. ಲಾಯರ್ ಆಗುವವರಿಗೆ ಗಣಿತದ Integration, Differentiation ಬೇಕಿಲ್ಲ, ಅಕೌಂಟ್ಸ್ ಮ್ಯಾನೇಜರ್‌ಗೆ ರಾಘವಾಂಕನ ಕಾವ್ಯವೂ, ಷಟ³ದಿಯ ಛಂದಸ್ಸೂ ಬೇಕಾಗುವುದಿಲ್ಲ. ಆಫೀಸ್ ಅಡ್ಮಿಮಿಸ್ಟ್ರೇಟರ್‌ಗೆ ರಸಾಯನಶಾಸ್ತ್ರದ ಫಾರ್ಮುಲಾ ಅಗತ್ಯವೇ ಇಲ್ಲ. ವಿಪರ್ಯಾಸ ಎಂದರೆ ಇವನ್ನೆಲ್ಲ ನಮಗೆ ಇಷ್ಟ ಇರಲಿ, ಬಿಡಲಿ, ಕಲಿತರೆ ಮಾತ್ರ ಪದವಿ ಲಭ್ಯ! ಮಕ್ಕಳಿಗೆ ಸಹಜ ಪ್ರತಿಭೆ, ಸ್ಮರಣಶಕ್ತಿಯಿದ್ದು ಆಸಕ್ತಿಯೂ ಜತೆಗೂಡಿ ಉತ್ತಮ ಮಾರ್ಕ್ಸ್ ಬಂದರೆ ಬರಲಿ, ಸಂತೋಷ. ಆದರೆ ಎಲ್.ಕೆ.ಜಿ.ಯಿಂದ ಹಿಡಿದು ಕಾಲೇಜು ಪರ್ವದವರೆಗೆ ನೂರಕ್ಕೆ ನೂರು ಅಂಕಗಳನ್ನು ತೆಗೆಯಲು ಒ¨ªಾಡುವುದೇಕೆ? ವಿದ್ಯಾರ್ಥಿಗಳ ಜತೆಗೆ ಮನೆಮಂದಿಯೆÇÉಾ ಪರೀಕ್ಷೆ ಎಂಬ ಗಂಡಾಂತರವನ್ನು ತಾವಾಗಿಯೇ ಸೃಷ್ಟಿಸಿಕೊಂಡು ಬಳಲಬೇಕೆ? ನನಗೆ ತಿಳಿದಂತೆ ಪಾಶ್ಚಾತ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಮೇಲೆ ಈ ಮಟ್ಟದ ಒತ್ತಡವಿರುವುದಿಲ್ಲ. ಹಲವಾರು ವಿಷಯಗಳಲ್ಲಿ ಅವರನ್ನು ಅನುಕರಿಸುವ ನಾವು ಈ ವಿಷಯದಲ್ಲಿಯೂ ಅನುಸರಿಸಿದ್ದರೆ ಬಹುಶಃ ಮಕ್ಕಳ ಮತ್ತು ಪಾಲಕರ ಮೇಲಿನ ಒತ್ತಡ ಮತ್ತು ಅನವಶ್ಯಕ ಪೈಪೋಟಿಯಾದರೂ ಕಡಿಮೆಯಾಗುತಿತ್ತು!
ಉದ್ಯೋಗಕ್ಕೆ ಅಥವಾ ಮುಂದಿನ ವಿದ್ಯಾಭ್ಯಾಸಕ್ಕೆ ಬೇಕಿರುವಷ್ಟು ಅರ್ಹತೆ ಹೊಂದಬೇಕು. ಹಾಗೆಂದು ರೇಸ್‌ನಲ್ಲಿ ಎಲ್ಲರೂ ಮೊದಲಿಗರಾಗಲು ಸಾಧ್ಯವಿಲ್ಲ, ಈ ಸ್ಪರ್ಧೆ ಬೇಕಾಗಿಯೂ ಇಲ್ಲ, ಮುಖ್ಯವಾಗಿ ವಿದ್ಯಾಭ್ಯಾಸವು “ರೇಸ್’ ಅಲ್ಲವೇ ಇಲ್ಲ. – ಹೇಮಮಾಲಾ ಬಿ.